ಭಗವದ್ಗೀತೆ: ಅಣ್ಣತಮ್ಮಂದಿರ ಮಕ್ಕಳ ನಡುವೆ ರಾಜಿಯಾಗುವುದು ಧೃತರಾಷ್ಟ್ರನಿಗೆ ಇಷ್ಟವಿರಲಿಲ್ಲ; ಗೀತೆಯ ಅರ್ಥವನ್ನು ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಅಣ್ಣತಮ್ಮಂದಿರ ಮಕ್ಕಳ ನಡುವೆ ರಾಜಿಯಾಗುವುದು ಧೃತರಾಷ್ಟ್ರನಿಗೆ ಇಷ್ಟವಿರಲಿಲ್ಲ; ಗೀತೆಯ ಅರ್ಥವನ್ನು ತಿಳಿಯಿರಿ

ಭಗವದ್ಗೀತೆ: ಅಣ್ಣತಮ್ಮಂದಿರ ಮಕ್ಕಳ ನಡುವೆ ರಾಜಿಯಾಗುವುದು ಧೃತರಾಷ್ಟ್ರನಿಗೆ ಇಷ್ಟವಿರಲಿಲ್ಲ; ಗೀತೆಯ ಅರ್ಥವನ್ನು ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಅಣ್ಣತಮ್ಮಂದಿರ ಮಕ್ಕಳ ನಡುವೆ ರಾಜಿಯಾಗುವುದು ಧೃತರಾಷ್ಟ್ರನಿಗೆ ಇಷ್ಟವಿರಲಿಲ್ಲ ಯಾಕೆ ಎಂಬುದನ್ನು ಗೀತೆಯಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಕುರುಕ್ಷೇತ್ರದ ರಣಗಂದಲ್ಲಿ ಸೇನಾಅವಲೋಕನ

ಶ್ಲೋಕ - 1

ಧೃತರಾಷ್ಟ್ರ ಉವಾಚ

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |

ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಞ್ಜಯ ||1||

ಧೃತರಾಷ್ಟ್ರಃ ಉವಾಚ - ಧೃತರಾಷ್ಟ್ರ ರಾಜನು ಹೇಳಿದನು; ಧರ್ಮಕ್ಷೇತ್ರೇ - ಯಾತ್ರಾ ಸ್ಥಳವಾದ; ಕುರುಕ್ಷೇತ್ರ - ಕುರುಕ್ಷೇತ್ರವೆಂಬ ಸ್ಥಳದಲ್ಲಿ; ಸಮವೇತಾಃ - ಸೇರಿದ; ಯುಯುತ್ಸವಃ - ಯುದ್ಧಮಾಡಲು ಅಪೇಕ್ಷಿಸುವವರಾದ; ಮಾಮಕಾಃ-ನನ್ನ ಪಕ್ಷದವರು (ಪುತ್ರರು); ಪಾಂಡವಾಃ-ಪಾಂಡು ಪುತ್ರರು; ಚ-ಮತ್ತು; ಏವ-ಖಂಡಿತವಾಗಿ; ಕಿಮ್-ಏನನ್ನು; ಅಕುರ್ವತ-ಮಾಡಿದರು; ಸಞ್ಜಯ-ಸಂಜಯನೇ.

ಅನುವಾದ

ಧೃತರಾಷ್ಟ್ರನು, ಹೇ ಸಂಜಯ, ಯುದ್ಧಪೇಕ್ಷೆಯಿಂದ ನನ್ನ ಮಕ್ಕಳು ಮತ್ತು ಪಾಂಡವರು ಧರ್ಮಕ್ಷೇತ್ರದಲ್ಲಿ ಸೇರಿದನಂತರ ಏನು ಮಾಡಿದರು ಎಂದು ಕೇಳಿದನು.

