Bhagavad Gita: ಮನುಷ್ಯನಿಗೆ ಶಾಶ್ವತವಲ್ಲದ ಪ್ರಪಂಚವು ಈ 4 ಸಂಕಟಗಳಿಂದ ತುಂಬಿರುತ್ತದೆ; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಮನುಷ್ಯನಿಗೆ ಶಾಶ್ವತವಲ್ಲದ ಪ್ರಪಂಚವು ಈ 4 ಸಂಕಟಗಳಿಂದ ತುಂಬಿರುತ್ತದೆ ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ ಶ್ಲೋಕ 15 ಮತ್ತು 16 ರಲ್ಲಿ ಓದಿ.
8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 15
ಮಾಮುಪೇತ್ಯ ಪುನರ್ಜನ್ಮ ದುಃಖಾಲಯಮಶಾಶ್ವತಮ್ |
ನಾಪ್ನುವನ್ತಿ ಮಹಾತ್ಮನಃ ಮಹಾತ್ಮಾನಃ ಸಂಸಿದ್ಧಿಂ ಪರಮಾಂ ಗತಾಃ ||15||
ಅನುವಾದ: ಭಕ್ತಿಪೂರ್ವಕ ಯೋಗಿಗಳಾದ ಮಹಾತ್ಮರು ನನ್ನನ್ನು ಸೇರಿದ ಮೇಲೆ ದುಃಖಗಳ ತವರಾದ ಈ ಅಶಾಶ್ವತ ಪ್ರಪಂಚಕ್ಕೆ ಹಿಂದಿರುಗುವುದಿಲ್ಲ. ಏಕೆಂದರೆ ಅವರು ಅತ್ಯುನ್ನತ ಪರಿಪೂರ್ಣತೆಯನ್ನು ಸಾಧಿಸಿದ್ದಾರೆ.
ಭಾವಾರ್ಥ: ಈ ಅಶಾಶ್ವತ ಐಹಿಕ ಪ್ರಪಂಚವು ಜನನ, ಮುಪ್ಪು, ರೋಗ ಮತ್ತು ಸಾವುಗಳ ಸಂಕಟಗಳಿಂದ ತುಂಬಿರುವುದರಿಂದ, ಅತ್ಯುನ್ನತ ಪರಿಪೂರ್ಣತೆಯನ್ನು ಸಾಧಿಸಿ ಪರಮಲೋಕವಾದ ಕೃಷ್ಣಲೋಕ ಅಥವಾ ಗೋಲೋಕ ವೃಂದಾವನವನ್ನು ಸೇರಿದವನು, ಹಿಂದಿರುಗಲು ಬಯಸುವುದಿಲ್ಲ. ವೈದಿಕ ಸಾಹಿತ್ಯವು ಪರಮಲೋಕವನ್ನುಅವ್ಯಕ್ತ, ಅಕ್ಷರ ಮತ್ತು ಪರಮಾ ಗತಿ ಎಂದು ವರ್ಣಿಸುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಆ ಲೋಕವು ನಮ್ಮ ಐಹಿಕ ದೃಷ್ಟಿಯನ್ನು ಮೀರಿದೆ ಮತ್ತು ವಿವರಣೆಗೆ ಸಿಲುಕದು. ಆದರೆ ಅದೇ ಅತ್ಯುನ್ನತ ಗುರಿ. ಮಹಾತ್ಮರು ಆ ಸ್ಥಳವನ್ನು ಸೇರಬಯಸುತ್ತಾರೆ.
