Karnataka Shiva Temples: ಮುರುಡೇಶ್ವರದಿಂದ ಕೋಟಿಲಿಂಗೇಶ್ವರದವರಿಗೆ ಕರ್ನಾಟಕದಲ್ಲಿರುವ ಜನಪ್ರಿಯ ಶಿವನ ದೇವಾಲಯಗಳಿವು
ಕರ್ನಾಟಕದಲ್ಲಿ ಪ್ರಮುಖ ಶಿವನ ದೇವಾಲಯಗಳು ಎನ್ನುವಷ್ಟರಲ್ಲಿ ಮೊದಲಿಗೆ ನೆನಪಾಗುವುದೇ ಭಟ್ಕಳದ ಮುರುಡೇಶ್ವರ ದೇವಸ್ಥಾನ, ಧರ್ಮಸ್ಥಳದ ಮಂಜುನಾಥ ದೇವಸ್ಥಾನ, ಹಂಪಿಯ ವಿರೂಪಾಕ್ಷ ದೇವಸ್ಥಾನ, ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ ಹೀಗೆ ಹತ್ತಾರು ದೇವಾಲಯಗಳನ್ನು ಕಾಣಬಹುದು. ಪ್ರಮುಖ 10 ದೇವಾಲಯಗಳ ವಿವರ ಇಲ್ಲಿದೆ.

ಮಹಾ ಶಿವರಾತ್ರಿಗೆ ಇನ್ನ ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷ ಚತುರ್ದಶಿಯ ದಿನದಂದು ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಶಿವನ ಆರಾಧನೆಗೆ ಸಕಲ ರೀತಿಯಲ್ಲಿ ಸಿದ್ಧತೆಗಳು ನಡೆಯುತ್ತವೆ. ದೇವಸ್ಥಾನಕ್ಕೆ ಹೋಗಿ ಶಿವರಾತ್ರಿ ಆಚರಿಸಲು ಸಾಧ್ಯವಾಗದೆ ಇರುವವರು ಮನೆಯಲ್ಲೇ ಶಿವನಿಗೆ ಪೂಜೆ ಮಾಡುವ ಮೂಲಕ ಶಿವರಾತ್ರಿಯನ್ನು ಆಚರಿಸಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿರುವ 112 ಅಡಿ ಎತ್ತರದ ಅದಿಯೋಗಿ ಶಿವನ ಪ್ರತಿಮೆಗೆ ಇತ್ತೀಚೆಗೆ ತುಂಬಾ ಜನಪ್ರಿಯತೆಯನ್ನು ಗಳಿಸಿದ್ದು, ಶಿವರಾತ್ರಿಯಂದು ಇಲ್ಲಿ ಇಡೀ ರಾತ್ರಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಕರ್ನಾಟಕದಲ್ಲಿ ಇರುವ ಜನಪ್ರಿಯ ಶಿವನ ದೇವಾಲಯಗಳ ಬಗ್ಗೆ ಇಲ್ಲಿ ತಿಳಿಯೋಣ.
ಹಿಂದೂ ಧರ್ಮದಲ್ಲಿ ಶಿವನನ್ನು ಸರ್ವೋಚ್ಛ ಶಕ್ತಿ ಎಂದು ಪರಿಗಣಿಸಲಾಗಿದೆ. ಕರ್ನಾಟಕದಲ್ಲಿ ಪುರಾತನ ಕಾಲದ ನೂರಾರು ಸಣ್ಣ ಹಾಗೂ ದೊಡ್ಡ ಶಿವನ ದೇವಾಲಯಗಳಿವೆ. ಹೊಯ್ಸಳ ವಾಸ್ತು ಶಿಲ್ಪವನ್ನು ಹೊಂದಿರುವಂತಹ ಶಿವನ ದೇವಾಲಯಗಳನ್ನೂ ಕಾಣಬಹುದು. ಇವುಗಳ ಪೈಕಿ ಕೆಲವೊಂದು ಪ್ರಸಿದ್ಧ ಹಾಗೂ ಜನ ಮನ್ನಣೆಯನ್ನು ಪಡೆದಿವೆ. ಅಂತಹ ದೇವಲಯಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುವ ಪ್ರಯತ್ನವನ್ನು ಮಾಡಲಾಗಿದೆ.