ಭಾವಾರ್ಥ

ಗೀತಾಮಾತ್ಮ್ಯದಲ್ಲಿ ಸಂಗ್ರಹವಾಗಿ ಹೇಳಿದ ಮತ್ತು ಬಹುಜನರು ಓದುವ ಧರ್ಮಶಾಸ್ತ್ರ ಭಗವದ್ಗೀತೆ. ಕೃಷ್ಣನ ಭಕ್ತರೊಬ್ಬರ ಸಹಾಯವನ್ನು ಪಡೆದು ಸೂಕ್ಷ್ಮವಾಗಿ ಪರಿಶೀಲಿಸುತ್ತ ಓದಿ, ಸ್ವಪ್ರೇರಿತ ವ್ಯಾಖ್ಯಾನಗಳಿಲ್ಲದೆ ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಗೀತಾಮಾಹಾತ್ಮದಲ್ಲಿ ಹೇಳಿದೆ. ಅರ್ಜುನನು ಭಗವದ್ಗೀತೆಯನ್ನು ಕೃಷ್ಣನಿಂದಲೇ ನೆರವಾಗಿ ಕೇಳಿ ತಾನೇ ಉಪದೇಶವನ್ನು ಅರ್ಥಮಾಡಿಕೊಂಡ.

ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ರೀತಿಗೆ ಇದೇ ಉದಾಹರಣೆ. ಇದು ಗೀತೆಯಲ್ಲೇ ಇದೆ. ಈ ಗುರುಶಿಷ್ಯರ ಪರಂಪರೆಯಲ್ಲಿ ಸ್ವಪ್ರೇರಿತ ವ್ಯಾಖ್ಯಾನವಿಲ್ಲದೆ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳುವ ಭಾಗ್ಯಶಾಲಿಯು, ಎಲ್ಲ ವೇದಗಳ ಜ್ಞಾನದ ಅಧ್ಯಯನವನ್ನೂ ಜಗತ್ತಿನ ಎಲ್ಲ ಧರ್ಮಗ್ರಂಥಗಳ ಅಧ್ಯಯನವನ್ನೂ ಮೀರುತ್ತಾನೆ. ಇತರ ಧರ್ಮಗ್ರಂಥಗಳಲ್ಲಿ ಇರುವುದೆಲ್ಲವೂ ಓದುಗನಿಗೆ ಭಗವದ್ಗೀತೆಯಲ್ಲಿ ದೊರೆಯುತ್ತದೆ. ಜೊತೆಗೆ ಬೇರೆಲ್ಲೂ ದೊರೆಯದಿರುವುದೂ ಇಲ್ಲಿದೆ. ಇದು ಗೀತೆಯ ವಿಶಿಷ್ಟ ಸಾಧನೆ. ಇದು ಪರಿಪೂರ್ಣವಾದ ಧರ್ಮಶಾಸ್ತ್ರ. ಏಕೆಂದರೆ ಇದು ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನ ನೇರವಾದ ಮಾತು.

ಪ್ರಾಚೀನ ಕಾಲದಿಂದ ಕುರುಕ್ಷೇತ್ರವು ಪವಿತ್ರವಾದ ಯತ್ರಾಸ್ಥಳ

ಮಹಾಭಾರತದಲ್ಲಿ ವರ್ಣಿಸಿರುವಂತೆ ಧೃತರಾಷ್ಟ್ರನೂ ಸಂಜಯನೂ ಚರ್ಚಿಸಿದ ವಿಷಯಗಳು ಈ ಸಿದ್ಧಾಂತದ ಮೂಲತತ್ವ. ಈ ಸಿದ್ಧಾಂತವು ಕುರುಕ್ಷೇತ್ರದ ರಣಭೂಮಿಯಲ್ಲಿ ರೂಪಿತವಾಯಿತು ಎಂದು ತಿಳಿಯಲಾಗಿದೆ. ವೇದಯುಗದಷ್ಟು ನೆನಪಿಗೆ ಮೀರಿದ ಪ್ರಾಚೀನ ಕಾಲದಿಂದ ಕುರುಕ್ಷೇತ್ರವು ಪವಿತ್ರವಾದ ಯತ್ರಾಸ್ಥಳವಾಗಿದೆ. ಶ್ರೀಕೃಷ್ಣನೇ ಭೂಮಿಯ ಮೇಲಿದ್ದಾಗ ಮಾನವಕುಲದ ಮಾರ್ಗದರ್ಶನಕ್ಕಾಗಿ ಇದನ್ನೇ ಹೇಳಿದ.

