2025ರ ಅನಂತ ಚತುರ್ದಶಿ ಯಾವಾಗ? ಶುಭ ಮುಹೂರ್ತ, ಪೂಜಾ ವಿಧಿ ವಿಧಾನ, ವ್ರತದ ಕಥೆ ತಿಳಿಯಿರಿ-spiritual new ananthapadmanabha vrata story puja ritual for wish fulfillment details here sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  2025ರ ಅನಂತ ಚತುರ್ದಶಿ ಯಾವಾಗ? ಶುಭ ಮುಹೂರ್ತ, ಪೂಜಾ ವಿಧಿ ವಿಧಾನ, ವ್ರತದ ಕಥೆ ತಿಳಿಯಿರಿ

2025ರ ಅನಂತ ಚತುರ್ದಶಿ ಯಾವಾಗ? ಶುಭ ಮುಹೂರ್ತ, ಪೂಜಾ ವಿಧಿ ವಿಧಾನ, ವ್ರತದ ಕಥೆ ತಿಳಿಯಿರಿ

2025ರ ಅನಂತ ಚತುರ್ದಶಿ ವ್ರತ ದಿನಾಂಕ, ಪೂಜಾ ಸಮಯ, ಶುಭ ಮುಹೂರ್ತ, ವ್ರತವನ್ನು ಮಾಡುವುದರಿಂದ ಏನೆಲ್ಲಾ ವರಗಳನ್ನು ಪಡೆಯಬಹುದು ಹಾಗೂ ಅನಂತಪದ್ಮನಾಭ ವ್ರತದ ಕಥೆಯ ಬಗ್ಗೆ ಜ್ಯೋತಿಷಿ ಎಚ್ ಸತೀಶ್ ಅವರು ಬರೆದಿದ್ದಾರೆ.

ಅನಂತಪದ್ಮನಾಭ ವ್ರತದ ಪೂಜೆ, ವಿಧಿ ವಿಧಾನ ಹಾಗೂ ಕಥೆಯ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.
ಅನಂತಪದ್ಮನಾಭ ವ್ರತದ ಪೂಜೆ, ವಿಧಿ ವಿಧಾನ ಹಾಗೂ ಕಥೆಯ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಭಗವಾನ್ ವಿಷ್ಣುವನ್ನು ಅನಂತ ರೂಪದಲ್ಲಿ ಪೂಜಿಸಲು ಅನಂತ ಚತುರ್ಥಿ ಅತ್ಯಂತ ಮಹತ್ವದ್ದಾಗಿದೆ. ಭಾದ್ರಪದದಲ್ಲಿ ಶುಕ್ಲ ಪಕ್ಷದ ಚತುರ್ದಶಿ ದಿನಾಂಕನ್ನು ಅನಂತ ಚತುರ್ದಶಿ ಎಂದು ಕರೆಯಲಾಗುತ್ತದೆ. ಇದನ್ನು ಅನಂತ ಚೌದಾಸ್ ಅಂತಲೂ ಕರೆಯಲಾಗುತ್ತಿದೆ. ಈ ಮಹತ್ವದ ದಿನದಂದು ವಿಷ್ಣುವಿನ ಭಕ್ತರು ಉಪವಾಸವಿದ್ದು, ಭಗವಂತನಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. 2025ರ ಅನಂತ ಚತುರ್ದಶಿ ಯಾವಾಗ, ಶುಭ ಮುಹೂರ್ತ, ವ್ರತದ ಕಥೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿಯ ದಿನದಂದು ಅನಂತಪದ್ಮನಾಭ ವ್ರತ ಬರುತ್ತದೆ. 2025ರ ಸೆಪ್ಟೆಂಬರ್ 6ರ ಶನಿವಾರ ಈ ವ್ರತ ಆರಂಭವಾಗುತ್ತದೆ. ಆ ದಿನದಂದು ಮುಂಜಾನೆ 3.12ಕ್ಕೆ ಚತುರ್ದಶಿ ಆರಂಭವಾಗುತ್ತೆ. ಚತುರ್ದಶಿ ಮರುದಿನ ಬೆಳಗ್ಗೆ 1.41 ರವರೆಗೆ ಇರುತ್ತದೆ. ಆದ್ದರಿಂದ 6 ರಂದೇ ವ್ರತವನ್ನು ಆಚರಿಸಲಾಗುತ್ತದೆ. ಈ ಪೂಜೆಯನ್ನು ಬೆಳಗಿನ ವೇಳೆ ಮಾಡುವುದು ಅತಿ ಶ್ರೇಷ್ಠಕರ. ಸಾಧ್ಯವಾಗದೇ ಹೋದಲ್ಲಿ ಮಾತ್ರ ಮಧ್ಯಾಹ್ನವು ಮಾಡಬಹುದು. ಆನಂತರ ಸೂರ್ಯಸ್ತ ಆದಮೇಲೆ ಸಂಜೆ ವೇಳೆ ಮತ್ತೊಮ್ಮೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಸಂಪ್ರದಾಯದಂತೆ ಇದನ್ನು ದಂಪತಿ ಮಾತ್ರ ಪೂಜೆಯನ್ನು ಮಾಡಬೇಕು. ಆದರೆ ಕೆಲವು ಕಡೆ ಕೇವಲ ಪುರುಷರು ಮಾತ್ರ ಪೂಜೆಯನ್ನು ಮಾಡುತ್ತಾರೆ. ಎರಡು ಕಲಶಗಳನ್ನು ಇಡುತ್ತಾರೆ. ಕೆಲವೆಡೆ ಪ್ರತಿ ದಂಪತಿಗಳಿಗೆ ಒಂದೊಂದು ಕಳಶವನ್ನು ಇಟ್ಟು ಪೂಜಿಸುತ್ತಾರೆ.

