Maha Kumbh Mela: 2025 ರ ಮಹಾ ಕುಂಭಮೇಳ ಯಾವಾಗ ಆರಂಭವಾಗುತ್ತೆ? ದಿನಾಂಕ, ಸ್ಥಳ, ಮಹತ್ವದ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Kumbh Mela: 2025 ರ ಮಹಾ ಕುಂಭಮೇಳ ಯಾವಾಗ ಆರಂಭವಾಗುತ್ತೆ? ದಿನಾಂಕ, ಸ್ಥಳ, ಮಹತ್ವದ ವಿವರ ಇಲ್ಲಿದೆ

Maha Kumbh Mela: 2025 ರ ಮಹಾ ಕುಂಭಮೇಳ ಯಾವಾಗ ಆರಂಭವಾಗುತ್ತೆ? ದಿನಾಂಕ, ಸ್ಥಳ, ಮಹತ್ವದ ವಿವರ ಇಲ್ಲಿದೆ

2025 ರ ಮಹಾ ಕುಂಭಮೇಳ ಉತ್ತರ ಪ್ರದೇಶದಲ್ಲಿ ನಡೆಯಲಿದೆ. ಯಾವ ಸ್ಥಳಧಲ್ಲಿ ಕುಂಭಮೇಳ ನಡೆಯುತ್ತೆ, ಮಹತ್ವ, ದಿನಾಂಕ ಹಾಗೂ ಸ್ಥಳದ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಉತ್ತರ ಪ್ರದೇಶದಲ್ಲಿ 2025ರ ಮಹಾ ಕುಂಭ ಮೇಳ ಯಾವಾಗ ಮತ್ತು ಎಲ್ಲಿ ನಡೆಯುತ್ತದೆ. ಇದರ ಮಹತ್ವದ ಬಗ್ಗೆ ತಿಳಿಯೋಣ.
ಉತ್ತರ ಪ್ರದೇಶದಲ್ಲಿ 2025ರ ಮಹಾ ಕುಂಭ ಮೇಳ ಯಾವಾಗ ಮತ್ತು ಎಲ್ಲಿ ನಡೆಯುತ್ತದೆ. ಇದರ ಮಹತ್ವದ ಬಗ್ಗೆ ತಿಳಿಯೋಣ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮುಂದಿನ ವರ್ಷ ಮಹಾ ಕುಂಭಮೇಳ ನಡೆಯಲಿದೆ. ಇದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಸರ್ಕಾರ ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕುಂಭಮೇಳ ಕೇವಲ ಒಂದು ಉತ್ಸವವಲ್ಲ, ಇದು ಅಧ್ಯಾತ್ಮಿಕತೆ, ನಂಬಿಕೆ ಹಾಗೂ ಸಾಂಸ್ಕೃತಿಕ ಏಕತೆಯ ಸ್ಮಾರಕ ಸಂಗಮವಾಗಿದೆ. 2025ರಲ್ಲಿ ಹಿಂದೂ ಧರ್ಮದ ಅತ್ಯಂತ ಮಹತ್ವದ ಮಹಾ ಮೇಳ ಇದಾಗಿದ್ದು, ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಭಕ್ತರು ಕುಂಭಮೇಳದಲ್ಲಿ ಭಾಗವಹಿಸಲು ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ಭೇಟಿ ನೀಡುತ್ತಾರೆ.

ಮಹಾ ಕುಂಭಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಲಕ್ಷಾಂತರ ಮಂದಿ ಭಕ್ತರು ಸೇರುವ ಸಾಧ್ಯತೆ ಇರುವುದರಿಂದ ಯಾವುದೇ ರೀತಿಯ ಅವ್ಯವಸ್ಥೆ, ಅಹಿತಕರ ಘಟನೆಗಳು ನಡೆಯದಂತೆ ಯೋಗಿ ಸರ್ಕಾರ ಭಾರಿ ಮುಂಜಾಗ್ರತಾ ಕ್ರಮಗಳು ಹಾಗೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 2025ರ ಜನವರಿ 14 ರಿಂದ ಫೆಬ್ರವರಿ 26 ರವರಿಗೆ ಮಹಾ ಕುಂಭಮೇಳ ನಡೆಯುತ್ತದೆ. ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವ ಮೂಲಕ ತಮ್ಮ ಪಾಪಗಳಿಂದ ಮುಕ್ತಿಪಡೆಯುವ ಅವಕಾಶವನ್ನು ಭಕ್ತರಿಗೆ ನೀಡಲಾಗುತ್ತದೆ.

