ಭಗವದ್ಗೀತೆ: ಪರಶುರಾಮನಲ್ಲಿ ಮೋಸದಿಂದ ಯುದ್ಧವಿದ್ಯೆ ಕಲಿತ ಕರ್ಣನು ಭೀಷ್ಮಾಚಾರ್ಯರ ಸಿಟ್ಟಿಗೆ ಗುರಿಯಾದ ಹಿಂದಿನ ಕಾರಣ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಪರಶುರಾಮನಲ್ಲಿ ಮೋಸದಿಂದ ಯುದ್ಧವಿದ್ಯೆ ಕಲಿತ ಕರ್ಣನು ಭೀಷ್ಮಾಚಾರ್ಯರ ಸಿಟ್ಟಿಗೆ ಗುರಿಯಾದ ಹಿಂದಿನ ಕಾರಣ ತಿಳಿಯಿರಿ.
ಅಂಗ ದೇಶದ ರಾಜನಾದ ಕರ್ಣನು ದುರ್ಯೋಧನನ ಪ್ರಾಣ ಸ್ನೇಹಿತ. ಭೀಮಾರ್ಜುನರನ್ನು ಕಂಡರೆ ದುರ್ಯೋಧನನಿಗೆ ಬಹಳ ಭಯ. ಭೀಮನನ್ನು ಎದುರಿಸಲು ದುರ್ಯೋಧನನು ಗಧಾಯುದ್ಧವನ್ನೇನೋ ಕಲಿತಿದ್ದ. ಆದರೆ ಅರ್ಜುನನನ್ನು ಎದುರಿಸಲು ಆತನಿಗೆ ಒಬ್ಬ ಸಮರ್ಥ ವ್ಯಕ್ತಿಯ ಅವಶ್ಯಕತೆ ಇತ್ತು. ಈ ಅವಶ್ಯಕತೆಯನ್ನು ಪೂರೈಸಿದವನೇ ಕರ್ಣ. ಕರ್ಣನು ತಾನೊಬ್ಬ ಸಾರಥಿಯ ಮಗ ಎಂದೇ ತಿಳಿದುಕೊಂಡಿದ್ದ. ಆದರೆ ಅವನಿಗೆ ಬಾಲ್ಯದಿಂದಲೂ ಯುದ್ಧ ರಂಗದಲ್ಲಿ ಬಹಳ ಆಸಕ್ತಿ. ಆತನು ಕ್ಷತ್ರಿಯ ವಂಶದಲ್ಲಿ ಹುಟ್ಟಿದ್ದನು. ಕುಂತಿದೇವಿಯು ದುರ್ವಾಸಮುನಿಗಳಿಂದ ಪಡೆದಂತಹ
ಮಂತ್ರವನ್ನು ಪರೀಕ್ಷಿಸಲು ಮುಂದಾದಾಗ ಸೂರ್ಯದೇವನು ಆಕೆಗೆ ಒಂದು ಮಗುವನ್ನು ನೀಡಿದನು. ಇನ್ನು ವಿವಾಹವಾಗದೆ ಇದ್ದ ಕಾರಣ ಕುಂತಿದೇವಿಯು ಆ ಮಗುವನ್ನು ಒಂದು ತೊಟ್ಟಿಲಿನಲ್ಲಿಟ್ಟು ನದಿಯಲ್ಲಿತೇಲಿ ಬಿಟ್ಟಳು. ಅಧಿರಥ ಮತ್ತು ರಾಧ ಎಂಬ ದಂಪತಿ ಕರ್ಣನನ್ನು ಪೋಷಿಸಿದ್ದರು. ಬಿಲ್ಲು ವಿದ್ಯೆಯನ್ನು ಕಲಿಯಲೆಂದು ಕರ್ಣನು ದ್ರೋಣಾಚಾರ್ಯರ ಬಳಿಗೆ ಹೋದಾಗ ದ್ರೋಣಾಚಾರ್ಯರು, ತಾವು ಕೇವಲ ರಾಜಕುಮಾರರಿಗೆ ಮಾತ್ರ ಬಿಲ್ಲು ವಿದ್ಯೆಯನ್ನು ಕಲಿಸುವುದಾಗಿ ಹೇಳಿದರು.