  • ಚತುರ್ದಶಿಯ ತಿಥಿ ಆರಂಭದ ಸಮಯ: 2025ರ ಸೆಪ್ಟೆಂಬರ್ 6 ರಂದು ಬೆಳಗ್ಗೆ 3.12 ಕ್ಕೆ ಆರಂಭವಾಗುತ್ತದೆ.
  • ಚತುರ್ದಶಿಯ ತಿಥಿ ಕೊನೆಗೊಳ್ಳುವ ಸಮಯ: 2025ರ ಸೆಪ್ಟೆಂಬರ್ 7ರ ಬೆಳಗ್ಗೆ 1.41ಕ್ಕೆ ಕೊನೆಗೊಳ್ಳುತ್ತೆ

2024ರ ಅನಂತ ಚತುರ್ದಶಿಯನ್ನು ಸೆಪ್ಟಂಬರ್ 16ರ ಸೋಮವಾರ ಆಚರಿಸಲಾಗಿದೆ. ಅಂದು ಬೆಳಗ್ಗೆ 12.59ಕ್ಕೆ ಚತುರ್ದಶಿಯು ಆರಂಭವಾಗಿ ಮರು ದಿನ ಅಂದ್ರೆ ಸೆಪ್ಟೆಂಬರ್ 17ರ ಮಂಗಳವಾರ ಬೆಳಗ್ಗೆ 10.55ಕ್ಕೆ ಚತುರ್ದಶಿ ಕೊನೆಗೊಂಡಿತು.

ಅನಂತ ಪದ್ಮನಾಭ ವ್ರತದ ಪೂಜಾ ವಿಧಾನ

ಕಲಶಕ್ಕೆ ಬಿಳಿ ಬಣ್ಣದ ವಸ್ತ್ರವನ್ನು ಹೊದಿಸಬೇಕು. ಏಳು ದರ್ಬೆಗಳಿಂದ ಅನಂತನನ್ನು ಅಂದರೆ ಸರ್ಪವನ್ನು ಹೆಣೆಯಬೇಕು. ವ್ರತವು ಆರಂಭವಾಗುವುದೇ ಯಮುನ ಪೂಜೆಯಿಂದ. ಮೊದಲು ತುಳಸಿ ಕಟ್ಟೆಯ ಬಳಿ ಯಮುನಾ ಪೂಜೆಯನ್ನು ಮಾಡಬೇಕು. ಯಮುನಾ ಪೂಜೆಯಲ್ಲಿನ ನೀರನ್ನು ಕಳಶಗಳಿಗೆ ಹಾಕಿಕೊಳ್ಳಬೇಕು. ಆನಂತರ ಅನಂತಪದ್ಮನಾಭ ಸ್ವಾಮಿಗೆ ಅವಲಕ್ಕಿಯನ್ನು ಅರ್ಪಿಸಿ ಪ್ರಸಾದವನ್ನಾಗಿ ಸ್ವೀಕರಿಸಬೇಕು. ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ಸಿದ್ದಪಡಿಸಿ ನೇವೇದ್ಯ ಮಾಡಬಹುದು. ಈ ಪೂಜೆಗೆ ಚಿನ್ನದ ಪ್ರತಿಮೆ ಬಲು ಶ್ರೇಷ್ಠ. ಸಾಧ್ಯವಾಗದೆ ಹೂದಲ್ಲಿ ಬೆಳ್ಳಿ ವಿಗ್ರಹವನ್ನು ಉಪಯೋಗಿಸಬಹುದು. 14 ಗಂಟುಗಳ ದಾರವನ್ನು ಪೂಜಿಸಿ ಪುರುಷರು ಬಲಗೈಯಲ್ಲಿ ಧರಿಸಬೇಕು. ಸ್ತ್ರೀಯರು ಕತ್ತಿನಲ್ಲಿ ಧರಿಸಬೇಕು. ಪುರುಷರು ಮತ್ತು ಸ್ತ್ರಿಯರಿಗೆ ಪ್ರತ್ಯೇಕವಾದ ಕೆಂಪು ಬಣ್ಣದ ದಾರಗಳು ದೊರೆಯುತ್ತವೆ.

