ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನಸ್ಸನ್ನು ಅನಗತ್ಯ ಯೋಚನೆಗಳಿಂದ ದೂರವಿಟ್ಟರೆ ಇದಕ್ಕೆ ಶ್ರಮ ಎಂದು ಹೆಸರು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಮನಸ್ಸನ್ನು ಅನಗತ್ಯ ಯೋಚನೆಗಳಿಂದ ದೂರವಿಟ್ಟರೆ ಇದಕ್ಕೆ ಶ್ರಮ ಎಂದು ಹೆಸರು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಮನಸ್ಸನ್ನು ಅನಗತ್ಯ ಯೋಚನೆಗಳಿಂದ ದೂರವಿಟ್ಟರೆ ಇದಕ್ಕೆ ಶ್ರಮ ಎಂದು ಹೆಸರು ಎಂಬುದರ ಅರ್ಥವನ್ನು ಭಗವದ್ಗೀತೆಯ 10 ಅಧ್ಯಾಯದ ಶ್ಲೋಕ 4 ಮತ್ತು 5ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ - ಶ್ಲೋಕ 4-5

ಬುದ್ಧಿರ್ಜ್ಞಾನಮಸಮ್ಮೋಹಃ ಕ್ಷಮಾ ಸತ್ಯಂ ದಮಃ ಶಮಃ|

ಸುಖಂ ದುಃಖಂ ಭವೋಭಾವೋ ಭಯಂ ಚಾಭಯಮೇ ಚ||4||

ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋಯಶಃ|

ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್‌ವಿಧಾಃ ||5||

ಭಗವದ್ಗೀತೆಯ 10 ಅಧ್ಯಾಯದ ಶ್ಲೋಕ 4 ಮತ್ತು 5ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ಇಂದ್ರಿಯ ನಿಗ್ರಹ ಎಂದರೆ ಇಂದ್ರಿಯಗಳನ್ನು ಅನಗತ್ಯವಾದ ವೈಯಕ್ತಿಕ ಭೋಗಕ್ಕಾಗಿ ಬಳಸಬಾರದು. ಇಂದ್ರಿಯಗಳ ಯೋಗ್ಯವಾದ ಅಗತ್ಯಗಳನ್ನು ತೃಪ್ತಿಪಡಿಸುವುದು ನಿಷಿದ್ಧವಲ್ಲ. ಆದರೆ ಅನಗತ್ಯ ಇಂದ್ರಿಯ ಸುಖವು ಅಧ್ಯಾತ್ಮಿಕ ಮುನ್ನಡೆಗೆ ಅಡ್ಡಿ ಉಂಟುಮಾಡುತ್ತದೆ. ಆದುದರಿಂದ ಇಂದ್ರಿಯಗಳ ಅನಗತ್ಯ ಬಳಕೆಗೆ ಕಡಿವಾಣ ಹಾಕಬೇಕು. ಹಾಗೆಯೇ ಮನಸ್ಸನ್ನು ಅನಗತ್ಯ ಯೋಚನೆಗಳಿಂದ ದೂರವಿಡಬೇಕು. ಇದಕ್ಕೆ ಶಮ ಎಂದು ಹೆಸರು. ಹಣವನ್ನು ಸಂಪಾದಿಸುವುದನ್ನು ಕುರಿತು ಯೋಚಿಸುತ್ತ ಕಾಲವನ್ನು ಕಳೆಯಬಾರದು.

