Pajaka: ತುಳು-ಕನ್ನಡನಾಡಿನ ಅಪೂರ್ವ ದಾರ್ಶನಿಕ ಶಕಪುರುಷ ಮಧ್ವಾಚಾರ್ಯರು ಅವತರಿಸಿದ ಕ್ಷೇತ್ರವೇ ಉಡುಪಿಯ ಪಾಜಕ
ಅದ್ವೈತ ಸಿದ್ದಾಂತದ ಸಂಸ್ಥಾಪಕರಾದ ಅಪೂರ್ವ ದಾರ್ಶನಿಕ ಶಕಪುರುಷ ಮಧ್ವಾಚಾರ್ಯರ ಸ್ಮರಣೀಯ ದಿನ ನಿಮಿತ್ತ ಇಂದು (ಫೆಬ್ರವರಿ 6, ಗುರುವಾರ) ಮಧ್ವ ನವಮಿಯನ್ನು ಆಚರಿಸಲಾಗುತ್ತಿದೆ. ಮಧ್ವಾಚಾರ್ಯರು ಜನಿಸಿದ ಉಡುಪಿ ಜಿಲ್ಲೆಯ ಪಾಜಕ ಕ್ಷೇತ್ರದ ಬಗ್ಗೆ ಆಸಕ್ತಿರ ಮಾಹಿತಿ ಇಲ್ಲಿದೆ.

ಉಡುಪಿ: ಭಾರತೀಯ ಜ್ಞಾನಪರಂಪರೆಗೂ ಮಂದದೀಪದ ದುಃಸ್ಥಿತಿ ಬಂದೊದಗಿದಾಗ ಮತ್ತೆ ಜ್ಞಾನದೀವಿಗೆಗೆ ಎಣ್ಣೆ ಎರೆದು, ತಪ್ಪು ವ್ಯಾಖ್ಯೆಗಳ ಮಸಿ ಝಾಡಿಸಿ ದೀಪದ ರಕ್ಷಣೆಗಾಗಿ ಧರೆಗಿಳಿದ ಜೀವೋತ್ತಮ ವಾಯುತತ್ತ್ವವೇ ಶ್ರೀಮನ್ಮಧ್ವಾಚಾರ್ಯರು ಎಂಬುದು ಅವರ ತತ್ವ ಸಿದ್ಧಾಂತಗಳನ್ನು ಅನುಸರಿಸುತ್ತಿರುವವರ ದೃಢವಾದ ನಂಬಿಕೆ. ಕರ್ನಾಟಕದ ಕನ್ನಡಿಗ ಏಕೈಕ ವೇದಾಂತ ಆಚಾರ್ಯರು ಭಾಷ್ಯಕಾರರು ಎಂಬ ಕೀರ್ತಿ ಹೊಂದಿರುವ ಮಧ್ವಾಚಾರ್ಯರು ಕ್ರಿ.ಶ. ಹನ್ನೆರಡನೇ ಶತಮಾನದಲ್ಲಿ ದಕ್ಷಿಣ ಕರ್ನಾಟಕದ ಉಡುಪಿಯ ಬೆಳ್ಳೆ ಗ್ರಾಮದ ಪಾಜಕ ಎಂಬ ಪುಟ್ಟ ಹಳ್ಳಿಯಲ್ಲಿ ನಡಿಲ್ಲಾಯ ದಂಪತಿಗಳಿಗೆ ಮಗನಾಗಿ ಜನಿಸಿದವರು, ವಾಸುದೇವ ಎಂಬ ಬಾಲ್ಯನಾಮ ಅವರಿಗಿತ್ತು. ಉಡುಪಿಯಲ್ಲಿದ್ದ ಸನ್ಯಾಸಿ ಪರಂಪರೆಯ ಯತಿಗಳಾಗಿದ್ದವರು ಅಚ್ಯುತಪ್ರಜ್ಞಾಚಾರ್ಯರಿಂದ ಆರಂಭಿಕ ಗ್ರಂಥಗಳ ಪಾಠ ಕೇಳಿ, ಬಾಲ್ಯದಲ್ಲೇ ವಿರಕ್ತರಾಗಿ ಅವರಿಂದಲೇ ಸನ್ಯಾಸ ದೀಕ್ಷೆಯನ್ನು ಪಡೆದು ಪೂರ್ಣಪ್ರಜ್ಞ ಎಂಬ ಅಭಿಧಾನವನ್ನು ಪಡೆದರು. ಮುಂದೆ ವೇದಾಂತ ಸಿಂಹಾಸನದಲ್ಲಿ ಅಭಿಷಿಕ್ತರಾದಾಗ ಶ್ರೀ ಆನಂದತೀರ್ಥ ಎಂಬ ಅಭಿಧಾನವನ್ನೂ ಪಡೆದರು. ಮುಂದೆ ವೈದಿಕಕಾವ್ಯನಾಮವಾಗಿ ಮಧ್ವ ’ ಎಂಬ ಹೆಸರನ್ನೂ ಪಡೆದವರು ಆಚಾರ್ಯ ಮಧ್ವರು.