ಯಾವುದೇ ಕಾರಣಕ್ಕೂ ಹಿಂದಿನ ವರ್ಷದ ಪೂಜೆಯಲ್ಲಿ ಕಟ್ಟಿದ್ದ ದಾರವನ್ನು ಕಳೆದುಕೊಳ್ಳಬಾರದು. ಒಂದು ವೇಳೆ ದಾರವೂ ಕಳೆದು ಹೋದಲ್ಲಿ ವಾಸುದೇವ ಮಂತ್ರದ ಹೋಮವನ್ನು ಮಾಡಬೇಕು. ಆನಂತರ ಕೇಶವಾದಿ ನಾಮಗಳಿಂದ ಹೋಮವನ್ನು ಮಾಡಬೇಕು. ಇದಾದ ನಂತರ ಮತ್ತೆ ಪೂಜೆ ಮಾಡುವ ಅಧಿಕಾರ ಲಭಿಸುತ್ತದೆ. ಸಂಜೆಯಲ್ಲಿ ಅನಂತಪದ್ಮನಾಭಸ್ವಾಮಿಯ ಕಥೆಯನ್ನು ಕೇಳಿದ ನಂತರ ಮಹಾಮಂಗಳಾರತಿಯನ್ನು ಮಾಡಿ ಪೂಜೆಯನ್ನು ಸಂಪೂರ್ಣಗೊಳಿಸಬೇಕು. ಮಾರನೆಯ ದಿನ ಉತ್ತರಪೂಜೆಯ ನಂತರ ಕಲಶದ ನೀರನ್ನು ಮಕ್ಕಳ ಮುಖಕ್ಕೆ ಪ್ರೋಕ್ಷಿಸಿದರೆ ಭಯದ ನಿವಾರಣೆ ಯಾಗುವುದು.

ಅನಂತ ಪದ್ಮನಾಭ ವ್ರತದ ಕಥೆ

ಈ ಪೂಜೆಯ ಬಗ್ಗೆ ಕೃತಯುಗದ ಕಥೆ ಇದೆ. ಸುಮಂತನು ವಶಿಷ್ಠ ಗೋತ್ರದಲ್ಲಿ ಜನಿಸಿರುತ್ತಾನೆ. ಬೃಗುಮಹರ್ಷಿಗಳ ಮಗಳಾದ ದೀಕ್ಷಾದೇವಿಯನ್ನು ವಿವಾಹವಾಗುತ್ತಾನೆ. ಅವರಿಗೆ ಹೆಣ್ಣು ಮಗುವಿನ ಜನನವಾಗುತ್ತದೆ. ಆ ಮಗುವಿಗೆ ಸುಶೀಲೇ ಎಂದು ನಾಮಕರಣ ಮಾಡುತ್ತಾರೆ. ವಿಧಿಯಾಟದಿಂದ ಚಿಕ್ಕವಯಸ್ಸಿನಲ್ಲಿ ದೀಕ್ಷಾದೇವಿಯು ಅಸುನೀಗುತ್ತಾಳೆ. ಆಗ ಕರ್ಕಶಿ ಎಂಬ ಸ್ತ್ರೀಯ ಜೊತೆ ಎರಡನೇ ವಿವಾಹವಾಗುತ್ತಾನೆ. ಆದರೆ ಈಕೆಗೆ ಎಲ್ಲಾ ರೀತಿಯ ದುರಾಚಾರಗಳು ಇರುತ್ತವೆ.

