ಉತ್ತಮ ಆರೋಗ್ಯಕ್ಕೆ ಯೋಗಾಭ್ಯಾಸ ಮದ್ದು; ಯೋಗದ ಬಗ್ಗೆ ಭಗವದ್ಗೀತೆಯ 6ನೇ ಅಧ್ಯಾಯದಲ್ಲಿರುವ 8 ಶ್ಲೋಕಗಳಿವು
Bhagavad Gita: ಆರೋಗ್ಯ ಕಾಪಾಡಿಕೊಳ್ಳಲು ಕೆಲವರು ಪ್ರತಿನಿತ್ಯ ಯೋಗ ಮಾಡುತ್ತಾರೆ. ನೀವು ಭಗವದ್ಗೀತೆಯ ಮೂಲಕ ಯೋಗಾಭ್ಯಾಸಗಳನ್ನು ಕಲಿಯಬಹುದು. ಗೀತೆಯ 6ನೇ ಅಧ್ಯಯದಲ್ಲಿರುವ 8 ಶ್ಲೋಕಗಳನ್ನು ಓದಿ.

ಭಗವಗದ್ಗೀತೆಯ (Bhagavadgita) 6ನೇ ಅಧ್ಯಾಯ ಧ್ಯಾನ ಯೋಗ (Dhyana Yoga). ಶ್ರೀಕೃಷ್ಣ (Lord Krishna) ಹೇಳಿರುವಂತಹ ಧ್ಯಾನದ ತಂತ್ರಗಳು ಇದರಲ್ಲಿವೆ. ಯೋಗ ಪದ್ದತಿಯು ಮನಸ್ಸನ್ನೂ ಇಂದ್ರಿಯಗಳನ್ನೂ ನಿಯಂತ್ರಿಸಲು ಒಂದು ಸಾಧನ ಎಂದು ಭಗವಂತನು ವಿವರಿಸುತ್ತಾನೆ. ಆದರೆ ಸಾಮಾನ್ಯ ಜನರಿಗೆ, ಅದರಲ್ಲೂ ಕಲಿಯುಗದಲ್ಲಿ ಇದನ್ನು ಅನುಷ್ಠಾನ ಮಾಡುವುದು ಬಹಳ ಕಷ್ಟ ಅಂತಲೂ ಹೇಳಿದ್ದಾನೆ. ಧ್ಯಾನ ಮಾಡುವುದರಿಂದ ಭಕ್ತಿಯ ಕಾರ್ಯಗಳು ಹೇಗೆ ಒಬ್ಬರ ಅಧ್ಯಾತ್ಮಿಕ ಪ್ರಜ್ಞೆಯನ್ನು ಹೆಚ್ಚಿಸಬಹುದು ಮತ್ತು ಮನಸ್ಸನ್ನು ಶುದ್ಧೀಕರಿಸಬಹುದು ಎಂಬುದನ್ನು ಈ ಅಧ್ಯಾಯದಲ್ಲಿ ವಿವರಿಸಿದ್ದಾನೆ.
ಪರಮಾತ್ಮನಲ್ಲಿ ತಮ್ಮ ಆಲೋಚನಗಳನ್ನು ಕೇಂದ್ರೀಕರಿಸುವ ಮೂಲಕ ವ್ಯಕ್ತಿ ಹೇಗೆ ದೇವರೊಂದಿಗೆ ಒಂದಾಗಬಹುದು ಎಂಬುದನ್ನು ಶ್ರೀಕೃಷ್ಣ ವಿವರಿಸಿದ್ದಾನೆ. ಯೋಗದ ಪ್ರಯೋಜನಗಳ ಬಗ್ಗೆ ಭಗವದ್ಗೀತೆಯ 8 ಶ್ಲೋಕಗಳಲ್ಲಿ ಏನೆಲ್ಲಾ ಹೇಳಿದ್ದಾನೆ ಅನ್ನೋದರ ವಿವರ ಇಲ್ಲಿದೆ.
