ದೂರದರ್ಶನದಿಂದ ರಾಮದರ್ಶನ, ಬವಣೆಯಲ್ಲಿ ರಾಮನಾಮವೇ ಮನೋಬಲ: ಸುನೀತಾ ಉಡುಪ ಬರಹ
ರಾಮಾಯಣದ ಪ್ರಭಾವ, ಕಟ್ಟಿಕೊಡುವ ಆದರ್ಶನಗಳು ಬದುಕಿನ ಪ್ರತಿ ಹಂತದಲ್ಲಿಯೂ ಹೇಗೆ ಪರಿಣಾಮ ಬೀರುತ್ತವೆ ಎಂದು ನೆನಪಿಸಿಕೊಂಡಿದ್ದಾರೆ ಕುಂದಾಪುರದ ಬರಹಗಾರ್ತಿ ಸುನೀತಾ ಉಡುಪ. ಮಹಿಳಾ ಸಂವೇದನೆಯ ನೆಲೆಗಟ್ಟಿನಲ್ಲಿ ರಾಮಾಯಣದ ವಿವಿಧ ಪಾತ್ರಗಳ ಪರಿಶೀಲನೆ ಇಲ್ಲಿದೆ.
“ರಾಮ ಎಂಬುವ ಎರಡು ಅಕ್ಷರದ ಮಹಿಮೆನು ಪಾಮರರು ತಾವೇನು ಬಲ್ಲರಯ್ಯಾ … 'ರಾ' ಎಂದು ಮಾತ್ರದೊಳು ರಕ್ತಮಾಂಸದೊಳಿದ್ದ ಆಯಾಸ್ಥಿಗತವಾದ ಅತಿ ಪಾಪವನ್ನು…ಮಾಯವನು ಮಾಡಿ ಮಹರಾಯ ಮುಕ್ತಿ ಕೊಡುವ. ಮತ್ತೆ 'ಮಾ' ಎಂದೆನಲು ಹೊರಬಿದ್ದ ಪಾಪಗಳು, ಒತ್ತಿದವು ಪೋಗದಂತೆ ಕವಾಟವಾಗಿ… ಚಿತ್ತ ಕಾಯಗಳೆಲ್ಲಾ ಪವಿತ್ರ ಮಾಡಿದ ಪರಿಯ... ಎನ್ನುತ್ತಾ ಪುರಂದರದಾಸರು "ರಾಮ" ಎಂಬ ಎರಡಕ್ಷರದ ಮಹಿಮೆನು ತಿಳಿಸಿದ್ದಾರೆ.
ಧರೆಯೊಳೀ ನಾಮಕ್ಕೆ ಸರಿಸಾಟಿಯೇ ಇಲ್ಲವೆಂದು ಸಾರಿದ ಕೀರ್ತನೆಯನ್ನು ಕಳೆದ ತಿಂಗಳಲ್ಲಿ ನಮ್ಮ ಭಜನೆ ಗುರುಗಳು ಹೇಳಿಕೊಟ್ಟಾಗ, ರಾಮ ಶಬ್ದವೇ ಎಂತಹ ಮಹಿಮೆಯಿಂದ ಕೂಡಿದೆ ಎಂದೆನಿಸಿ ನನ್ನ ಮನದಲಿ ಇದುವರೆಗೂ ಇದ್ದ ರಾಮನ ಚಿಂತನೆಗೆ ಬಲ ತುಂಬಿತ್ತು. ಬಾಯ್ತೆರೆದು ‘ ರಾ’ ಎಂಬ ಶಬ್ಧೋಚ್ಚಾರಣೆ ಮಾಡಿದಾಗ ನಮ್ಮ ಪಾಪಗಳೆಲ್ಲವೂ ಹೊರ ಹೋಗಿ, ಮತ್ತೆ ತುಟಿ ಮುಚ್ಚಿ ‘ಮ’ ಎಂದಾಗ ಅವು ಕವಾಟದಂತೆ ಹೊರ ಹೋದ ಪಾಪಗಳು ಒಳಸೇರದಂತೆ ತಡೆಯುತ್ತದೆ ಎಂದು ‘ರಾಮ‘ ಶಬ್ದದ ವಿಶಾಲ ಅರ್ಥವನ್ನೇ ದಾಸರು ನಮ್ಮಂತಹ ಸಾಮಾನ್ಯ ಜನರಿಗೆ ಕೀರ್ತನೆಯ ಮೂಲಕ ತಿಳಿಸಿದ ಪರಿ ಅನನ್ಯ.