ಹಾಗೆ ಮಾಡುವುದು ಯೋಚನಾಶಕ್ತಿಯ ದುರುಪಯೋಗ. ಮನುಷ್ಯನ ಪ್ರಧಾನ ಅಗತ್ಯವನ್ನು ಅರ್ಥಮಾಡಿಕೊಳ್ಳಲು ಮನಸ್ಸನ್ನು ಬಳಸಬೇಕು. ಅದನ್ನು ಅಧಿಕಾರಯುತವಾಗಿ ನಿರೂಪಿಸಬೇಕು. ಧರ್ಮಗ್ರಂಥಗಳ ವಿಷಯದಲ್ಲಿ ಅಧಿಕಾರಿಗಳಾದವರು, ಸಾಧುಜನರು, ಗುರುಗಳು ಮತ್ತು ಧೀಮಂತರ ಸಹವಾಸದಲ್ಲಿ ಯೋಚನಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಕೃಷ್ಣಪ್ರಜ್ಞೆಯ ಅಧ್ಯಾತ್ಮಿಕ ಜ್ಞಾನದ ಬೆಳವಣಿಗೆಗೆ ಯಾವುದು ನೆರವಾಗುವುದೋ ಅದರಲ್ಲಿ ಯಾವಾಗಲೂ ಸುಖವನ್ನು ಕಾಣಬೇಕು. ಕೃಷ್ಣಪ್ರಜ್ಞೆಯ ಬೆಳವಣಿಗೆಗೆ ಪ್ರತಿಕೂಲವಾಗುವುದು ದುಃಖಕರವಾದದ್ದು. ಕೃಷ್ಣಪ್ರಜ್ಞೆಯ ಬೆಳವಣಿಗೆಗೆ ನೆರವಾಗುವುದನ್ನು ಸ್ವೀಕರಿಸಬೇಕು. ಪ್ರತಿಕೂಲವಾದದ್ದನ್ನು ತಿರಸ್ಕರಿಸಬೇಕು.

ಭವ, ಹುಟ್ಟು, ಎನ್ನುವುದು ದೇಹಕ್ಕೆ ಸಂಬಂಧಿಸಿದ್ದು ಎಂದು ಅರ್ಥಮಾಡಿಕೊಳ್ಳಬೇಕು. ಆತ್ಮದ ಮಟ್ಟಿಗೆ ಹುಟ್ಟೂ ಇಲ್ಲ, ಸಾವೂ ಇಲ್ಲ. ಇದನ್ನು ಭಗವದ್ಗೀತೆಯ ಪ್ರಾರಂಭದಲ್ಲಿ ಚರ್ಚಿಸಿದ್ದೇವೆ. ಹುಟ್ಟು ಸಾವುಗಳು ಈ ಐಹಿಕ ಜಗತ್ತಿನಲ್ಲಿ ಮನುಷ್ಯನು ಪಡೆದ ದೇಹಕ್ಕೆ ಸಂಬಂಧಿಸಿದವು. ಭವಿಷ್ಯವನ್ನು ಕುರಿತ ತಳಮಳದಿಂದ ಭಯ ಬರುತ್ತದೆ. ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನಿಗೆ ಭಯವಿಲ್ಲ. ಏಕೆಂದರೆ ಆತನ ಚಟುವಟಿಕೆಗಳ ಫಲವಾಗಿ ಅವನು ಅಧ್ಯಾತ್ಮಿಕ ಗಗನಕ್ಕೆ, ಮತ್ತೆ ಭಗವದ್ಧಾಮಕ್ಕೆ ಹೋಗುವುದು ಖಂಡಿತ. ಆದುದರಿಂದ ಅವನ ಭವಿಷ್ಯ ಉಜ್ವಲವಾದದ್ದು. ಇತರರಿಗೆ ಭವಿಷ್ಯದಲ್ಲಿ ಏನು ಅಡಗಿದೆ ಎಂದು ತಿಳಿಯದು. ಮುಂದಿನ ಜನ್ಮದಲ್ಲಿ ಏನು ಅಡಗಿದೆ ಎಂದು ತಿಳಿಯದು. ಆದುದರಿಂದ ಅವರಿಗೆ ಸದಾ ಆತಂಕ. ಆತಂಕದಿಂದ ನಮಗೆ ಬಿಡುಗಡೆಯಾಗಲು ಅತ್ಯುತ್ತಮ ದಾರಿ ಎಂದರೆ ಕೃಷ್ಣನನ್ನು ಅರ್ಥ ಮಾಡಿಕೊಂಡು ಸದಾ ಕೃಷ್ಣಪ್ರಜ್ಞೆಯಲ್ಲಿ ನೆಲೆಯಾಗಿರುವುದು. ಆಗ ನಾವು ಎಲ್ಲ ಭಯದಿಂದ ಮುಕ್ತರಾಗುತ್ತೇವೆ.