ಯೋಗಾಭ್ಯಾಸದ ಪ್ರಯೋಜನಗಳ ಬಗ್ಗೆ ಭಗವದ್ಗೀತೆಯ 6ನೇ ಅಧ್ಯಾಯದಲ್ಲಿರುವ 8 ಶ್ಲೋಕಗಳ ವಿವರ
ಪ್ರಶಾನ್ತಾತ್ಮಾ ವಿಗತಭೀರ್ಬ್ರಹ್ಮಚಾರಿವ್ರತೇ ಸ್ಥಿತಿಃ |
ಮನಃ ಸಂಯಮ್ಯ ಮಚ್ಚಿತೋ ಯುಕ್ತ ಆಸೀತ ಮತ್ಪರಃ ||14||
ದೇಹ, ಕುತ್ತಿಗೆ ಮತ್ತು ಶಿರಸ್ಸುಗಳನ್ನು ಒಂದು ಪಂಕ್ತಿಯಲ್ಲಿ ಸ್ಥಿರವಾಗಿರಿಸಿಕೊಂಡು ಮೂಗಿನ ತುದಿಯನ್ನು ಒಂದೇ ಸಮನೆ ದೃಷ್ಟಿಸಬೇಕು. ಪ್ರಶಾಂತಾತ್ಮನಾಗಿ, ನಿರ್ಭಯವಾಗಿ, ಬ್ರಹ್ಮಚಾರಿಯಾಗಿ ಹೃದಯದಲ್ಲಿ ನನ್ನನ್ನೇ ಧ್ಯಾನ ಮಾಡಬೇಕು ಮತ್ತು ನನ್ನನ್ನೇ ಜೀವನದ ಅಂತಿಮ ಗುರಿಯಾಗಿ ಮಾಡಿಕೊಳ್ಳಬೇಕು.
ಯದಾ ವಿನಿಯತಂ ಚಿತ್ತಮಾತ್ಮನ್ಯೇವಾವತಿಷ್ಠತೇ |
ನಿಸ್ಪ್ರಹಃ ಸರ್ವಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ ||18||
ಯೋಗಾಭ್ಯಾಸದಿಂದ ಯೋಗಿಯು ತನ್ನ ಮಾನಸಿಕ ಚಟುವಟಿಕೆಗಳನ್ನು ಶಿಸ್ತಿಗೆ ಒಳಪಡಿಸಿ, ಯಾವುದೇ ಐಹಿಕ ಬಯೆಕೆಗಳಿಲ್ಲದೆ ಅಧ್ಯಾತ್ಮಿಕತೆಯಲ್ಲಿ ನೆಲೆಸಿದಾಗ ಆತನನ್ನು ಯೋಗದಲ್ಲಿ ವ್ಯವಸ್ಥಿತವಾಗಿರುವವನೆಂದುಹೇಳುತ್ತಾರೆ.
ಯತ್ರೋಪರಮತೇ ಚಿತ್ತಂ ನಿರುದ್ಅಧಂ ಯೋಗಸೇವಯಾ |
ಯತ್ರ ಚೈವಾತ್ಮನಾತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ ||20||
ಸಮಾಧಿ ಎಂದು ಕರೆಯುವ ಪರಿಪೂರ್ಣತೆಯ ಹಂತದಲ್ಲಿ ಮನಸ್ಸು ಯೋಗಾಭ್ಯಾಸದಿಂದ ಇಹಲೋಕದ ಮಾನಸಿಕ ಚಟುವಟಿಕೆಗಳಲ್ಲಿ ತೊಡಗದಂತೆ ನಿರ್ಬಂಧದಲ್ಲಿ ಇರುತ್ತದೆ. ಈ ಪರಿಪೂರ್ಣತೆಯ ಲಕ್ಷಣವೆಂದರೆ ಶುದ್ಧ ಮನಸ್ಸಿನಿಂದ ಆತ್ಮವನ್ನು ಕಾಣುವ ಶಕ್ತಿ ಮತ್ತು ಆತ್ಮನನ್ನು ಪ್ರತಿಸಿ ಸಂತೋಷಪಡುವ ಶಕ್ತಿ. ಈ ಆನಂದ ಸ್ಥಿತಿಯಲ್ಲಿ ಮನುಷ್ಯನು ದಿವ್ಯ ಇಂದ್ರಿಯಗಳ ಮೂಲಕ ಸಾಧಿಸಿದ ಅಮಿತ ಅಲೌಕಿಕ ಸುಖದಲ್ಲಿ ನೆಲೆಯಾಗಿರುತ್ತಾನೆ.
ತಂ ವಿದ್ಯಾದ್ದುಃಖಸಂಯೋಗವಿಯೋಗಂ ಯೋಗಸಂಜ್ಞಿತಮ್ ||23||
ಯೋಗವು ದುಃಖದೊಂದಿಗಿನ ಒಕ್ಕೂಟದಿಂದ ತನ್ನನ್ನು ತಾನೇ ಬೇರ್ಪಡಿಸುವ ಸ್ಥಿತಿಯಾಗಿದೆ. ಈ ಯೋಗವನ್ನು ಬದ್ಧತೆಯಿಂದ ಮತ್ತು ನಕಾರಾತ್ಮಕತೆ ಇಲ್ಲದೆ ಅಭ್ಯಾಸ ಮಾಡುವುದು ಮುಖ್ಯ.