ಮಹಾತ್ಮರಿಗೆ ಸಾಕ್ಷಾತ್ಕಾರ ಪಡೆದ ಭಕ್ತರಿಂದ ಅಲೌಕಿಕ ಸಂದೇಶಗಳು ಬರುತ್ತವೆ. ಇದರಿಂದ ಅವರು ಕ್ರಮೇಣ ಕೃಷ್ಣಪ್ರಜ್ಞೆಯಲ್ಲಿ ಭಕ್ತಿಪೂರ್ವಕ ಸೇವೆಯನ್ನು ಬೆಳೆಸಿಕೊಳ್ಳುತ್ತಾರೆ. ಅವರು ಅಲೌಕಿಕ ಸೇವೆಯಲ್ಲಿ ಎಷ್ಟು ತನ್ಮಯರಾಗುತ್ತಾರೆ ಎಂದರೆ ಯಾವುದೇ ಐಹಿಕ ಲೋಕಕ್ಕೆ ಏರಲು ಅವರು ಬಯಸುವುದಿಲ್ಲ ಮತ್ತು ಯಾವುದೇ ಅಧ್ಯಾತ್ಮಿಕ ಲೋಕಕ್ಕೆ ಹೋಗಬಯಯಸುವುದಿಲ್ಲ. ಅವರಿಗೆ ಕೃಷ್ಣ ಮತ್ತು ಕೃಷ್ಣನ ಸಹವಾಸ ಇಷ್ಟೇ ಬೇಕು. ಬೇರೇನೂ ಬೇಡ. ಇದು ಬದುಕಿನ ಪರಿಪೂರ್ಣತೆಯ ಪರಮಾವಧಿ. ಈ ಶ್ಲೋಕವು ಪರಮ ಪ್ರಭು ಕೃಷ್ಣನ ಸಾಕಾರವಾದಿ ಭಕ್ತರನ್ನು ಖಚಿತವಾಗಿ ಪ್ರಸ್ತಾಪಿಸುತ್ತದೆ. ಕೃಷ್ಣಪ್ರಜ್ಞೆಯಲ್ಲಿನ ಈ ಭಕ್ತರು ಬದುಕಿನ ಅತ್ಯುನ್ನತ ಪರಿಪೂರ್ಣತೆಯನ್ನು ಸಾಧಿಸುತ್ತಾರೆ - ಎಂದರೆ ಅವರು ಮಹಾತ್ಮರು.
8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 16
ಆಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋರ್ಜುನ |
ಮಾಮುಪೇತ್ಯ ತು ಕೌನ್ತೇಯ ಪುನರ್ಜನ್ಮ ನ ವಿದ್ಯತೇ ||16||
ಅನುವಾದ: ಐಹಿಕ ಜಗತ್ತಿನ ಅತ್ಯುನ್ನತ ಲೋಕದಿಂದ ಅತಿ ಕೆಳಗಿನ ಲೋಕದವರೆಗೆ ಎಲ್ಲ ಲೋಕಗಳೂ ದುಃಖದ ಆವಾಸಗಳೇ. ಇವುಗಳಲ್ಲಿ ಜನನ ಮರಣಗಳು ಮತ್ತೆ ಮತ್ತೆ ಆಗುತ್ತವೆ. ಆದರೆ ಕುಂತಿಯ ಪುತ್ರನಾದ ಅರ್ಜುನನೆ, ನನ್ನ ನಿವಾಸವನ್ನು ಸೇರಿದವನಿಗೆ ಪುನರ್ಜನ್ಮವಿಲ್ಲ.
ಭಾವರ್ಥ: ಕರ್ಮಯೋಗಿಗಳು, ಜ್ಞಾನಯೋಗಿಗಳು, ಹಠಯೋಗಿಗಳು ಮೊದಲಾದ ಎಲ್ಲ ಬಗೆಯ ಯೋಗಿಗಳು ಕೃಷ್ಣನ ದಿವ್ಯ ಆವಾಸಕ್ಕೆ ಹೋಗಿ ಮತ್ತೆ ಬರದಂತೆ ಆಗಬೇಕಾದರೆ ಕಡೆಗೆ ಅವರು ಭಕ್ತಿಯೋಗದಲ್ಲಿ ಅಥವಾ ಕೃಷ್ಣಪ್ರಜ್ಞೆಯಲ್ಲಿ ಭಕ್ತಿಯ ಪರಿಪೂರ್ಣತೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ದೇವತೆಗಳ ಲೋಕಗಳು ಅತ್ಯುನ್ನತ ಐಹಿಕ ಲೋಕಗಳು. ಅವುಗಳನ್ನು ತಲಪಿದವರು ಮತ್ತೆ ಮತ್ತೆ ಹುಟ್ಟು ಸಾವುಗಳನ್ನು ಅನುಭವಿಸಬೇಕಾಗುತ್ತದೆ. ಭೂಲೋಕದ ಜನರು ಮೇಲಿನ ಲೋಕಗಳಿಗೆ ಏರಿದಂತೆ ಬ್ರಹ್ಮಲೋಕ, ಚಂದ್ರಲೋಕ ಮತ್ತು ಇಂದ್ರಲೋಕಗಳಂತಹ ಮೇಲಿನ ಲೋಕಗಳಲ್ಲಿರುವವರು ಭೂಮಿಗೆ ಬೀಳುತ್ತಾರೆ.
ಛಾಂದೋಗ್ಯೋಪನಿಷತ್ತಿನಲ್ಲಿ ಹೇಳಿರುವ ಪಂಚಾಗ್ನಿವಿದ್ಯಾ ಎನ್ನುವ ಯಜ್ಞವು ಮನುಷ್ಯನು ಬ್ರಹ್ಮಲೋಕವನ್ನು ತಲುವುದನ್ನು ಸಾಧ್ಯಮಾಡುತ್ತದೆ. ಆದರೆ ಬ್ರಹ್ಮಲೋಕದಲ್ಲಿ ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಳ್ಳದಿದ್ದರೆ ಅವನು ಮತ್ತೆ ಭೂಮಿಗೆ ಹಿಂದಿರುಗಬೇಕಾಗುತ್ತದೆ. ಮೇಲಿನ ಲೋಕಗಳಲ್ಲಿ ಕೃಷ್ಣಪ್ರಜ್ಞೆಯಲ್ಲಿ ಮುಂದುವರಿದವರನ್ನು ಕ್ರಮೇಣ ಇನ್ನೂ ಮೇಲಿನ ಲೋಕಗಳಿಗೆ ಏರಿಸಲಾಗುವುದು. ವಿಶ್ವಪ್ರಳಯದ ಕಾಲದಲ್ಲಿ ಅವರನ್ನು ನಿತ್ಯ ಅಧ್ಯಾತ್ಮಿಕ ರಾಜ್ಯಕ್ಕೆ ವರ್ಗಾಯಿಸಲಾಗುವುದು. ಭಗವದ್ಗೀತೆಯ ಮೇಲಿನ ಭಾಷ್ಯದಲ್ಲಿ ಶ್ರೀಧರಸ್ವಾಮಿಗಳು ಈ ಶ್ಲೋಕವನ್ನು ಉಲ್ಲೇಖಿಸುತ್ತಾರೆ -
ಬ್ರಹ್ಮಣಾ ಸಹ ತೇ ಸರ್ವೇ ಸಮ್ಪ್ರಾಪ್ತೇ ಪ್ರತಿಸಞ್ಚರೇ |
ಪರಸ್ಯಾನ್ತೇ ಕೃತಾತ್ಮನಃ ಪ್ರವಿಶನ್ತಿ ಪರಂ ಪದಮ್ ||
ಈ ಐಹಿಕ ಜಗತ್ತು ನಾಶವಾಗುವಾಗ ಕೃಷ್ಣಪ್ರಜ್ಞೆಯಲ್ಲಿ ಸದಾ ನಿರತರಾದ ಬ್ರಹ್ಮ ಮತ್ತು ಅವನ ಭಕ್ತರನ್ನು ಅವರವರ ಬಯಕೆಗಳಿಗನುಗುಣವಾಗಿ ಅಧ್ಯಾತ್ಮಿಕ ವಿಶ್ವಕ್ಕೆ ಮತ್ತು ನಿರ್ದಿಷ್ಟ ಅಧ್ಯಾತ್ಮಿಕ ಲೋಕಗಳಿಗೆ ವರ್ಗಾಯಿಸಲಾಗುವುದು.