ರಾಮನ ಸ್ಮರಣೆಯಲ್ಲಿ ಲೀನರಾದೆವು: ಅಯೋಧ್ಯೆಯ ಬಾಲರಾಮನ ಮಂಡಲೋತ್ಸವದಲ್ಲಿ ಭಾಗೀ ಆಗಿದ್ದ ಕರ್ನಾಟಕದ ಋತ್ವಿಜರ ಅನುಭವ ಕಥನ
ಅಯೋಧ್ಯೆ ರಾಮಮಂದಿರದಲ್ಲಿ ಪೇಜಾವರ ಮಠಾಧೀಶರಾದ ವಿಶ್ವ ಪ್ರಸನ್ನ ತೀರ್ಥರ ನೇತೃತ್ವದಲ್ಲಿ ಮಂಡಲೋತ್ಸವ ಕಾರ್ಯಕ್ರಮ (48ನೇ ದಿನದ ವಿಶೇಷ ಕಾರ್ಯಕ್ರಮ) ನಡೆಯಿತು. ಅದರಲ್ಲಿ ಪಾಲ್ಗೊಳ್ಳುವ ಮಹಾ ಸೌಭಾಗ್ಯ ನನ್ನ ಪಾಲಿಗೆ ಒದಗಿ ಬಂದಿತ್ತು. ಅಲ್ಲಿನ ದಿವ್ಯಾನುಭವ ಈಗ ನಿಮ್ಮೆದುರು ಅಕ್ಷರ ರೂಪವಾಗಿ ಕಾಣಿಸಿಕೊಳ್ಳುತ್ತಿವೆ. (ಬರಹ: ಎನ್. ಮಂಜುನಾಥ್ ಭಾರದ್ವಾಜ್)
ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗಿ ಮಾರ್ಚ್ 10ಕ್ಕೆ ನಲವತ್ತೆಂಟು ದಿನಗಳಾಗಿವೆ. ಈ ಸಂದರ್ಭದಲ್ಲಿ ಇಲ್ಲಿ ಪೇಜಾವರ ಮಠದ ವಿದ್ಯಾಪ್ರಸನ್ನ ತೀರ್ಥರ ನೇತೃತ್ವದಲ್ಲಿ ಮಂಡಲೋತ್ಸವ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎನ್. ಮಂಜುನಾಥ್ ಭಾರದ್ವಾಜ್ ಅವರು ತಮ್ಮ ಅನುಭವ ಕಥನವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅನುಭವವನ್ನು ಅಕ್ಷರ ರೂಪಕ್ಕೆ ಇಳಿಸಿರುವ ಅವರ ಬರಹವನ್ನು ನೀವೂ ಓದಿ, ರಾಮನ ಭಕ್ತಿಯಲ್ಲಿ ತಲ್ಲೀನರಾಗಿ.
ಎನ್. ಮಂಜುನಾಥ್ ಭಾರದ್ವಾಜ್ ಅವರ ಬರಹ
ಆಧ್ಯಾತ್ಮಿಕವಾಗಿ ಬಹಳ ಮುಖ್ಯವಾದದ್ದು, ತುಂಬ ಜನರ ಬಳಿ ಹಂಚಿಕೊಳ್ಳಬೇಕು ಎನಿಸುವಂಥ ಕೆಲವು ದಿವ್ಯ ಕ್ಷಣಗಳು ನಮ್ಮ ಬದುಕಿನಲ್ಲಿ ಬರುತ್ತವೆ. ಅಂಥದ್ದೇ ಕ್ಷಣಗಳಿಗೆ ಸಾಕ್ಷಿಯಾದ ಸಾರ್ಥಕ್ಯದ ಭಾವವನ್ನು ನಿಮ್ಮೆದುರು ಹಂಚಿಕೊಳ್ಳಬೇಕು ಎಂಬ ಕಾರಣಕ್ಕೆ ಈ ಲೇಖನ ಬರೆಯುತ್ತಿದ್ದೇನೆ. ವಿಷಯ ಏನೆಂದರೆ, ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯಾಗಿ ಮೊನ್ನೆಗೆ, ಅಂದರೆ ಮಾರ್ಚ್ ಹತ್ತನೇ ತಾರೀಕಿಗೆ ನಲವತ್ತೆಂಟು ದಿನ. ಅಂದು ಅಯೋಧ್ಯೆಯಲ್ಲಿ ಪೇಜಾವರ ಮಠಾಧೀಶರಾದ ವಿಶ್ವ ಪ್ರಸನ್ನ ತೀರ್ಥರ ನೇತೃತ್ವದಲ್ಲಿ ಮಂಡಲೋತ್ಸವ ಕಾರ್ಯಕ್ರಮ (ನಲವತ್ತೆಂಟನೇ ದಿನದ ವಿಶೇಷ ಕಾರ್ಯಕ್ರಮ) ನಡೆಯಿತು. ಅದರಲ್ಲಿ ಪಾಲ್ಗೊಳ್ಳುವ ಮಹಾ ಸೌಭಾಗ್ಯ ನನ್ನ ಪಾಲಿಗೆ ಒದಗಿ ಬಂದಿತ್ತು. ಅಲ್ಲಿನ ದಿವ್ಯಾನುಭವ ಈಗ ನಿಮ್ಮೆದುರು ಅಕ್ಷರ ರೂಪವಾಗಿ ಕಾಣಿಸಿಕೊಳ್ಳುತ್ತಿವೆ.
