Maha Kumbh Mela 2025: ಮಹಾ ಕುಂಭಮೇಳದಲ್ಲಿ ಕಾಣಿಸಿಕೊಳ್ಳುವ ಮಹಿಳಾ ನಾಗಾ ಸಾಧುಗಳ ಬಗ್ಗೆ ತಿಳಿಯಬೇಕಾದ ವಿಚಾರಗಳಿವು
Maha Kumbh Mela 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳ 2025 ಕ್ಕೆ ಎರಡು ದಿನ ಬಾಕಿ ಇದೆ. ಮಹಿಳಾ ನಾಗಾ ಸಾಧುಗಳು ಸೇರಿದಂತೆ ಲಕ್ಷಾಂತರ ಭಕ್ತರು ಪುಣ್ಯ ಸ್ನಾನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಕುಂಭಮೇಳದಂತಹ ಅಪರೂಪದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮಹಿಳಾ ನಾಗಾ ಸಾಧುಗಳ ಕುರಿತು ತಿಳಿಯಬೇಕಾದ ವಿಚಾರಗಳು ಇಲ್ಲಿವೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಮಹಾ ಕುಂಭ ಮೇಳವು 2025 ರ ಜನವರಿ 13 ರಿಂದ ಫೆಬ್ರವರಿ 25 ರವರೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ. ಸರಸ್ವತಿ, ಯಮುನಾ ಮತ್ತು ಗಂಗಾ ನದಿಗಳ ಪವಿತ್ರ ಸಂಗಮದಲ್ಲಿ ನಡೆಯುವ ಈ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಮಾಡಲು ಭಾಗವಹಿಸುತ್ತಾರೆ. ಹಿಂದೂ ಧರ್ಮವು ನಾಗಾ ಸಾಧುಗಳಿಗೆ ಹೆಚ್ಚಿನ ಪ್ರಾಮುಖ್ಯವನ್ನು ನೀಡುತ್ತದೆ, ಅವರನ್ನು ಹೆಚ್ಚಾಗಿ ಭೌತಿಕ ಜಗತ್ತನ್ನು ತೊರೆದ ಸನ್ಯಾಸಿಗಳಾಗಿ ನೋಡಲಾಗುತ್ತದೆ. ನಾಗಾ ಸಾಧುಗಳ ರೀತಿಯಲ್ಲೇ ಮಹಿಳಾ ನಾಗಾ ಸಾಧುಗಳು ಕುಂಭ ಮೇಳದ ಸಂದರ್ಭದಲ್ಲಿ ಕಾಣಿಸುತ್ತಾರೆ. ಇವರನ್ನು ನಾಗಾ ಸಾಧ್ವಿಗಳು ಅಂತಲೂ ಕರೆಯಲಾಗುತ್ತದೆ. ಈ ಮಹಿಳಾ ನಾಗಾ ಸಾಧುಗಳ ಗುಂಪುಗಳು ಕೂಡ ಪುರುಷರ ರೀತಿಯಲ್ಲಿ ತಮ್ಮದೇ ಶೈಲಿಯಲ್ಲಿ ಹೆಚ್ಚಿನ ಗಮನ ಸೆಳೆಯುತ್ತಾರೆ. ಇವರ ಜೀವನವು ಧ್ಯಾನ, ಯೋಗ ಮತ್ತು ಇತರ ಅಧ್ಯಾತ್ಮಿಕ ಅಭ್ಯಾಸಗಳಿಗೆ ಸಮರ್ಪಿತವಾಗಿರುತ್ತದೆ. ಬ್ರಹ್ಮಚರ್ಯ ವ್ರತಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅವರು ಹೆಸರುವಾಸಿಯಾಗಿದ್ದಾರೆ. ಈ ಮಹಿಳೆಯರು ಅಧ್ಯಾತ್ಮಿಕ, ಪರಿಶ್ರಮ ಹಾಗೂ ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಬಲವಾದ ಬದ್ಧತೆಯನ್ನು ಹೊಂದಿರುತ್ತಾರೆ.
ಸಂಪೂರ್ಣವಾಗಿ ವೈರಾಗ್ಯ ಸ್ವೀಕಾರ
ಅಧ್ಯಾತ್ಮಿಕ ಜ್ಞಾನೋದಯದ ಅನ್ವೇಷಣೆಯಲ್ಲಿ, ಮಹಿಳಾ ನಾಗಾ ಸಾಧುಗಳು ಭೌತಿಕ ವಸ್ತುಗಳನ್ನು ತ್ಯಜಿಸಿರುತ್ತಾರೆ. ಕುಟುಂಬಗಳೊಂದಿಗಿನ ಸಂಬಂಧಗಳನ್ನು ಕಡಿದುಕೊಂಡಿರುತ್ತಾರೆ. ಭೌತಿಕ ಐಷಾರಾಮಿಗಳನ್ನು ತೊರೆದು ಅಧ್ಯಾತ್ಮಿಕ ಬೆಳವಣಿಗೆಯನ್ನು ಕೇಂದ್ರೀಕರಿಸಿದ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.