ವೈಷ್ಣವ ಸಂಪ್ರದಾಯಕ್ಕೆ ಬಲ ತುಂಬಿದವರು
ಮಧ್ವಾಚಾರ್ಯರು ವೈಷ್ಣವ ಸಂಪ್ರದಾಯಕ್ಕೆ ಹೊಸ ಬಲ ತುಂಬಿದವರು. ಶ್ರೀಮಧ್ವಾಚಾರ್ಯರು ಸಾರಸ್ವತಲೋಕಕ್ಕೆ ನೀಡಿದ ಕೊಡುಗೆ ಅಪಾರ. ಸುಮಾರು ಐವತ್ತೊಂದರಷ್ಟು(ಅಥವಾ 40) ಗ್ರಂಥಗಳು ಈಗಾಗಲೇ ದೊರಕಿವೆ. ವೇದಾಂತವೆನಿಸಿದ ಬ್ರಹ್ಮಸೂತ್ರಗಳ ಮೇಲಿನ ಭಾಷ್ಯ-ವ್ಯಾಖ್ಯಾನಗಳಿವೆ. ಪುರಾಣ-ಇತಿಹಾಸಗಳ ಕುರಿತು ತಾತ್ಪರ್ಯನಿರ್ಣಯಗಳಿವೆ. ಹತ್ತು ಉಪನಿಷತ್ತುಗಳಿಗೆ ಭಾಷ್ಯವಿದೆ. ಭಗವದ್ಗೀತೆಯ ಕುರಿತು ಎರಡೆರಡು ಉದ್ಗ್ರಂಥಗಳನ್ನು ಬರೆದಿದ್ದಾರೆ. ಸ್ವಯಂ ತಾನೇ ಸಂಸ್ಕೃತದಲ್ಲಿ ತಾಳಲಯಬದ್ಧವಾದ ಅನೇಕಪದ್ಯಗಳನ್ನು ರಚಿಸಿದ್ದಾರೆ. ಕರ್ನಾಟಕದಲ್ಲಿ ದಾಸಸಾಹಿತ್ಯ ಹುಟ್ಟಿ ಬೆಳೆಯಲು ಮಧ್ವಾಚಾರ್ಯರೇ ಪ್ರೇರಣೆಯಾದರು ಎಂಬುದು ಅವರ ತತ್ವ ಸಿದ್ಧಾಂತಗಳ ನಂಬಿದವರ ಬಲವಾದ ನಂಬಿಕೆ.
ಪಾಜಕವೆಂದರೆ?
