ಮುಂಜಾನೆಯ ಮಂಗಳಕರ ಸಮಯದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ಸಕಾರಾತ್ಮಕ ಶಕ್ತಿ, ಸಂತೋಷದ ದಿನ ನಿಮ್ಮದಾಗುತ್ತದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮುಂಜಾನೆಯ ಮಂಗಳಕರ ಸಮಯದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ಸಕಾರಾತ್ಮಕ ಶಕ್ತಿ, ಸಂತೋಷದ ದಿನ ನಿಮ್ಮದಾಗುತ್ತದೆ

ಮುಂಜಾನೆಯ ಮಂಗಳಕರ ಸಮಯದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ಸಕಾರಾತ್ಮಕ ಶಕ್ತಿ, ಸಂತೋಷದ ದಿನ ನಿಮ್ಮದಾಗುತ್ತದೆ

ಬೆಳಗಿನ ಸಮಯ ಬಹಳ ಮಹತ್ವದ್ದಾಗಿರುತ್ತದೆ. ಏಕೆಂದರೆ ಆ ಸಮಯದಲ್ಲಿ ಸಕಾರಾತ್ಮಕ ಶಕ್ತಿ ವಾತಾವರಣದಲ್ಲಿ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ ನೀವು ಮಾಡುವ ಕೆಲವೊಂದು ಕೆಲಸಗಳು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಹಾಗಾದರೆ ಯಾವ ಕೆಲಸಗಳನ್ನು ಮಾಡುವುದರಿಂದ ಶುಭಕರವಾಗಿರುತ್ತೆ ಎಂಬುದನ್ನು ನೋಡೋಣ.

ಬೆಳಗ್ಗಿನ ಮಂಗಳಕರ ಸಮಯದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ಸಕಾರಾತ್ಮಕ ಶಕ್ತಿ ತುಂಬಿದ ಸಂತೋಷದ ದಿನ ನಿಮ್ಮದಾಗುತ್ತದೆ
ಬೆಳಗ್ಗಿನ ಮಂಗಳಕರ ಸಮಯದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ಸಕಾರಾತ್ಮಕ ಶಕ್ತಿ ತುಂಬಿದ ಸಂತೋಷದ ದಿನ ನಿಮ್ಮದಾಗುತ್ತದೆ (PC: HT File Photo)

ಬೇಗ ಮಲಗು, ಬೇಗ ಏಳು ಈ ಗಾದೆ ಮಾತನ್ನು ನಾವೆಲ್ಲರು ಚಿಕ್ಕಂದಿನಿಂದಲೇ ಕೇಳುತ್ತಾ ಬಂದಿದ್ದೇವೆ. ನಮ್ಮ ಹಿರಿಯರೆಲ್ಲರು ಸೂರ್ಯೋದಯಕ್ಕೂ ಮುಂಚೆಯೇ ಎದ್ದು ನಿತ್ಯಕರ್ಮಗಳನ್ನು ಮುಗಿಸುತ್ತಿದ್ದರು. ಸೂರ್ಯೋದಯವಾದ ಕೂಡಲೇ ದೇವರನ್ನು ಸ್ಮರಿಸಿ, ದಿನ ಆರಂಭಿಸುತ್ತಿದ್ದರು. ಬೆಳಿಗ್ಗೆ ಬೇಗ ಏಳುವುದು ಕೇವಲ ಒಳ್ಳೆಯ ಹವ್ಯಾಸವಷ್ಟೇ ಅಲ್ಲ, ಅದು ಅಧ್ಯಾತ್ಮಿಕ ದೃಷ್ಟಿಯಿಂದಲೂ ಲಾಭದಾಯಕವಾಗಿದೆ ಎಂಬುದನ್ನು ಕಂಡುಕೊಂಡಿದ್ದರು. ಏಕೆಂದರೆ ದಿನದ ಆರಂಭ ಉತ್ತಮವಾಗಿದ್ದರೆ ದಿನವಿಡೀ ಒಳ್ಳೆಯದಾಗುತ್ತದೆ. ಬೆಳಗ್ಗಿನ ಸಮಯದಲ್ಲಿ ವಾತಾರಣದಲ್ಲಿ ಧನಾತ್ಮಕ ಶಕ್ತಿ ತುಂಬಿರುತ್ತದೆ. ಅದು ನಮ್ಮ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಕೊಡಬೇಕೆಂದರೆ ಬೆಳಿಗ್ಗೆ ಎದ್ದ ತಕ್ಷಣ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಬೆಳಗ್ಗಿನ ಮಂಗಳಕರವಾದ ಸಮಯದಲ್ಲಿ ಧನಾತ್ಮಕ ಶಕ್ತಿಗಳನ್ನು ಪಡೆದುಕೊಳ್ಳುವುದರಿಂದ, ದಿನವಿಡೀ ಉತ್ತಮವಾಗಿರುತ್ತದೆ. ಅದಕ್ಕಾಗಿ ಈ ಹವ್ಯಾಸವನ್ನು ನೀವೂ ರೂಢಿಸಿಕೊಂಡರೆ ಜೀವನದಲ್ಲಿರುವ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಹಾಗಾದರೆ ಬೆಳಗ್ಗಿನ ಸಮಯದಲ್ಲಿ ಏನೆಲ್ಲಾ ಮಾಡಿದರೆ ನಿಮ್ಮ ದಿನ ಲಾಭದಿಂದ ಕೂಡಿರುತ್ತದೆ ಎಂದು ತಿಳಿಯಲು ಮುಂದೆ ಓದಿ.

