ನಾಳೆ ನಾರದ ಜಯಂತಿ 2025; ಮಹತ್ವ, ದೇವರ್ಷಿ ನಾರದರ ಸ್ತ್ರೀರೂಪ ನಾರದಿ ಕಥೆಯನ್ನು ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಾಳೆ ನಾರದ ಜಯಂತಿ 2025; ಮಹತ್ವ, ದೇವರ್ಷಿ ನಾರದರ ಸ್ತ್ರೀರೂಪ ನಾರದಿ ಕಥೆಯನ್ನು ತಿಳಿಯಿರಿ

ನಾಳೆ ನಾರದ ಜಯಂತಿ 2025; ಮಹತ್ವ, ದೇವರ್ಷಿ ನಾರದರ ಸ್ತ್ರೀರೂಪ ನಾರದಿ ಕಥೆಯನ್ನು ತಿಳಿಯಿರಿ

ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವರ್ಷಿ ನಾರದರನ್ನು ಭೂಮಿಯ ಮೇಲಿನ ಮೊದಲ ಪತ್ರಕರ್ತ ಎಂದು ಪರಿಗಣಿಸಲಾಗಿದೆ. ನಾರದ ಜಯಂತಿಯನ್ನು ಪ್ರತಿ ವರ್ಷ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಪ್ರತಿಪಾದ ತಿಥಿಯಂದು ಆಚರಿಸಲಾಗುತ್ತದೆ. ಕಥೆಯನ್ನು ಓದಿ.

ನಾರದ ಜಯಂತಿ ಯಾವಾಗ, ಮಹತ್ವ ಹಾಗೂ ಕಥೆಯನ್ನು ಇಲ್ಲಿ ತಿಳಿಯಿರಿ
ನಾರದ ಜಯಂತಿ ಯಾವಾಗ, ಮಹತ್ವ ಹಾಗೂ ಕಥೆಯನ್ನು ಇಲ್ಲಿ ತಿಳಿಯಿರಿ

ಪ್ರತಿ ವರ್ಷ ನಾರದ ಜಯಂತಿಯನ್ನು ಆಚರಿಸಲಾಗುತ್ತದೆ. ನಾರದ ಜಯಂತಿಯನ್ನು ದೇವರ್ಷಿ ನಾರದ ಮುನಿಯ ಜನ್ಮದಿನವೆಂದು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವರ್ಷಿ ನಾರದನನ್ನು ಭೂಮಿಯ ಮೇಲಿನ ಮೊದಲ ಪತ್ರಕರ್ತ ಎಂದು ಪರಿಗಣಿಸಲಾಗಿದೆ. ನಾರದ ಜಯಂತಿಯನ್ನು ಪ್ರತಿ ವರ್ಷ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಪ್ರತಿಪಾದ ತಿಥಿಯಂದು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ನಾರದ ಜಯಂತಿಯನ್ನು ಮೇ 14 ರಂದು ಆಚರಿಸಲಾಗುತ್ತದೆ. ನಾರದನನ್ನು ವಿಷ್ಣುವಿನ ಪರಮ ಭಕ್ತನೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ನಾರದ ಜಯಂತಿಯಂದು ಧ್ಯಾನ ಮಾಡುವುದರಿಂದ ಜ್ಞಾನ ಮತ್ತು ಬುದ್ಧಿಶಕ್ತಿ ಹೆಚ್ಚಾಗುತ್ತದೆ. ದೇವರ್ಷಿ ನಾರದರ ಸ್ತ್ರೀರೂಪ ನಾರದಿ ಕಥೆಯನ್ನು ತಿಳಿಯೋಣ.

ನಾರದರನ್ನು ದೇವರ್ಷಿಗಳು, ಮಹರ್ಷಿಗಳು ಎಂದು ಕರೆಯುತ್ತೇವೆ. ಇದಕ್ಕೆ ಕಾರಣ ನಾರದರು ತ್ರಿಲೋಕ ಸಂಚಾರಿಗಳು. ನಾರದರನ್ನು ಕಲಹ ಪ್ರಿಯರು ಎಂದು ಕರೆಯಲಾಗುತ್ತದೆ. ನಾರದರು ತ್ರಿಲೋಕ ಸಂಚಾರಿಗಳು. ತ್ರಿಕಾಲ ಜ್ಞಾನಿಗಳು. ದೇವ ದಾನವರ ನಡುವಿನ ಸಮರದಲ್ಲಿ ದೇವತೆಗಳಿಗೆ ಜಯ ದೊರೆಯುವಲ್ಲಿ ಇವರ ಪಾಲು ಹೆಚ್ಚಿನದು. ನಾರದ ಸಂಹಿತೆ ಎಂಬ ಬೃಹತ್ ಜೋತಿಷ್ಯಗ್ರಂಥವು ಇಂದಿಗೂ ನಮಗೆ ಲಭ್ಯವಿದೆ. ನಾರದರು ಭಕ್ತಿಸೂತ್ರವನ್ನು ಸಹ ರಚಿಸಿದ್ದಾರೆ. ನಾರದರಿಗೆ ಪ್ರತಿಯೊಂದು ವಿಚಾರದಲ್ಲಿಯೂ, ಅದನ್ನು ಆಸ್ವಾದಿಸಬೇಕೆಂಬ ಬಯಕೆಯಿರುತ್ತದೆ. ತಮಗೆ ಇಷ್ಟವಾದ ಆಸೆಗಳನ್ನು ಪೂರೈಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ದೇವರ್ಷಿ ನಾರದರ ಸ್ತ್ರೀರೂಪ ನಾರದಿಯಾಗಿದ್ದ ಕಥೆ

