ಬಂದೇ ಬಿಡ್ತು ಶಿವರಾತ್ರಿ: 2025 ರ ಶಿವರಾತ್ರಿ ದಿನಾಂಕ, ಪೂಜಾ ವಿಧಾನ, ಉಪವಾಸ ಕ್ರಮದ ಮಾಹಿತಿ ಇಲ್ಲಿದೆ
ಮಹಾ ಶಿವರಾತ್ರಿ 2025: ಹಿಂದೂ ಧರ್ಮದಲ್ಲಿ ಮಹಾರಾತ್ರಿ ಬಹಳ ವಿಶೇಷ. ಶಿವರಾತ್ರಿ ಹಬ್ಬವನ್ನು ಶಿವ ಮತ್ತು ಪಾರ್ವತಿಗೆ ಸಮರ್ಪಿಸಲಾಗಿದೆ. 2025 ರಲ್ಲಿ ಮಹಾಶಿವರಾತ್ರಿಯನ್ನು ಯಾವಾಗ ಆಚರಿಸಲಾಗುತ್ತದೆ, ದಿನಾಂಕ, ಪೂಜಾ ವಿಧಾನ ಹಾಗೂ ಉಪವಾಸದ ಕ್ರಮವನ್ನು ತಿಳಿಯಿರಿ.
ಹಿಂದೂಗಳ ಧಾರ್ಮಿಕ ಹಬ್ಬಗಳಲ್ಲೊಂದಾಗಿರುವ, ಇಡೀ ರಾತ್ರಿ ಶಿವನನ್ನು ಆರಾಧಿಸುವ ಮಹಾ ಶಿವರಾತ್ರಿ ಬಂದೇ ಬಿಡ್ತು. ಐಕ್ಯತೆಯ ಸಂಕೇತವಾಗಿರುವ ಮಹಾ ಶಿವರಾತ್ರಿಯನ್ನು ಶಿವ ಮತ್ತು ಗೌರಿಯ ವಿವಾಹವೆಂದು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾಶಿವರಾತ್ರಿಯನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷದ 14 ನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ಶಿವ ಮತ್ತು ಪಾರ್ವತಿಯನ್ನು ಪೂಜಿಸುವುದು ವಿಶೇಷ. ಕೆಲವು ಭಕ್ತರು ಶಿವನ ಅನಂತ ಅನುಗ್ರಹವನ್ನು ಪಡೆಯಲು ಉಪವಾಸವನ್ನು ಆಚರಿಸುತ್ತಾರೆ. 2025 ರಲ್ಲಿ ಮಹಾಶಿವರಾತ್ರಿ ಯಾವಾಗ, ಪೂಜೆ ಮತ್ತು ಉಪವಾಸದ ಬಗ್ಗೆ ತಿಳಿಯಿರಿ.
2025 ರಲ್ಲಿ ಮಹಾಶಿವರಾತ್ರಿ ಯಾವಾಗ?
ಚತುರ್ದಶಿ ದಿನಾಂಕವು 2025ರ ಫೆಬ್ರವರಿ 26 ರಂದು ಬೆಳಿಗ್ಗೆ 11:08 ಕ್ಕೆ ಪ್ರಾರಂಭವಾಗುತ್ತದೆ ಮತ್ತು 2025ರ ಫೆಬ್ರವರಿ 27 ರಂದು ಬೆಳಿಗ್ಗೆ 08:54 ಕ್ಕೆ ಕೊನೆಗೊಳ್ಳುತ್ತದೆ. ಮಹಾ ಶಿವರಾತ್ರಿಯನ್ನು ಫೆಬ್ರವರಿ 26ರ ಬುಧವಾರ ಆಚರಿಸಲಾಗುತ್ತದೆ.
ಮಹಾಶಿವರಾತ್ರಿ 2025 ಶಿವ ಪೂಜಾ ಮುಹೂರ್ತ
ಮಹಾಶಿವರಾತ್ರಿ ದಿನದಂದು ಶಿವನನ್ನು ಪೂಜಿಸಲು ಉತ್ತಮ ಸಮಯ ಫೆಬ್ರವರಿ 27ರ ಮಧ್ಯರಾತ್ರಿ 12.09 ರಿಂದ 12.59 ರವರೆಗೆ ಇರುತ್ತದೆ.