ಕರ್ಣನಿಗೆ ತಾನೊಬ್ಬ ಕ್ಷತ್ರಿಯ ಎಂಬುದು ತಿಳಿದಿರಲಿಲ್ಲ
ತನ್ನ ಹುಟ್ಟಿನ ನಿಜ ಸಂಗತಿಯನ್ನು ತಿಳಿಯದೆ ಇದ್ದಂತಹ ಕರ್ಣನು ಯುದ್ಧ ವಿದ್ಯೆಯನ್ನು ತಿಳಿಯಲು ಪರಶುರಾಮರಲ್ಲಿಗೆ ತೆರಳಿದನು. ಕ್ಷತ್ರಿಯ ಕುಲವನ್ನು ನಾಶ ಮಾಡುವ ಉದ್ದೇಶದಿಂದ ಪರಶುರಾಮರು 21 ಬಾರಿ ಭೂ ಪ್ರದಕ್ಷಿಣೆ ಮಾಡಿದ್ದರು. ಅವರು ಎಂದಿಗೂ ಕ್ಷತ್ರಿಯರನ್ನು ತಮ್ಮ ಬಳಿಗೆ ಸೇರಿಸುತ್ತಿರಲಿಲ್ಲ. ಕರ್ಣನಿಗೆ ತಾನೊಬ್ಬ ಕ್ಷತ್ರಿಯ ಎಂಬುದು ತಿಳಿದಿರಲಿಲ್ಲ. ಹೀಗೆ ಕರ್ಣನು ಪರಶುರಾಮರ ಬಳಿ ಯುದ್ಧ ವಿದ್ಯೆಯನ್ನು ಕಲಿತನು.
ಮುಂದೊಂದು ದಿನ ಪರಶುರಾಮರು ಕರ್ಣನ ಮಡಿಲಿನಲ್ಲಿ ತಲೆಯಿಟ್ಟು ಮಲಗಿರಬೇಕಾದರೆ, ಒಂದು ಕೀಟವು ಕರ್ಣನ ತೊಡೆಯನ್ನು ಕಚ್ಚುತ್ತದೆ. ಅದರಿಂದ ಅಸಹನೀಯವಾದ ನೋವು ಉಂಟಾದರೂ ಕರ್ಣನು ತನ್ನ ಗುರುಗಳಿಗೆ ಅನಾನುಕೂಲವಾಗಬಾರದು ಎಂಬ ಉದ್ದೇಶದಿಂದ ಎಲ್ಲವನ್ನು ಸಹಿಸಿಕೊಳ್ಳುತ್ತಾನೆ. ಕರ್ಣನ ತೊಡೆಯಿಂದ ಬಂದಂತಹ ರಕ್ತವು ಪರಶುರಾಮರ ಮುಖವನ್ನು ತಾಗಿದಾಗ ಅವರು ಎಚ್ಚರಗೊಂಡರು. ಕೇವಲ ಒಬ್ಬ ಕ್ಷತ್ರಿಯನು ಮಾತ್ರ ಈ ರೀತಿಯಾದಂತಹ ನೋವನ್ನು ಸಹಿಸಲು ಸಾಧ್ಯ ಎಂದು ಹೇಳಿದಂತಹ ಪರಶುರಾಮರು ಕರ್ಣನು ಒಬ್ಬ ಕ್ಷತ್ರಿಯನೇ ಆಗಿದ್ದಾನೆ ಎಂದು ನಿರ್ಧರಿಸಿದರು.
ಕರ್ಣನಿಗೆ ಪರಶುರಾಮ ಏನೆಂದು ಶಾಪ ಹಾಕಿದ?