ಉಡುಪಿಯ ಸುತ್ತುಮುತ್ತಲುಗಳಲ್ಲಿ ಹನ್ನೆರಡನೇ ಶತಮಾನದ ಆಚಾರ್ಯರ ಕುರುಹುಗಳು ಇಂದಿಗೂ ಇವೆ. ಅಷ್ಟಮಠದ ಪಟ್ಟದ ದೇವರು ಮಾತ್ರವಲ್ಲದೇ ಪಾಜಕದಲ್ಲಿ ಆಚಾರ್ಯರು ಹುಟ್ಟಿದ ಮನೆ, ಅಕ್ಷರಾಭ್ಯಾಸದ ಶಿಲೆ, ವಾಸುದೇವತೀರ್ಥ, ಒಣಗಿದ ಕೋಲನ್ನು ಚಿಗುರಿಸಿ ಮರ ಮಾಡಿದ ಸ್ಥಳ, ಹುಣಸೇ ಬೀಜವನ್ನು ಬಂಗಾರದ ನಾಣ್ಯವಾಗಿಸಿದ ಮರದ ಸ್ಥಳ, ಹಾಲು ಮೊಸರಿನ ಪಾತ್ರೆಗಳಿಗೆ ಮುಚ್ಚಿಟ್ಟಿದ್ದ ಚಪ್ಪಡಿ ಕಲ್ಲು, ಬಾಲ್ಯದಲ್ಲಿ ಮಣಿಮಂಥನೆಂಬ ಸರ್ಪಾಸುರನನ್ನು ಕೊಂದ ಸ್ಥಳ. ಕುಂಜಾರುಗಿರಿ ದೇವಸ್ಥಾನ, ಕಲ್ಲಿನ ಮೇಲೆ ಪಡಿಮೂಡಿದ ಆಚಾರ್ಯರ ಪಾದದ ಗುರುತು ಕಾಣಬಹುದು.
ಕಾಪುವಿನ ಬಳಿ ಆಚಾರ್ಯರು ದಂಡದಿಂದ ನಿರ್ಮಿಸಿದ ನೀರಿನ ಸೆಲೆಯ ಸರೋವರ, ಕೃಷ್ಣನನ್ನು ಪಡೆದ ವಡಭಾಂಡೇಶ್ವರ ಸಮುದ್ರತೀರ, ಕ್ರೋಢ ಶಂಕರನಾರಾಯಣ ದೇವಸ್ಥಾನ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ, ಬಾಲ್ಯದಲ್ಲಿ ಭೂತಗ್ರಹದ ದರ್ಶನವಾದ ಕುಕ್ಕಿಕಟ್ಟೆ ಸಮೀಪದ ಸಂದೊಳಿಗೆ ಪಾಡಿ, ನಯಂಪಳ್ಳಿಯ ಮಡಿಮಲ್ಲಿಕಾರ್ಜುನ ದೇವಸ್ಥಾನ, ಚಿಟ್ಪಾಡಿಯ ಬೀಡಿನ ಬಲ್ಲಾಳರ ಮನೆಯ ಅರ್ಚ್ಯಾವಿಗ್ರಹ ಹೀಗೆ ಉಡುಪಿಯ ಒಳಗೇಹತ್ತು ಹಲವು ಸ್ಥಳಗಳು ಇಂದಿಗೂ ಆಚಾರ್ಯರ ಸ್ಮಾರಕಗಳಾಗಿವೆ.
ಸಮಗ್ರ ವೈದಿಕ ಸಾಹಿತ್ಯವನ್ನು ಸರಿಯಾಗಿ ಬಲ್ಲ ಹಿರಿಯ ಜ್ಞಾನಿ, ತಪಸ್ವಿ, ಭಾರತದ ವಾಙ್ಮಯವನ್ನು ದಾರಿ ತಪ್ಪದಂತೆ ರಕ್ಷಿಸಿದ ಮಹಾ ಲೋಕೋಪಕಾರಿ, ನಿಜಾರ್ಥದ ವಿಶ್ವಗುರು, ಹಿರಿದೈವ ವಾಯುವೇ ಧರೆಗಿಳಿದ ರೂಪ ಆಚಾರ್ಯ ಮಧ್ವರು ಸಾಮಾನ್ಯ ಲೋಕಕ್ಕೆ ಕೊನೆಯ ದರ್ಶನವನ್ನು ಇತ್ತ ದಿನ ಇಂದು (ಫೆಬ್ರವರಿ 6, ಗುರುವಾರ) ಮಕರ ಮಾಸದ ಮಾಘಮಾಸದ ಶುದ್ಧ ನವಮಿ ಮಧ್ವನವಮೀಯಾಗಿದೆ.