ನನ್ನ ವಿದ್ಯಾಭ್ಯಾಸ ಆದದ್ದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ. ಆಗಿನಿಂದಲೂ ವಿಶ್ವ ಪ್ರಸನ್ನ ತೀರ್ಥರ ಬಗ್ಗೆ ವಿಶೇಷ ಗೌರವ, ಅಭಿಮಾನ ಹಾಗೂ ಪದಗಳಲ್ಲಿ ಸುಲಭಕ್ಕೆ ಹೇಳಲಾಗದಂಥ ಭಕ್ತಿ. ಅಂಥ ಗುರುಗಳ ಅಧ್ವರ್ಯದಲ್ಲಿ ಅಯೋಧ್ಯೆ ಬಾಲರಾಮನ ಮಂಡಲ ಪೂಜೆಗೆ ಕರೆ ಬಂತು. ಅನಿರೀಕ್ಷಿತವೂ ಹಾಗೂ ಅಪರೂಪದ ಆ ಅವಕಾಶದಿಂದ ದೊರೆತ ಆನಂದ ಕೂಡ ಪದಗಳನ್ನು ಮೀರಿಸುವಂಥದ್ದು. ಶಿವರಾತ್ರಿಯ ದಿನ ಬೆಂಗಳೂರಿನಿಂದ ಅಯೋಧ್ಯೆಗೆ ನಮ್ಮದೊಂದು ದೊಡ್ಡ ತಂಡ ಅಯೋಧ್ಯೆಗೆ ವಿಮಾನದಲ್ಲಿ ಹೊರಟಿತು.
ವಿಮಾನ ನಿಲ್ದಾಣದಿಂದ ತೆರಳಿದ್ದು ಅಯೋಧ್ಯೆಯಲ್ಲಿನ ಪೇಜಾವರ ಮಠಕ್ಕೆ. ಅಲ್ಲಿಂದ ರಾಮ ದೇಗುಲ ಎರಡು-ಎರಡೂವರೆ ಕಿಲೋಮೀಟರ್ ಆಗುತ್ತದೆ. ದೇಶದ ನಾನಾ ಭಾಗಗಳಿಂದ ಋತ್ವಿಜರು ಬಂದಿದ್ದರು. ಎಲ್ಲರಿಗೂ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕುಡಿಯುವ ನೀರು, ಮಂಚ, ಹೊದಿಕೆ, ದಿಂಬು ಸಹಿತ ಒಂದಿನಿತೂ ಕೊರತೆ ಎಂಬ ಮಾತಿಲ್ಲದಂಥ ವ್ಯವಸ್ಥೆಯಿತ್ತು. ಅಂದ ಹಾಗೆ ರಾಮನ ಪ್ರಾಣಪ್ರತಿಷ್ಠೆ ಆಯಿತಲ್ಲಾ, ಜನವರಿಯಲ್ಲಿ ವಿಪರೀತ ಚಳಿ ಇತ್ತಂತೆ. ಆದರೆ ನಾವು ಅಯೋಧ್ಯೆಗೆ ತೆರಳಿದ ವೇಳೆಗೆ ಶೇಕಡಾ ಅರವತ್ತರಷ್ಟು ಚಳಿ ಕಡಿಮೆ ಆಗಿತ್ತು. ಇನ್ನು ಅಲ್ಲಿ ಓಡಾಟಕ್ಕಾಗಿ ಸಂಪೂರ್ಣ ಎಲೆಕ್ಟ್ರಿಕ್ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಿ ನೋಡಿದರೂ ರಾಮ ಜಪ, ರಾಮ ಸ್ಮರಣೆ, ಶ್ರೀರಾಮನಿಗೆ ಜೈಕಾರ. ಅದೊಂದು ಸ್ಥಳದಲ್ಲಿ ಎಲ್ಲಿ ನೋಡಿದರೂ ರಾಮ. ಯಾರನ್ನು ನೋಡಿದರೂ ರಾಮ. ಸಾವಿರಾರು ಜನ ನಿತ್ಯ ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ.