ಕರ್ನಾಟಕದಲ್ಲಿ ಪ್ರಮುಖ ಶಿವನ ದೇವಾಲಯಗಳು ಎನ್ನುವಷ್ಟರಲ್ಲಿ ಮೊದಲಿಗೆ ನೆನಪಾಗುವುದೇ ಭಟ್ಕಳದಲ್ಲಿರುವ ಮುರುಡೇಶ್ವರ ದೇವಸ್ಥಾನ, ಧರ್ಮಸ್ಥಳದ ಶ್ರೀಮಂಜುನಾಥ ದೇವಸ್ಥಾನ, ಹಂಪಿಯ ವಿರೂಪಾಕ್ಷ ದೇವಸ್ಥಾನ ಹಾಗೂ ಕೋಲಾರದ ಕೋಟಿಲಿಂಗೇಶ್ವರ ದೇವಸ್ಥಾನ, ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ, ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಬನವಾಸಿಯ ಮಧುಕೇಶ್ವರ ದೇವಾಸ್ಥಾನ, ಲಕ್ಕುಂಡಿಯ ನನ್ನೇಶ್ವರ ದೇವಸ್ತಾನ, ಹೀಗೆ ಹತ್ತಾರು ದೇವಾಲಯಗಳನ್ನು ಕಾಣಬಹುದು.
1. ಮುರುಡೇಶ್ವರ ದೇವಸ್ಥಾನ, ಭಟ್ಕಳ
ಹಿಂದೂಗಳ ಪ್ರಸಿದ್ಧ ಯತ್ರಾಸ್ಥಳವಾಗಿರುವ ಮುರುಡೇಶ್ವರ ದೇವಾಲಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಈ ಧಾರ್ಮಿಕ ಪುಣ್ಯ ಕ್ಷೇತ್ರಕ್ಕೆ ನಿತ್ಯ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಶಿವರಾತ್ರಿಯ ದಿನದಂದು ವಿಶೇಷ ಪೂಜೆ, ಕಾರ್ಯಮಗಳು ನಡೆಯುತ್ತವೆ. ಅರಬ್ಬಿ ಸಮುದ್ರದ ತೀರದಲ್ಲಿರುವ ಶಿವನ ವಿಗ್ರಹವು ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹವಾಗಿದೆ.
2. ಶ್ರೀಮಂಜುನಾಥ, ಧರ್ಮಸ್ಥಳ
ಕರ್ನಾಟಕದ ಪ್ರಮುಖ ಧಾರ್ಮಿಕ ತಾಣಗಳಲ್ಲಿ ಒಂದಾಗಿರುವ ಧರ್ಮಸ್ಥಳವು ಶ್ರೀಮಂಜುನಾಥನಿಗೆ ಪ್ರಸಿದ್ಧವಾಗಿದೆ. ಶಿವನ ಮತ್ತೊಂದು ರೂಪವಾದ ಮಂಜುನಾಥನನ್ನು ಕಣ್ತುಂಬಿಕೊಳ್ಳಲು ನಿತ್ಯ ಸಾವಿರಾರು ಮಂದಿ ಆಗಮಿಸುತ್ತಾರೆ. ಶಿವರಾತ್ರಿಯಂದು ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಅಂದು ಹೆಚ್ಚಿನ ಮಂದಿ ಭಕ್ತರು ಸೇರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ದೇವಾಲಯವಿದೆ.
3. ಕೋಟಿಲಿಂಗೇಶ್ವರ ದೇವಸ್ಥಾನ, ಕೋಲಾರ
ಕೋಲಾರ ಜಿಲ್ಲೆಯಲ್ಲಿರುವ ಪ್ರಮುಖ ಧಾರ್ಮಿಕ ತಾಣಗಳಲ್ಲಿ ಕೋಟಿಲಿಂಗೇಶ್ವರ ಕೂಡ ಒಂದಾಗಿದೆ. 108 ಅಡಿಗಳ ಬೃಹತ್ ಶಿವಲಿಂಗವನ್ನು ಇಲ್ಲಿ ಕಾಣಬಹುದು. ಜೊತೆಗೆ 32 ಅಡಿ ಎತ್ತರದ ಅತಿ ದೊಡ್ಡ ಬಸವ ಲಿಂಗ ಇದೆ. ಕೋಲಾರ ಜಿಲ್ಲೆಯ ಬಂಗಾರಪೇಟೆಗೆ 12 ಕಿಲೋ ಮೀಟರ್ ದೂರದಲ್ಲಿರುವ ಕಾಮ್ಮಸಂದ್ರದಲ್ಲಿದೆ.
