ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ಮಾತು, ತತ್ವಗಳನ್ನು ಅನುಸರಿಸುವ ಮನುಷ್ಯನ ಜ್ಞಾನ ಹೆಚ್ಚಾಗುತ್ತದೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನ ಮಾತು, ತತ್ವಗಳನ್ನು ಅನುಸರಿಸುವ ಮನುಷ್ಯನ ಜ್ಞಾನ ಹೆಚ್ಚಾಗುತ್ತದೆ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಭಗವಂತನ ಮಾತು, ತತ್ವಗಳನ್ನು ಅನುಸರಿಸುವ ಮನುಷ್ಯನ ಜ್ಞಾನ ಹೆಚ್ಚಾಗುತ್ತದೆ ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ 9ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

8ನೇ ಅಧ್ಯಾಯ - ಭಗವತ್‌ಪ್ರಾಪ್ತಿ - ಶ್ಲೋಕ - 9

ಕವಿಂ ಪುರಾಣಮನುಶಾಸಿತಾರಮ್

ಅಣೋರಣೀಯಾಂಸಮನುಸ್ಮರೇದ್ ಯಃ|

ಸರ್ವಸ್ಯ ಧಾತಾರಮಚಿನ್ತ್ಯರೂಪಮ್

ಆದಿತ್ಯವರ್ಣಂ ತಮಸಃ ಪರಸ್ತಾತ್||9||

ಅನುವಾದ: ಪರಮ ಪುರುಷನು ಎಲ್ಲವನ್ನೂ ಬಲ್ಲವನು, ಅತಿ ಪುರಾತನನು, ನಿಯಂತ್ರಕನು, ಅತ್ಯಂತ ಸಣ್ಣದಕ್ಕಿಂತ ಸಣ್ಣಗಿರುವವನು, ಎಲ್ಲವನ್ನೂ ಪಾಲಿಸುವವನು, ಎಲ್ಲ ಐಹಿಕ ಕಲ್ಪನೆಯನ್ನೂ ಮೀರಿದವನು, ಚಿಂತನೆಯನ್ನು ಮೀರಿದವನು ಮತ್ತು ಸದಾ ಒಬ್ಬ ಪುರುಷನು ಎಂದು ನಾವು ಧ್ಯಾನಿಸಬೇಕು. ಅವನು ಸೂರ್ಯನಂತೆ ಪ್ರಕಾಶಿಸುವವನು ಮತ್ತು ದಿವ್ಯನಾಗಿದ್ದು ಈ ಐಹಿಕ ಪ್ರಕೃತಿಗೆ ಅತೀತನಾಗಿರುವವನು.

ಭಾವಾರ್ಥ: ಪರಮೋನ್ನತನನ್ನು ಚಿಂತಿಸುವ ಪ್ರಕ್ರಿಯೆಯನ್ನು ಈ ಶ್ಲೋಕದಲ್ಲಿ (Bhagavad Gita Updesh in Kannada) ಹೇಳಿದೆ. ಅತ್ಯಂತ ಮುಖ್ಯವಾದ ಅಂಶವೆಂದರೆ ಆತನು ನಿರಾಕಾರನಲ್ಲ ಮತ್ತು ಶೂನ್ಯನಲ್ಲ. ನಿರಾಕಾರವಾದದ್ದನ್ನು ಅಥವಾ ಶೂನ್ಯವನ್ನು ಧ್ಯಾನಿಸುವುವುದು ಸಾಧ್ಯವಿಲ್ಲ. ಅದು ಬಹಳ ಕಷ್ಟ. ಆದರೆ ಕೃಷ್ಣನನ್ನು ಚಿಂತಿಸುವ ಪ್ರಕ್ರಿಯೆ ಬಹು ಸುಲಭವಾದದ್ದು. ಅದನ್ನು ಇಲ್ಲಿ ವಾಸ್ತವಿಕವಾಗಿ ಹೇಳಿದೆ. ಮೊಟ್ಟಮೊದಲನೆಯದಾಗಿ ಪ್ರಭುವು ಪುರುಷ, ಒಬ್ಬ ವ್ಯಕ್ತಿ - ನಾವು ರಾಮ ಮತ್ತು ಕೃಷ್ಣ ಎನ್ನುವ ವ್ಯಕ್ತಿಗಳನ್ನು ಕುರಿತು ಯೋಚಿಸಬಹುದು. ನಾವು ರಾಮನನ್ನು ಕುರಿತೇ ಯೋಚಿಲಿ, ಕೃಷ್ಣನನ್ನು ಕುರಿತೇ ಯೋಚಿಸಲಿ ಭಗವದ್ಗೀತೆಯ ಈ ಶ್ಲೋಕದಲ್ಲಿ ಅವನು ಹೇಗಿದ್ದಾನೆ ಎನ್ನುವುದನ್ನು ವರ್ಣಿಸಿದೆ.