ಬೆಳಗ್ಗೆ ಐದೂವರೆಗೆ ದೇವಾಲಯದ ಗರ್ಭಗುಡಿ ತೆರೆಯುವ ಹೊತ್ತಿಗೆ ಭಾರಿ ಜನ ಜನ. ಅದು ದೇಗುಲದ ಬಾಗಿಲು ಮುಚ್ಚುವ ತನಕ ಒಂದು ಕ್ಷಣ ಸಹ ಜನಜಂಗುಳಿ ಇಲ್ಲದೆ ಇರುವುದಕ್ಕೆ ನೋಡಲು ಸಾಧ್ಯವೇ ಇಲ್ಲ. ಸರಯೂ ನದಿಯಲ್ಲಿ ಸ್ನಾನ, ಜಪ, ತಪಾದಿಗಳನ್ನು ಮುಗಿಸಿ, ಯಾಗ ಶಾಲೆಯಲ್ಲಿ ಹೋಮ-ಹವನ, ಕಳಶ ಪೂಜೆಗಳಿಗೆ ಸಿದ್ಧತೆ. ದೇಶದ ನಾನಾ ಭಾಗಗಳಿಂದ ಬಂದಂಥ ವೇದಾಧ್ಯಯನ ಮಾಡಿದ ಜ್ಞಾನ ಸಂಪನ್ನರು. ಅಲ್ಲೊಂದು ಹೋಮ ಕುಂಡದಲ್ಲಿ ನಾವು ಆರೆಂಟು ಮಂದಿ ಕೂತು ನಮ್ಮ ಜವಾಬ್ದಾರಿ ನಿರ್ವಹಿಸಿದೆವು. ಈ ಋತ್ವಿಜರ ಗುಂಪಿನ ಲೆಕ್ಕ ಹೇಳಬೇಕು ಅಂದರೆ ಕರ್ನಾಟಕದಿಂದಲೇ ನೂರೈವತ್ತಕ್ಕೂ ಹೆಚ್ಚು ಮಂದಿ ಇದ್ದರು. ಸಾವಿರದ ಎಂಟು ಕಳಶಗಳನ್ನು ಇಡಲಾಗಿತ್ತು. ಜತೆಗೆ ಮಂಡಲಗಳು ಸಹ ರಚಿಸಲಾಗಿತ್ತು.
ಇನ್ನು ಸಂಜೆ ಹೊತ್ತಿಗೆ ನಡೆಯುತ್ತಿದ್ದ ರಾಮನ ಉತ್ಸವ ಮೂರ್ತಿಯ ಮೆರವಣಿಗೆ ಬಗ್ಗೆ ಏನು ಹೇಳುವುದಕ್ಕೆ ಸಾಧ್ಯ! ನೃತ್ಯ, ಮಂತ್ರಘೋಷ, ಗೀತೆ, ಕೀರ್ತನೆ, ರಾಮನ ಸ್ಮರಣೆಯಲ್ಲಿ ಲೀನವಾದೆವು ಎಂಬುದನ್ನು ಹೇಳುವುದಕ್ಕೆ ಬಿಟ್ಟು ಬೇರೇನೂ ಹೇಳುವುದಕ್ಕೆ ಸಾಧ್ಯವಿಲ್ಲ. ಬೆಳ್ಳಿ ಪಲ್ಲಕ್ಕಿಯಲ್ಲಿ ಹೊತ್ತು ತಂದ ರಾಮನನ್ನು ಉಯ್ಯಾಲೆಯಲ್ಲಿ ತೂಗಿ, ನಾನಾ ಸೇವೆಗಳನ್ನು ಮಾಡಲಾಗುತ್ತಿತ್ತು. ದೇಶದ ನಾನಾ ಭಾಗಗಳಿಂದ ಬರುತ್ತಿರುವ ಗಾಯಕರು, ಸಂಗೀತ ವಾದಕರು, ನೃತ್ಯ ಮಾಡುವವರು, ಯಕ್ಷಗಾನ ಕಲಾವಿದರು ಎಲ್ಲರೂ ತಂತಮ್ಮ ಕಲೆಯ ಮೂಲಕ ಸೇವೆ ಅರ್ಪಿಸುತ್ತಲೇ ಇದ್ದಾರೆ. ಜತೆಗೆ ನಿರಂತರ ವೇದ ಪಾರಾಯಣ ಸಹ ನಡೆಯುತ್ತಿದೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ತಿಂಡಿ-ಊಟದ ವ್ಯವಸ್ಥೆ ಸಹ ತುಂಬ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಉಡುಪಿಯಿಂದಲೇ ಅಡುಗೆ ಮಾಡುವವರನ್ನು ಕರೆಸಲಾಗಿತ್ತು. ಇಡ್ಲಿ, ಪೂರಿ, ಅವಲಕ್ಕಿ ಬಿಸಿಬೇಳೆ ಬಾತ್ (ತಿಂಡಿ) ಕಾಫಿ, ಟೀ, ಬಾದಾಮಿ ಹಾಲು, ಕಷಾಯ ಮೊದಲಾದವು ಇದ್ದವು. ಇನ್ನು ಮಧ್ಯಾಹ್ನದ ಊಟಕ್ಕೆ ಪಾಯಸ, ಪರಮಾನ್ನ, ಅನ್ನ- ಹುಳಿ, ಸಾರು, ಮೆಣಸುಕಾಯಿ,
ತಂಬುಳಿ, ಎರಡು ಪಲ್ಯ, ಎರಡು ಕೋಸಂಬರಿ, ಭಕ್ಷ್ಯಗಳಾದ ಹೋಳಿಗೆ, ಉಂಡೆ, ಹಯಗ್ರೀವ ಮೊದಲಾದವುಗಳು ಇದ್ದವು.