ಯತೋ ಯತೋ ನಿಶ್ಚಲತಿ ಮನಶ್ಚಂಚಲಮಸ್ಥಿರಮ್ |
ತತಸ್ತತೋ ನಿಯಮ್ಯೈತದಾತ್ಮನ್ಯೇವ ವಶಂ ನಯೇತ್ ||26||
ಮನಸ್ಸು ತನ್ನ ಚಂಚಲವಾದ ಮತ್ತು ಅಸ್ಥಿರವಾದ ಸ್ವಭಾವದ ದೆಸೆಯಿಂದ ಎಲ್ಲೆಲ್ಲೇ ಅಲೆದಾಡಲಿ ಮನುಷ್ಯನು ಅದನ್ನು ಹಿಂದಕ್ಕೆ ಸೆಳೆದು ಆತ್ಮದ ನಿಯಂತ್ರಣಕ್ಕೆ ಒಳಪಡಿಸಬೇಕು.
ಯುಞ್ಜನ್ನೇವಂ ಸದಾತ್ಮಾನಂ ಯೋಗೀ ವಿಗತಕಲ್ಮಷಃ |
ಸುಖೇನ ಬ್ರಹ್ಮಸಂಸ್ಪರ್ಶಮತ್ಯನ್ತಂ ಸುಖಮಶ್ನುತೇ ||28||
ಸದಾ ಯೋಗಾಭ್ಯಾಸದಲ್ಲಿ ನಿರತನಾದ ಆತ್ಮಸಂಯಮಿಯಾದ ಯೋಗಿಯು ಎಲ್ಲ ಐಹಿಕ ಕಲ್ಮಷದಿಂದ ಮುಕ್ತನಾಗಿ, ಭಗವಂತನ ಅಲೌಕಿಕ ಪ್ರೇಮಸೇವೆಯಲ್ಲಿ ಪರಿಪೂರ್ಣ ಸುಖದ ಅತ್ಯುನ್ನತ ಹಂತವನ್ನು ತಲುಪುತ್ತಾನೆ.
ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ |
ಅಭ್ಯಾಸೇನ ತು ಕೌನ್ತೇಯ ವೈರಾಗ್ಯೇಣ ಚ ಗೃಹ್ಯತೇ ||35||
ಶ್ರೀಕೃಷ್ಣನು ಹೀಗೆ ಹೇಳುತ್ತಾನೆ - ಮಹಾಬಾಹುವೂ ಕುಂತಿಯ ಮಗಳೂ ಆದ ಅರ್ಜುನನೇ, ಚಂಚಲವಾದ ಮನಸ್ಸನ್ನು ನಿಗ್ರಹಿಸುವುದು ಬಹುಕಷ್ಟ. ಆದರೂ ಯೋಗ್ಯವಾದ ವೈರಾಗ್ಯದಿಂದ ಮತ್ತು ಅಭ್ಯಾಸದಿಂದ ಅದನ್ನು ನಿಗ್ರಹಿಸಬಹುದು.
ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ |
ಶ್ರದ್ಧಾವಾನ್ ಭಜತೇ ಯೋ ಮಾಂ ಸ ಮೇ ಯುಕ್ತತಮೋ ಮತಃ ||47||
ಯಾರು ಸದಾ ನನ್ನಲ್ಲಿಯೇ ಇರುವನೋ, ತನ್ನಲ್ಲಿರುವ ನನ್ನನ್ನು ಕುರಿತು ಚಿಂತಿಸುವನೋ, ನನ್ನನ್ನು ಭಜಿಸುವನೋ ಅವನೇ ನನ್ನ ಯೋಗಿಗಳಲ್ಲಿ ಯೋಗದಲ್ಲಿ ನನ್ನೊಡನೆ ಅತ್ಯಂತ ಆತ್ಮೀಯವಾಗಿ ಒಂದಾಗಿರುವವನು ಮತ್ತು ಅವನೇ ಎಲ್ಲರಿಗಿಂತ ಶ್ರೇಷ್ಠನಾದವನು. ಇದು ನನ್ನ ಅಭಿಪ್ರಾಯ.
