Bhagavad Gita: ಮನುಷ್ಯ ಬದುಕಿನ ಮುನ್ನಡೆಗಾಗಿ ಭಗವಂತನ ಈ ಮಾರ್ಗದಲ್ಲಿ ಸಾಗಬೇಕು; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯ ಬದುಕಿನ ಮುನ್ನಡೆಗಾಗಿ ಭಗವಂತನ ಈ ಮಾರ್ಗದಲ್ಲಿ ಸಾಗಬೇಕು; ಗೀತೆಯ ಸಾರಾಂಶ ಹೀಗಿದೆ

Bhagavad Gita: ಮನುಷ್ಯ ಬದುಕಿನ ಮುನ್ನಡೆಗಾಗಿ ಭಗವಂತನ ಈ ಮಾರ್ಗದಲ್ಲಿ ಸಾಗಬೇಕು; ಗೀತೆಯ ಸಾರಾಂಶ ಹೀಗಿದೆ

Bhagavad Gita: ಮನುಷ್ಯ ಬದುಕಿನ ಮುನ್ನಡೆಗೆ ಭಗವಂತನ ಈ ಮಾರ್ಗದಲ್ಲಿ ಸಾಗಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ ಶ್ಲೋಕ 26ರಲ್ಲಿನ ಮುಂದುವರಿದ ಭಾಗದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 26

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ |

ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ||26||

ಅನುವಾದ: ಯಾರಾದರೂ ನನಗೆ ಪ್ರೀತಿ ಮತ್ತು ಭಕ್ತಿಗಳಿಂದ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ಒಂದಿಷ್ಟು ನೀರನ್ನು ಅರ್ಪಿಸಿದರೆ ನಾನು ಅದನ್ನು ಸ್ವೀಕರಿಸುತ್ತೇನೆ.

9ನೇ ಅಧ್ಯಾಯದ 26ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ಕೃಷ್ಣನನ್ನು ಪ್ರೀತಿಸುವವನು ಅವನಿಗೆ ಏನು ಬೇಕಾದರೂ ಕೊಡುತ್ತಾನೆ ಮತ್ತು ಅಪೇಕ್ಷಣೀಯವಲ್ಲದ ಅಥವಾ ಕೃಷ್ಣನು ಕೇಳಿರದ ಏನನ್ನೇ ಆಗಲಿ ಅರ್ಪಿಸುವುದಿಲ್ಲ. ಆದುದರಿಂದ ಕೃಷ್ಣಿಗೆ ಮಾಂಸವನ್ನು, ಮೀನನ್ನು, ಮೊಟ್ಟೆಗಳನ್ನು ಅರ್ಪಿಸಬಾರದು. ಅವನಿಗೆ ಇಂತಹ ಕಾಣಿಕೆಗಳು ಬೇಕಾಗಿದ್ದರೆ ಅವನು ಹಾಗೆ ಹೇಳುತ್ತಿದ್ದ. ಅದರ ಬದಲು ಸ್ಪಷ್ಟವಾಗಿ ಒಂದು ಎಲೆ, ಹಣ್ಣು, ಹೂವು ಮತ್ತು ನೀರನ್ನು ಅರ್ಪಿಸಬೇಕೆಂದು ಹೇಳುತ್ತಾನೆ. ಆದುದರಿಂದ ಆತನು ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಸ್ವೀಕರಿಸುವುದಿಲ್ಲ ಎಂದು ನಾವು ತಿಳಿದುಕೊಳ್ಳಬೇಕು.

ಮನುಷ್ಯರಿಗೆ ಯೋಗ್ಯವಾದ ಆಹಾರಗಳೆಂದರೆ ತರಕಾರಿಗಳು, ಧ್ಯಾನ್ಯಗಳು, ಹಣ್ಣುಗಳು, ಹಾಲು ಮತ್ತು ನೀರು. ಶ್ರೀಕೃಷ್ಣನೇ ಹೀಗೆಂದು ವಿಧಿಸಿದ್ದಾನೆ. ಇವನ್ನು ಬಿಟ್ಟು ನಾವು ಏನನ್ನು ತಿನ್ನುತ್ತೇವೆಯೋ ಅದನ್ನೆಲ್ಲ ಕೃಷ್ಣನಿಗೆ ನೈವೇದ್ಯ ಮಾಡಲಾಗದು. ಏಕೆಂದರೆ ಆತನು ಅದನ್ನು ಸ್ವೀಕರಿಸುವುದಿಲ್ಲ. ಆದುದರಿಂದ ನಾವು ಇಂತಹ ಆಹಾರಗಳನ್ನು ನೈವೇದ್ಯ ಮಾಡಿದರೆ ಪ್ರೀತಿಪೂರ್ವಕ ಭಕ್ತಿಯ ಮಟ್ಟದಲ್ಲಿ ನಡೆದುಕೊಳ್ಳಲಾಗುವುದಿಲ್ಲ.