ಭಗವಂತನು ಕವಿ, ಎಂದರೆ ಭೂತ, ವರ್ತಮಾನ ಮತ್ತು ಭವಿಷ್ಯತ್ತುಗಳು ತಿಳಿದಿವೆ. ಆದುದರಿಂದ ಅವನು ಎಲ್ಲವನ್ನೂ ಬಲ್ಲವನು. ಅವನು ಅತಿ ಪುರಾತನನು. ಏಕೆಂದರೆ ಅವನೇ ಎಲ್ಲದರ ಮೂಲ. ಎಲ್ಲವೂ ಹುಟ್ಟುವುದು ಅವನಿಂದಲೇ. ಅವನು ವಿಶ್ವದ ಪರಮ ನಿಯಂತ್ರಕ. ಮಾನವ ಕುಲದ ಪಾಲಕ ಮತ್ತು ಅದರ ಮಾರ್ಗದರ್ಶಕ. ಅವನು ಅತ್ಯಂತ ಸಣ್ಣವಸ್ತುವಿಗಿಂತ ಸಣ್ಣವನು. ಜೀವಿಯು ಕೂದಲಿನ ಮೊನೆಯ ಹತ್ತು ಸಾವಿರದಲ್ಲಿ ಒಂದು ಭಾಗದಷ್ಟಿದೆ. ಭಗವಂತನು ಎಷ್ಟರಮಟ್ಟಿಗೆ ಕಲ್ಪನೆಯನ್ನೂ ಮೀರಿ ಸಣ್ಣವನೆಂದರೆ ಅವನು ಈ ಕಣದ ಹೃದಯವನ್ನು ಪ್ರವೇಶಿಸುತ್ತಾನೆ. ಆದುದರಿಂದ ಆತನನ್ನು ಅತ್ಯಂತ ಸಣ್ಣವಸ್ತುವಿಗಿಂತ ಸಣ್ಣವನು ಎಂದು ಹೇಳಿದೆ. ಪರಮೋನ್ನತನಾಗಿ ಅವನು ಪರಮಾಣುವನ್ನು ಪ್ರವೇಶಿಸಬಲ್ಲ. ಪರಮಾತ್ಮನಾಗಿ ಅತ್ಯಂತ ಸಣ್ಣದರ ಹೃದಯವನ್ನು ಹೊಕ್ಕು ಅವನನ್ನು ನಿಯಂತ್ರಿಸಬಲ್ಲ. ಇಷ್ಟೊಂದು ಸಣ್ಣವನಾದರೂ ಅವನು ಎಲ್ಲೆಲ್ಲೂ ಇದ್ದಾನೆ ಮತ್ತು ಎಲ್ಲವನ್ನೂ ಪಾಲಿಸುತ್ತಾನೆ.