ರಾಮ ನಾಮದ ಬೆಲೆಯರಿತು ಭಜಿಸುವಾಗ ನಾವೂ ರಾಮನಲ್ಲಿ ಲೀನವಾಗಲು ಸಾಧ್ಯ . ಹಾಗೆಂದು ನನ್ನ ಬದುಕಿನಲ್ಲಿ ರಾಮ ಚಿಂತನೆ ಇತ್ತೀಚೆಗೆ ಹುಟ್ಟಿಕೊಂಡಿದ್ದು ಎಂದರ್ಥವಲ್ಲ. ನನಗೆ ಬಾಲ್ಯದಿಂದಲೇ ರಾಮನನ್ನು ಪರಿಚಯಿಸಿದವಳು ನನ್ನಮ್ಮ.
ದೂರದರ್ಶನದಿಂದ ರಾಮದರ್ಶನ..
ದೂರದರ್ಶನದಲ್ಲಿ ರಮಾನಂದ ಸಾಗರ್ ಅವರ ರಾಮಾಯಣ ಧಾರಾವಾಹಿ ಪ್ರಸಾರವಾಗುವಾಗ ನನಗೆ ಏಳೆಂಟು ವರ್ಷವಿರಬಹುದು. ನಮ್ಮ ಕೇರಿಯಲ್ಲಿ ನಮ್ಮ ಮನೆಗೇ ಮೊದಲ ಬಾರಿ ಟಿವಿ ಬಂದಿದ್ದರಿಂದ ಆಸುಪಾಸಿನ ಮಂದಿಯೂ ಕುತೂಹಲದಿಂದ ಅಷ್ಟೇ ಧನ್ಯತಾ ಭಾವದಿಂದ ರಾಮಾಯಣ ನೋಡಲು ಬರುತ್ತಿದ್ದರು. ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಕಾರಣ ನನಗೆ ಅಮ್ಮನೇ ಕನ್ನಡಕ್ಕೆ ಅನುವಾದ ಮಾಡಿ ರಾಮಾಯಣದ ಕಥೆ ತಿಳಿಸಿಕೊಡುತ್ತಿದ್ದಳು. ಪಾತ್ರಧಾರಿಗಳು ಡೈಲಾಗ್ ಹೇಳಿದ ಕೂಡಲೇ…. "ರಾಮ ಏನಂದ ಅಮ್ಮ ..ಲಕ್ಷ್ಮಣ ಏನಂದ " ಅಂತಾ ಗೋಗರೆಯುವುದರಲ್ಲಿ ಮುಂದಿನ ಡೈಲಾಗ್ ಬಂದು ಅಮ್ಮನಿಗೂ ಕಸಿವಿಸಿ ಮಾಡುತ್ತಿದ್ದ ನೆನಪು ಇನ್ನು ಮಾಸಿಲ್ಲ.
ರಾಮನದ್ದು ಕೋದಂಡ, ನನ್ನದು ಕೋಲಿನ ದಂಡ
ಧಾರಾವಾಹಿ ಮುಗಿದ ಬಳಿಕ ಅಮ್ಮ ಮತ್ತೆ ಅದರ ಕತೆ ಹೇಳಿ ಹೇಳಿ, ರಾಮಾಯಣದ ಕತೆ ಚೆನ್ನಾಗಿ ಅರಿವಾಗಿತ್ತು. ಬಾಲ್ಯದಲ್ಲಿ ರಾಮಾಯಣದ ಪ್ರಭಾವ ನನ್ನ ಮೇಲೆ ಎಷ್ಟಿತ್ತು ಎಂದು ಈಗ ನೆನಪಿಸಿಕೊಂಡರೆ ನಗು ಬರುತ್ತದೆ. ಅಂದಿನ ಎಲ್ಲಾ ಮಕ್ಕಳಿಗೂ ಇದ್ದಂತೆ ರಾಮನಂತೆ ಬಿಲ್ಲು ಹಿಡಿದು ಬಾಣ ಬಿಡುವ ಕಸರತ್ತು ಜೋರಿತ್ತು. ರಾಮನದ್ದು ಕೋದಂಡವಾದರೆ ನನ್ನದು ಕೋಲಿನ ದಂಡ. ಅಲ್ಲದೇ ನಮ್ಮ ಮನೆಯಲ್ಲಿ ಕೃಷಿಯೇ ಮುಖ್ಯ ಕಸುಬಾಗಿ ಇದ್ದ ಕಾರಣ ಭತ್ತ, ಧಾನ್ಯಗಳನ್ನು ಒಮ್ಮುಖಗೊಳಿಸಲು ಎಲ್ಲೆಂದರಲ್ಲಿ ತೆಂಗಿನ ಮರದ ಗರಿಯಿಂದ ಮಾಡಿದ ಹಿಡಿಸೂಡಿ (ಪೊರಕೆ )ಇರುತ್ತಿತ್ತು. ದಾರದಿಂದ ದಪ್ಪನೆಯ ಪೊರಕೆ ಕಡ್ಡಿಗೆ ಎರಡೂ ಬದಿ ಸುತ್ತಿ, ಚೂಪಾದ ಕಡ್ಡಿಯನ್ನು ಬಾಣವಾಗಿಸಿ ಹೊಡೆದರೆ ತುಂಬಾ ದೂರ ಹೋಗಿ ಬೀಳುವುದನ್ನು ಕಂಡು ಖುಷಿ ಪಡುತ್ತಿದ್ದೆ.