ಹುಟ್ಟೂರು ಪಾಜಕಉಡುಪಿ ಶ್ರೀಕೃಷ್ಣ ಮಠದಿಂದ ಸುಮಾರು 13 ಕಿ.ಮೀ ದೂರದಲ್ಲಿದೆ. ಉಡುಪಿ ಕುಂಜಾರು ಬೆಟ್ಟದ ಆಗ್ನೇಯಕ್ಕೆ ಏಳು ಮೈಲಿ ದೂರದಲ್ಲಿರುವ ಪಾಜಕ, ಈ ಬೆಟ್ಟವನ್ನು `ದುರ್ಗಾ ಬೆಟ್ಟ' ಎಂದೂ ಕರೆಯುತ್ತಾರೆ. ಇದರ ನಾಲ್ಕು ಬದಿಗಳಲ್ಲಿ ಭಗವಾನ್ ಪರಶುರಾಮನಿಂದ ರಚಿಸಲ್ಪಟ್ಟ ನಾಲ್ಕು ಪವಿತ್ರ ತೀರ್ಥಗಳು ಇವೆ. ಪಾಜಕ ಕ್ಷೇತ್ರದ ಪ್ರಾಮುಖ್ಯತೆಯನ್ನು "ಸಂಪ್ರದಾಯ ಪದ್ಧತಿ" ಎಂಬ ಸಣ್ಣ ಜೀವನಚರಿತ್ರೆಯ ಕಾವ್ಯದಲ್ಲಿ ವಿವರಿಸಲಾಗಿದೆ, ಇದರ ಲೇಖಕರು ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ಹೃಷಿಕೇಶ, ಇಲ್ಲಿ ಶ್ರೀ ಮುಖ್ಯಪ್ರಾಣರು ಶ್ರೀ ಮಧ್ವಾಚಾರ್ಯರಾಗಿ ಜನಿಸಿದರು ಮತ್ತು ಆದ್ದರಿಂದ ಇದನ್ನು ಎಲ್ಲಾ ಜ್ಞಾನಿಗಳು ಭೇಟಿ ಮಾಡಬೇಕು. ಅವರ ಮನೆಯ ಬಳಿ ಶ್ರೀ ಮಧ್ವಾಚಾರ್ಯರ ಪಾದಗಳ ಪ್ರಭಾವಳಿ ಇದೆ. ಶ್ರೀ ವಾದಿರಾಜ ಸ್ವಾಮಿಗಳು ನಂತರ ಅಲ್ಲಿ ಶ್ರೀ ಮಧ್ವಾಚಾರ್ಯರ ವಿಗ್ರಹವನ್ನು ಸ್ಥಾಪಿಸಿದರು, ಅದು ಈಗ ದೇವಾಲಯವಾಗಿದೆ ಮತ್ತು ಇಲ್ಲಿಯವರೆಗೆ ಭಕ್ತರಿಂದ ಪೂಜಿಸಲ್ಪಟ್ಟಿದೆ.
ಪಾಜಕ ಕ್ಷೇತ್ರವು ಅಂಬಲ್ಪಾಡಿ, ಮಣಿಪಾಲ, ಮಲ್ಪೆ ಬಂದರು ಮತ್ತು ಉಡುಪಿ ನಗರದಂತಹ ಹತ್ತಿರದ ನಗರಗಳ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಪಾಜಕವನ್ನು ತಲುಪಲು ಹಲವು ಆಯ್ಕೆಗಳಿವೆ. ರೈಲು, ರಸ್ತೆ ಅಥವಾ ವಾಯುಮಾರ್ಗಗಳ ಮೂಲಕ ಅಲ್ಲಿಗೆ ತಲುಪಬಹುದು. ಹತ್ತಿರದ ರೈಲು ನಿಲ್ದಾಣವೆಂದರೆ ಉಡುಪಿ ಮತ್ತು ಪಾಜಕಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ವಿಮಾನ ನಿಲ್ದಾಣ. ಆದರೆ ಇದರ ಹೊರತಾಗಿ ಪಾಜಕ ಕ್ಷೇತ್ರವು ಉಡುಪಿಯಿಂದ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಹೋಟೆಲ್ ಮತ್ತು ವಸತಿಗೆ ಸಂಬಂಧಿಸಿದಂತೆ, ಉಡುಪಿ ಮತ್ತು ಉಡುಪಿಯ ಸುತ್ತಮುತ್ತ ಸಾಕಷ್ಟು ಆಯ್ಕೆಗಳು ಲಭ್ಯವಿದೆ ಎಂದು ಕ್ಷೇತ್ರದವರು ತಿಳಿಸುತ್ತಾರೆ.