ಧರ್ಮಕ್ಷೇತ್ರ (ಧಾರ್ಮಿಕ ವಿಧಿಗಳು ನಡೆಯುವ ಕ್ಷೇತ್ರ) ಎನ್ನುವ ಶಬ್ದ ಮಹತ್ವದ್ದು. ಏಕೆಂದರೆ ಕುರುಕ್ಷೇತ್ರ ರಣರಂಗದಲ್ಲಿ ದೇವೋತ್ತಮ ಪರಮ ಪುರುಷನೇ ಅರ್ಜುನನ ಪಕ್ಷದಲ್ಲಿದ್ದ. ಕೌರವರ ತಂದೆಯಾದ ಧೃತರಾಷ್ಟ್ರನಿಗೆ ತನ್ನ ಮಕ್ಕಳು ಕಟ್ಟಕಡೆಗೆ ವಿಜಯವನ್ನು ಸಂಪಾದಿಸುತ್ತಾರೆಯೇ ಎನ್ನುವುದರಲ್ಲಿ ತೀವ್ರ ಸಂದೇಹವಿತ್ತು. ಅವನು ಸಂದೇಹಗ್ರಸ್ತನಾಗಿ ತನ್ನ ಸಹಾಯಕ ಸಂಜಯನನ್ನು ಅವರು ಏನು ಮಾಡಿದರು? ಎಂದು ಪ್ರಶ್ನಿಸಿದ.

ತನ್ನ ಮಕ್ಕಳೂ ತನ್ನ ತಮ್ಮ ಪಾಂಡುವಿನ ಮಕ್ಕಳೂ ಘನಘೋರ ಸಮರಕ್ಕಾಗಿ ಕುರುಕ್ಷೇತ್ರ ರಣಭೂಮಿಯಲ್ಲಿ ನೆರೆದಿದ್ದ ಎಂದು ಅವನಿಗೆ ಖಚಿತವಾಗಿ ತಿಳಿದಿತ್ತು. ಆದರೂ, ಅವನ ಪ್ರಶ್ನೆ ಮಹತ್ವದ್ದು. ಅಣ್ಣತಮ್ಮಂದಿರ ಮಕ್ಕಳ ನಡುವೆ ರಾಜಿಯಾಗುವುದು ಅವನಿಗೆ ಇಷ್ಟವಿರಲಿಲ್ಲ. ಅವನು ರಣರಂಗದಲ್ಲಿ ತನ್ನ ಮಕ್ಕಳ ಅದೃಷ್ಟದ ಬಗ್ಗೆ ಖಚಿತವಾಗಿ ತಿಳಿಯಲು ಬಯಸಿದ್ದ. ವೇದಗಳಲ್ಲಿ ಕುರುಕ್ಷೇತ್ರವನ್ನು ಪವಿತ್ರ ಪೂಜಾಸ್ಥಳ, ಸ್ವರ್ಗದ ನಿವಾಸಿಗಳಿಗೂ ಪೂಜಾಸ್ಥಳ ಎಂದು ಹೆಸರಿಸಿದೆ.