ರಾಮನ ಅನುಕರಣೆ ಎಷ್ಟಿತ್ತೆಂದರೆ, ಬಿಲ್ಲಿಗೆ ಬಾಣ ಹೂಡಿ ಎರಡು ಕೈಯಿಂದ ಮೇಲೆತ್ತಿ, ಕಣ್ಣುಮುಚ್ಚಿ ಬಾಯಲ್ಲಿ ಮಣಮಣ ಮಂತ್ರ ಹೇಳಿ ಬಾಣ ಬಿಟ್ಟಾಗ, ನನ್ನನ್ನು ನೋಡಿದ ಎಲ್ಲರಿಗೂ ನಗು ಬರುತ್ತಿತ್ತು. ಹಾಗೇ ಎಲ್ಲೆಂದರಲ್ಲಿ ಪೊರಕೆ ಕಡ್ಡಿ ಬಿದ್ದಿರುವುದನ್ನು ಕಂಡು ಅಪ್ಪಯ್ಯನ ಬಳಿ ಬೈಸಿಕೊಂಡಿದ್ದೂ ಇದೆ. ರಾಮ ರಾಕ್ಷಸರ ಸಂಹಾರಕ್ಕೆ ಬಿಲ್ಲು ಬಾಣ ಬಳಸಿದರೆ ,ನಾನು ನೆಲಗಡಲೆ ಗದ್ದೆಗೆ ಬರುವ ಕಾಗೆಗಳ ಹಿಂಡನ್ನು ಓಡಿಸಲು, ಹಪ್ಪಳ ಸಂಡಿಗೆ ಒಣಗಿಸಿದಾಗ ಬರುವ ಕಾಕಾಸುರನನ್ನು ಓಡಿಸಲು ಬಾಣ ಬಿಡುತ್ತಿದ್ದೆ. ನಮ್ಮ ಬಾಲ್ಯದ ಆಟ ಆಡುವ ಗೆಳತಿಯರ ಮುಂದೆ, ಇದೇ ಬಾಣ ಹೂಡಿ 'ನನ್ನ ಗುರಿಯೆಂದರೆ ರಾಮನ ಥರವೇ ನೋಡಿ' ಎಂದು ತಮಾಷೆ ಮಾಡುತ್ತಿದ್ದೆ. ಹೀಗೆ ಬಾಲ್ಯದಲ್ಲಿ ರಾಮನೆಂದರೆ ಬಹು ದೊಡ್ಡ ಆದರ್ಶ ನನಗೆ.
ಮಿಗಿಲಾಗಿ ಕಂಡಿತ್ತು ಊರ್ಮಿಳೆಯ ತ್ಯಾಗ
ಸಮಯ ಕಳೆದಂತೆ ರಾಮನ ಚಿಂತನೆಯಲ್ಲಿ ಸ್ವಲ್ಪ ಬದಲಾವಣೆಯೂ ಆಗಿತ್ತೆನ್ನಿ. ರಾಮಾಯಣವನ್ನು ಸ್ವತಃ ಓದಿ, ಹಾಗೇ ಇತರರು ರಾಮಾಯಣದ ಬಗ್ಗೆ ಬರೆದಂತಹ ವಿಚಾರಧಾರೆಯನ್ನು ಓದುವಾಗ ಕೆಲವೊಮ್ಮೆ ರಾಮನೂ ಸಾಮಾನ್ಯರಂತೆ ತಪ್ಪೆಸಿಗಿದನೋ ಎಂಬ ಎಂಬ ಪ್ರಶ್ನೆ ಕಾಡುತ್ತಿತ್ತು. ಕೇವಲ ರಾಮ ಮಾತ್ರ ಮಹಾತ್ಮನೆನಿಸದೇ, ಮಗನನ್ನು ಇಷ್ಟವಿರದೇ ಇದ್ದರೂ ಕಾಡಿಗೆ ಕಳುಹಿಸಿದ ಕೌಸಲ್ಯೆಯ ಅಂತಃಕರಣಕ್ಕೆ ಸಾಟಿಯಿಲ್ಲವೆನಿಸಿತ್ತು. ಊರ್ಮಿಳೆಯ ಅಂತರಂಗ ಓದಿದ ಬಳಿಕ, ಸೀತೆಗಿಂತ ಊರ್ಮಿಳೆಯ ಪಾತ್ರದ ತೂಕವೇ ಹೆಚ್ಚಿದೆ ಎನಿಸಿತ್ತು. ವನವಾಸವಾದರೂ ಪತಿಯ ಒಡನಾಟದಲ್ಲಿದ್ದ ಸೀತೆಗಿಂತ, ಏನೊಂದೂ ತಪ್ಪಿಲ್ಲದಿದ್ದರೂ ಸಂಕಟಪಟ್ಟ ಊರ್ಮಿಳೆಗಾಗಿಯೂ ಮನ ಮಿಡಿದಿತ್ತು. ಅರಮನೆಯ ವೈಭೋಗವಿದ್ದರೂ , ಪತಿಯಿಲ್ಲದ ಅಂತಃಪುರದಲ್ಲಿ, ಪತಿಯ ಬಗ್ಗೆ ಚಿಂತಿಸುತ ದಿನ ಕಳೆದ ಊರ್ಮಿಳೆಯ ತ್ಯಾಗವೂ ಮಿಗಿಲಾಗಿ ಕಂಡಿತ್ತು. ಅನಾಯಾಸವಾಗಿ ದಕ್ಕಿದ ಸಿಂಹಾಸನವನ್ನು ಬಿಟ್ಟು, ತಾನೂ ಅಣ್ಣನಂತೆ ನಾರು ಮಡಿಯುಟ್ಟು , ರಾಜ ಸಿಂಹಾಸನದಲ್ಲಿ ಪಾದುಕೆ ಇಟ್ಟು ಸರಳತೆ , ಭ್ರಾತೃಪ್ರೇಮ ಮೆರೆದ ಭರತನೂ ಸಹ ಯಾರಿಗೇನು ಕಡಿಮೆಯಿಲ್ಲಾ ಎಂಬ ಧನ್ಯತೆ ಮೂಡಿತ್ತು.
ರಾಮನ ಬಗ್ಗೆ ಮೂಡಿತ್ತು ಸದ್ಭಾವ
ಸೀತೆಯೇಕೆ ಅಷ್ಟೊಂದು ಹಟ ಮಾಡಿ ಮಾಯಾ ಜಿಂಕೆಯ ಮೋಹಕ್ಕೆ ಬಿದ್ದಳೋ? ಅವಳೂ ನಮ್ಮಂತೆ ಸಾಮಾನ್ಯ ಗೃಹಿಣಿಯ ಹಾಗೇ ಮೋಹಕ್ಕೆ ಬಿದ್ದು ಪತಿಯಲ್ಲಿ ಹಟ ಹಿಡಿದಿದ್ದಕ್ಕಲ್ಲವೇ? ಸುಲಭದಲ್ಲಿ ರಾವಣನ ಕೈಗೆ ಸಿಕ್ಕುವಂತಾದದ್ದು. ಅದು ಹೋಗಲೆಂದರೆ. ಲಕ್ಷ್ಮಣನ ರೇಖೆಯನ್ನೂ ದಾಟಿ ತಪ್ಪು ಹೆಜ್ಜೆ ಇಟ್ಟ ಕಾರಣದಿಂದ ಎಲ್ಲರೂ ಕಷ್ಟಪಡುವಂತಾಯಿತಲ್ಲಾ. ಹೀಗೆ ನಾನಾ ಪ್ರಶ್ನೆಗಳೂ ಮನದಲ್ಲಿ ಕಾಡಿದ್ದುಂಟು. ಅಮ್ಮನ ಬಳಿ ಇಂತಹ ವಿಚಾರಗಳ ವಿಮರ್ಶೆ ಸಹ ಮಾಡಿ ಅವಳ ತಲೆಯೂ ತಿನ್ನುತ್ತಿದ್ದೆ. ತುಂಬು ಗರ್ಭಿಣಿಯಾದ ಹೆಂಡತಿಯನ್ನು ಯಾರೋ ಏನೋ ಅಂದರೆಂದು ಕಾಡಿಗಟ್ಟಿದ ರಾಮನು ಸಹ ನಮ್ಮೆಲ್ಲರಂತೆ " ಆಡಿಕೊಳ್ಳುವ ಮಂದಿಗಳ ಮುಂದೆ ಬಾಗಿದನೇ ಎಂದು ಹಲವು ಬಾರಿ ಯೋಚಿಸಿದ್ದೆ. ಅದಕ್ಕೆ ಅಮ್ಮ, ರಾಮನಿಗೂ ಮುನಿಯೊಬ್ಬನ ಶಾಪವಿತ್ತಂತೆ . ಪತ್ನಿಯಿದ್ದರೂ ಸಹ ಅವಳಿಂದ ವಿರಹಿಯಾಗಿ ಬಾಳುವಂತಾಗಲಿ ಎಂದು ಹಿಂದಿನ ಜನ್ಮದಲ್ಲಿ ಪಡೆದ ಶಾಪವೇ ಕಾರಣ ಎಂದು ಹೇಳುವಾಗ ರಾಮನ ಬಗ್ಗೆ ಸದ್ಭಾವ ಮೂಡಿತ್ತು.
