ಮನುಷ್ಯನಿಗೆ ಮನಸ್ಸೇ ಮಿತ್ರ ಮತ್ತು ಶತ್ರು: ಮನಸ್ಸನ್ನು ಗೆದ್ದರೆ ಸಿಗುವ ಲಾಭದ ಬಗ್ಗೆ ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನುಷ್ಯನಿಗೆ ಮನಸ್ಸೇ ಮಿತ್ರ ಮತ್ತು ಶತ್ರು: ಮನಸ್ಸನ್ನು ಗೆದ್ದರೆ ಸಿಗುವ ಲಾಭದ ಬಗ್ಗೆ ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ

ಮನುಷ್ಯನಿಗೆ ಮನಸ್ಸೇ ಮಿತ್ರ ಮತ್ತು ಶತ್ರು: ಮನಸ್ಸನ್ನು ಗೆದ್ದರೆ ಸಿಗುವ ಲಾಭದ ಬಗ್ಗೆ ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ

Bhagavad Gita: ಶ್ರೀಮದ್ ಭಗವದ್ಗೀತೆಯ ಜ್ಞಾನವು ಮಾನವನ ಜೀವನಕ್ಕೆ ಬಹಳ ಉಪಯುಕ್ತವಾಗಿದೆ. ಇದರಲ್ಲಿ ಜೀವನದ ಸಂಪೂರ್ಣ ತತ್ವ ಅಡಗಿದೆ. ಗೀತೆಯ ಸಾರವನ್ನು ತಿಳಿದವನು ಉತ್ತಮನಾಗಿ ಬಾಳುತ್ತಾನೆ. ಮನಸ್ಸು ನಮಗೆ ಒಳ್ಳೆಯ ಬಂಧುವೂ ಹೌದು ಹಾಗೂ ಅತ್ಯಂತ ದೊಡ್ಡ ಶತ್ರುವೂ ಹೌದು. ಹೇಗೆ? ಭಗವದ್ಗೀತೆಯ ಈ ಶ್ಲೋಕದಿಂದ ತಿಳಿದುಕೊಳ್ಳಿ.

ಮನುಷ್ಯನಿಗೆ ಮನಸ್ಸೇ ಮಿತ್ರ ಮತ್ತು ಶತ್ರು: ಶ್ರೀಕೃಷ್ಣನು ಮನಸ್ಸನ್ನು ಗೆದ್ದರೆ ಸಿಗುವ ಲಾಭವನ್ನು ಗೀತೆಯಲ್ಲಿ ಹೀಗೆ ಹೇಳಿದ್ದಾನೆ
ಮನುಷ್ಯನಿಗೆ ಮನಸ್ಸೇ ಮಿತ್ರ ಮತ್ತು ಶತ್ರು: ಶ್ರೀಕೃಷ್ಣನು ಮನಸ್ಸನ್ನು ಗೆದ್ದರೆ ಸಿಗುವ ಲಾಭವನ್ನು ಗೀತೆಯಲ್ಲಿ ಹೀಗೆ ಹೇಳಿದ್ದಾನೆ (PC: HT File Photo)

ಭಗವದ್ಗೀತೆಯನ್ನು ಗೀತೋಪನಿಷತ್ತು ಎಂದೂ ಕರೆಯುತ್ತಾರೆ. ಅರ್ಜುನನು ಗೀತೆಯನ್ನು ಶ್ರೀಕೃಷ್ಣನಿಂದಲೇ ನೇರವಾಗಿ ಕೇಳಿ ಅರ್ಥಮಾಡಿಕೊಂಡನು. ಇದರಲ್ಲಿ ಶ್ರೀಕೃಷ್ಣನು ಅರ್ಜುನನಿಗೆ 18 ಅಧ್ಯಾಯಗಳ ಮೂಲಕ ಸಂಪೂರ್ಣ ಜ್ಞಾನವನ್ನು ನೀಡಿದ್ದಾನೆ. ಅಂದು ಅರ್ಜುನನಿಗೆ ನೀಡಿದ ಉಪದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಮನುಷ್ಯನಿಗೆ ಸರಿಯಾದ ಮಾರ್ಗವನ್ನು ತೋರಿಸುವ ಗೀತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಪ್ರಗತಿಯನ್ನು ಹೊಂದಬಹುದಾಗಿದೆ. ಇದು ಮನುಷ್ಯನಿಗೆ ಹೇಗೆ ಬದುಕಬೇಕು ಎಂಬುದನ್ನು ಕಲಿಸುವ ಏಕೈಕ ಗ್ರಂಥವಾಗಿದೆ. ಮಾನವನು ಜೀವನದ ಉದ್ದೇಶವನ್ನು ನಿರ್ವಹಿಸಲು ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟಿಕೊಳ್ಳಬೇಕು. ಇಲ್ಲದಿದ್ದರೆ ಅದು ಮಾನವನಿಗೆ ದೊಡ್ಡ ಶತ್ರುವಾಗುತ್ತದೆ. ಶ್ರೀಕೃಷ್ಣನು ಮನಸ್ಸನ್ನು ಗೆಲ್ಲುವುದರಿಂದ ಅದು ಹೇಗೆ ನಮಗೆ ಬಂಧುವಾಗುತ್ತದೆ ಎಂದು ಈ ಶ್ಲೋಕದ ಮೂಲಕ ಹೇಳಿದ್ದಾನೆ.

ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೈವಾತ್ಮನಾ ಜಿತಃ |

ಅನಾತ್ಮನಸ್ತು ಶತ್ರುತ್ವೇ ವಾರ್ತೇತಾತ್ಮೈವ ಶತ್ರುವತ್‌ ||

ಅರ್ಥ: ಯಾರು ಮನಸ್ಸನ್ನು ಗೆದ್ದಿದ್ದಾನೋ ಅವನಿಗೆ ಮನಸ್ಸೇ ಅತ್ಯಂತ ಒಳ್ಳೆಯ ಮಿತ್ರ ಅಥವಾ ಬಂಧುವಾಗುತ್ತದೆ. ಆದರೆ ಹಾಗೆ ಮಾಡದಿರುವವನಿಗೆ ಅವನ ಮನಸ್ಸೇ ಅತ್ಯಂತ ದೊಡ್ಡ ಶತ್ರುವಾಗುತ್ತದೆ.

ಪ್ರತಿಯೊಬ್ಬ ವ್ಯಕ್ತಿಯು ತನ್ನ ಭಾವನೆಗಳಿಗಿಂತ ತನ್ನನ್ನು ತಾನು ಬಲವಾಗಿರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಶ್ರೀ ಕೃಷ್ಣನು ಗೀತೆಯಲ್ಲಿ ಹೇಳುತ್ತಾನೆ. ಇಲ್ಲದಿದ್ದರೆ ಅವನು ಜೀವನದ ಪ್ರತಿ ಹಂತದಲ್ಲೂ ಸೋಲುತ್ತಾನೆ.

ಸರಳವಾಗಿ ಮತ್ತು ನೇರವಾಗಿ ಮಾತನಾಡುವವರು ಕಟುವಾದ ಮಾತುಗಳನ್ನು ಹೊಂದಿರಬಹುದು, ಆದರೆ ಅವರು ಯಾರಿಗೂ ಮೋಸ ಮಾಡುವುದಿಲ್ಲ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ್ದಾನೆ.

ಗೀತೆಯ ಪ್ರಕಾರ, ನೀವು ಉತ್ತಮ ಮನಸ್ಥಿತಿಯನ್ನು ಹೊಂದಿದ್ದರೆ, ಜನರು ನಿಮ್ಮನ್ನು ಇಷ್ಟಪಡುತ್ತಾರೆ. ನೀವು ಒಳ್ಳೆಯ ಉದ್ದೇಶವನ್ನು ಹೊಂದಿದ್ದರೆ, ಕೆಲಸವು ಯಾವುದೇ ಅಡೆತಡೆಗಳಿಲ್ಲದೇ ಪ್ರಾರಂಭವಾಗುತ್ತದೆ.

ಪ್ರತಿಯೊಬ್ಬರೂ ಜೀವನದಲ್ಲಿ ಈ ಮೂರು ಮಂತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಶ್ರೀಮದ್ ಭಗವತ್ ಗೀತೆ ಹೇಳುತ್ತದೆ. ಸಂತೋಷದಲ್ಲಿರುವಾಗ ಯಾವುದೇ ಭರವಸೆಗಳನ್ನು ನೀಡಬೇಡಿ, ಕೋಪದಲ್ಲಿ ಎಂದೂ ಉತ್ತರಿಸಬೇಡಿ ಮತ್ತು ದುಃಖದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಶ್ರೀ ಕೃಷ್ಣನು ಕೋಪವು ಕೆಟ್ಟದ್ದಾಗಿದೆ ಆದರೆ ಅದನ್ನು ಎಲ್ಲಿ ಅಗತ್ಯವಿದೆಯೋ ಅಲ್ಲಿ ತೋರಿಸಬೇಕೆಂದು ಹೇಳುತ್ತಾನೆ. ಇಲ್ಲದಿದ್ದರೆ ತಪ್ಪು ಮಾಡಿದವನಿಗೆ ತಾನು ತಪ್ಪು ಮಾಡುತ್ತಿದ್ದೇನೆ ಎಂದು ತಿಳಿಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವನು ಯಾವಾಗಲೂ ನಿನ್ನನ್ನು ಕೆಟ್ಟದಾಗಿಯೇ ನಡೆಸಿಕೊಳ್ಳುತ್ತಾನೆ.

ನಮ್ಮ ಹಣೆಬರಹವು ನಮ್ಮ ಹಿಂದಿನ ಕರ್ಮದ ಫಲ ಎಂದು ಗೀತೆಯಲ್ಲಿ ಬರೆಯಲಾಗಿದೆ. ಹಾಗೆಯೇ ಇಂದು ನಾವು ಮಾಡುವ ಕ್ರಿಯೆಗಳು ನಮ್ಮ ನಾಳೆಯನ್ನು ನಿರ್ಧರಿಸುತ್ತದೆ.

ಭಗವದ್ಗೀತೆಯು ಸಂತೋಷದ ಪರಿಕಲ್ಪನೆಯನ್ನು ಅರ್ಥಪೂರ್ಣ ಜೀವನದೊಂದಿಗೆ ಸಂಯೋಜಿಸುತ್ತದೆ. ಸಂತೋಷವನ್ನು ಸಂತೃಪ್ತಿ ಮತ್ತು ಆಂತರಿಕ ಶಾಂತಿಯ ಆಳವಾದ ಅರ್ಥದಲ್ಲಿ ನೋಡಲಾಗುತ್ತದೆ. ಅದು ವ್ಯಕ್ತಿಯ ನಿಜವಾದ ಉದ್ದೇಶದೊಂದಿಗೆ ಮತ್ತು ಅವನ ಸುತ್ತಲಿನ ಪ್ರಪಂಚದೊಂದಿಗೆ ಸಾಮರಸ್ಯದಿಂದ ಕೂಡಿರುವಂತೆ ಮಾಡುತ್ತದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.