ಭಗವದ್ಗೀತೆ: ಕುರುಕ್ಷೇತ್ರ ಯುದ್ಧದ ನಿಯಮಗಳು ಇಂದಿಗೂ ಮಾನವೀಯತೆಗೆ ಹಿಡಿದ ಕೈಗನ್ನಡಿಯಂತಿವೆ; ಯಾವುವು ಆ ರೂಲ್ಸ್?
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಕುರುಕ್ಷೇತ್ರ ಯುದ್ಧದ ನಿಯಮಗಳು ಇಂದಿಗೂ ಮಾನವೀಯತೆಗೆ ಹಿಡಿದ ಕೈಗನ್ನಡಿಯಂತಿವೆ. ಆ ನಿಮಯಗಳು ಇಲ್ಲಿವೆ.
ದುರ್ಯೋಧನನು ಆಚಾರ್ಯ ದ್ರೋಣಾಚಾರ್ಯರಲ್ಲಿ ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡ ಕುರುವಂಶದ ಪ್ರತಾಪಶಾಲಿ ವಯೋವೃದ್ಧ ಭೀಷ್ಮಾಚಾರ್ಯರು, ಉಚ್ಚ ಸ್ವರದಿಂದ ಸಿಂಹನಾದವನ್ನು ಮಾಡಿ ತಮ್ಮ ಶಂಖವನ್ನು ಊದಿದರು. ಭೀಷ್ಮಾಚಾರ್ಯರು ಶಂಖನಾದವನ್ನು ಮಾಡುತ್ತಿದ್ದಂತೆ ನಗಾರಿಗಳು, ತಮಟೆ, ಡೋಲು, ಕಹಳೆ ಇತ್ಯಾದಿ ಒಮ್ಮೆಲೇ ಬಾರಿಸಲ್ಪಟ್ಟವು.
ಯುದ್ಧವು ಪ್ರಾರಂಭವಾದಾಗ ಈ ರೀತಿಯ ಶಬ್ದಗಳಿಂದ ಯೋಧರನ್ನು ಎಚ್ಚರಗೊಳಿಸಲಾಗುತ್ತಿತ್ತು. ಇದರಿಂದ ಎಲ್ಲಾ ಯೋಧರಿಗೂ ಯುದ್ಧವು ಪ್ರಾರಂಭವಾದ ವಿಷಯ ತಿಳಿಯುತ್ತಿತ್ತು. ಯುದ್ಧವು ನಡೆಯುವಾಗ ಕೆಲವೊಂದು ನಿಯಮಗಳನ್ನು ಪಾಲಿಸುತ್ತಿದ್ದರು. ಯುದ್ಧವು ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಮಾತ್ರ ನಡೆಯುತ್ತಿತ್ತು. ರಾತ್ರಿ ವೇಳೆ ಒಂದು ಸೇನೆಯ ಯೋಧರು ಇನ್ನೊಂದು ಸೇನೆಯ ಶಿಬಿರದ ಒಳಗೆ ಹೋಗುವ ಅವಕಾಶ ಇತ್ತು.
ಯುದ್ಧಕ್ಕೆ ಸಿದ್ಧವಿಲ್ಲದ ವ್ಯಕ್ತಿಯ ಮೇಲೆ ಆಕ್ರಮಣ ಮಾಡುವಂತಿಲ್ಲ. ಇಬ್ಬರು ಯೋಧರು ಪರಸ್ಪರ ಯುದ್ಧ ಮಾಡುವಾಗ ಮೂರನೆಯವರು ಹಿಂದಿನಿಂದ ಆಕ್ರಮಣ ಮಾಡುವಂತಿಲ್ಲ. ಒಬ್ಬ ಯೋಧನ ಮೇಲೆ ಅನೇಕ ಜನರು ಒಮ್ಮೆಲ ಆಕ್ರಮಣವನ್ನು ಮಾಡುವಂತಿಲ್ಲ. ನಿಶಸ್ತ್ರನಾಗಿರುವ ಯೋಧನ ಮೇಲೆ ಶಸ್ತ್ರಗಳಿಂದ ಆಕ್ರಮಣ ಮಾಡುವಂತಿಲ್ಲ. ಶರಣಾಗತರ ಮೇಲೆ ಆಕ್ರಮಣ ಮಾಡುವಂತಿಲ್ಲ. ಯುದ್ಧಕೈದಿಗಳಿಗೆ ರಕ್ಷಣೆಯನ್ನು ಒದಗಿಸಬೇಕು. ಪ್ರಜ್ಞಾಹೀನ ವ್ಯಕ್ತಿಯ ಮೇಲೆ ಆಕ್ರಮಣ ಮಾಡುವಂತಿಲ್ಲ. ಯುದ್ಧದಲ್ಲಿಪಾಲ್ಗೊಳ್ಳದೆ ಇರುವ ವ್ಯಕ್ತಿಯ ಮೇಲೆ ಆಕ್ರಮಣ ಮಾಡುವಂತಿಲ್ಲ. ಬೆನ್ನು ತೋರಿಸಿ ಓಡಿ ಹೋಗುತ್ತಿರುವ ಯೋಧನ ಮೇಲೆ ಆಕ್ರಮಣ ಮಾಡುವಂತಿಲ್ಲ.
ತತಃ ಶ್ವೇತೈ ರ್ಹ ಯೈ ರ್ಯು ಕ್ತೇ ಮಹತಿ ಸೈಂದನೇ ಸ್ಥಿತೌ ।
ಮಾಧವಃ ಪಾಂಡವಶ್ಚೈ ವ ದಿವ್ಯೌ ಶಂಖೌ ಪ್ರದಧ್ಮತುಃ ॥1.14॥
ಎದುರು ಪಕ್ಷದಲ್ಲಿ ಬಿಳಿಯ ಕುದುರೆಗಳನ್ನು ಕಟ್ಟಿದ, ಮಹಾರಥದಲ್ಲಿ ಉಪಸ್ಥಿತರಾಗಿದ್ದ ಶ್ರೀಕೃಷ್ಣನೂ ಅರ್ಜುನನೂ ತಮ್ಮ ಅಲೌಕಿಕವಾದ ಶಂಖಗಳನ್ನು ಊದಿದರು.
ಕೃಷ್ಣಅರ್ಜುನರು ಯುದ್ಧರಂಗವನ್ನು ಪ್ರವೇಶಿಸುವುದನ್ನು ಈ ಶ್ಲೋಕವು ವಿವರಿಸುತ್ತದೆ. ಭೀಷ್ಮಾಚಾರ್ಯರು ಶಂಖವನ್ನು ಊದಿದ ಬಳಿಕ ಕೃಷ್ಣಾರ್ಜುನರು ತಮ್ಮ ಆಲೌಕಿಕವಾದಂತಹ ಶಂಖಗಳನ್ನು ಊದಿದರು. ಭೀಷ್ಮರು ಊದಿದ ಶಂಖವನ್ನು ಅಲೌಕಿಕ ಎಂದು ವರ್ಣಿಸಿಲ್ಲ. ಕೃಷ್ಣಾರ್ಜುನರ ಶಂಖಗಳನ್ನು ಮಾತ್ರ ಅಲೌಕಿಕ ಎಂದು ವರ್ಣಿಸಿದೆ. ಜಯಸ್ತು ಪಾಂಡುಪುತ್ರಾಣಾಂ ಏಷಾಂ ಪಕ್ಷೆ ಜನಾರ್ಧನಃ. ಭಗವಾನ್ ಶ್ರೀಕೃಷ್ಣನು ಯಾರ ಪಕ್ಷವನ್ನು ವಹಿಸಿದ್ದಾನೋ ಅವರಿಗೆ ಖಂಡಿತವಾಗಿಯೂ ಯುದ್ಧದಲ್ಲಿ ಜಯವು ದೊರಕುವುದು.
ಪಾಂಡವರ ಪಕ್ಷದಲ್ಲಿ ಶ್ರೀಕೃಷ್ಣನು ಇದ್ದುದರಿಂದ ಅವರು ಊದಿದ ಶಂಖಗಳನ್ನು ದಿವ್ಯವಾದವು ಎಂದು ಇಲ್ಲಿ ತಿಳಿಸಲಾಗಿದೆ. ಭಾಗ್ಯ ದೇವತೆಯು ಯಾವಾಗಲೂ ಶ್ರೀಹರಿಯ ಜೊತೆಗೆ ಇರುವಂತೆ ಶ್ರೀಕೃಷ್ಣನು ಇರುವಲ್ಲಿ ಖಂಡಿತವಾಗಿಯೂ ವಿಜಯವು ಇರುತ್ತದೆ. ಕೃಷ್ಣ ಅರ್ಜುನರು ಕುಳಿತಿದ್ದಂತಹ ರಥವನ್ನು ಅಗ್ನಿ ದೇವನು ಅರ್ಜುನನಿಗೆ ಉಡುಗೊರೆಯಾಗಿ ಕೊಟ್ಟಿದ್ದ. ಮೂರು ಲೋಕಗಳಲ್ಲಿಯೂ ವಿಜಯವನ್ನು ತಂದುಕೊಡುವ ಶಕ್ತಿ ಆ ರಥಕ್ಕಿದೆ. ಭಗವಾನ್ ಶ್ರೀಕೃಷ್ಣನ ಸಹಿತವಾಗಿ ಪಾಂಡವರು ಓದಿದ ಶಂಖಗಳ ಹೆಸರುಗಳನ್ನು ಮುಂದಿನ ಶ್ಲೋಕಗಳಲ್ಲಿ ತಿಳಿಸಲಾಗಿದೆ.