4. ವಿರೂಪಾಕ್ಷ ದೇವಸ್ಥಾನ, ಹಂಪಿ
ವಿಜಯನಗರ ಜಿಲ್ಲೆಯ ಹಂಪಿಯಲ್ಲಿರುವ ವಿರೂಪಾಕ್ಷ ದೇವಾಸ್ಥಾನ ಅತ್ಯಂತ ಪುರಾತನ ದೇವಾಲಯವಾಗಿದೆ. 7ನೇ ಶತಮಾನದಲ್ಲಿ ಶಿವನ ದೇವಾಲಯವನ್ನು ತುಂಗಭದ್ರಾ ನದಿಯ ದಡದಲ್ಲಿ ನಿರ್ಮಿಸಲಾಗಿದೆ. ಹಂಪಿಯಲ್ಲಿರುವ ಸ್ಮಾರಕಗಳ ಒಂದು ಭಾಗವಾಗಿದ್ದು, ಪ್ರತಿ ಶಿವರಾತ್ರಿಗೆ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ.
5. ಮಹಾಬಲೇಶ್ವರ ದೇವಸ್ಥಾನ, ಗೋಕರ್ಣ
ದಕ್ಷಿಣ ಕಾಶಿ ಖ್ಯಾತಿಯ ಗೋಕರ್ಣದ ಮಹಾಬಲೇಶ್ವರ ದೇವಾಲಯ ತನ್ನ ಆತ್ಮಲಿಂಗಕ್ಕೆ ಜನಪ್ರಿಯವಾಗಿದೆ. 4ನೇ ಶತಮಾನದಲ್ಲಿ ಶಾಸ್ತ್ರಿಯ ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ದೇವಾಲಯವಾಗಿದ್ದು, ಧಾರ್ಮಿಕ ತೀರ್ಥಯಾತ್ರೆಯೂ ಆಗಿದೆ. ರಸ್ತೆ, ರೈಲು, ವಿಮಾನ ಮೂಲಕ ಈ ದೇವಾಲಯಕ್ಕೆ ತಲುಪಬಹುದು. ಗೋಕರ್ಣದಿಂದ ಮಹಾಬಲೇಶ್ವರ ದೇವಾಲಯಕ್ಕೆ 6 ಕಿಲೋ ಮೀಟರ್ ಇದೆ. ಪಣಜಿ, ಗೋವಾದಿಂದ ವಿಮಾನ ಮೂಲಕ ಇಲ್ಲಿಗೆ ತಲುಪಬಹುದು.
6. ಮಧುಕೇಶ್ವರ ದೇವಾಸ್ಥಾನ, ಬನವಾಸಿ
ಭಾರತದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿರುವ ಬನವಾಸಿಯಲ್ಲಿ ಈ ದೇವಾಲಯ ಇದೆ. ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಮಧುಕೇಶ್ವರ ದೇವಾಲಯ ಕೂಡ ಒಂದಾಗಿದೆ. ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿರುವ ಈ ದೇವಾಲಯಕ್ಕೆ ಪ್ರತಿ ಶಿವರಾತ್ರಿಯಂದು ಸಾಕಷ್ಟು ಮಂದಿ ಭಕ್ತರು ಭೇಟಿ ನೀಡುತ್ತಾರೆ. ದೇವಲಸ್ಥಾನಕ್ಕೆ ತಲುಪಲು ರಸ್ತೆಯ ಮಾರ್ಗ ಉತ್ತಮವಾಗಿದೆ. ರೈಲು ಸಂಪರ್ಕವಾದರೆ ಶಿವಮೊಗ್ಗ, ವಿಮಾನ ಸಂಪರ್ಕದ ಅಗತ್ಯವಿದ್ದರೆ ಮಂಗಳೂರಿಗೆ ಹೋಗಬೇಕಾಗುತ್ತದೆ. ಆದರೆ ಮಂಗಳೂರಿನಿಂದ 250 ಕಿಲೋ ಮೀಟರ್ ದೂರದಲ್ಲಿದೆ.