ನಾರದರೂ ಶ್ರೀ ಭಗವಾನ್ ನಾರಾಯಣರ ಮಾಯಾರೂಪವನ್ನು ಕಾಣುತ್ತಾರೆ. ಆ ಮಾಯಾರೂಪದಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದೇವತೆಗಳಿಗೆ ಅನುಕೂಲವೇ ಆಗಿರುತ್ತದೆ. ಈ ಮಾಯಾರೂಪವನ್ನು ಕಂಡ ನಾರದರಿಗೆ ತಾವೂ ಸಹ ಮಾಯಾಸ್ವರೂಪವನ್ನು ಪಡೆಯಬೇಕೆಂಬ ಆಸೆ ಉಂಟಾಗುತ್ತದೆ. ಒಮ್ಮೆ ನಾರದರು ಮತ್ತು ಭಗವಾನ್ ನಾರಾಯಣರನ್ನು ಭೇಟಿಯಾಗುತ್ತಾರೆ. ನಾರದ ಬೇಸರವನ್ನು ಕಂಡ ಭಗವನ್ ನಾರಾಯಣರು ಅದಕ್ಕೆ ಕಾರಣವನ್ನು ಕೇಳುತ್ತಾರೆ. ಆಗ ಅಳುಕಿನಿಂದಲೇ ನಾರದರು ನನಗೆ ನಿನ್ನ ಸಹಾಯದಿಂದ ಮಾಯಾ ಸ್ವರೂಪವನ್ನು ಪಡೆಯುವ ಆಸೆಯಾಗಿದೆ ಎಂದು ಹೇಳುತ್ತಾರೆ. ಆಗ ಭಗವಾನ್ ವಿಷ್ಣುವು ನಾನು ಕೇವಲ ಲೋಕಕಲ್ಯಾಣಕ್ಕಾಗಿ ಮಾಯಾ ಸ್ವರೂಪವನ್ನು ಬಳಸಿಕೊಳ್ಳುತ್ತೇನೆ. ಆದ್ದರಿಂದ ಸ್ವಾರ್ಥಸಾಧನೆಗೆ ಇದರ ಉಪಯೋಗ ಆಗಬಾರದು. ಅದು ಸಾಧ್ಯವಾಗುವುದು ಇಲ್ಲ ಎಂದು ನಾರದರಿಗೆ ಬುದ್ಧಿವಾದ ಹೇಳುತ್ತಾನೆ. ಆದರೆ ನಾರದರನ್ನು ಒಂದುರೀತಿಯ ಅಂಧಕಾರ ಕವಿದಿರುತ್ತದೆ. ಆದ್ದರಿಂದ ನಾರದರು ಹಠದಿಂದ ತನ್ನ ಈ ಬೇಡಿಕೆಯನ್ನು ವರವನ್ನಾಗಿ ಪರಿಗಣಿಸುವಂತೆ ಕೇಳಿಕೊಳ್ಳುತ್ತಾರೆ.

ಭಗವಾನ್ ವಿಷ್ಣುವಿಗೆ ಅನ್ಯಮಾರ್ಗ ತೋರುವುದಿಲ್ಲ. ಆಗ ಭಗವಾನ್ ವಿಷ್ಣುವು ತನ್ನ ವಾಹನವಾದ ಗರುಡನ ಬೆನ್ನೇರಿ ನಾರದರ ಜೊತೆಗೂಡಿ ಕನ್ಯಾಕುಬ್ಜ ಎಂಬ ಪ್ರದೇಶಕ್ಕೆ ಬಂದು ಇಳಿಯುತ್ತಾನೆ. ಆ ಪ್ರದೇಶವು ನಯನಮನೋಹರವಾಗಿರುತ್ತದೆ. ಇದನ್ನು ಕಂಡ ನಾರದರು ತಮ್ಮನ್ನು ತಾವು ಮರೆಯುತ್ತಾರೆ. ತಮ್ಮ ಮನದ ಆಸೆಯು ಸಹ ಮರೆಯಾಗುತ್ತದೆ. ಆ ಪ್ರದೇಶದಲ್ಲಿ ಆಕರ್ಷಕ ಕೊಳವೊಂದು ಕಂಡುಬರುತ್ತದೆ. ನಾರದರು ಕುತೂಹಲದಿಂದ ಆ ಕೊಳವನ್ನು ನೋಡುತ್ತಿರುತ್ತಾರೆ. ಅವರ ಮನದಲ್ಲಿ ಆ ಕೊಳದಲ್ಲಿ ಸ್ನಾನ ಮಾಡಬೇಕೆಂಬ ಆಸೆ ಮೂಡುತ್ತದೆ. ಇದನ್ನು ಅರಿತ ವಿಷ್ಣುವು ನಾರದರಿಗೆ ಸ್ನಾನ ಮಾಡಲು ತಿಳಿಸುತ್ತಾನೆ.

