ಭಗವದ್ಗೀತೆ: ಫಲಾಪೇಕ್ಷೆಯಿಲ್ಲದೆ ಮಾಡುವ ಕೆಲಸ ಮುಕ್ತಿ ಮಾರ್ಗಕ್ಕೆ ಕರೆದೊಯ್ಯುತ್ತದೆ; ಗೀತೆಯಲ್ಲಿನ ಅರ್ಥ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಫಲಾಪೇಕ್ಷೆಯಿಲ್ಲದೆ ಮಾಡುವ ಕೆಲಸ ಮುಕ್ತಿ ಮಾರ್ಗಕ್ಕೆ ಕರೆದೊಯ್ಯುತ್ತದೆ. ಗೀತೆಯಲ್ಲಿ ಅರ್ಥ ತಿಳಿಯಿರಿ.
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ ಮಾ ತೇ ಸನ್ಗೋಸ್ತ್ವಕರ್ಮಣಿ || 47||
ನಿನಗೆ ನಿಯೋಜಿತ ಕರ್ತವ್ಯವನ್ನು ಮಾಡುವುದಕ್ಕಷ್ಟೇ ಅಧಿಕಾರ. ಆದರೆ ಕರ್ಮಫಲಕ್ಕೆ ನಿನಗೆ ಅಧಿಕಾರವಿಲ್ಲ. ಕರ್ಮಫಲಕ್ಕೆ ನೀನು ಕಾರಣ ಎಂದು ಭಾವಿಸಲೇಬೇಡ. ಕರ್ಮವನ್ನು ಬಿಡಬೇಕೆಂದು ನಿನಗೆ ಮನಸ್ಸಾಗದಿರಲಿ.
ಇಲ್ಲಿ ಮೂರು ವಿಚಾರಗಳಿವೆ. ನಿಯೋಜಿತವಾದ ಕರ್ತವ್ಯಗಳು, ಮನಬಂದಂತೆ ಮಾಡುವ ಕೆಲಸ ಮತ್ತು ಕರ್ಮಮಾಡದಿರುವುದು. ಮನುಷ್ಯನು ಪಡೆದುಕೊಂಡ ಪ್ರಕೃತಿ ಗುಣಗಳಿಗೆ ಅನುಗುಣವಾಗಿ ವಿಧಿಸಿದ ಕಾರ್ಯಗಳು ನಿಯೋಜಿತ ಕರ್ತವ್ಯಗಳು. ಮನಸ್ವೀ ನಡತೆಯ ಕೆಲಸವೆಂದರೆ ಪ್ರಮಾಣಾಧಿಕಾರದ ಒಪ್ಪಿಗೆಯಿಲ್ಲದ ಕೆಲಸ. ಕರ್ಮ ಮಾಡದಿರುವುದೆಂದರೆ ನಿಯೋಜಿತ ಕರ್ತವ್ಯಗಳನ್ನು ಮಾಡದಿರುವುದು.
ಅರ್ಜುನನು ಕರ್ಮವನ್ನು ಬಿಟ್ಟು ಬಿಡಬಾರದು. ಆದರೆ ತನ್ನ ನಿಯೋಜಿತ ಕರ್ತವ್ಯವನ್ನು ಫಲದ ಆಸೆಯಿಲ್ಲದೆ ಮಾಡಬೇಕೆಂದು ಭಗವಂತನು ಬೋಧಿಸಿದನು. ತನ್ನ ಕರ್ಮದ ಫಲಕ್ಕಾಗಿ ಆಸೆ ಪಡುವವನು ತನ್ನ ಕರ್ಮದ ಕಾರಣನೂ ಆಗುತ್ತಾನೆ. ಆದುದರಿಂದ ಅಂತಹ ಕರ್ಮದ ಫಲಕ್ಕಾಗಿ ಆಸೆ ಪಡುವವನು ತನ್ನ ಕರ್ಮದ ಕಾರಣನೂ ಆಗುತ್ತಾನೆ. ಆದುದರಿಂದ ಅಂತಹ ಕರ್ಮದ ಫಲದಿಂದ ಸಂತೋಷ ಅಥವಾ ದುಃಖಕ್ಕೆ ಗುರಿಯಾಗುತ್ತಾನೆ.
ನಿಯೋಜಿತ ಕರ್ತವ್ಯಗಳನ್ನು ಮೂರು ವರ್ಗಗಗಾಳಿ ಮಾಡಬಹುದು. ದೈನಂದಿನ ಕೆಲಸ, ತುರ್ತು ಕೆಲಸ, ಮತ್ತು ಬಯಸಿದಿ ಚಟುವಟಿಕೆಗಳು. ಶಾಸ್ತ್ರಗಳ ಆದೇಶಕ್ಕನುಗುಣವಾಗಿ ಫಲಾಪೇಕ್ಷೆಯಿಲ್ಲದೆ ಕರ್ತವ್ಯವನ್ನು ಮಾಡಿದ ದೈನಂದಿನ ಕೆಲಸವು ಸತ್ವಗುಣದಿಂದ ಮಾಡಿದ ಕರ್ಮವಾಗುತ್ತದೆ. ಫಲವನ್ನು ಅಪೇಕ್ಷಿಸಿ ಮಾಡುವ ಕೆಲಸ ಬಂಧನಕ್ಕೆ ಕಾರಣವಾಗುತ್ತದೆ. ಆದುದರಿಂದ ಇಂತಹ ಕೆಲಸವು ಶುಭಕರವಲ್ಲ. ನಿಯೋಜಿತ ಕರ್ತವ್ಯಗಳ ಮಟ್ಟಿಗೆ ಪ್ರತಿಯೊಬ್ಬನಿಗೂ ಅಧಿಕಾರವುಂಟು. ಆದರೆ ಇದು ಫಲದ ಆಸೆಯಿಲ್ಲದ ಕರ್ಮವಾಗಬೇಕು. ಇಂತಹ ನಿರ್ಲಿಪ್ತ ನಿಯೋಜಿತ ಕರ್ತವ್ಯಗಳು ನಿಸ್ಸಂಶಯವಾಗಿ ಮುಕ್ತಿಮಾರ್ಗಕ್ಕೆ ಕರೆದೊಯ್ಯುತ್ತವೆ.
ಆದುದರಿಂದ ಫಲದ ಅಪೇಕ್ಷೆಯಿಲ್ಲದೆ ಅರ್ಜುನನು ಕರ್ತವ್ಯ ದೃಷ್ಟಿಯಿಂದ ಯುದ್ಧಮಾಡಬೇಕೆಂದು ಭಗವಂತನು ಉಪದೇಶಮಾಡಿದನು. ಅವನು ಯುದ್ಧಮಾಡದಿರುವುದೇ ವ್ಯಾಮೋಹದ ಇನ್ನೊಂದು ಮುಖ. ಇಂತಹ ಮೋಹದಿಂದ ಮುಕ್ತಿಯು ಲಭ್ಯವಾಗುವುದಿಲ್ಲ. ಧನಾತ್ಮಕವಾಗಲಿ, ಋಣಾತ್ಮಕವಾಗಲಿ ಯಾವುದೇ ಬಗೆಯ ಮೋಹವು ಬಂಧನಕ್ಕೆ ಕಾರಣ. ಕರ್ಮಮಾಡದಿರುವುದು ಪಾಪಕರ. ಆದುದರಿಂದ ಅರ್ಜುನನ ಮುಂದಿರುವ ಮುಕ್ತಿಯ ಒಂದೇ ಶುಭಕರ ಮಾರ್ಗವೆಂದು ಯುದ್ಧಮಾಡುವುದು.
ಯೋಗಸ್ಥಃ ಕುರು ಕಮಾರ್ಣಿ ಸನ್ಗಂ ತ್ಯಕ್ತ್ವಾ ಧನಞ್ಜಯ |
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ || 48||
ಗೆಲವು ಸೋಲುಗಳಲ್ಲಿ ಯಾವುದೇ ಆಸಕ್ತಿಯನ್ನು ಇಟ್ಟುಕೊಳ್ಳದೆ ಸಮಚಿತ್ತದಿಂದ ನಿನ್ನ ಕರ್ತವ್ಯವನ್ನು ಮಾಡು, ಅರ್ಜುನ, ಇಂತಹ ಸಮಚಿತ್ತತೆಗೆ ಯೋಗ ಎಂದು ಹೆಸರು.