ಮತ್ತೆ ಹರಡಿದ ರಾಮಾಯಣದ ಘಮ
ಕೊರೊನಾ ಸಂದರ್ಭದಲ್ಲಿ ಮತ್ತೆ ರಾಮಾಯಣ ಮರು ಪ್ರಸಾರವಾದಾಗ ಮತ್ತೆ ರಾಮ ಮನದಲ್ಲಿ ಗಾಢವಾದ ಪ್ರಭಾವ ಬೀರಿದ್ದ. ಶ್ರೀ ರಾಮಚಂದ್ರ ಹೇಗಿದ್ದನೋ ತಿಳಿಯೇ. ಆದರೆ ರಾಮ ಎಂದಾಗ ನೆನಪಾಗುವುದು ರಾಮಾಯಣದ ಪಾತ್ರಧಾರಿ ಅರುಣ್ ಗೋವಿಲ್. ಚಿಕ್ಕಂದಿನಿಂದ ಮನದಲ್ಲಿ ಅಚ್ಚೊತ್ತಿದ ರಾಮ ರೂಪವಾಗಿರುವುದರಿಂದ ಭಾವನಾತ್ಮಕವಾಗಿ ಹಿಡಿದಿಟ್ಟ ರೂಪವದು. ಈ ಬಾರಿ ಗೃಹಿಣಿಯಾಗಿ ರಾಮಾಯಣ ವೀಕ್ಷಿಸಿದಾಗ, ರಾಮಾಯಣದ ಘಟನೆಗಳೆಲ್ಲವೂ ನಾವು ಹೇಗೆ ಬದುಕಬೇಕೆಂದು ತಿಳಿಸಿಕೊಡಲೆಂದು ಇರುವುದು ಎಂಬ ಅರಿವು ಮೂಡಿತ್ತು. ಕೆಲವು ಘಟನೆಗಳು ಸಂಕಟದ ಕಣ್ಣೀರು ತರಿಸಿದರೆ ಇನ್ನು ಕೆಲವೊಂದು ಆನಂದಭಾಷ್ಪ ಸುರಿಸುವಂತೆ ಮಾಡಿತ್ತು.
ರಾಮ ಕಾಡಿಗೆ ಹೊರಟಾಗ, ಸೀತೆ ಅಶೋಕವನದಲ್ಲಿ ಶೋಕಿಸುವಾಗ, ಲಕ್ಷ್ಮಣ ತುಂಬು ಗರ್ಭಿಣಿಯಾದ ಸೀತೆಯನ್ನು ರಾಮನಾಜ್ಞೆಯೆಂದು ಕಾಡಿಗೆ ಬಿಟ್ಟು ಬರುವಾಗ ಹೀಗೆ ಹಲವು ಸಂದರ್ಭಗಳಲ್ಲಿ ಅತ್ತಿದ್ದೂ ಇದೆ. ಹಾಗೇ ಸೀತಾರಾಮರ ಪುನರ್ ಮಿಲನ, ಆಂಜನೇಯ ತೋರುವ ಭಕ್ತಿ, ರಾವಣ ಸಂಹಾರದ ಬಳಿಕ ಅಯೋಧ್ಯೆಯಲ್ಲಿ ರಾಮನ ಆಗಮನದಿಂದ ಭರತಾದಿಗಳ ಸಂಭ್ರಮದ ಕ್ಷಣ, ಲವಕುಶರು ರಾಮಾಯಣದ ಗೀತೆ ಹಾಡಿ, ರಾಮನನ್ನು ಸಂಧಿಸಿದಾಗೆಲ್ಲಾ ಸಂತಸದಿಂದ ಕಣ್ಣಂಚು ಒದ್ದೆಯಾದದ್ದೂ ಇದೆ. ರಾಮಾಯಣ ಎಂದೋ ನಡೆದ ಕಾಲ್ಪನಿಕ ಕಥೆಯಲ್ಲ, ಇಂದಿಗೂ ಪ್ರಸ್ತುತವಾಗಿ ದೈನಂದಿನ ಬದುಕಿನಲ್ಲಿ ನಡೆಯುವ ಘಟನೆಗಳಾಗಿ, ಇಡಿ ಮನುಕುಲಕ್ಕೆ ಬದುಕುವ ರೀತಿ ಹೇಳಿಕೊಡುವಂತ ಮಹಾನ್ ಗ್ರಂಥ ಎನಿಸಿ ಹೆಮ್ಮೆ ಮೂಡಿಸಿದೆ.