ಇದನ್ನು ಲೆಕ್ಕಿಸದ ಮಗಳು ಸುಶೀಲೆ ತಂದೆಯ ನಿತ್ಯ ಪೂಜೆಗೆ ಸಹಕಾರ ನೀಡುತ್ತಾಳೆ. ಆಕೆಗೂ ಸಹ ದೇವರಲ್ಲಿ ಅಪಾರ ಭಕ್ತಿ ಇರುತ್ತದೆ. ದಿನ ಕಳೆದಂತೆ ಸುಮಂತನು ಕೌಂಡಿಂನ್ಯ ಎಂಬ ವರನಿಗೆ ಮಗಳನ್ನು ಕೊಟ್ಟು ವಿವಾಹ ಮಾಡುತ್ತಾನೆ. ಆಗ ಸುಶೀಲಯು ಪತಿಯ ಸಹಕಾರದಿಂದ ಶ್ರೀ ಅನಂತನ ಪೂಜೆಯನ್ನು ಮಾಡುತ್ತಾಳೆ. ದಿನ ಕಳೆದಂತೆ ಅವರ ಬಡತನ ತೊಲಗಿ ಪತಿಯ ಆಶ್ರಮವು ಅಷ್ಟೈಶ್ವರ್ಯಗಳಿಂದ ತುಂಬುತ್ತದೆ. ಪತಿಯು ಸುಶೀಲಯ ಕೈಯಲ್ಲಿದ್ದ ಅನಂತನ ದಾರವನ್ನು ನೋಡುತ್ತಾನೆ. ಯಾರನ್ನು ವಶ ಮಾಡಿಕೊಳ್ಳಲು ಇದನ್ನು ಕಟ್ಟಿಕೊಂಡಿರುವೆ ಎಂದು ಕೇಳುತ್ತಾನೆ. ಸಾಲದೆಂಬಂತೆ ಆ ದಾರವನ್ನು ತೆಗೆದುಕೊಂಡು ಬೆಂಕಿಯಲ್ಲಿ ಹಾಕಿಬಿಡುತ್ತಾನೆ. ಕೂಡಲೇ ಸುಶೀಲಯು ಸುಡುತ್ತಿದ್ದ ದಾರವನ್ನು ಹಾಲಿನಲ್ಲಿ ನೆನೆಸಿ ಇಡುತ್ತಾಳೆ. ಆನಂತರ ಕೌಂಡಿಲ್ಯನು ತನ್ನೆಲ್ಲ ಆಸ್ತಿಪಾಸ್ತಿಗಳನ್ನು ಕಳೆದುಕೊಳ್ಳುತ್ತಾನೆ.

ಇದರಿಂದ ಪಾಠ ಕಲಿತ ಕೌಂಡಿಲ್ಯನು ಭಗವಂತನಾದ ಅನಂತಪದ್ಮನಾಭ ಸ್ವಾಮಿಯನ್ನು ಹುಡುಕುತ್ತಾ ಹೊರಡುತ್ತಾನೆ. ದಾರಿಯಲ್ಲಿ ಕಂಡ ಪ್ರಾಣಿ ಪಕ್ಷಿಗಳು ನದಿ ನೀರನ್ನು ಸಹ ಅನಂತಪದ್ಮನಾಭ ಸ್ವಾಮಿಯ ಬಗ್ಗೆ ಕೇಳುತ್ತಾನೆ. ಆದರೆ ಯಾರಿಂದಲೂ ಮನ ಒಪ್ಪುವ ಉತ್ತರ ಬರುವುದಿಲ್ಲ. ಬಹುವಾಗಿ ನೊಂದ ಕೌಂಡಿಲ್ಯನು ಪ್ರಜ್ಞಾಹೀನನಾಗಿ ಬಿದ್ದುಬಿಡುತ್ತಾನೆ. ಈ ಸಮಯದಲ್ಲಿ ಕನಿಕರ ತೋರಿ ಸ್ವಯಂ ಅನಂತಪದ್ಮನಾಭಸ್ವಾಮಿಯೇ ಬಂದು ತನ್ನ ಅರಮನೆಗೆ ಕರೆದುಕೊಂಡು ಹೋಗುತ್ತಾನೆ. ಭಗವಾನ್ ವಿಷ್ಣುವು ತನ್ನ ವಿಶ್ವರೂಪವನ್ನು ತೋರಿಸುತ್ತಾನೆ. ಇದರಿಂದ ಕೌಂಡಿಲ್ಯನಿಗೆ ಜ್ಞಾನೋದಯವಾಗುತ್ತದೆ. ಕೌಂಡಿಲ್ಯನು ಪರಮಾತ್ಮನನ್ನು ವಿವಿಧ ರೀತಿಯಲ್ಲಿ ಸ್ತುತಿಸುತ್ತಾನೆ.