ಕರ್ಣನು ಕಲಿತಂತಹ ಯುದ್ಧ ವಿದ್ಯೆಯು ಆತನಿಗೆ ಅವಶ್ಯಕತೆ ಇರುವಾಗ ನೆನಪಿಗೆ ಬರದೇ ಹೋಗಲಿ ಎಂದು ಪರಶುರಾಮರು ಶಾಪವಿತ್ತರು. ಪರಶುರಾಮರಲ್ಲಿ ಮೋಸದಿಂದ ಯುದ್ಧ ವಿದ್ಯೆಯನ್ನು ಕಲಿತಂತಹ ಕರ್ಣನು ಭೀಷ್ಮಾಚಾರ್ಯರ ಸಿಟ್ಟಿಗೆ ಗುರಿಯಾದನು. ಭೀಷ್ಮಾಚಾರ್ಯರು ಯುದ್ಧ ಭೂಮಿಯಲ್ಲಿಇರುವ ತನಕ ತಾನು ಹೋರಾಟ ಮಾಡುವುದಿಲ್ಲ ಎಂದು ಕರ್ಣನು ಶಪಥ ಮಾಡಿದನು. ಭೀಷ್ಮದ್ರೋಣರು ಯುದ್ಧದಲ್ಲಿ ದುರ್ಯೋಧನ ಪಕ್ಷವನ್ನು ವಹಿಸಿದ ಕಾರಣದಿಂದಾಗಿ ಕೃಪಚಾರ್ಯರು ದುರ್ಯೋಧನನನ್ನು ಬೆಂಬಲಿಸಿದರು.
ಕೃಪಾಚಾರ್ಯರಿಗೆ ದುರ್ಯೋಧನನ ಕುರಿತಾಗಿ ವಿಶೇಷವಾದಂತಹ ಆಸಕ್ತಿ ಏನೂ ಇರಲಿಲ್ಲ. ಮಹಾಭಾರತ ಯುದ್ಧದಲ್ಲಿ ದುರ್ಯೋಧನಾದಿಗಳು ಮಡಿದ ನಂತರ ಕೃಪಾಚಾರ್ಯರು ಪಾಂಡವರನ್ನು ಸೇರಿದರು. ದ್ರೋಣಾಚಾರ್ಯರ ಮಗನಾದಂತಹ ಅಶ್ವತ್ಥಾಮನು ವಿಕ್ಷಿಪ್ತಮನಸ್ಸಿನವನಾಗಿದ್ದನು. ಯಾವುದೇ ಒಂದು ಕಾರ್ಯವನ್ನು ಸಂಪೂರ್ಣಗೊಳಿಸುವುದರಲ್ಲಿ ಆತನು ವಿಫಲನಾಗುತ್ತಿದ್ದನು. ಸಣ್ಣಪುಟ್ಟ ಅಡೆತಡೆಗಳು ಎದುರಾದರೂ ತನ್ನ ಕಾರ್ಯವನ್ನು ಕೈಬಿಡುತ್ತಿದ್ದನು. ಇಂತಹ ವ್ಯಕ್ತಿಯಿಂದ ಗೆಲುವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ವಿಕರ್ಣನು ಶ್ರೇಷ್ಠ ಯೋಧನೇನೂ ಅಲ್ಲ. ಆದರೂ ದುರ್ಯೋಧನನು ಅವನ ಹೆಸರನ್ನು ಇಲ್ಲಿ ಹೇಳುತ್ತಿದ್ದಾನೆ. ಇದಕ್ಕೊಂದು ಬಲವಾದ ಕಾರಣವಿದೆ.
ದ್ರೌಪದಿಯ ಅಪಮಾನವನ್ನು ಖಂಡಿಸಿದ ವಿಕರ್ಣ
ದುಶ್ಯಾಸನನು ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನ ಪಟ್ಟಾಗ ವಿಕರ್ಣನು ಅದನ್ನು ವಿರೋಧಿಸಿದ. ವಿಕರ್ಣನಿಗೆ ಪಾಂಡವರ ಕುರಿತಾಗಿ ಪ್ರೀತಿಯೇನೂ ಇರಲಿಲ್ಲ. ಅಧರ್ಮವನ್ನು ವಿರೋಧಿಸುವ ಮನಸ್ಥಿತಿಯೂ ಅವನದ್ದಲ್ಲ. ಆದರೂ ಆತನು ದ್ರೌಪದಿಯ ಅಪಮಾನವನ್ನು ಖಂಡಿಸಿದ. ಏಕೆಂದರೆ ವಿಕರ್ಣನಿಗೆ, ನಾಲ್ಕು ಜನರ ಮುಂದೆ ತಾನೊಬ್ಬ ದೊಡ್ಡ ವ್ಯಕ್ತಿ ಎಂದು ತೋರಿಸಿಕೊಳ್ಳುವ ಚಪಲವಿದೆ. ಈ ವಿಷಯವನ್ನು ತಿಳಿದಿದ್ದಂತಹ ದುರ್ಯೋಧನನು ಉದ್ದೇಶಪೂರ್ವಕವಾಗಿಯೇ ವಿಕರ್ಣನ ಹೆಸರನ್ನು ಇಲ್ಲಿ ಬಳಸುತ್ತಾನೆ.