ಬದುಕಿನ ಪ್ರತಿ ಬವಣೆಯಲ್ಲಿ ನೆನಪಾಗುವ ಶ್ರೀ ರಾಮ
ನಿತ್ಯ ಬದುಕಿನ ಜಂಜಾಟದಲ್ಲಿ ಏನೇ ಸಮಸ್ಯೆ ಬಂದರೂ ನನಗೆ ನೆನಪಾಗುವವನು ಶ್ರೀ ರಾಮ. ಎಂತಹ ಸಮಚಿತ್ತದಿಂದ ಅನಿರೀಕ್ಷಿತವಾಗಿ ಬಂದ ಎಲ್ಲಾ ಸಂಕಷ್ಟವನ್ನು ಶಾಂತ ಚಿತ್ತದಿಂದ, ದೃಢತೆಯಿಂದ, ನಿರ್ಮೋಹಿಯಾಗಿ ಜಯಿಸಿದ ದೇವಮಾನವ. ಧರ್ಮಕ್ಕಾಗಿ, ತನ್ನ ಪ್ರಜೆಗಳಿಗಾಗಿ, ಪಿತೃವಾಕ್ಯ ಪರಿಪಾಲನೆಗಾಗಿ ತಾನೇ ಎಲ್ಲವನ್ನೂ ಸಹಿಸಿ ಮರ್ಯಾದಾ ಪುರುಷೋತ್ತಮ ಎನಿಸಿದ ರಾಮನಿಗೆ ದಾಸರು ಹೇಳುವಂತೆ ಸರಿಸಾಟಿಯೇ ಇಲ್ಲ. ಇಂದು ಬದುಕಿನಲಿ ಏನೇ ಸಮಸ್ಯೆ ಬಂದರೂ ಸಹ ಅದು ರಾಮ ಎದುರಿಸಿದ ಕಷ್ಟಗಳ ಮುಂದೆ ಏನೇನೂ ಅಲ್ಲವೆಂಬ ಮನೋಭಾವ ಬೆಳೆಸಿದೆ. ಅದಕ್ಕೆ ಸರಿಯಾಗಿ ಪ್ರತಿ ಬಾರಿ ಚಿಕ್ಕ ಪುಟ್ಟ ನೋವಾದ ಕೂಡಲೇ ಬಾಯಲ್ಲಿ ಬರುವ ಉದ್ಗಾರವೇ.. "ಅಯ್ಯೋ ರಾಮ".. ಅಂದು ಹೆಂಡತಿಯನ್ನು ಕಾಡಿಗಟ್ಟಿದನಲ್ಲಾ ಎಂದು ದೂರುತ್ತಿದ್ದ ನನ್ನ ಮನದಲ್ಲಿಂದು "ರಾಮ ಕೇವಲ ಸೀತೆಯ ಪತಿಯಲ್ಲ, ಪ್ರಜೆಗಳನ್ನು ಆಳುವ ದೊರೆಯೂ ಹೌದು. ನಡೆನುಡಿಯಲ್ಲಿ ಶ್ರೇಷ್ಠತೆ ತೋರುವ ರಾಜನಾಗಿ ರಾಮ ಮಾಡಿದ್ದು ಸರಿಯೋ ತಪ್ಪೋ ಎಂಬ ವಿಮರ್ಶೆಗೆ ನಾವೇ ಅರ್ಹರಲ್ಲ" ಎನಿಸಿದೆ. ರಾಮನಷ್ಟು ಕಷ್ಟ ಸಹಿಷ್ಣು, ಶಾಂತ ರೂಪಿ ಮತ್ಯಾರೂ ಭುವಿಯಲ್ಲೇ ಇಲ್ಲವೇನೋ..