ಈ ಸಾಧ್ವಿಗಳು ಹೆಚ್ಚಾಗಿ ಗುಹೆಗಳು ಅಥವಾ ಆಶ್ರಮಗಳಲ್ಲಿ ವಾಸಿಸುತ್ತಾರೆ. ಯೋಗ, ಧ್ಯಾನ, ಜಪದಂತಹ ದೀರ್ಘ ವ್ಯಾಯಾಮಗಳಲ್ಲಿ ಭಾಗವಹಿಸುತ್ತಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಶಿವನನ್ನು ಪೂಜಿಸಲು ತಮ್ಮ ಜೀವನವನ್ನು ಮುಡುಪಾಗಿಡುವ ಹಿಂದೂ ಸಮಾಜದ ಅತ್ಯಂತ ಗೌರವಾನ್ವಿತ ಸದಸ್ಯರು ಎಂದು ಅವರನ್ನು ಪರಿಗಣಿಸಲಾಗಿದೆ. ಮಹಿಳಾ ನಾಗಾ ಸಾಧುಗಳು, ಪುರುಷ ಸಾಧುಗಳಿಗಿಂತ ವಿಭಿನ್ನವಾಗಿ ಉಡುಪು ಧರಿಸುತ್ತಾರೆ.
ಕಟ್ಟುನಿಟ್ಟಾದ ದೀಕ್ಷಾ ಕಾರ್ಯವಿಧಾನ
ಮಹಿಳಾ ನಾಗಾ ಸಾಧುಗಳು ಅಥವಾ ನಾಗಾ ಸಾಧ್ವಿಗಳು ಕಠಿಣ ದೀಕ್ಷಾ ಪ್ರಕ್ರಿಯೆಗೆ ಒಳಗಾಗಿರುತ್ತಾರೆ. ಅವರು ಬ್ರಹ್ಮಚರ್ಯ, ಧ್ಯಾನ, ಭೌತಿಕ ವಸ್ತುಗಳನ್ನು ತ್ಯಜಿಸುವುದು ಇತ್ಯಾದಿಗಳನ್ನು ಅನುಸರಿಸುತ್ತಾರೆ. ಆಗಾಗ್ಗೆ ತಪಸ್ಸು ಮತ್ತು ತೀವ್ರವಾದ ಅಧ್ಯಾತ್ಮಿಕ ಅಭ್ಯಾಸಗಳನ್ನು ಮಾಡುವ ಮೂಲಕ ಏಕಾಂತ ಜೀವನವನ್ನು ನಡೆಸುತ್ತಾರೆ.
ಸನ್ಯಾಸಿಗಳ ಸಮಾನತೆ
ಮಹಿಳಾ ನಾಗಾ ಸಾಧುಗಳು ಸಮಾನತೆಯನ್ನು ಉತ್ತೇಜಿಸುತ್ತಾರೆ. ಧ್ಯಾನ, ತಪಸ್ಸು ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.
ದೈನಂದಿನ ಜೀವನದಲ್ಲಿ ತಪಸ್ಸು ಮತ್ತು ಶಿಸ್ತು
ಮಹಿಳಾ ನಾಗಾ ಸಾಧುಗಳು ದೀಕ್ಷೆ ಪಡೆದ ನಂತರ ಅತ್ಯಂತ ಕಠಿಣ ಜೀವನವನ್ನು ನಡೆಸುತ್ತಾರೆ. ಅವರು ಕಟ್ಟುನಿಟ್ಟಾದ ಧ್ಯಾನ, ಯೋಗ ಹಾಗೂ ಪ್ರಾರ್ಥನಾ ನಿಯಮಗಳನ್ನು ಅನುಸರಿಸುತ್ತಾರೆ. ಹೆಚ್ಚಾಗಿ ಗುಹೆಗಳು, ಕಾಡುಗಳು ಅಥವಾ ನದಿಗಳ ಬಳಿ ವಾಸಿಸುತ್ತಾರೆ. ಶಿವನ ಕಟ್ಟುನಿಟ್ಟಾದ ಜೀವನಶೈಲಿಯನ್ನು ಅನುಕರಿಸುತ್ತಾರೆ. ಶಿಸ್ತುಬದ್ಧ ಜೀವನಶೈಲಿಯಿಂದಾಗಿ ಆಧ್ಯಾತ್ಮಿಕ ಬೆಳವಣಿಗೆಗೆ ತಮ್ಮ ಎಲ್ಲಾ ಗಮನವನ್ನು ವಿನಿಯೋಗಿಸಿ ವಿಶೇಷವಾದ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿರುತ್ತಾರೆ.