ಮೂರನೆಯ ಅಧ್ಯಾಯದ ಹದಿಮೂರನೆಯ ಶ್ಲೋಕದಲ್ಲಿ ಶ್ರೀಕೃಷ್ಣನು ಯಜ್ಞಶೇಷ ಮಾತ್ರವೇ ಪರಿಶುದ್ಧ ಎಂದು ಹೇಳುತ್ತಾನೆ. ಬದುಕಿನಲ್ಲಿ ಮುನ್ನಡೆದು ಐಹಿಕ ತೊಡಕುಗಳ ಮುಷ್ಟಿಯಿಂದ ಬಿಡುಗಡೆ ಬಯಸುವವರಿಗೆ ಇದು ಯೋಗ್ಯಆಹಾರ ಎಂದು ವಿವರಿಸಿದ್ದಾನೆ. ಇದೇ ಶ್ಲೋಕದಲ್ಲಿ ತಮ್ಮ ಆಹಾರವನ್ನು ನೈವೇದ್ಯ ಮಾಡದಿರುವವರು ಪಾಪವನ್ನೇ ತಿನ್ನುತ್ತಾರೆ ಎಂದು ಹೇಳಿದ್ದಾನೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಪ್ರತಿಯೊಂದು ತುತ್ತೂ, ಐಹಿಕ ಪ್ರಕೃತಿಯ ಜಟಿಲತೆಗಳಲ್ಲಿ ಅವರು ಸಿಕ್ಕಿಕೊಂಡಿರುವುದನ್ನು ಇನ್ನೂ ಆಳಮಾಡುತ್ತದೆ. ಆದರೆ ಒಳ್ಳೆಯ ಸರಳವಾದ ತರಕಾರಿಯ ತಿನಿಸುಗಳನ್ನು ಸಿದ್ಧಮಾಡಿ ಶ್ರೀಕೃಷ್ಣನ ಚಿತ್ರ ಅಥವಾ ವಿಗ್ರಹಕ್ಕೆ ಅರ್ಪಿಸಿ ತಲೆಬಾಗಿ ಇಂತಹ ವಿನೀತ ನೈವೇದ್ಯವನ್ನು ಒಪ್ಪಿಸಿಕೊಳ್ಳಬೇಕೆಂದು ಅವನನ್ನು ಪ್ರಾರ್ಥಿಸಬೇಕು. ಇದರಿಂದ ಮನುಷ್ಯನು ಒಂದೇ ಸಮನೆ ಬದುಕಿನಲ್ಲಿ ಮುನ್ನಡೆಯಬಹುದು.

ಕೃಷ್ಣನ ವಿಷಯದಲ್ಲಿ ಇದೇ ಮುಖ್ಯವಾದ ಅಂಶ

ದೇಹವನ್ನು ಪರಿಶುದ್ಧ ಮಾಡಿಕೊಳ್ಳಬಹುದು ಮತ್ತು ಸ್ಪಷ್ಟವಾಗಿ ಯೋಜನೆ ಮಾಡುವುದನ್ನು ಸಾಧ್ಯಮಾಡುವ ಸೊಗಸಾದ ಮೆದುಳಿನ ಅಂಗಾಂಶಗಳನ್ನು ಸೃಷ್ಟಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಪ್ರೇಮಪೂರ್ವಕವಾಗಿ ನೈವೇದ್ಯವನ್ನು ಅರ್ಪಿಸಬೇಕು. ಇರುವುದೆಲ್ಲವೂ ಕೃಷ್ಣನ ಸ್ವತ್ತೇ, ಆದದರಿಂದ ಆತನಿಗೆ ನೈವೇದ್ಯದ ಅಗತ್ಯವಿಲ್ಲ. ಆದರೂ ಈ ರೀತಿಯಲ್ಲಿ ಆತನನ್ನು ಸಂತೋಷಪಡಿಸಿದವನ ಕಾಣಿಕೆಯನ್ನು ಆತನು ಸ್ವೀಕರಿಸುತ್ತಾನೆ. ಅಡಿಗೆ ಮಾಡುವುದರಲ್ಲಿ, ಬಡಿಸುವುದರಲ್ಲಿ ಮತ್ತು ನೈವೇದ್ಯ ಮಾಡುವುದರಲ್ಲಿ ಮುಖ್ಯವಾದ ಅಂಶವೆಂದರೆ ಕೃಷ್ಣನ ವಿಷಯದಲ್ಲಿ ಪ್ರೇಮದಿಂದ ನಡೆದುಕೊಳ್ಳುವುದು.