ನಾರದರು ಸ್ನಾನಕ್ಕೆ ತೆರಳಿದಾಗ ವಿಷ್ಣುವು ನಾರದರ ವೀಣೆ ಮತ್ತು ಕಮಂಡಲಗಳನ್ನು ತೆಗೆದುಕೊಂಡು ನಾರದರನ್ನು ಅಲ್ಲೇ ಬಿಟ್ಟು ಹೊರಟುಹೋಗುತ್ತಾನೆ. ಸ್ನಾನವನ್ನು ಮುಗಿಸಿ ಹೊರಬಂದ ನಾರದರು ಅತ್ಯಂತ ಸುಂದರಿಯಾದ ಕನ್ಯೆಯಾಗಿರುತ್ತಾರೆ. ಅವರ ಜನ್ಮದ ಬಗ್ಗೆ ಯಾವುದೆ ನೆನಪು ಇರುವುದಿಲ್ಲ. ಹೊಸ ವ್ಯಕ್ತಿಯಾಗಿಯೇ ಇರುತ್ತಾರೆ. ಇವರು ನಾರದಿ ಎಂಬ ಹೆಸರಿಂದ ಕರೆಯಲ್ಪಡುತ್ತಾರೆ. ನಾರದಿಯಲ್ಲಿ ಅನಾಥ ಪ್ರಜ್ಞೆಯು ಕಾಡುತ್ತದೆ. ಅಲ್ಲಿಯೇ ಇದ್ದ ಮರದ ಕೆಳಗೆ ದಾರಿ ಕಾಣದೆ ಕುಳಿತಿರುತ್ತಾಳೆ. ಆಗ ಅಲ್ಲಿಗೆ ಕನ್ಯಾಕುಬ್ಬದ ರಾಜನಾದ ತಾಲದ್ವಜನು ಬರುತ್ತಾನೆ. ನಾರದಿಯ ಸೌಂಧರ್ಯಕ್ಕೆ ಮರುಳಾಗಿ ಆಕೆಯನ್ನು ವಿವಾಹವಾಗುತ್ತಾನೆ. ಅವರಿಗೆ ಇಪ್ಪತ್ತು ಜನ ಮಕ್ಕಳು ಹುಟ್ಟುತ್ತಾರೆ.

ಒಮ್ಮೆ ಮಹಾರಾಜನಾದ ತಾಲಧ್ವಜನು ತನ್ನ ಶತ್ರುಗಳೊಡನೆ ಯುದ್ದಮಾಡುತ್ತಿರುತ್ತಾನೆ. ಆದರೆ ವಿಧಿಲಿಖಿತದಂತೆ ಅವನು ಶತೃಗಳಿಂದ ಕೊಲ್ಲಲ್ಪಟ್ಟು ಇಹ ಲೋಕವನ್ನು ತ್ಯಜಿಸುತ್ತಾನೆ. ಯುದ್ದಭೂಮಿಗೆ ಆಗಮಿಸಿದ ನಾರದಿಯು ರೋಧಿಸುತ್ತಾಳೆ. ಆಗ ಭಗವಾನ್ ವಿಷ್ಣುವು ಮುದಿಬ್ರಾಹ್ಮಣನ ವೇಷದಲ್ಲಿ ಯುದ್ದಭೂಮಿಗೆ ಬರುತ್ತಾನೆ. ನಾರದಿಗೆ ಇದು ನಿನ್ನ ನಿಜವಾಜ ಸ್ವರೂಪವಲ್ಲ. ಇದು ಮಾಯಾರೂಪ ಎಂದು ಹೇಳುತ್ತಾನೆ. ಅಲ್ಲಿಯೇ ಇದ್ದ ಮತ್ತೊಂದು ಕೊಳದಲ್ಲಿ ಸ್ನಾನವನ್ನು ಮಾಡಲು ತಿಳಿಸುತ್ತಾನೆ. ನಾರದಿಯು ಕೊಳದ ನೀರಿನಲ್ಲಿ ಸ್ನಾನ ಮಾಡಿ ಹೊರ ಬರುವಾಗ ತನ್ನ ನಿಜಸ್ವರೂಪದ ದೇವರ್ಷಿ ನಾರದರಾಗಿರುತ್ತಾರೆ. ಸ್ತ್ರೀಯಾಗಿ ತಾನು ಪಟ್ಟ ಕಷ್ಟವನ್ನು ನೆನೆದ ನಾರದರು ಮತ್ತೊಮ್ಮೆ ಮಾಯಾರೂಪದ ಬಗ್ಗೆ ಯೋಚನೆ ಮಾಡುವುದೇ ಇಲ್ಲ.

(ಬರಹ: ಎಚ್ ಸತೀಶ್, ಜ್ಯೋತಿಷಿ, ಬೆಂಗಳೂರು)

ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.