ರಾಮ ಮಂತ್ರವ ಜಪಿಸೋ...ಹೇ ಮನುಜ
ಕಳೆದ ವರ್ಷ ನಮ್ಮ ಭಜನಾ ಸಂಘಕ್ಕೆ ರಾಮ ನಾಮವನ್ನು ನಿತ್ಯವೂ ಹೇಳುವಂತಹ ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ . ಯಾರೋ ಪುಣ್ಯಾತ್ಮರು ಮಾಡಿಸುವ ರಾಮ ಯಜ್ಞದಲ್ಲಿ ನಮಗೂ ಸಹ ಅಳಿಲು ಸೇವೆ ನಿಡುವಂತಾಗಿತ್ತು. ಕೇವಲ 'ರಾಮ' ಎಂದರೆ ಅಷ್ಟೇ ಸಾಕು, ದಿನವೂ ಇಂತಿಷ್ಟು ರಾಮ ನಾಮ ಆಗಿದೆ ಎಂದು ವಾಟ್ಸಪ್ ಗುಂಪಿನಲ್ಲಿ ತಿಳಿಸಬೇಕಿತ್ತು. ಹಾಗೇ ಪ್ರತಿನಿತ್ಯ ವಿಷ್ಣು ಸಹಸ್ರನಾಮ ಹೇಳುವಾಗ ಅಮ್ಮ ಹೇಳುತ್ತಿದ್ದ ರಾಮನಾಮದ ಮಹಿಮೆ ನೆನಪಾಗುತ್ತದೆ. ಅಂದೊಮ್ಮೆ ಅಮ್ಮ... "ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೆ...ಸಹಸ್ರ ನಾಮ ತತ್ತುಲ್ಯಂ ಶ್ರೀ ರಾಮನಾಮ ವರಾನನೇ" ಎಂಬ ಒಂದೇ ಶ್ಲೋಕದಿಂದ ಇಡೀ ವಿಷ್ಣು ಸಹಸ್ರನಾಮ ಹೇಳಿದ ಪುಣ್ಯ ಲಭಿಸುತ್ತದೆ ಎಂದಾಗ, ನಾನು ತಮಾಷೆ ಮಾಡಿ ನಕ್ಕಿದ್ದೆ.
ಅಮ್ಮನ ಬಳಿ "ಹೇಗಿದ್ರೂ ಈ ಶ್ಲೋಕಕ್ಕೆ ಅಷ್ಟು ತೂಕವಿದೆಯೆಂದಾದರೆ, ಸುಮ್ಮನೆ ಇಷ್ಟುದ್ದ ಸಹಸ್ರ ನಾಮ ಹೇಳುವ ಬದಲಿಗೆ ರಾಮಶ್ಲೋಕ ಒಂದೇ ಸಾಕಲ್ಲವೇ??" ಎಂದಾಗ ಅಮ್ಮನೂ ನಕ್ಕಿದ್ದಳು. ಅತ್ಯಂತ ಸುಲಭೋಚ್ಚಾರದಲ್ಲಿ ಪುಣ್ಯ ಸಂಪಾದನೆಯ ಮಂತ್ರವೇ "ರಾಮ" ಶ್ರೀ ರಾಮ ಜಯರಾಮ ಜಯಜಯ ರಾಮ .
ರಾಮ ನಾಮದ ಮಹಿಮೆ....
ಇದೊಂದು ಕಥೆ ನನಗೆ ಸದಾ ರಾಮನ ಮಹಿಮೆಯನ್ನು ನೆನಪಿಸುವಂತದ್ದು. ಇದನ್ನು ನೀವೂ ತಿಳಿಯಿರಿ ಎಂದು ಚಿಕ್ಕದಾಗಿ ಉಲ್ಲೇಖಿಸುತ್ತಿರುವೆ. ಲಂಕೆಯಲ್ಲಿ ರಾವಣ ಸಂಹಾರದ ನಂತರ ವಿಭೀಷಣನ ರಾಜ್ಯಭಾರ ನಡೆಯುತ್ತಿದ್ದ ಸಮಯದಲ್ಲಿ ನಿದ್ರಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ರಾಕ್ಷಸನೊಬ್ಬ ಕುಚೋದ್ಯಕ್ಕಾಗಿ ಇನ್ನೊಂದು ದ್ವೀಪದಿಂದ ಅಪಹರಿಸಿ ತಂದು ಲಂಕೆಯಲ್ಲಿ ಒಂದೆಡೆ ಇರಿಸುತ್ತಾನೆ. ಎಚ್ಚರವಾದಾಗ ಆ ವ್ಯಕ್ತಿಗೆ ತಾನೆಲ್ಲಿದ್ದೇನೆ ಎಂಬ ಅರಿವಾಗದೇ ಅಲ್ಲಿದ್ದವರ ಬಳಿ ವಿಚಾರಿಸುತ್ತಾನೆ. ಆ ಗ ಅವರು ಹೊಸ ವ್ಯಕ್ತಿಯನ್ನು ನೋಡಿ ವಿಭೀಷಣನ ಬಳಿ ಸೆರೆ ಹಿಡಿದು ಕರೆತರುತ್ತಾರೆ. ವಿಚಾರಣೆ ಮಾಡಿದಾಗ ಆ ವ್ಯಕ್ತಿ ನಿಜಾಂಶವನ್ನು ತಿಳಿಸುತ್ತಾನೆ. ಆಗ ವಿಭೀಷಣ ಅವನನ್ನು ಹೋಗಲು ಬಿಟ್ಟು ಬಿಡುತ್ತಾನೆ. ಆದರೆ ಆತ ವ್ಯಕ್ತಿ ಸಮುದ್ರ ದಾಟಿ ತಾನು ಹೇಗೆ ಹೋಗಲಿ ಎಂದಾಗ , ವಿಭೀಷಣ ಒಂದು ಪತ್ರವನ್ನು ಮಡಚಿ ಕೊಟ್ಟು, ಇದನ್ನು ಬಿಡಿಸದೇ ಸಮುದ್ರದಲ್ಲಿ ನಡೆದು ಹೋಗಲು ಹೇಳುತ್ತಾನೆ.