ಮಹಿಳಾ ನಾಗಾ ಸಂತರು ಸನ್ಯಾಸಿ ಸಂಪ್ರದಾಯಗಳ ಪ್ರಕಾರ ವಾಸಿಸುತ್ತಾರೆ. ಅಧ್ಯಯನ ಮಾಡುತ್ತಾರೆ ಹಾಗೂ ಧರ್ಮವನ್ನು ಪಾಲಿಸುತ್ತಾರೆ. ಅಖಾಡಗಳು ಮಹಿಳಾ ಸನ್ಯಾಸಿಗಳಿಗೆ ಪೋಷಣೆಯ ವಾತಾವರಣವನ್ನು ಒದಗಿಸುತ್ತವೆ. ಇವು ಆಧ್ಯಾತ್ಮಿಕ ಶಿಕ್ಷಣದ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಕುಂಭಮೇಳದಲ್ಲಿ ಮಹಿಳಾ ನಾಗಾ ಸಾಧುಗಳು ಭಾಗಿ
"ನಾಗಾ ಸಾಧ್ವಿಗಳು" ಎಂದು ಕರೆಯಲ್ಪಡುವ ಮಹಿಳಾ ನಾಗಾ ಸಂತರು ಪವಿತ್ರ "ಶಾಹಿ ಸ್ನಾನ್" (ರಾಜ ಸ್ನಾನ) ದಲ್ಲಿ ಭಾಗವಹಿಸುತ್ತಾರೆ. ಜೊತೆಗೆ ಆಚರಣೆಗಳನ್ನು ನಡೆಸುತ್ತಾರೆ. ಕುಂಭಮೇಳದಲ್ಲಿ ಇವರ ಹಾಜರಾತಿ ಅಧ್ಯಾತ್ಮಿಕತೆ ಹೇಗೆ ಬದಲಾಗುತ್ತಿದೆ ಮತ್ತು ಈ ಹಿಂದೆ ಪುರುಷ ಪ್ರಾಬಲ್ಯದ ಧಾರ್ಮಿಕ ಸಮುದಾಯಗಳಲ್ಲಿ ಮಹಿಳೆಯರು ಹೇಗೆ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ ಎಂಬುದನ್ನು ನೆನಪಿಸುತ್ತದೆ.
ಮಹಿಳಾ ಸಬಲೀಕರಣ
ಮಹಿಳಾ ಸಬಲೀಕರಣವನ್ನು ನಾಗಾ ಸಾಧುಗಳು ರೂಪಿಸಿದ್ದಾರೆ. ಅಧ್ಯಾತ್ಮಿಕ ಮುಕ್ತಿಯನ್ನು ಪಡೆಯಲು ಲಿಂಗ ವ್ಯತ್ಯಾಸಗಳು ಅಡ್ಡಿಯಲ್ಲ ಎಂದು ಅವರು ಸಾಬೀತುಪಡಿಸುತ್ತಿದ್ದಾರೆ. ಮಹಿಳೆಯರು ನಾಗಾ ಸಾಧುಗಳ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾ ವಿರಳ. ಆದರೆ ಈ ಮಾರ್ಗವನ್ನು ಅನುಸರಿಸುವ ಜನರು ಸಾಮಾಜಿಕ ನಿರೀಕ್ಷೆಗಳನ್ನು ಉಲ್ಲಂಘಿಸುತ್ತಾರೆ. ತಮ್ಮ ಆಂತರಿಕ ಆತ್ಮವಿಶ್ವಾಸವನ್ನು ಪ್ರದರ್ಶಿಸುವ ಮೂಲಕ ಹೆಚ್ಚಿನ ದೃಢನಿಶ್ಚಯದಿಂದ ಜೀವಿಸುತ್ತಾರೆ. ಇವರನ್ನು ಕೆಲವೊಮ್ಮೆ "ಮಾತಾ" ಎಂದು ಕರೆಯಲಾಗುತ್ತದೆ, ಇದು ಸಮುದಾಯದಲ್ಲಿ ಅವರಿಗೆ ನೀಡುವ ಗೌರವಾನ್ವಿತ ಸ್ಥಾನವನ್ನು ಸೂಚಿಸುತ್ತದೆ. ಪುರುಷ ನಾಗಾ ಸಾಧುಗಳಂತೆ ಇವರನ್ನೂ ಸಮಾನವಾಗಿ ಗೌರವಿಸಲಾಗುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)