ಭಗವದ್ಗೀತೆ: ಶ್ರೀಕೃಷ್ಣನ ಕುರಿತು ಮನುಷ್ಯ ತಿಳಿಯಬೇಕಾದ 3 ಪರಮಸತ್ಯಗಳು ಗೀತೆಯಲ್ಲಿ ಹೀಗಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಶ್ರೀಕೃಷ್ಣನ ಕುರಿತು ಮನುಷ್ಯ ತಿಳಿಯಬೇಕಾದ 3 ಪರಮಸತ್ಯಗಳು ಗೀತೆಯಲ್ಲಿ ಹೀಗಿವೆ

ಭಗವದ್ಗೀತೆ: ಶ್ರೀಕೃಷ್ಣನ ಕುರಿತು ಮನುಷ್ಯ ತಿಳಿಯಬೇಕಾದ 3 ಪರಮಸತ್ಯಗಳು ಗೀತೆಯಲ್ಲಿ ಹೀಗಿವೆ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಶ್ರೀಕೃಷ್ಣನ ಕುರಿತು ತಿಳಿಯಬೇಕಾದ 3 ಪರಮಸತ್ಯಗಳು ಹೀಗಿವೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ವದನ್ತಿ ತತ್ ತತ್ವವಿದಸ್

ತತ್ತ್ವಂ ಯಜ್‌ಜ್ಞಾನಮದ್ವಯಮ್|

ಬ್ರಹ್ಮೇತಿ ಪರಮಾತ್ಮೇತಿ

ಭಗವಾನ್ ಇತಿ ಶಬ್ದ್ಯತೇ||2||

ಭಗವದ್ಗೀತೆಯ (Bhagavad Gita) ಎರಡನೇ ಅಧ್ಯಾಯದ ಎರಡನೇ ಶ್ಲೋಕದಲ್ಲಿ ಹೀಗೆ ಹೇಳಲಾಗಿದೆ. "ಪರಮಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವವನಿಗೆ ತಿಳುವಳಿಕೆಯ ಮೂರು ಅವಸ್ಥೆಗಳಲ್ಲಿ ಪರಮಸತ್ಯದ ಅರಿವಾಗುತ್ತದೆ. ಆ ಮೂರು ಒಂದೇ. ಪರಮಸತ್ಯದ ಈ ಅವಸ್ಥೆಗಳನ್ನು ಬ್ರಹ್ಮನ್, ಪರಮಾತ್ಮ ಮತ್ತು ಭಗವಾನ್ ಎಂದು ಕರೆಯುತ್ತಾರೆ. "

ಈ ಮೂರು ದೈವೀಮುಖಗಳನ್ನು ಸೂರ್ಯನ ಸಾದೃಶ್ಯದಿಂದ ವಿವರಿಸಬಹುದು. ಸೂರ್ಯನಿಗೂ ಮೂರು ಮುಖಗಳು - ಸೂರ್ಯಪ್ರಕಾಶ, ಸೂರ್ಯನ ಮೇಲ್ಮೈ ಮತ್ತು ಸೂರ್ಯಗ್ರಹ. ಸೂರ್ಯಪ್ರಕಾಶವನ್ನು ಅಧ್ಯಯನ ಮಾಡುವವನು ಪ್ರಾರಂಭದ ಘಟ್ಟದ ವಿದ್ಯಾರ್ಥಿ. ಸೂರ್ಯನ ಮೇಲ್ಮೈಯನ್ನು ಅರ್ಥಮಾಡಿಕೊಳ್ಳಬಲ್ಲವನು ಇನ್ನೂ ಮುಂದಕ್ಕೆ ಹೋಗಿದ್ದಾನೆ.

ಪರಮಸತ್ಯದ ಪರಮಾತ್ಮ ಸ್ವರೂಪ ಯಾವುದು?

ಸೂರ್ಯಗ್ರಹವನ್ನು ಪ್ರವೇಶಿಸಬಲ್ಲವನು ಅತ್ಯಂತ ಪ್ರಬುದ್ಧನಾದವನು. ಸೂರ್ಯಪ್ರಕಾಶವನ್ನಷ್ಟೇ, ಎಂದರೆ ಅದರ ಸರ್ವವ್ಯಾಪಕತ್ವ ಮತ್ತು ನಿರಾಕಾರ ಸ್ವಭಾವದ ಕೋರೈಸುವ ಪ್ರಕಾಶವನ್ನಷ್ಟೇ, ತಿಳಿದುಕೊಂಡು ತೃಪ್ತಿಪಡುವ ವಿದ್ಯಾರ್ಥಿಗಳಿದ್ದಾರೆ. ಇವರನ್ನು ಪರಸತ್ಯದ ಬ್ರಹ್ಮನ್ ಸ್ವರೂಪವನ್ನಷ್ಟೇ ಸಾಕ್ಷಾತ್ಕಾರ ಮಾಡಿಕೂಳ್ಳುವವರಿಗೆ ಹೋಲಿಸಬಹುದು. ಇನ್ನೂ ಮುಂದೆ ಹೋದ ವಿದ್ಯಾರ್ಥಿಯು ಸೂರ್ಯಮಂಡಲವನ್ನು ಅರ್ಥಮಾಡಿಕೊಳ್ಳಬಲ್ಲ. ಇದನ್ನು ಪರಮಸತ್ಯದ ಪರಮಾತ್ಮ ಸ್ವರೂಪಕ್ಕೆ ಹೋಲಿಸುತ್ತಾರೆ.

