ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಕ್ತ ಮತ್ತು ಭಗವಂತನ ನಡುವೆ ಇರುವ ಪರಸ್ಪರ ದಿವ್ಯಪ್ರೀತಿ ಹೇಗಿದೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಕ್ತ ಮತ್ತು ಭಗವಂತನ ನಡುವೆ ಇರುವ ಪರಸ್ಪರ ದಿವ್ಯಪ್ರೀತಿ ಹೇಗಿದೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಕ್ತ ಮತ್ತು ಭಗವಂತನ ನಡುವೆ ಇರುವ ಪರಸ್ಪರ ದಿವ್ಯಪ್ರೀತಿ ಹೇಗಿದೆ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 39, 41 ಹಾಗೂ 42ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 39

ವಾಯುರ್ಯಮೋಗ್ನಿರ್ವರುಣಃ ಶಶಾಂಕಃ

ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ |

ನಮೋ ನಮಸ್ತೇಸ್ತು ಸಹಸ್ರಕೃತ್ವಃ

ಪುನಶ್ಚ ಭೂಯೋಪಿ ನಮೋ ನಮಸ್ತೇ ||39||

ಅನುವಾದ: ನೀವೇ ವಾಯುವು, ನೀನೇ ಯಮ, ನೀನೇ ಅಗ್ನಿ, ನೀನೇ ಜಲ, ನೀನೇ ಚಂದ್ರನು. ನೀನು ಪ್ರಥಮ ಜೀವಿಯಾದ ಬ್ರಹ್ಮ. ನೀನು ಪ್ರಪಿತಾಮಹ. ನಿನಗೆ ಸಹಸ್ರ ಬಾರಿ ಗೌರವದಿಂದ ಪ್ರಣಾಮ ಮಾಡುತ್ತೇನೆ. ಮತ್ತೆ ಮತ್ತೆ ನಿನಗೆ ನಮಸ್ಕಾರ.

ಭಾವಾರ್ಥ: ಪ್ರಭುವನ್ನು ಇಲ್ಲಿ ವಾಯು ಎಂದು ಸಂಬೋಧಿಸಿದೆ. ಏಕೆಂದರೆ ವಾಯುವು ಎಲ್ಲ ದೇವತೆಗಳಲ್ಲಿ ಅತ್ಯಂತ ಮುಖ್ಯವಾದ ಸ್ವರೂಪ. ಅದು ಎಲ್ಲೆಲ್ಲಿಯೂ ಇದೆ. ಅರ್ಜುನನು ಕೃಷ್ಣನನ್ನು ಪ್ರಪಿತಾಮಹನೆಂದೂ ಸಂಬೋಧಿಸುತ್ತಾನೆ. ಏಕೆಂದರೆ ಅವನು ವಿಶ್ವದ ಪ್ರಥಮ ಜೀವಿಯಾದ ಬ್ರಹ್ಮನ ತಂದೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 41-42