ಮಹಾಶಿವರಾತ್ರಿ ಪೂಜಾ ಮುಹೂರ್ತ
ಮೊದಲ ಪೂಜಾ ಸಮಯ: ಸಂಜೆ 6:19 ರಿಂದ 9:26 ರವರೆಗೆ (ಫೆಬ್ರವರಿ 26)
ಎರಡನೇ ಪೂಜಾ ಸಮಯ ಪೂಜಾ ಸಮಯ: ರಾತ್ರಿ 9:26 ರಿಂದ 12:34 (ಫೆಬ್ರವರಿ 26)
ಮೂರನೇ ಪೂಜಾ ಸಮಯ: 12:34 ರಿಂದ ಬೆಳಗಿನ ಜಾವ 3:41 (ಫೆಬ್ರವರಿ 27)
ನಾಲ್ಕನೇ ಪೂಜಾ ಸಮಯ ಬೆಳಗಿನ ಜಾವ 03:41 ರಿಂದ 6:41 (ಫೆಬ್ರವರಿ 27)
ಮಹಾಶಿವರಾತ್ರಿಯ ಮಹತ್ವ
ಮಹಾ ಶಿವರಾತ್ರಿಯಂದು ಉಪವಾಸ ಮತ್ತು ಪೂಜೆ ಮಾಡುವವರು ಸಂತೋಷ ಮತ್ತು ಮೋಕ್ಷ ಎರಡನ್ನೂ ಪಡೆಯುತ್ತಾರೆ ಎಂದು ಶಿವ ಪುರಾಣದ ಕೋಟಿರುದ್ರ ಸಂಹಿತೆಯಲ್ಲಿ ವಿವರಿಸಲಾಗಿದೆ. ಶಿವ ಮತ್ತು ಪಾರ್ವತಿಯ ಕೃಪೆಯಿಂದ ಮಕ್ಕಳಾಗುತ್ತವೆ ಎಂದು ನಂಬಲಾಗಿದೆ.
ಮಹಾ ಶಿವರಾತ್ರಿ ಉಪವಾಸದ ವಿಧಾನ
ಉಪವಾಸ ಎಂದರೆ ದೇವರಿಗೆ ಹತ್ತಿರವಾಗುವುದು, ಆತನ ಕುರಿತು ಧ್ಯಾನದಲ್ಲಿ ಮುಳುಗಿರುವುದು ಎಂದರ್ಥ. ಮಹಾ ಶಿವರಾತ್ರಿಯ ಉಪವಾಸ ಕೈಗೊಳ್ಳುವ ಭಕ್ತರು ಅಕ್ಕಿ, ಗೋಧಿ ಅಥವಾ ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಸೇವಿಸುವಂತಿಲ್ಲ. ಅಂದರೆ ನಿರಾಹಾರ ವ್ರತ ಆಚರಿಸುವಂತಿಲ್ಲ. ಆದರೆ ಹಾಲು, ಹಣ್ಣು ಸೇವಿಸುವ ಮೂಲಕ ಶಿವನ ಧ್ಯಾನ ಮಾಡುತ್ತಾರೆ.
ಲೋಕ ಕಲ್ಯಾಣಕ್ಕಾಗಿ ಶಿವನು ನಂಜನ್ನು (ವಿಷ) ಉಂಡು ನಂಜುಂಡನಾದ ಪೌರಾಣಿಕ ಘಟನೆಗೂ ಶಿವರಾತ್ರಿಯಂದು ಆಚರಿಸುವ ಜಾಗರಣೆ ಮತ್ತು ಉಪವಾಸಕ್ಕೆ ಸಂಬಂಧವಿದೆ. ಉಪವಾಸ ಮಾಡುವುದರಿಂದ ಧಾರ್ಮಿಕವಾಗಿ ಅಲ್ಲದೆ, ವೈಜ್ಞಾನಿಕವಾಗಿಯೂ ಆರೋಗ್ಯಕ್ಕೆ ಒಳ್ಳೆಯದು. ತಿಂಗಳಲ್ಲಿ ಎರಡು ಬಾರಿ ಉಪವಾಸ ಮಾಡುವುದು ಅನಾರೋಗ್ಯದ ಸಮಸ್ಯೆಗಳಿಂದ ದೂರ ಇರಬಹುದು.