ರಾಜ ಪ್ರತಿಪನಿಗೆ ಮೂವರು ಗಂಡು ಮಕ್ಕಳು. ಬಾಹ್ಲೀಕ, ದೇವಾಪಿ ಮತ್ತು ಶಂತನು. ಬಾಹ್ಲೀಕನ ಮಗ ಸೋಮದತ್ತ. ಸೋಮದತ್ತನ ಮಗ ಭೂರಿಶ್ರವ. ಈ ಭೂರಿಶ್ರವನನ್ನು ಸೌಮದತ್ತಿಎಂದು ಕರೆಯುತ್ತಾರೆ. ಭೀಷ್ಮಾಚಾರ್ಯರು ಈ ಯುದ್ಧದಲ್ಲಿ ಕೌರವರ ಪಕ್ಷವನ್ನು ವಹಿಸಿರುವ ಕಾರಣಕ್ಕಾಗಿ ಸೌಮದತ್ತಿಯು ಕೌರವರ ಪಕ್ಷವನ್ನೇ ಸೇರಿದನು. ಸೌಮದತ್ತಿಗೆ ದುರ್ಯೋಧನನ ಬಗೆಗೆ ವಿಶೇಷ ಪ್ರೀತಿ ಏನೂ ಇರಲಿಲ್ಲ. ಈ ರೀತಿ ತನ್ನ ಕಡೆಯ ಏಳು ಮಂದಿ ವೀರರ ಹೆಸರನ್ನು ಕುಹಕವಾಗಿ ದುರ್ಯೋಧನನು ಭೀಷ್ಮಾಚಾರ್ಯರಿಗೆ ಕೇಳಿಸುವಂತೆ ದ್ರೋಣಾಚಾರ್ಯರಲ್ಲಿ ಹೇಳುತ್ತಾನೆ. ಕೌರವರ ಕಡೆ 11 ಅಕ್ಷೋಹಿಣಿ ಸೈನ್ಯವನ್ನು ಮುನ್ನಡೆಸಬಲ್ಲ ವೀರರಿದ್ದರು. ಶಲ್ಯ, ಭಗದತ್ತನಂತಹ ಅನೇಕ ವೀರರು ದುರ್ಯೋಧನನ ಸಹಾಯಕ್ಕೆ ನಿಂತಿದ್ದರು. ಆದರೂ ದುರ್ಯೋಧನನು ಅವರು ಯಾರ ಹೆಸರನ್ನು ಹೇಳಲಿಲ್ಲ. ಇದರಿಂದ ದುರ್ಯೋಧನನ ಮನಸ್ಸಿನಲ್ಲಿಉಂಟಾದಂತಹ ಗೊಂದಲವನ್ನು ನಾವು ತಿಳಿದುಕೊಳ್ಳಬಹುದು.
ಆಧಾರ: ಭಗವದ್ಗೀತಾ ಯಥಾರೂಪ, ಶ್ರೀಶ್ರೀಮದ್ ಎ.ಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರ
ಭಗವದ್ಗೀತಾ ಯಥಾರೂಪದ ನಿರೂಪಕರು - ಭಕ್ತಿ ಶಾಸ್ತ್ರೀ ಸುಬುದ್ಧಿ ದಾಮೋದರ ದಾಸ್, ಇಸ್ಕಾನ್ ಮಂಗಳೂರು ( ಇವರು ಡಾ.ಸುಜೇಶ್ ಕುಮಾರ್. ಮೂಡಬಿದ್ರಿಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್‌ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ)