ಭಗವದ್ಗೀತೆ: ಕ್ರಮ ಮತ್ತು ನಿಯಮಬದ್ಧ ಜೀವನ ನಡೆಸುವುದು ಹೇಗೆ? ಗೀತೆಯಲ್ಲಿನ ಸಾರಾಂಶ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಕ್ರಮ ಮತ್ತು ನಿಯಮಬದ್ಧ ಜೀವನ ನಡೆಸುವುದು ಹೇಗೆ ಎಂಬುದರ ಬಗ್ಗೆ ತಿಳಿಯಿರಿ.
ಕರ್ಮೇನ್ದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರನ್ |
ಇನ್ದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ ||6||
ಕರ್ಮೇಂದ್ರಿಯಗಳನ್ನು ನಿಗ್ರಹಿಸಿ ಇಂದ್ರಿಯ ವಿಷಯಗಳಲ್ಲಿ ಮನಸ್ಸು ನೆಟ್ಟ ಮನುಷ್ಯನನ್ನು ವಿಮೂಢಾತ್ಮನೆಂದೂ ಮಿಥ್ಯಾಚಾರಿಯೆಂದೂ ಕರೆಯುವರು.
ಅನೇಕ ಮಂದಿ ಮಿಥ್ಯಾಚಾರಿಗಳಿದ್ದಾರೆ. ಅವರು ಕೃಷ್ಣಪ್ರಜ್ಞೆಯಲ್ಲಿ ಕೆಲಸ ಮಾಡಲು ನಿರಾಕರಿಸುತ್ತಾರೆ. ಅವರ ಮನಸ್ಸು ಸದಾ ಯಾವುದಾದರೂ ಇಂದ್ರಿಯಭೋಗದಲ್ಲಿ ನೆಟ್ಟಿರುತ್ತದೆ. ಆದರೂ ಅವರು ಧ್ಯಾನ ಮಾಡುವಂತೆ ನಟಿಸುತ್ತಾರೆ. ಕುತರ್ಕಪ್ರಿಯರಾದ ತಮ್ಮ ಅನುಯಾಯಿಗಳನ್ನು ಮೋಸಗಳಿಸಲು ಇಂತಹ ಮಿಥ್ಯಾಚಾರಿಗಳು ಒಣ ತತ್ವಜ್ಞಾನವನ್ನು ಕುರಿತು ಮಾತನಾಡಬಹುದು.
ಆದರೆ ಈ ಶ್ಲೋಕದ ಅಭಿಪ್ರಾಯದಲ್ಲಿ ಅವರು ಮಹಾ ಮೋಸಗಾರರು. ಇಂದ್ರಿಯ ಸಂತೋಷಕ್ಕಾಗಿ ಮನುಷ್ಯನು ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಸ್ಥಾನದಿಂದಲಾದರೂ ಉದ್ಯುಕ್ತವಾಗಬಹುದು. ಆದರೆ ಒಬ್ಬ ಮನುಷ್ಯ ತನ್ನ ವಿಶಿಷ್ಟ ಸ್ಥಾನಮಾನದ ವಿಧಿನಿಯಮಗಳನ್ನು ಅನುಸರಿಸಿದರೆ ತನ್ನ ಅಸ್ತಿತ್ವವನ್ನು ಪರಿಶುದ್ಧ ಮಾಡಿಕೊಳ್ಳುವುದರಲ್ಲಿ ಕ್ರಮೇಣ ಪ್ರಗತಿಯನ್ನು ಸಾಧಿಸಬಹುದು.
ಇಂದ್ರಿಯ ತೃಪ್ತಿಗಾಗಿ ಸಾಧನಗಳನ್ನು ಅರಸುತ್ತ ಯೋಗಿಯಂತೆ ತೋರಿಸಿಕೊಳ್ಳುವವನು ಆಗಾಗ ತತ್ವಶಾಸ್ತ್ರವನ್ನು ಕುರಿತು ಮಾತನಾಡಬಹುದು. ಆದರೂ ಆತನನ್ನು ಅತ್ಯಂತ ಕುಟಿಲ ಮನುಷ್ಯನೆಂದೇ ಕರೆಯಬೇಕಾಗುತ್ತದೆ. ಇಂತಹ ಪಾಪಿಯ ವಿದ್ಯೆಯ ಫಲವನ್ನು ಭಗವಂತನು ಮಾಯಾಶಕ್ತಿಯು ವಶಮಾಡಿಕೊಳ್ಳುತ್ತದೆ. ಆದುದರಿಂದ ಇವನ ವಿದ್ಯಗೆ ಯಾವ ಬೆಲೆಯೂ ಇಲ್ಲ. ಇಂತಹ ಮಿಥ್ಯಾಚಾರಿಯ ಮನಸ್ಸು ಯಾವಾಗಲೂ ಮಲಿನವಾಗಿರುತ್ತದೆ. ಆದುದರಿಂದ ಅವನ ಯೋಗಧ್ಯಾನದ ಪ್ರದರ್ಶನಕ್ಕೆ ಯಾವ ಬೆಲೆಯೂ ಇಲ್ಲ.