ಅಯೋಧ್ಯೆಯಿಂದ ನಾವು ಹೊರಟದ್ದು ವಾರಾಣಸಿ, ಪ್ರಯಾಗ್ ರಾಜ್, ಕಾಶಿ ಮತ್ತಿತರ ಕಡೆಗೆ. ಅಯೋಧ್ಯೆಯಲ್ಲಿ ನಡೆದ ಮಂಡಲೋತ್ಸವ, ಉತ್ಸವಮೂರ್ತಿಯ ಪಲ್ಲಕ್ಕಿ ಉತ್ಸವ, ಆ ರಾಮ ದೇವಾಲಯದ ಭವ್ಯತೆ, ಸರಯೂ ನದಿ, ಅಲ್ಲಿಗೆ ಹರಿದು ಬರುತ್ತಿರುವ ಭಕ್ತಸಾಗರ ಇವೆಲ್ಲ ಭಾವ ಪರವಶಗೊಳಿಸುವಂಥ ಸಂಗತಿಗಳು. ಅಲ್ಲಿ ವಿರಾಜಮಾನನಾಗಿರುವ ಬಾಲರಾಮನ ದರ್ಶನದಿಂದ ಒಂದು ಕೃತಾರ್ಥತೆ ದೊರೆತಂತೆ ಆಯಿತು. ಅಂದಹಾಗೆ ಈ ಸಲ ಪೇಜಾವರ ಮಠದ ಸುಧಾ ಮಂಗಳೋತ್ಸವ ಸಹ ಅಯೋಧ್ಯೆಯಲ್ಲಿ ನಡೆದಿದೆ. ಮೂವತ್ಮೂರು ಜನರು ಸುಧಾ ಮಂಗಳದಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದರ ಸಾರ್ಥಕ್ಯ ಅನುಭವಿಸಿದ್ದಾರೆ.
ಇನ್ನು ಕೊನೆಯ ಮಾತು: ಇಲ್ಲಿರುವ ಪ್ರತಿ ಅಕ್ಷರ ಪೇಜಾವರ ಮಠಾಧೀಶರಾಗಿದ್ದ, ನಾರಾಯಣನ ದಿವ್ಯ ಸಾನ್ನಿಧ್ಯ ತಲುಪಿದ, ಮಹಾಮಹಿಮರು ವಿಶ್ವೇಶ ತೀರ್ಥರಿಗೆ ಅರ್ಪಣೆ.
ಲೇಖಕರು: ಎನ್. ಮಂಜುನಾಥ್ ಭಾರದ್ವಾಜ್ (ವೃತ್ತಿಯಿಂದ ಪುರೋಹಿತರು, ಜ್ಯೋತಿಷಿ)
ಅಯೋಧ್ಯೆಗೆ ಸಂಬಂಧಿಸಿದ ಈ ಲೇಖನಗಳನ್ನೂ ಓದಿ
‘ರಾಮನ ಕಣ್ಣಿನ ತೇಜಸ್ಸು ಅಗಾಧ, ಅಮೋಘ’; ಅಯೋಧ್ಯೆ ಶ್ರೀರಾಮನ ಸನ್ನಿಧಾನದಲ್ಲಿ ರಕ್ಷಿತ್ ಶೆಟ್ಟಿ PHOTOS