ಪಾಂಚಜನ್ಯಂ ಹೃಷೀ ಕೇ ಶೋ ದೇ ವದತ್ತಂ ಧನಂಜಯಃ ।
ಪೌಂಡ್ರಂ ದಧ್ಮೌ ಮಹಾ ಶಂಖಂ ಭೀ ಮಕರ್ಮಾ ವೃಕೋ ದರಃ ॥1.15॥
ಅನಂತವಿಜಯಂ ರಾಜಾ ಕುಂತೀ ಪುತ್ರ ೋ ಯುಧಿಷ್ಠಿರಃ ।
ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ ॥1.16॥
ಹೃಷಿಕೇಶನು ತನ್ನ ಪಾಂಚಜನ್ಯ ಎನ್ನುವ ಶಂಖವನ್ನು, ಅರ್ಜುನನು ದೇವದತ್ತವನ್ನು, ವೃಕೋದರನೂ ಮತ್ತುಅದ್ಭುತ ಸಾಹಸಗಳನ್ನು ಮಾಡಬಲ್ಲವನೂ ಆದ ಭೀಮನು ಪೌಂಡ್ರವೆನ್ನುವ ಮಹಾಶಂಖವನ್ನೂ ಊದಿದರು. ಕುಂತಿಪುತ್ರನಾದ ಯುಧಿಷ್ಠಿರನು ಅನಂತ ವಿಜಯವೆಂಬ ತನ್ನ ಶಂಖವನ್ನು ಊದಿದನು. ನಕುಲ ಸಹದೇವರು, ಸುಘೋಷ ಮತ್ತು ಮಣಿ ಪುಷ್ಪಕ ಶಂಖಗಳನ್ನು ಊದಿದರು.
ಇಲ್ಲಿ ಶ್ರೀಕೃಷ್ಣನನ್ನು ಹೃಷಿಕೇಶ ಎಂದು ಕರೆಯಲಾಗಿದೆ. ಹೃಷೀಕೇಶ ಎಂದರೆ ಇಂದ್ರಿಯಗಳ ಒಡೆಯ. ನಮ್ಮೆಲ್ಲ ಇಂದ್ರಿಯಗಳನ್ನು ಭಗವಂತನು ನಿಯಂತ್ರಿಸುತ್ತಾನೆ. ನಮ್ಮ ಇಂದ್ರಿಯಗಳು ಭೌತಿಕವಾದವು. ಭಗವಂತನ ಇಂದ್ರಿಯಗಳು ದಿವ್ಯವಾದವು. ನಮ್ಮ ಇಂದ್ರಿಯಗಳ ಮೂಲಕ ನಾವು ಯಾವುದಾದರೂ ಒಂದು ಕೆಲಸವನ್ನು ಮಾತ್ರ ಮಾಡಲು ಸಾಧ್ಯ. ಆದರೆ ಭಗವಂತನು ತನ್ನ ಒಂದು ಇಂದ್ರಿಯದ ಮೂಲಕ ಇನ್ನೊಂದು ಇಂದ್ರಿಯದ ಕೆಲಸವನ್ನು ಮಾಡಬಲ್ಲದು. ಇದೇ ನಮಗೂ ಭಗವಂತನಿಗೂ ಇರುವ ವ್ಯತ್ಯಾಸ.
ಆಧಾರ: ಭಗವದ್ಗೀತಾ ಯಥಾರೂಪ, ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತುಆಚಾರ್ಯರ
ಭಗವದ್ಗೀತಾ ಯಥಾರೂಪದ ನಿರೂಪಕರು - ಭಕ್ತಿ ಶಾಸ್ತ್ರೀ ಸುಬುದ್ಧಿ ದಾಮೋದರ ದಾಸ್, ಇಸ್ಕಾನ್ ಮಂಗಳೂರು (ಇವರು ಡಾ.ಸುಜೇಶ್ ಕುಮಾರ್. ಮೂಡಬಿದ್ರಿಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್‌ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ)