Bhagavad Gita: ಭಗವಂತನ ಭಕ್ತಿಸೇವೆಯಲ್ಲಿ ನಿರತರಾದವರನ್ನು ಹೀಗೆ ಕರೆಯುತ್ತಾರೆ; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಭಗವಂತನ ಭಕ್ತಿಸೇವೆಯಲ್ಲಿ ನಿರತರಾದವರನ್ನು ಏನೆಂದು ಕರೆಯುತ್ತಾರೆ ಎಂಬುದನ್ನು ಭಗವದ್ಗೀತೆಯ 12 ನೇ ಅಧ್ಯಾಯದ 5ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 5
ಕ್ಲೇಶೋಧಿಕತರಸ್ತೇಷಾಮವ್ಯಕ್ತಾಸಕ್ತಚೇತಸಾಮ್ |
ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ ||5||
ಅನುವಾರ: ಪರಮ ಪ್ರಭುವಿನ ಅವ್ಯಕ್ತವಾದ ಮತ್ತು ನಿರಾಕಾರವಾದ ರೂಪವನ್ನು ಪ್ರೀತಿಸುವ ಮನಸ್ಸಿನವರಿಗೆ ಪ್ರಗತಿಯು ತುಂಬಾ ಕ್ಲೇಶಕರವಾದದ್ದು. ಈ ಶಿಸ್ತಿನಲ್ಲಿ ಮುಂದುವರಿಯುವುದು ದೇಹಧಾರಿಗಳಿಗೆ ಬಹು ಕಷ್ಟ.
ಭಾವಾರ್ಥ: ಪರಮ ಪ್ರಭುವಿನ ಅಚಿಂತ್ಯವೂ, ಅವ್ಯಕ್ತವೂ, ನಿರಾಕಾರವೂ ಆದ ರೂಪದ ಮಾರ್ಗವನ್ನು ಅನುಸರಿಸುವ ಅಲೌಕಿಕವಾದಿಗಳನ್ನು ಜ್ಞಾನಯೋಗಿಗಳೆಂದು ಕರೆಯುತ್ತಾರೆ. ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿದ್ದು ಪರಮ ಪ್ರಭುವಿನ ಭಕ್ತಿಸೇವೆಯಲ್ಲಿ ನಿರತರಾದವರನ್ನು ಭಕ್ತಿಯೋಗಿಗಳೆಂದು ಕರೆಯುತ್ತಾರೆ. ಇಲ್ಲಿ ಜ್ಞಾನಯೋಗ ಮತ್ತು ಭಕ್ತಿಯೋಗಗಳ ನಡುವಣ ವ್ಯತ್ಯಾಸವನ್ನು ಖಚಿತವಾಗಿ ವಿವರಿಸಿದೆ. ಕಡಗೆ ಮನುಷ್ಯನನ್ನು ಅದೇ ಗುರಿಗೆ ಕೊಂಡೊಯ್ದರೂ ಜ್ಞಾನಯೋಗದ ಪ್ರಕ್ರಿಯೆಯು ತುಂಬಾ ಕ್ಲೇಶಕರವಾದದ್ದು. ಆದರೆ ದೇವೋತ್ತಮ ಪರಮ ಪುರುಷನ ನೇರಸೇವೆಯ ಭಕ್ತಿಯೋಗದ ಮಾರ್ಗವು ಇನ್ನೂ ಸುಲಭವಾದದ್ದು ಮತ್ತು ದೇಹಧಾರಿಯಾದ ಆತ್ಮಕ್ಕೆ ಸಹಜವಾದದ್ದು (Bhagavad Gita Updesh).
ಅನಾದಿಕಾಲದಿಂದ ವ್ಯಕ್ತಿಗತ ಆತ್ಮವು ದೇಹದಲ್ಲಿ ವಾಸವಾಗಿದೆ. ತಾನು ದೇಹವಲ್ಲ ಎನ್ನುವುದನ್ನು ತಾತ್ವಿಕವಾಗಿ ತಿಳಿಯಪುವುದು ಆತನಿಗೆ ಬಹುಕಷ್ಟ. ಆದುದರಿಂದ ಭಕ್ತಿಯೋಗವು ಕೃಷ್ಣವಿಗ್ರಹವನ್ನು ಪೂಜಾರ್ಹ ಎಂದು ಸ್ವೀಕರಿಸುತ್ತದೆ. ಏಕೆಂದರೆ ಮನಸ್ಸಿನಲ್ಲಿ ಸ್ಥಿರವಾಗಿರುವ ದೈಹಿಕ ಪರಿಕಲ್ಪನೆಯನ್ನು ಹೀಗೆ ಅನ್ವಯಿಸುವುದು ಸಾಧ್ಯವಾಗುತ್ತದೆ. ದೇವಾಲಯದಲ್ಲಿ, ದೇವೋತ್ತಮ ಪರಮ ಪುರುಷನನ್ನು ಅವನ ರೂಪದಲ್ಲಿ ಪೂಜಿಸುವುದು ಮಿಥ್ಯ ಕಾಲ್ಪನಿಕ ಪ್ರತಿಮೆಯ ಆರಾಧನೆಯಲ್ಲ. ಪೂಜೆಯು ಪರಮ ಪ್ರಭುವು ಗುಣಗಳನ್ನು ಹೊಂದಿರುವ ಅಥವಾ ಹೊಂದಿರದ ಎಂದರೆ ಸಗುಣ ಮತ್ತು ನಿರ್ಗುಣ ರೀತಿಗಳಲ್ಲಿ ಯಾವುದಾದರೂ ಆಗಿರಬಹುದು ಎನ್ನುವುದಕ್ಕೆ ವೇದ ಸಾಹಿತ್ಯದಲ್ಲಿ ಸಾಕ್ಷ್ಯವಿದೆ.
ದೇವಸ್ಥಾನದಲ್ಲಿ ವಿಗ್ರಹವನ್ನು ಪೂಜಿಸುವುದು ಸಗುಣ ಪೂಜೆ. ಏಕೆಂದರೆ ಭೌತಿಕ ಗುಣಗಳು ಭಗವಂತನನ್ನು ಚಿತ್ರಿಸುತ್ತವೆ. ಆದರೆ ಕಲ್ಲು, ಮರ ಅಥವಾ ತೈಲಚಿತ್ರ ಮೊದಲಾದ ಭೌತಿಕ ಗುಣಗಳು ಪ್ರಭುವನ್ನು ಚಿತ್ರಿಸಿದರೂ ವಾಸ್ತವವಾಗಿ ಪ್ರಭುವು ಭೌತಿಕನಲ್ಲ. ಪರಮ ಪ್ರಭುವಿನ ಪರಿಪೂರ್ಣ ಸ್ವಭಾವ ಇದು.
ಇಲ್ಲಿ ಒಂದು ಸ್ಥೂಲವಾದ ಉದಾಹರಣೆಯನ್ನು ಕೊಡಬಹುದು. ರಸ್ತೆಯಲ್ಲಿ ನಾವು ಕೆಲವು ಅಂಚೆಪಟ್ಟಿಗೆಗಳನ್ನು ಕಾಣಬಹುದು. ನಾವು ನಮ್ಮ ಪತ್ರಗಳನ್ನು ಆ ಪಟ್ಟಿಗೆಗಳಲ್ಲಿ ಹಾಕಿದರೆ ಅವು ಕಷ್ಟವಿಲ್ಲದೆ ಸಹಜವಾಗಿ ತಮ್ಮ ಗುರಿಯನ್ನು ಮುಟ್ಟುತ್ತವೆ. ಅಂಚೆಕಚೇರಿಯು ಅಧಿಕೃತವಾಗಿ ಪರಿಗಣಿಸದಿರುವ ಎಲ್ಲೋ ಕಾಣುವ ಅನುಕರಣೆಯ ಪೆಟ್ಟಿಗೆ ಅಥವಾ ಯಾವುದೋ ಹಳೆಯ ಪೆಟ್ಟಿಗೆಯು ಈ ಕೆಲಸವನ್ನು ಮಾಡಲಾರದು.
ಹಾಗೆಯೇ ಭಗವಂತನಿಗೆ ವಿಗ್ರಹ ರೂಪದಲ್ಲಿ ಒಂದು ಅಧಿಕೃತ ಚಿತ್ರಣವಿದೆ. ಇದಕ್ಕೆ ಅರ್ಚಾವಿಗ್ರಹ ಎಂದು ಹೆಸರು. ಈ ಅರ್ಚಾವಿಗ್ರಹವು ಪರಮ ಪ್ರಭುವಿನ ಅವತಾರ. ಆ ರೂಪದ ಮೂಲಕ ಭಗವಂತನು ಸೇವೆಯನ್ನು ಸ್ವೀಕರಿಸುತ್ತಾನೆ. ಪ್ರಭುವು ಸರ್ವಶಕ್ತ, ಆದುದರಿಂದ ಅರ್ಚಾವಿಗ್ರಹದ ಅವತಾರದ ಮೂಲಕ, ಭಕ್ತನಿಗೆ ಬದ್ಧ ಬದುಕಿನಲ್ಲಿ ಅನುಕೂಲ ಮಾಡಿಕೊಡುವುದಕ್ಕಾಗಿ ಆತನು ಸೇವೆಯನ್ನು ಭಗವಂತನು ಸ್ವೀಕರಿಸುತ್ತಾನೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)