ನಿರಾಕಾರವಾದಿಗಳಾದ ತತ್ವಜ್ಞಾನಿಗಳು ಪರಮಸತ್ಯಕ್ಕೆ ಇಂದ್ರಿಯಗಳಿಲ್ಲ ಎಂದೇ ಸಾಧಿಸಲು ಬಯಸುತ್ತಾರೆ. ಅವರಿಗೆ ಭಗವದ್ಗೀತೆಯ ಈ ಶ್ಲೋಕವು ಅರ್ಥವಾಗುವುದಿಲ್ಲ. ಅವರಿಗೆ ಇದೊಂದು ಉಪಮಾನ. ಅಥವಾ ಭಗವದ್ಗೀತೆಯ ವಕ್ತಾರನಾದ ಕೃಷ್ಣನು ಈ ಪ್ರಪಂಚದವನು ಎನ್ನುವುದಕ್ಕೆ ಸಾಕ್ಷಿ. ಆದರೆ ವಾಸ್ತವವಾಗಿ ಪರಮ ದೇವೋತ್ತಮನಾದ ಕೃಷ್ಣನಿಗೆ ಇಂದ್ರಿಯಗಳಿವೆ. ಅವನ ಇಂದ್ರಿಯಗಳು ಅದಲು ಬದಲಾಗಬಲ್ಲವು ಎಂದು ಹೇಳಿದೆ. ಎಂದರೆ ಒಂದು ಇಂದ್ರಿಯವು ಬೇರೆ ಯಾವುದೇ ಇಂದ್ರಿಯದ ಕಾರ್ಯವನ್ನು ಮಾಡಬಲ್ಲದು. ಕೃಷ್ಣನು ಪರಿಪೂರ್ಣನು ಎಂದು ಹೇಳಿದಾಗ ಇದೇ ಅರ್ಥ. ಇಂದ್ರಿಯಗಳಿಲ್ಲದಿದ್ದರೆ ಆತನು ಎಲ್ಲ ಬಗೆಯ ಸಿರಿಗಳಲ್ಲಿ ಸಂಪೂರ್ಣನಾಗಿದ್ದಾನೆ ಎಂದು ಭಾವಿಸಲು ಸಾಧ್ಯವಿಲ್ಲ. ಏಳನೆಯ ಅಧ್ಯಾಯದಲ್ಲಿ ಕೃಷ್ಣನು ತಾನು ಜೀವಿಗಳನ್ನು ಐಹಿಕ ಪ್ರಕೃತಿಯಲ್ಲಿ ಸೇರಿಸುತ್ತೇನೆ ಎಂದು ವಿವರಿಸಿದ್ದಾನೆ.

ಐಹಿಕ ಪ್ರಕೃತಿಯತ್ತ ನೋಡುವುದರಿಂದ ಇದನ್ನು ಮಾಡುತ್ತಾನೆ. ಆದುದರಿಂದ ಈ ಸಂದರ್ಭದಲ್ಲಿ ಕೃಷ್ಣನು ನೈವೇದ್ಯವನ್ನರ್ಪಿಸುವ ಭಕ್ತನ ಪ್ರೇಮಪೂರ್ವಕ ಮಾತುಗಳನ್ನು ಕೇಳುವುದು, ಆತನು ತಿನ್ನುವುದು ಮತ್ತು ವಾಸ್ತವವಾಗಿ ಸವಿಯುವುದು ಇವುಗಳೊಡನೆ ಸಂಪೂರ್ಣವಾಗಿ ಒಂದಾಗಿರುತ್ತದೆ. ಈ ವಿಷಯವನ್ನು ಒತ್ತಿ ಹೇಳಬೇಕು - ಅವನ ಪರಿಪೂರ್ಣ ಸ್ಥಾನದ ಕಾರಣದಿಂದ ಆತನು ಕೇಳುವುದು, ಆತನು ತಿನ್ನುವುದು ಮತ್ತು ಸವಿಯುವುದು ಎಲ್ಲ ಸಂಪೂರ್ಣವಾಗಿ ಒಂದೇ. ಯಾವುದೇ ವ್ಯಾಖ್ಯಾನವಿಲ್ಲದೆ ಕೃಷ್ಣನು ತನ್ನನ್ನು ವರ್ಣಿಸಿಕೊಳ್ಳುವ ಹಾಗೆ ಆತನನ್ನು ಒಪ್ಪಿಕೊಳ್ಳುವ ಭಕ್ತನು ಮಾತ್ರ ಪರಮ ಪರಿಪೂರ್ಣ ಸತ್ಯವು ಆಹಾರವನ್ನು ತಿನ್ನಬಲ್ಲದು ಮತ್ತು ಸವಿಯಬಲ್ಲದು ಎಂದು ಅರ್ಥಮಾಡಿಕೊಳ್ಳಬಲ್ಲ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.