ಶ್ರೀಮದ್ಭಾಗವದಲ್ಲಿ (11.2.37) ಭಯಂ ದ್ವಿತೀಯಾಭಿನಿವೇಶತಃ ಸ್ಯಾತ್ ಎಂದು ಹೇಳಿದೆ - ಹೀಗೆಂದರೆ, ನಾವು ಮಾಯಾಶಕ್ತಿಯಲ್ಲಿ ತನ್ಮಯರಾಗಿರುವುದು ಭಯದ ಕಾರಣದಿಂದ ಎಂದರ್ಥ. ಆದರೆ ಎಲ್ಲ ಮಾಯಾಶಕ್ತಿಯಿಂದ ಬಿಡುಗಡೆ ಹೊಂದಿದವರು, ತಾವು ಭೌತಿಕ ದೇಹವಲ್ಲ ಎಂಬ ವಿಶ್ವಾಸ ಇರುವವರು, ತಾವು ದೇವೋತ್ತಮ ಪರಮ ಪುರುಷನ ವಿಭಿನ್ನಾಂಶಗಳು ಎಂಬ ನಂಬಿಕೆ ಇರುವವರು, ಈ ಕಾರಣದಿಂದ ಪರಮ ಪ್ರಭುವಿನ ದಿವ್ಯ ಸೇವೆಯಲ್ಲಿ ನಿರತರಾದವರು ಭಯಪಡಲು ಕಾರಣವೇ ಇಲ್ಲ. ಅವರ ಭವಿಷ್ಯವು ಬಹಳ ಉಜ್ವಲ. ಕೃಷ್ಣಪ್ರಜ್ಞೆಯಲ್ಲಿ ಇಲ್ಲದವರ ಒಂದು ಸ್ಥಿತಿ ಈ ಭಯ. ಅಭಯಮ್, ಭಯವಿಲ್ಲದಿರುವುದು, ಕೃಷ್ಣಪ್ರಜ್ಞೆಯಲ್ಲಿ ಇರುವವರಿಗೆ ಮಾತ್ರ ಸಾಧ್ಯ. ಅಹಿಂಸಾ ಎಂದರೆ ಇತರರಿಗೆ ದುಃಖ ಅಥವಾ ಗೊಂದಲವನ್ನು ಉಂಟುಮಾಡುವ ಏನನ್ನೂ ಮಾಡಬಾರದು ಎಂದು ಅರ್ಥ.

ಎಷ್ಟೋ ಮಂದಿ ರಾಜಕಾರಣಿಗಳು, ಸಮಾಜಶಾಸ್ತ್ರಜ್ಞರು, ಪರೋಕಾರಿಗಳು ಇವರೆಲ್ಲ ಭರವಸೆ ನೀಡುವ ಐಹಿಕ ಕಾರ್ಯಗಳು ಒಳ್ಳೆಯ ಫಲಿತಾಂಶವನ್ನು ನೀಡುವುದಿಲ್ಲ. ಏಕೆಂದರೆ ರಾಜಕಾರಣಿಗಳಿಗೂ ಪರೋಪಕಾರಿಗಳಿಗೂ ಅಧ್ಯಾತ್ಮಿಕ ದರ್ಶನವಿಲ್ಲ. ಮಾನವ ಸಮಾಜಕ್ಕೆ ನಿಜವಾಗಿ ಕಲ್ಯಾಣ ಮಾಡುವುದು ಯಾವುದು ಎಂದು ಅವರಿಗೆ ತಿಳಿಯದು. ಅಹಿಂಸಾ ಎಂದರೆ, ಮನುಷ್ಯ ದೇಹದ ಸಂಪೂರ್ಣ ಬಳಕೆಯನ್ನು ಸಾಧಿಸುವಂತೆ ಜನರಿಗೆ ಶಿಕ್ಷಣ ಕೊಡಬೇಕು ಎಂದು ಅರ್ಥ. ಮಾನವ ದೇಹ ಇರುವುದು ಅಧ್ಯಾತ್ಮಿಕ ಸಾಕ್ಷಾತ್ಕಾರಕ್ಕಾಗಿ. ಆದುದರಿಂದ ಈ ಗುರಿಗೆ ನೆರವಾಗದ ಯಾವುದೇ ಚಲನೆ ಅಥವಾ ಕ್ರಿಯೆಯೂ ಮನುಷ್ಯ ದೇಹದ ಹಿಂಸೆ. ಒಟ್ಟಿನಲ್ಲಿ ಜನರ ಭವಿಷ್ಯ ಅಧ್ಯಾತ್ಮಿಕ ಸುಖವನ್ನು ಹೆಚ್ಚಿಸುವುದಕ್ಕೆ ಕಾರಣವಾಗುವುದನ್ನು ಅಹಿಂಸೆ ಎಂದು ಕರೆಯುತ್ತಾರೆ.