7. ನನ್ನೇಶ್ವರ ದೇವಸ್ತಾನ, ಲಕ್ಕುಂಡಿ, ಗದಗ
ಈ ದೇವಸ್ಥಾನ 11ನೇ ಶತಮಾನಕ್ಕೆ ಸೇರಿದ್ದು, ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿದೆ. ಚಾಲುಕ್ಯ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ದೇವಾಲಯ ತನ್ನ ವಾಸ್ತುಶಿಲ್ಪದಿಂದಲೇ ಜನಪ್ರಿಯತೆಯನ್ನು ಗಳಿಸಿದೆ. ಈ ದೇವಾಲಯಕ್ಕೆ ತೆರಳಲು ಬಸ್, ರೈಲು, ವಿಮಾನದ ವ್ಯವಸ್ಥೆಯಿದೆ. ಸಮೀಪದ ವಿಮಾನ ನಿಲ್ದಾಣ ಹುಬ್ಬಳ್ಳಿಯಲ್ಲಿದೆ. ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ದೇವಾಲಯ ತೆರೆದಿರುತ್ತದೆ.
8. ತುಳುವೇಶ್ವರ ದೇವಸ್ಥಾನ, ಬಸ್ರೂರು, ಉಡುಪಿ
ತುಳುವೇಶ್ವರ ದೇವಾಲಯ ಉಡುಪಿ ಜಿಲ್ಲೆಯ ಬಸ್ರೂರಿನಲ್ಲಿದೆ. ಇದು ಬಸ್ರೂರಿನ 24 ಮಹತ್ವದ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯದಲ್ಲಿರುವ ಶಿವಲಿಂಗವು ಅದರ ಸುತ್ತಲೂ ಬೆಳೆದ ಮರಗಳಿಂದ ರಕ್ಷಿಸಲ್ಪಟ್ಟಿದೆ. ಮೂಲ ದೇವಾಲಯವು 5 ರಿಂದ 6ನೇ ಶತಮಾನದ್ದಾಗಿದೆ. ಇಲ್ಲಿನ ಶಿವ ಭಕ್ತರ ಬೇಡಿದ ವರಗಳನ್ನು ನೀಡುವನೆಂಬ ನಂಬಿಕೆ ಇದೆ. ಈ ದೇವಾಲಯವು ಕುಂದಾಪುರದಿಂದ 2 ಕಿಲೋ ಮೀಟರ್ ದೂರದಲ್ಲಿದೆ.
9. ಮಲ್ಲಿಕಾರ್ಜುನ ದೇವಸ್ಥಾನ, ಪಟ್ಟದಕಲ್ಲು
ವಾಸ್ತುಶಿಲ್ಪದಲ್ಲಿ ಈ ದೇವಾಲಯ ಬಹುತೇಕ ಹಂಪಿಯ ವಿರೂಪಾಕ್ಷ ದೇವಾಲಯದಂತೆ ಕಾಣುತ್ತದೆ. ಪಟ್ಟದಕಲ್ಲು ಪ್ರದೇಶದಲ್ಲಿರುವ ಈ ದೇವಾಲಯವನ್ನು ರಾಣಿ ತ್ರೈಲೋಕ್ಯ ಮಹಾದೇವಿಯು ಕ್ರಿ.ಶ 740 ರಲ್ಲಿ ನಿರ್ಮಿಸಿದ್ದರು. ಇದು ಶಿವನ ದೇವಾಲಯವಾಗಿದ್ದರೂ ಒಳಗಿನ ಗೋಡೆಗಳು ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಚಿತ್ರಗಳನ್ನು ಹೊಂದಿವೆ.
10. ಅಮೃತೇಶ್ವರ ದೇವಾಲಯ, ಅಣ್ಣಿಗೇರಿ, ಧಾರವಾಡ
ಅಣ್ಣಿಗೇರಿಯಲ್ಲಿರುವ ಅಮೃತೇಶ್ವರ ದೇವಾಲಯವೂ ಕರ್ನಾಟಕದ ಪ್ರಮುಖ ಹಾಗೂ ಪ್ರಾಚೀನ ಕಾಲದ ಶಿವನ ದೇವಾಲಯಗಳಲ್ಲಿ ಒಂದಾಗಿದೆ. ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದಿಂದ ನಿರ್ಮಿಸಲಾಗಿರುವ ಕಪ್ಪು ಕಲ್ಲಿನ ದೇವಾಲಯಕ್ಕೆ ಹೆಸರುವಾಸಿಯಾಗಿದೆ.