ಭಗವಂತನ ಶಕ್ತಿಯು ನಮ್ಮ ಕಲ್ಪನೆಯನ್ನು ಮೀರಿದ್ದು

ಎಲ್ಲ ಗ್ರಹವ್ಯೂಹಗಳಿಗೂ ಅವನೇ ಆಧಾರ. ಇಂತಹ ಬೃಹತ್‌ಗಾತ್ರದ ಗ್ರಹಗಳು ಗಾಳಿಯಲ್ಲಿ ಹೇಗೆ ತೇಲಾಡುತ್ತವೆ ಎಂದು ನಾವು ಬಹುಬಾರಿ ಆಶ್ಚರ್ಯಪಡುತ್ತೇವೆ. ತನ್ನ ಕಲ್ಪನೆಗೆ ಮೀರಿದ ಶಕ್ತಿಯಿಂದ ಪರಮ ಪ್ರಭುವು ಈ ಎಲ್ಲ ಬೃಹದಾಕಾರದ ಗ್ರಹಗಳನ್ನು ನಕ್ಷತ್ರಪುಂಜಗಳ ವ್ಯವಸ್ಥೆಗಳನ್ನು ಹಿಡಿದಿರುತ್ತಾನೆ ಎಂದು ಈ ಶ್ಲೋಕದಲ್ಲಿ ಹೇಳಿದೆ. ಅಚಿಂತ್ಯ ಎನ್ನುವ ಪದವು ಈ ಸಂದರ್ಭದಲ್ಲಿ ಬಹು ಅರ್ಥವತ್ತಾದದ್ದು. ಭಗವಂತನ ಶಕ್ತಿಯು ನಮ್ಮ ಕಲ್ಪನೆಯನ್ನು ಮೀರಿದ್ದು. ನಮ್ಮ ಚಿಂತನೆಯ ವ್ಯಾಪ್ತಿಯಾಚೆ ಇರುವುದು. ಆದುದರಿಂದ ಅದನ್ನು ಅಚಿಂತ್ಯ ಎಂದು ಕರೆದಿದೆ. ಈ ಅಂಶವನ್ನು ಕುರಿತು ಯಾರು ವಾದ ಮಾಡಬಹುದು? ಆತನು ಈ ಜಗತ್ತಿನಲ್ಲಿ ಎಲ್ಲ ಕಡೆ ಇದ್ದಾನೆ. ಆದರೂ ಅದರಾಚೆ ಇದ್ದಾನೆ.

ಅಧ್ಯಾತ್ಮಿಕ ಜಗತ್ತಿಗೆ ಹೋಲಿಸಿದರೆ ಈ ಐಹಿಕ ಜಗತ್ತು ಲೆಕ್ಕಕ್ಕೆ ಬಾರದ್ದು. ಅದನ್ನೇ ನಾವು ತಿಳಿಯಲಾರೆವು. ಅದರಾಚೆ ಇರುವುದನ್ನು ನಾವು ಹೇಗೆ ತಿಳಿಯಬಲ್ಲೆವು? ಅಚಿಂತ್ಯ ಎಂದರೆ ಈ ಐಹಿಕ ಜಗತ್ತಿನಾಚೆ ಇರುವುದು. ನಮ್ಮ ವಾದ, ತರ್ಕ ಮತ್ತು ತಾತ್ವಿಕ ಊಹಾತ್ಮಕ ಚಿಂತನೆಗಳಿಗೂ ನಿಲುಕಲಾರದ್ದು. ಕಲ್ಪನೆಗೆ ಮೀರಿದ್ದು. ಆದುದರಿಂದ ಬುದ್ಧಿವಂತರಾದವರು ವ್ಯರ್ಥವಾದ ಮತ್ತು ಊಹಾತ್ಮಕವಾದ ಚಿಂತನೆಗಳನ್ನು ಬಿಟ್ಟು ವೇದಗಳು, ಭಗವದ್ಗೀತೆ ಮತ್ತು ಶ್ರೀಮದ್ಭಾಗವತದಂತಹ ಪವಿತ್ರಗ್ರಂಥಗಳಲ್ಲಿ ಹೇಳಿರುವುದನ್ನು ಒಪ್ಪಿಕೊಂಡು ಅವು ಹೇಳಿರುವ ತತ್ವಗಳನ್ನು ಅನುಸರಿಸಬೇಕು. ಇದರಿಂದ ಮನುಷ್ಯನಿಗೆ ಅರಿವು ಬರುತ್ತದೆ.