ಅರ್ಜುನನು ಯೋಗದಲ್ಲಿದ್ದು ಕರ್ಮವನ್ನು ಮಾಡಬೇಕೆಂದು ಕೃಷ್ಣನು ಹೇಳುತ್ತಾನೆ. ಯೋಗ ಎಂದರೇನು? ಯೋಗ ಎಂದರೆ, ಸದಾ ಚಂಚಲವಾಗುವ ಇಂದ್ರಿಯಗಳನ್ನು ನಿಗ್ರಹಿಸಿ ಪರಾತ್ಪರದಲ್ಲಿ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸುವುದು. ಪರಾತ್ಪರ ಎಂದರೆ ಯಾವುದು? ಭಗವಂತನೇ ಪರಾತ್ಪರ. ಅವನೇ ಯುದ್ಧಮಾಡುವಂತೆ ಅರ್ಜುನನಿಗೆ ಹೇಳುತ್ತಿರುವುದರಿಂದ ಯುದ್ಧದ ಫಲಕ್ಕೂ ಅರ್ಜುನನಿಗೂ ಸಂಬಂಧವಿಲ್ಲ. ಲಾಭ ಅಥವಾ ಜಯ ಕೃಷ್ಣನಿಗೆ ಸೇರಿದ್ದು.
ಕೃಷ್ಣನ ಮಾರ್ಗದರ್ಶನಕ್ಕೆ ಅನುಗುಣವಾಗಿ ಕಾರ್ಯನಿರತವಾಗುವಂತೆ ಅರ್ಜುನನಿಗೆ ಉಪದೇಶಿಸಲಾಗುತ್ತಿದೆ. ಕೃಷ್ಣನ ಮಾರ್ಗದರ್ಶನಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ನಿಜವಾದ ಯೋಗ. ಇದು ಕೃಷ್ಣಪ್ರಜ್ಞೆ ಎಂದು ಕರೆಯುವ ಪ್ರಕ್ರಿಯೆಯಲ್ಲಿ ಅಭ್ಯಾಸವಾಗುತ್ತದೆ. ಕೃಷ್ಣಪ್ರಜ್ಞೆಯಿಂದ ಮಾತ್ರವೇ ಮನುಷ್ಯನು ತಾನು ಒಡೆಯ ಎನ್ನುವ ಭಾವನೆಯನ್ನು ಬಿಡಬಹುದು. ಮನುಷ್ಯ ಕೃಷ್ಣನ ಸೇವಕನಾಗಬೇಕು ಅಥವಾ ಕೃಷ್ಣನ ಸೇವಕನ ಸೇವಕನಾಗಬೇಕು. ಕೃಷ್ಣಪ್ರಜ್ಞೆಯಲ್ಲಿ ಕರ್ತವ್ಯವನ್ನು ನಿರ್ವಹಿಸಲು ಇದು ಸರಿಯಾದ ಮಾರ್ಗ. ಕೃಷ್ಣಪ್ರಜ್ಞೆಯೊಂದೇ ಮನುಷ್ಯನು ಯೋಗಸ್ಥಿತಿಯಲ್ಲಿ ಕರ್ಮಮಾಡಲು ನೆರವಾಗಬಲ್ಲುದು.
ಅರ್ಜುನನು ಕ್ಷತ್ರಿಯ. ಆದುದರಿಂದ ಆತನು ವರ್ಣಾಶ್ರಮ ಧರ್ಮದಲ್ಲಿ ಭಾಗಿ. ವರ್ಣಾಶ್ರಮ ಧರ್ಮದ ಸಂಪೂರ್ಣ ಗುರಿ ವಿಷ್ಣುವನ್ನು ಸಂಪ್ರೀತಿಗೊಳಿಸುವುದು ಎಂದು ವಿಷ್ಣುಪುರಾಣದಲ್ಲಿ ಹೇಳಿದೆ. ಐಹಿಕ ಪ್ರಪಂಚದ ನಿಯಮವಾದರೋ ತನ್ನ ತೃಪ್ತಿಗಾಗಿ ಕೆಲಸಮಾಡುವುದು. ಹೀಗೆ ಮಾಡದೆ ಕೃಷ್ಣನನ್ನು ತೃಪ್ತಿಗೊಳಿಸಬೇಕು. ಕೃಷ್ಣನನ್ನು ತೃಪ್ತಿಗೊಳಿಸದೆ ವರ್ಣಾಶ್ರಮ ಧರ್ಮದ ತತ್ವಗಳನ್ನು ಸರಿಯಾಗಿ ಪಾಲಿಸುವುದು ಸಾಧ್ಯವಿಲ್ಲ. ಕೃಷ್ಣನು ಹೇಳಿದಂತೆ ನಡೆಯಬೇಕು ಎಂದು ಪರೋಕ್ಷವಾಗಿ ಅರ್ಜುನನಿಗೆ ಉಪದೇಶ ಮಾಡಲಾಗುತ್ತಿದೆ.