ಅವನ ಭಕ್ತಿಗೆ ಮೆಚ್ಚಿದ ಅನಂತಪದ್ಮನಾಭ ಸ್ವಾಮಿಯು ಯಾವುದಾದರು ಮೂರು ವರಗಳನ್ನು ಬೇಡುವಂತೆ ಹೇಳುತ್ತಾನೆ. ಕೊನೆಗೆ ವರಗಳ ಸಹಾಯದಿಂದ ಕಳೆದುಕೊಂಡ ಐಶ್ವರ್ಯವನ್ನು ಮರಳಿ ಪಡೆಯುತ್ತಾನೆ . ಮಾನವ ರೂಪದಲ್ಲಿ ಬಂದ ಅನಂತ ಪದ್ಮನಾಭಸ್ವಾಮಿಯು ದಾರಿಯಲ್ಲಿ ಕಾಣುವ ಮಾವಿನ ಮರವು ಮಾನವನಾಗಿದ್ದು, ತನ್ನಲ್ಲಿದ್ದ ವಿದ್ಯೆಯನ್ನು ಯಾರಿಗೂ ಕಲಿಸಿರುವುದಿಲ್ಲ. ಆದ್ದರಿಂದ ಯಾರಿಗೂ ಪ್ರಯೋಜನವಿಲ್ಲದ ಮಾವಿನ ಮರವಾಗಿರುತ್ತಾನೆ.

ಧನಿಕನೊಬ್ಬನು ತನ್ನಲ್ಲಿರುವ ಹಣದಿಂದ ತಾನೂ ತಿನ್ನದೆ ಬೇರೆಯವರಿಗೆ ಸಹಾಯವನ್ನು ಮಾಡದೆ ಇರುತ್ತಾನೆ . ಆದ್ದರಿಂದ ಹಸುವಾಗಿ ಹುಟ್ಟಿದರೂ ಹುಲ್ಲನ್ನು ತಿನ್ನಲಾರದೆ ನಿಂತಿರುತ್ತಾನೆ. ಕೊನೆಯದಾಗಿ ಎದುರಾಗುವ ಕತ್ತೆಯು ಸಹ ಮಾನವನೇ ಆಗಿದ್ದನು ಅವನು ಪ್ರಯೋಜನಕ್ಕೆ ಬಾರದ ಜಾಗಗಳನ್ನು ದಾನ ಮಾಡದೆ ಕತ್ತೆಯಾಗಿ ಜನಿಸಿದನೆಂದು ಹೇಳುತ್ತಾನೆ. ಇದೆಲ್ಲದ ಅರ್ಥವು ಒಂದೇ ಕಲಿಯುಗದಲ್ಲಿ ಮಾನವರಾಗಿ ಜನಿಸಿದ ನಾವು ನಮ್ಮ ವಿದ್ಯೆಯನ್ನು ಬೇರೆಯವರಿಗೆ ದಾರೆ ಎರೆಯಬೇಕು. ಹಾಗೆಯೇ ನಮ್ಮಲ್ಲಿರುವ ಹಣದಿಂದ ಜನಸೇವೆಯನ್ನು ಮಾಡಬೇಕು. ಇದಲ್ಲದೆ ದಾನ ಮಾಡುವುದಾದರೆ ಒಳ್ಳೆಯ ಪದಾರ್ಥಗಳನ್ನೇ ದಾನ ಮಾಡಬೇಕು. ಇದರಿಂದ ಮಾತ್ರ ಮುಕ್ತಿ ದೊರೆಯಲು ಸಾಧ್ಯ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.