ಮಹಾ ಕುಂಭಮೇಳದಲ್ಲಿ ಪ್ರಮುಖ ಸ್ನಾದ ದಿನಾಂಕಗಳು

  • 2025ರ ಜನವರಿ 14 ಮಕರ ಸಂಕ್ರಾಂತಿ (ಮೊದಲ ಶಾಹಿ ಸ್ನಾನ)
  • 2025ರ ಜನವರಿ 29 ಮೌನಿ ಅಮಾವಾಸ್ಯೆ (ಎರಡನೇ ಶಾಹಿ ಸ್ನಾನ)
  • 2025ರ ಫೆಬ್ರವರಿ 3 ಬಸಂತ್ ಪಂಚಮಿ (ಮೂರನೇ ಶಾಹಿ ಸ್ನಾನ)
  • 2025ರ ಜನವರಿ 13 ಪೌಶ್ ಪೂರ್ಣಿಮಾ
  • 2025ರ ಫೆಬ್ರವರಿ 4 ಅಚಲ ಸಪ್ತಮಿ
  • 2025ರ ಫೆಬ್ರವರಿ 12 ಮಾಘಿ ಪೂರ್ಣಿಮಾ
  • 2025ರ ಫೆಬ್ರವರಿ 26 ಮಹಾ ಶಿವರಾತ್ರಿ (ಅಂತಿಮ ಸ್ನಾನ)

ಮಹಾ ಕುಂಭ ಮೇಳದಲ್ಲಿ ಈ ದಿನಾಂಕಗಳಲ್ಲಿ ಲಕ್ಷಾಂತರ ಮಂದಿ ಪ್ರಯಾಗ್‌ರಾಜ್‌ನಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. 12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್‌ನಲ್ಲಿ ನಡೆಯಲಿದೆ. 2025ರ ಮಹಾ ಕುಂಭಮೇಳ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ. ಬರೋಬ್ಬರಿ 30 ರಿಂದ 45 ದಿನ ನಡೆಯುತ್ತದೆ.

ಕುಂಭಮೇಳವು ಹಿಂದೂ ಪುರಾಣಗಳಲ್ಲಿ ಪ್ರಾಚೀನ ಬೇರುಗಳನ್ನು ಹೊಂದಿದೆ. ಸಮುದ್ರ ಮಂಥನ ಕಥೆಯಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಧನ್ವಂತ್ರಿಯ ಕೈಯಲ್ಲಿ ಹೊರಹೊಮ್ಮಿದ ಅಮರತ್ವದ ಮಡಕೆಯನ್ನು ಉಲ್ಲೇಖಿಸಲಾಗಿದೆ. ಕುಂಭ ಪದದ ಅರ್ಥ ಮಡಕೆ ಎಂಬುದಾಗಿದೆ. ಮತ್ತೊಂದು ದಂತಕಥೆಯ ಪ್ರಕಾರ, ದೇವರು ಮತ್ತು ರಾಕ್ಷಸರ ನಡುವಿನ ಹೋರಾಟದ ಸಮಯದಲ್ಲಿ ನಾಲ್ಕು ಸ್ಥಳಗಳಲ್ಲಿ ಅಮೃತ ಮಡಕೆ ಬಿದ್ದಿತ್ತು. ಈ ಸ್ಥಳಗಳು ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್ ಆಗಿದ್ದು, ಅಂದಿನಿಂದ ಇವು ತೀರ್ಥಯಾತ್ರೆಗೆ ಪವಿತ್ರ ಸ್ಥಳಗಳಾಗಿವೆ. ಅಧ್ಯಾತ್ಮಿಕ ಮೋಕ್ಷವನ್ನು ಆಚರಿಸಲು ಕುಂಭಮೇಳ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.