ಸಖೇತಿ ಮತ್ವಾ ಪ್ರಸಭಂ ಯದುಕ್ತಮ್

ಹೇ ಕೃಷ್ಣ ಹೇ ಯಾದವ ಹೇ ಸಖೇತಿ |

ಅಜಾನತಾ ಮಹಿಮಾನಂ ತವೇದಮ್

ಮಯಾ ಪ್ರಮಾದಾತ್ ಪ್ರಣಯೇನ ವಾಪಿ ||41||

ಯಚ್ಚಾವಹಾಸಾರ್ಥಮಸತ್ಕೃತೋಸಿ

ವಿಹಾರಶಯ್ಯಾಸನಭೋಜನೇಷು |

ಏಕೋಥವಾಪ್ಯಚ್ಯುತ ತತ್ಸಮಕ್ಷಮ್

ತತ್ ಕ್ಷಾಮಯೇ ತ್ವಾಮಹಮಪ್ರಮೇಯಮ್ ||42||

ಅನುವಾದ: ನಿನ್ನ ಮಹಿಮೆಗಳನ್ನು ತಿಳಿಯದೆ, ನೀನು ನನ್ನ ಸಖನೆಂದು ಭಾವಿಸಿ, ಯೋಚನೆ ಮಾಡದೆ ನಿನ್ನನ್ನು ಕೃಷ್ಣಾ, ಯಾದವ, ಏ ಗೆಳೆಯಾ ಎಂದೆಲ್ಲ ಕರೆದಿದ್ದೇನೆ. ಪ್ರಮಾದದಿಂದಾಗಲಿ ಪ್ರೀತಿಯಿಂದಾಗಲಿ ನಾನು ಮಾಡಿರುವ ಅಪರಾಧಗಳನ್ನು ಕ್ಷಮಿಸು. ವಿಹಾರದಲ್ಲಿ, ಒಂದೇ ಹಾಸಿಗೆಯಲ್ಲಿ ಮನಗಿದ್ದಾಗ, ನಾವಿಬ್ಬರೇ ಇದ್ದಾಗ, ಸ್ನೇಹಿತರ ಮುಂದೆ ನಾನು ನಿನ್ನನ್ನು ಅನೇಕ ಬಾರಿ ಅಪಹಾಸ್ಯ ಮಾಡಿದ್ದೇನೆ. ಅಚ್ಯುತನೇ, ಇವೆಕ್ಕೆಲ್ಲ ನಾನು ನಿನ್ನ ಕ್ಷಮೆ ಬೇಡುತ್ತೇನೆ.

ಭಾವಾರ್ಥ: ಕೃಷ್ಣನು ತನ್ನ ವಿಶ್ವರೂಪದಲ್ಲಿ ಅರ್ಜುನನ ಮುಂದೆ ಪ್ರಕಟನಾದರೂ, ಅರ್ಜುನನು ಕೃಷ್ಣನೊಡನೆ ತನ್ನ ಗೆಳೆತನದ ಸಂಬಂಧವನ್ನು ಸ್ಮರಿಸಿಕೊಂಡು ಕ್ಷಮೆ ಬೇಡುತ್ತಾನೆ. ಸ್ನೇಹದಿಂದ ಮಾಡುವ ಸಲಿಗೆಯ ಹಲವು ರೀತಿಗಳಿಗಾಗಿ ತನ್ನನ್ನು ಕ್ಷಮಿಸುವಂತೆ ಕೇಳಿಕೊಳ್ಳುತ್ತಾನೆ. ಕೃಷ್ಣನು ತನ್ನ ಆತ್ಮೀಯ ಸುಖನಾಗಿ ಎಲ್ಲವನ್ನೂ ವಿವರಿಸಿದ್ದರೂ, ಅವನು ಇಂತಹ ವಿಶ್ವರೂಪವನ್ನು ಧರಿಸಬಲ್ಲ ಎಂದು ತನಗೆ ತಿಳಿದಿರಲಿಲ್ಲ ಎಂದು ಒಪ್ಪಿಕೊಳ್ಳುತ್ತಾನೆ.

ಕೃಷ್ಣನ ಸಿರಿಯನ್ನು ಗುರುತಿಸದೆ, ಅವನನ್ನು ಗೆಳೆಯಾ, ಕೃಷ್ಣಾ, ಯಾದವಾ ಎಂದು ಸಂಬೋಧಿಸಿ ಎಷ್ಟು ಬಾರಿ ಅವನಿಗೆ ಅಪಮಾನ ಮಾಡಿರುವನೋ ಅರ್ಜುನನಿಗೆ ತಿಳಿಯದು. ಆದರೆ ಕೃಷ್ಣನು ಎಷ್ಟು ದಯಾಮಯ ಮತ್ತು ಕರುಣಾಳು ಎಂದರೆ ಇಷ್ಟು ಸಿರಿ ಇದ್ದೂ ಅರ್ಜುನನೊಡನೆ ಗೆಳೆಯನಾಗಿ ಆಡಿದ.

ಭಕ್ತ ಮತ್ತು ಭಗವಂತರ ನಡುವೆ ಇರುವ ಪರಸ್ಪರ ದಿವ್ಯಪ್ರೀತಿ ಇಂತಹದು. ಜೀವಿ ಮತ್ತು ಕೃಷ್ಣನ ನಡುವಣ ಬಾಂಧವ್ಯವು ನಿರಂತರವಾದ್ದದು. ಅರ್ಜುನನ ವರ್ತನೆಯಲ್ಲಿ ನಾವು ಕಾಣುವಂತೆ, ಅದನ್ನು ಮರೆಯಲು ಸಾಧ್ಯವಿಲ್ಲ. ಅರ್ಜುನನು ವಿಶ್ವರೂಪದ ಸಿರಿಯನ್ನು ಕಂಡಿದ್ದರೂ ಕೃಷ್ಣನೊಡನೆ ತನಗಿರುವ ಸ್ನೇಹದ ಸಂಬಂಧವನ್ನು ಅವನು ಮರೆಯಲಾರ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.