ಈ ಕಾರಣಕ್ಕೆ ಧೃತರಾಷ್ಟ್ರನಿಗೆ ಬಹಳ ಭಯವಿತ್ತು

ಇಂತಹ ಸ್ಥಳವನ್ನು ಯುದ್ಧಕ್ಕಾಗಿ ಆರಿಸಿದುದ್ದರಿಂದ ಈ ಪವಿತ್ರಕ್ಷೇತ್ರವು ಯುದ್ಧದ ಫಲಿತಾಂಶದ ಮೇಲೆ ಯಾವ ಪ್ರಭಾವವನ್ನು ಬೀರುವುದೋ ಎಂದು ಧೃತರಾಷ್ಟ್ರನಿಗೆ ಬಹಳ ಭಯವಿತ್ತು. ಅರ್ಜುನನೂ ಪಾಂಡುವಿನ ಇತರ ಮಕ್ಕಳೂ ಸ್ವಭಾವತಃ ಧರ್ಮಿಷ್ಠರಾದುದರಿಂದ ಪವಿತ್ರಕ್ಷೇತ್ರದ ಪ್ರಭಾವವು ಪ್ರಬಲವಾಗಿ ಅವರ ಪರವಾಗಿರುತ್ತದೆ ಎಂದು ಆತನಿಗೆ ತಿಳಿದಿತ್ತು. ಸಂಜಯನು ವ್ಯಾಸರ ಶಿಷ್ಯ. ಅವರ ಕೃಪೆಯಿಂದ ಆತನು ಧೃತರಾಷ್ಟ್ರನ ಮಂದಿರದಲ್ಲಿದ್ದಂತೆಯೇ ಕುರುಕ್ಷೇತ್ರ ಯುದ್ಧವನ್ನು ಕಾಣಲು ಸಮರ್ಥನಾದ. ಆದುದರಿಂದ ಧೃತರಾಷ್ಟ್ರನು ಯುದ್ಧಭೂಮಿಯಲ್ಲಿ ಏನಾಗುತ್ತಿದೆ ಎಂದು ಹೇಳಿದ.

ಪಾಂಡವರೂ ಧೃತರಾಷ್ಟ್ರನ ಮಕ್ಕಳೂ ಒಂದೇ ಕುಟುಂಬದವರು. ಧೃತರಾಷ್ಟ್ರನ ಆಂತರ್ಯವು ಇಲ್ಲಿ ಬಯಲಾಗುತ್ತದೆ. ಉದ್ದೇಶಪೂರ್ಕವಾಗಿ ತನ್ನ ಮಕ್ಕಳನ್ನು ಕುರುವಂಶದವರೆಂದು ಹೆಸರಿಸಿ ಪಾಂಡವರನ್ನು ಕುಟುಂಬದ ಪಿತ್ರಾರ್ಜಿತದಿಂದ ದೂರವಿರಿಸಿದ. ಪಾಂಡುವಿನ ಮಕ್ಕಳ ವಿಷಯದಲ್ಲಿ ಧೃತರಾಷ್ಟ್ರನ ಖಚಿತವಾದ ನಿಲುವನ್ನು ಇದರಿಂದ ತಿಳಿಯಬಹುದು.

ಧರ್ಮದ ಜನಕನೆನಿಸಿರುವ ಶ್ರೀಕೃಷ್ಣನೇ ಉಪಸ್ಥಿತನಾಗಿದ್ದ ಕುರುಕ್ಷೇತ್ರ ಒಂದು ಧರ್ಮಕ್ಷೇತ್ರವಾಗಿತ್ತು. ಅಲ್ಲಿ, ಭತ್ತದ ಗದ್ದೆಯಲ್ಲಿ ಕಳೆಯನ್ನು ಕಿತ್ತೆಸೆಯುವ ಹಾಗೆ ದುರ್ಯೋಧನನಂತಹ ಅನಗತ್ಯವಾದ ಸಸ್ಯಗಳನ್ನು ಪ್ರಭುವು ಕಿತ್ತೆಸೆಯುತ್ತಾನೆ. ಅಲ್ಲದೆ, ಯುಧಿಷ್ಠಿರನಂತಹ ನಾಯಕರನ್ನುಳ್ಳ ಧರ್ಮಿಷ್ಠರನ್ನು ಮತ್ತೆ ಪ್ರತಿಷ್ಠಾಪನೆ ಮಾಡುತ್ತಾನೆ. ಈ ನಿರೀಕ್ಷೆ ಪ್ರಸ್ತುತ ವಿಷಯಗಳ ಆರಂಭದಲ್ಲೇ ಇದೆ. ಐತಿಹಾಸಿಕ ಮತ್ತು ವೈದಿಕ ಪ್ರಾಮುಖ್ಯದ ಜೊತೆಗೆ ಧರ್ಮಕ್ಷೇತ್ರ, ಕುರುಕ್ಷೇತ್ರ ಎಂಬ ಶಬ್ದಗಳಿಗೆ ಈ ಮಹತ್ವವೂ ಇದೆ. ಮೂಲ-ಭಗವದ್ಗೀತಾ ಯಥಾರೂಪ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.