ಈ ಮಂತ್ರದಿಂದ ನಿಮ್ಮ ದಿನವನ್ನು ಪ್ರಾರಂಭಿಸಿ

ಕರಾಗ್ರೆ ವಸತೇ ಲಕ್ಷ್ಮೀ, ಕರಮಧ್ಯೆ ಸರಸ್ವತೀ |

ಕರಮೂಲೆ ಸ್ಥಿತೆ ಬ್ರಹ್ಮ, ಪ್ರಭಾತೆ ಕರದರ್ಶನಮ್ ||

ಕೆಲವೊಂದು ಆಚರಣೆಗಳನ್ನು ನೀವು ಚಿಕ್ಕವರಿರುವಾಗ ಪ್ರತಿನಿತ್ಯ ಮಾಡಿರುವ ನೆನಪಿರಬಹುದು. ದೊಡ್ಡವರಾದ ಮೇಲೆ ಒತ್ತಡದ ದಿನಗಳೆಂದು ಅದನ್ನು ಮರೆತಿರಬಹುದು. ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಕೈಗಳನ್ನು ಉಜ್ಜಿ ಅಂಗೈ ದರ್ಶನ ಮಾಡಿ. ನಂತರ ಈ ಮಂತ್ರವನ್ನು ಹೇಳಿ. ಹಾಗೆ ಮಾಡುವುದರಿಂದ ನಿಮ್ಮ ದಿನ ಅದ್ಭುತವಾಗಿರುತ್ತದೆ ಮತ್ತು ಒಳ್ಳೆಯ ಶುಭಫಲಗಳು ಲಭಿಸುತ್ತಲೆ.

ನಿಮ್ಮ ಇಷ್ಟದ ದೇವರನ್ನು ಸ್ಮರಿಸಿ

ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಇಷ್ಟದ ದೇವರನ್ನು ಸ್ಮರಿಸಿ. ಇದರಿಂದ ನಿಮಗೆ ದಿನವಿಡೀ ಮಾನಸಿಕ ಶಾಂತಿಯ ಅನುಭವವಾಗುತ್ತದೆ. ಅದೇ ರೀತಿ ಬೆಳಿಗ್ಗಿನ ಸಮಯದಲ್ಲಿ ಯಾವುದೇ ನಕಾರಾತ್ಮಕ ವಿಚಾರಗಳನ್ನು ತಲೆಗೆ ಹಾಕಿಕೊಳ್ಳಬಾರದು. ಇಲ್ಲವಾದರೆ ಅದು ನಿಮ್ಮ ಸಂತೋಷದ ದಿನವನ್ನು ಹಾಳುಮಾಡುತ್ತದೆ.

ಆಲಸ್ಯದಿಂದ ಹೊರಬನ್ನಿ

ಎಲ್ಲಕ್ಕಿಂತ ಮೊದಲು ನಿಮ್ಮೊಳಗಿನ ಆಲಸ್ಯವನ್ನು ಬೆಳಿಗ್ಗೆಯೇ ತ್ಯಜಿಸಿ. ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ನಂತರ ದೇವರ ಧ್ಯಾನ, ಪೂಜೆ ಮಾಡಿ. ಹೀಗೆ ಮಾಡುವುದರಿಂದ ದಿನವಿಡೀ ಉತ್ತಮ ಫಲಿತಾಂಶಗಳನ್ನು ಕಾಣುತ್ತೀರಿ. ಗುರು ಹಿರಿಯರ ಆಶೀರ್ವಾದ ಪಡೆದುಕೊಳ್ಳಿ. ಉತ್ತಮ ರೀತಿಯಲ್ಲಿ ದಿನವನ್ನು ಪ್ರಾರಂಭಿಸಿ.

ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡಿ

ಹಿಂದೂ ಧರ್ಮದಲ್ಲಿ ಪ್ರಕೃತಿಯನ್ನು ಪೂಜಿಸಲಾಗುತ್ತದೆ. ಪ್ರತಿಯೊಂದು ಪ್ರಾಣಿ, ಪಕ್ಷಿ, ಮರ, ಗಿಡಗಳಲ್ಲಿ ದೇವರನ್ನು ಕಾಣಲಾಗುತ್ತದೆ. ಆದ್ದರಿಂದ ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡಿ. ಗೋವಿನಲ್ಲಿ ಎಲ್ಲಾ ದೇವರುಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಗೋ ಮಾತೆಗೆ ಆಹಾರವನ್ನು ನೀಡಿ. ಜೊತೆಗೆ ಗಿಡಗಳಿಗೆ ನೀರುಣಿಸಿ. ಇದರಿಂದ ಸಾಕಷ್ಟು ಪುಣ್ಯ ಲಭಿಸುತ್ತದೆ. ಇದನ್ನು ಸ್ಕಂದ ಪುರಾಣದಲ್ಲಿಯೂ ವಿವರಿಸಲಾಗಿದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.