ಸೂರ್ಯಗ್ರಹದ ಹೃದಯವನ್ನು ಬಳಹೋಗಬಲ್ಲ ವಿದ್ಯಾರ್ಥಿಯನ್ನು ಪರಮಸತ್ಯದ ಸಾಕಾರಸ್ವರೂಪವನ್ನು ಸಾಕ್ಷಾತ್ಕಾರ ಮಾಡಿಕೊಂಡವರಿಗೆ ಹೋಲಿಸಬಹುದು. ಆದುದರಿಂದ ಎಲ್ಲ ಭಕ್ತರು ಎಂದರೆ ಪರಮಸತ್ಯದ ಭಗವಾನ್ ಸ್ವರೂಪವನ್ನು ಸಾಕ್ಷಾತ್ಕಾರ ಮಾಡಿಕೊಂಡಿರುವ ದಿವ್ಯವಾದಿಗಳು, ದಿವ್ಯವಾದಿಗಳಲ್ಲೇ ಅತಿ ಶ್ರೇಷ್ಠರಾದವರು. ಸೂರ್ಯನ ಪ್ರಕಾಶ ಸೂರ್ಯಮಂಡಲ ಮತ್ತು ಸೂರ್ಯಗ್ರಹದ ಒಳ ಆಗುಹೋಗುಗಳ, ಇವುಗಳಲ್ಲಿ ಒಂದರಿಂದ ಇನ್ನೊಂದನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಆದರೂ ಈ ಮೂರು ಅವಸ್ಥೆಗಳ ವಿದ್ಯಾರ್ಥಿಗಳೆಲ್ಲ ಒಂದೇ ವರ್ಗಕ್ಕೆ ಸೇರಿದವರಲ್ಲ.

ಈ ವಿಷಯವನ್ನು ಯಾರೂ ಹೇಳಿಕೊಳ್ಳುವಂತಿಲ್ಲ

ಭಗವಾನ್ ಎನ್ನುವ ಸಂಸ್ಕೃತ ಪದವನ್ನು ವ್ಯಾಸದೇವರ ತಂದೆಯೂ ಅಧಿಕೃತವಾಗಿ ಹೇಳಬಲ್ಲವರೂ ಆದ ಪರಾಶರ ಮುನಿಗಳು ವಿವರಿಸಿದ್ದಾರೆ. ಎಲ್ಲ ಸಂಪತ್ತು, ಎಲ್ಲ ಶಕ್ತಿ, ಎಲ್ಲ ಕೀರ್ತಿ, ಎಲ್ಲ ಸೌಂದರ್ಯ, ಎಲ್ಲ ಜ್ಞಾನ, ಎಲ್ಲ ವೈರಾಗ್ಯವನ್ನು ಹೊಂದಿರುವ ಪರಮ ಪುರುಷನನ್ನೇ ಭಗವಾನ್ ಎಂದು ಕರೆಯುವುದು. ತುಂಬ ವಿದ್ಯಾಂಸರು ಮತ್ತು ತುಂಬ ನಿರ್ಲಿಪ್ತರು ಆದ ಅನೇಕ ವ್ಯಕ್ತಿಗಳಿದ್ದಾರೆ. ಆದರೆ ನಾನು ಎಲ್ಲ ಸಂಪತ್ತು, ಎಲ್ಲ ಸಾಮರ್ಥ್ಯ ಮೊದಲಾದುವನ್ನು ಸಂಪೂರ್ಣವಾಗಿ ಹೊಂದಿದ್ದೇನೆ ಎಂದು ಯಾರೂ ಹೇಳಿಕೊಳ್ಳುವಂತಿಲ್ಲ.

ಕೃಷ್ಣನೊಬ್ಬ ಮಾತ್ರ ಹೀಗೆ ಹೇಳಿಕೊಳ್ಳಬಲ್ಲ. ಏಕೆಂದರೆ ಅವನು ದೇವೋತ್ತಮ ಪರಮ ಪುರುಷ, ಬ್ರಹ್ಮ ಶಿವ ಅಥವಾ ನಾರಾಯಣ ಇವರೂ ಸೇರಿದಂತೆ ಯಾವ ವ್ಯಕ್ತಿಗೂ ಕೃಷ್ಣನಿಗಿರುವಷ್ಟು ಐಶ್ವರ್ಯಗಳಿಲ್ಲ. ಆದ್ದರಿಂದ ಬ್ರಹ್ಮ ಸಂಹಿತೆಯಲ್ಲಿ ಶ್ರೀಕೃಷ್ಣನು ದೇವೋತ್ತಮನಾದ ಪರಮ ಪುರುಷ ಎಂದು ಬ್ರಹ್ಮನೇ ನಿರ್ಣಯಿಸುತ್ತಾನೆ. ಯಾರೂ ಅವನಿಗೆ ಸಮಾನರಲ್ಲ. ಅವನನ್ನು ಮೀರಿಸುವವರು ಯಾರೂ ಇಲ್ಲ. ಅವನು ಅನಾದಿಪ್ರಭು ಅಥವಾ ಭಗವಾನ್. ಗೋವಿಂದ ಎಂದು ಅವನ ಹೆಸರು, ಎಲ್ಲ ಕಾರಣಗಳ ಪರಮ ಕಾರಣನೂ ಅವನೇ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.