ಸಮುದ್ರದ ಮೇಲೆ ನಡೆದರೂ ಸಹ ಮುಳುಗದೇ ದಡ ಸೇರಿಸುವ ಶಕ್ತಿ ಇದಕ್ಕಿದೆ ಎಂದು ವಿಭೀಷಣ ಹೇಳಿದಾಗ ಆ ವ್ಯಕ್ತಿಗೆ ಅನುಮಾನ ಕಾಡಿದರೂ ಪ್ರಶ್ನಿಸುವ ಧೈರ್ಯ ಸಾಲದೇ ಹೊರಡುತ್ತಾನೆ. ವಿಭೀಷಣ ಹೇಳಿದಂತೆ ಸಮುದ್ರದ ಮೇಲೆ ನಡೆಯುತ್ತಾ ಸಾಗಿದಾಗ ಅವನಿಗೇ ಆಶ್ಚರ್ಯವಾಗುತ್ತದೆ. ಅರ್ಧ ಸಮುದ್ರ ದಾಟಿದ ಮೇಲೆ ಅವನಿಗೆ, ಸಾಗರವನ್ನೇ ದಾಟಿಸಬಲ್ಲ ಅಂತಹ ಶಕ್ತಿ ಇದರಲ್ಲೇನಿದೆ ಎಂಬ ಅನುಮಾನ ಬಲವಾಗಿ ,ಅದನ್ನು ಬಿಡಿಸಿ ನೋಡುತ್ತಾನೆ. ಅದರಲ್ಲಿ ಕೇವಲ "ರಾಮ" ಎಂದು ಬರೆದಿತ್ತು. ಅದನ್ನು ನೋಡಿ ಆ ವ್ಯಕ್ತಿ."ಇಷ್ಟೇನಾ ಇದರಲ್ಲಿ ಬರೆದಿರುವುದು" ಎಂದು ಹೇಳಿಕೊಂಡಾಗ ಕೂಡಲೇ ಸಾಗರದಲ್ಲಿ ಮುಳುಗಿಹೋದನಂತೆ.
ರಾಮ ನಾಮದ ಬಲದ ಬೆಲೆ ಎಷ್ಟಿದೆಯಂದು ಇದರಿಂದಲೇ ತಿಳಿಯುತ್ತದಲ್ಲವೇ? ಸಾಗರವನ್ನೇ ದಾಟಿಸುವ ಶಕ್ತಿ ಇರುವ ರಾಮನಾಮ ನಮ್ಮೆಲ್ಲರನ್ನೂ ಭವ ಸಾಗರದಿಂದ ದಾಟಿಸುವುದರಲ್ಲಿ ಸಂಶಯವೇ ಇಲ್ಲಾ. ಇಪ್ಪತ್ತೆರಡನೆ ತಾರೀಖಿನಂದು ಅಯೋಧ್ಯೆಯಲ್ಲಿ ಮತ್ತೆ ರಾಮನ ವೈಭವದ ಪ್ರತಿಷ್ಠಾಪನೆ ನಡೆಯಲಿದೆ. ನಾವೆಲ್ಲರೂ ಸಹ ನಮ್ಮ ನಮ್ಮ ಹೃದಯ ಮಂದಿರದಲ್ಲಿ ರಾಮನನ್ನು ಸ್ಥಾಪಿಸೋಣ. ಜೈ ಶ್ರೀರಾಮ್.
ಬರಹ: ಸುನೀತಾ ಉಡುಪ
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in