ಯಸ್ತ್ವಿನ್ದ್ರಿಯಾಣಿ ಮನಸಾ ನಿಯಮ್ಯಾರಭತೇರ್ಜನ |
ಕರ್ಮೇನ್ದ್ರಿಯೈಃ ಕರ್ಮಯೋಗಮಸಕ್ತಃ ಸ ವಿಶಿಷ್ಯತೇ ||7||
ಇದಕ್ಕೆ ಪ್ರತಿಯಾಗಿ, ಪ್ರಾಮಾಣಿಕನಾದ ಮನುಷ್ಯನು ಕ್ರಿಯಾಶಾಲಿಗಳಾದ ಇಂದ್ರಿಯಗಳನ್ನು ಮನಸ್ಸಿನಿಂದ ನಿಗ್ರಹಿಸಲು ಪ್ರಯತ್ನಿಸಿ (ಕೃಷ್ಣಪ್ರಜ್ಞೆಯಲ್ಲಿ) ಕರ್ಮಯೋಗವನ್ನು ಅನಾಸಕ್ತನಾಗಿ ಪ್ರಾರಂಭಿಸಿದರೆ ಅವನು ಎಷ್ಟೋ ಉತ್ತಮನು.
ಸ್ವೇಚ್ಛಾ ಜೀವನ ಮತ್ತು ಇಂದ್ರಿಯಭೋಗಕ್ಕಾಗಿ ಹುಸಿ ಆಧ್ಯಾತ್ಮಿಕವಾದಿ ಯಾಗುವುದಕ್ಕಿಂತ ತನ್ನ ವ್ಯವಹಾರಗಳಲ್ಲಿಯೇ ಉಳಿದು ಬದುಕಿನ ಉದ್ದೇಶವನ್ನು ಕಾರ್ಯಗತ ಮಾಡುವುದು ಉತ್ತಮ. ಐಹಿಕ ಬಂಧನದಿಂದ ಬಿಡುಗಡೆ ಹೊಂದಿ ಭಗವಂತನ ರಾಜ್ಯವನ್ನು ಸೇರುವುದೇ ಬದುಕಿನ ಉದ್ದೇಶ.
ನಿಯಮಬದ್ಧ ಜೀವನವನ್ನು ನಡೆಸುವುದು ಹೇಗೆ?
ಮುಖ್ಯ ಸ್ವಾರ್ಥಗತಿ ಅಥವಾ ಸ್ವಹಿತದ ಗುರಿ ವಿಷ್ಣುವನ್ನು ಸೇರುವುದು. ಇಡೀ ವರ್ಣಾಶ್ರಮ ವ್ಯವಸ್ಥೆಯನ್ನು ನಾವು ಈ ಗುರಿಯನ್ನು ಮುಟ್ಟಲು ಸಾಧ್ಯವಾಗುವಂತೆ ರೂಪಿಸಲಾಗಿದೆ. ಕೃಷ್ಣಪ್ರಜ್ಞೆಯಲ್ಲಿ ನಿಯಂತ್ರಿತ ರೀತಿಯಲ್ಲಿ ಸೇವೆ ಮಾಡುವುದರಿಂದ ಗೃಹಸ್ಥರು ಕೂಡ ಈ ಗುರಿಯನ್ನು ಮುಟ್ಟಲು ಸಾಧ್ಯ. ಆತ್ಮಸಾಕ್ಷಾತ್ಕಾರಕ್ಕಾಗಿ ಮನುಷ್ಯನು ಶಾಸ್ತ್ರಗಳಲ್ಲಿ ವಿಧಿಸಿರುವಂತೆ ನಿಯಮಬದ್ಧ ಜೀವನವನ್ನು ನಡೆಸುಹುದು. ಅನಾಸಕ್ತಿಯಿಂದ ತನ್ನ ವ್ಯವಹಾರಗಳನ್ನೂ ನಿರ್ವಹಿಸಬಹುದು. ಈ ರೀತಿಯಲ್ಲಿ ಪ್ರಗತಿಯನ್ನು ಸಾಧಿಸಬಹುದು.
ಈ ವಿಧಾನವನ್ನು ಅನುಸರಿಸುವ ಪ್ರಾಮಾಣಿಕ ಮನುಷ್ಯನು ಮುಗ್ಧ ಸಾರ್ವಜನಿಕರನ್ನು ವಂಚಿಸಲು ಆಧ್ಯಾತ್ಮಿಕತೆಯ ಹೊರಪ್ರದರ್ಶನವನ್ನು ಬಳಸುವವನಿಗಿಂತ ಬಹುಪಾಲು ಉತ್ತಮವಾದ ಸ್ಥಿತಿಯಲ್ಲಿರುತ್ತಾನೆ. ಹೊಟ್ಟೆಹೊರೆಯುವುದಕ್ಕಾಗಿಯೇ ಧ್ಯಾನದ ಸೋಗುಹಾಕುವವನಿಗಿಂತ ಪ್ರಮಾಣಿಕನಾದ ಝಾಡಮಾಲಿಯು ಎಷ್ಟೋ ಉತ್ತಮ.