Bhagavad Gita: ಇಂದ್ರಿಯಗಳ ನಿಯಂತ್ರಣಕ್ಕೆ ಅಷ್ಟಾಂಗಯೋಗಕ್ಕಿಂತ ಭಗವಂತನ ಸೇವೆಯೇ ಉತ್ತಮ ಮಾರ್ಗ; ಗೀತೆಯ ಸಾರಾಂಶ ತಿಳಿಯಿರಿ
Bhagavad Gita Updesh: ಇಂದ್ರಿಯಗಳ ನಿಯಂತ್ರಣಕ್ಕೆ ಅಷ್ಟಾಂಗಯೋಗಕ್ಕಿಂತ ಭಗವಂತನ ಸೇವೆಯೇ ಉತ್ತಮ ಮಾರ್ಗ ಎಂಬುದರ ಅರ್ಥ ಭಗವದ್ಗೀತೆಯಲ್ಲಿ ಹೀಗಿದೆ.
ಅಧ್ಯಾಯ - 5 ಕರ್ಮಯೋಗ - ಕೃಷ್ಣಪ್ರಜ್ಞೆಯಲ್ಲಿ ಕಾರ್ಯ
ಶ್ಲೋಕ 27-28
ಸ್ಪರ್ಶಾನ್ ಕೃತ್ವಾ ಬಹಿರ್ಬಾಹ್ಯಾಂಶ್ಚಕ್ಷುಶ್ಚೈವಾನ್ತರೇ ಭ್ರುವೋಃ |
ಪ್ರಾಣಾಪಾನೌ ಸಮೌ ಕೃತ್ವಾ ನಾಸಾಭ್ಯನ್ತರಚಾರಿಣೌ ||27||
ಯತೇನ್ದ್ರಿಯಮನೋಬುದ್ಧಿ ಮುರ್ನಿರ್ಮೋಕ್ಷಪರಾಯಣಃ ||28||
Bhagavad Gita Updesh in Kannada: ಅಧ್ಯಾತ್ಮಿಕವಾದಿಯು ಹೊರಗಿರುವ ಇಂದ್ರಿಯ ವಿಷಯಗಳನ್ನು ದೂರಮಾಡಿ, ಕಣ್ಣುಗಳನ್ನೂ ದೃಷ್ಣಿಯನ್ನೂ ಎರಡು ಹುಬ್ಬುಗಳ ನಡುವೆ ಕೇಂದ್ರೀಕರಿಸಿ, ಶ್ವಾಸೋಚ್ವಾಸಗಳನ್ನು ಮೂಗಿನ ಹೊಳ್ಳಗಳಲ್ಲಿ ನಿಲ್ಲಿಸಿ ಆ ಮೂಲಕ ಮನಸ್ಸನ್ನೂ ಇಂದ್ರಿಯಗಳನ್ನೂ ಬುದ್ಧಿಯನ್ನೂ ನಿಯಂತ್ರಿಸಿ ಮೋಕ್ಷವನ್ನೇ ಗುರಿಯನ್ನಾಗಿ ಮಾಡಿಕೊಂಡಿರುತ್ತಾನೆ. ಇಂತಹ ಅಧ್ಯಾತ್ಮಿವಾದಿಯು ಆಸೆ, ಭಯ ಮತ್ತು ಕ್ರೋಧಗಳಿಂದ ಮುಕ್ತನಾಗುತ್ತಾನೆ. ಸದಾ ಈ ಸ್ಥಿತಿಯಲ್ಲಿರುವವನು ನಿಶ್ಚಯವಾಗಿಯೂ ಮುಕ್ತನಾದವನು.
ಕೃಷ್ಣಪ್ರಜ್ಞೆಯಲ್ಲಿ ನಿರತನಾದವನು ಕೂಡಲೇ ತನ್ನ ಅಧ್ಯಾತ್ಮಿಕ ಗುರುತನ್ನು ಕಂಡುಕೊಳ್ಳಬಹುದು. ಆಗ ಆತನು ಭಕ್ತಿಸೇವೆಯಿಂದ ಭಗವಂತನನ್ನು ಅರಿಯಬಹುದು. ಭಕ್ತಿಸೇವೆಯಲ್ಲಿ ಚೆನ್ನಾಗಿ ನೆಲೆಯನ್ನು ಕಂಡುಕೊಂಡ ಮನುಷ್ಯನು ಅಲೌಕಿಕ ಸ್ಥಿತಿಗೆ ಏರುತ್ತಾನೆ. ಆಗ ಆತನು ತನ್ನ ಕಾರ್ಯಕ್ಷೇತ್ರದಲ್ಲಿ ಭಗವಂತನ ಸಾನ್ನಿಧ್ಯವನ್ನು ಅನುಭವಿಸುವ ಯೋಗ್ಯತೆಯನ್ನು ಪಡೆದುಕೊಳ್ಳುತ್ತಾನೆ. ಈ ವಿಶಿಷ್ಟ ಸ್ಥಿತಿಯನ್ನು ಬ್ರಹ್ಮನಿರ್ವಾಣ ಎಂದು ಕರೆಯುತ್ತಾರೆ.
ಬ್ರಹ್ಮನಿರ್ವಾಣದ ತತ್ವಗಳನ್ನು ವಿವರಿಸಿದನಂತರ ಭಗವಂತನು ಅಷ್ಟಾಂಗ ಯೋಗ ಎನ್ನುವ ಯೋಗಾಭ್ಯಾಸದಿಂದ ಆ ಸ್ಥಿತಿಯನ್ನು ತಲಪುವುದು ಹೇಗೆ ಎಂದು ಅರ್ಜುನನಿಗೆ ಬೋಧಿಸುತ್ತಾನೆ. ಅಷ್ಟಾಂಗ ಯೋಗವನ್ನು ಎಂಟು ಬಗೆಯ ಕ್ರಮಗಳಲ್ಲಿ ವಿಭಾಗಿಸಬಹುದು. ಆ ಕ್ರಮಗಳಿಗೆ ಯಮ, ನಿಮಯ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಂದು ಹೆಸರು. ಆರನೆಯ ಅಧ್ಯಾಯದಲ್ಲಿ ಯೋಗದ ವಿಷಯವನ್ನು ಸ್ಪಷ್ಟವಾಗಿ ವಿವರಿಸಿದೆ. ಐದನೆಯ ಅಧ್ಯಾಯದ ಕೊನೆಯಲ್ಲಿ ಅದನ್ನು ಪೂರ್ವಭಾವಿಯಾಗಿ ಅಷ್ಟೆ ವಿವರಿಸಿದೆ.
ಯೋಗದಲ್ಲಿ ಪ್ರತ್ಯಾಹಾರ ಪ್ರಕ್ರಿಯೆಯಿಂದ ಶಬ್ದ, ಸ್ಪರ್ಶ, ರೂಪ, ರುಚಿ ಮತ್ತು ವಾಸನೆ ಮೊದಲಾದ ಇಂದ್ರಿಯ ವಿಷಯಗಳನ್ನು ದೂರವಿಡಬೇಕು. ಅನಂತರ ಕಣ್ಣಿನ ನೋಟವನ್ನು ಎರಡು ಹುಬ್ಬುಗಳ ಮಧ್ಯೆ ನಿಲ್ಲಿಸಿ ಕಣ್ಣನ್ನು ಅರ್ಧಮುಚ್ಚಿ ಮೂಗಿನ ಕೊನೆಯಲ್ಲಿ ಕೇಂದ್ರೀಕರಿಸಬೇಕು. ಕಣ್ಣನ್ನು ಸಂಪೂರ್ಣವಾಗಿ ಮುಚ್ಚಿ ಪ್ರಯೋಜನವಿಲ್ಲ. ಏಕೆಂದರೆ ಆಗ ನಿದ್ರೆಮಾಡಿಬಿಡುವ ಸಂಭವವಿದೆ. ಕಣ್ಣನ್ನು ಸಂಪೂರ್ಣವಾಗಿ ತೆರೆದು ಪ್ರಯೋಜನವಿಲ್ಲ. ಏಕೆಂದರೆ ಆಗ ಇಂದ್ರಿಯವಸ್ತುಗಳಿಂದ ಆಕರ್ಷಿತರಾಗುವ ಅಪಾಯವಿದೆ. ದೇಹದಲ್ಲಿ ಮೇಲಕ್ಕೆ ಹೋಗುವ ಮತ್ತು ಕೆಳಕ್ಕೆ ಹೋಗುವ ಗಾಳಿಯನ್ನು ತಟಸ್ಥಗೊಳಿಸಿ ಉಸಿರಾಟವನ್ನು ಹೊಳ್ಳೆಗಳಲ್ಲಿ ನಿಯಂತ್ರಿಸಬೇಕು. ಇಂತಹ ಅಯೋಗಾಭ್ಯಾಸದಿಂದ ಮನುಷ್ಯನು ಇಂದ್ರಿಯಗಳ ಮೇಲೆ ಹತೋಟಿಯನ್ನು ಪಡೆಯಬಹುದು. ಬಾಹ್ಯ ಇಂದ್ರಿಯವಸ್ತುಗಳಿಂದ ದೂರವಿರಬಹುದು. ಹೀಗೆ ಬ್ರಹ್ಮನಲ್ಲಿ ಮುಕ್ತಿಪಡೆಯಲು ಸಿದ್ಧಮಾಡಿಕೊಳ್ಳಬಹುದು.
ಈ ಯೋಗ ಪ್ರಕ್ರಿಯೆಯು ಮನುಷ್ಯನು ಎಲ್ಲ ಬಗೆಯ ಭಯ ಮತ್ತು ಕ್ರೋಧಗಳಿಂದ ಮುಕ್ತನಾಗಲು ಸಹಾಯ ಮಾಡುತ್ತದೆ. ಹೀಗೆ ಅಧ್ಯಾತ್ಮಿಕ ಸನ್ನಿವೇಶದಲ್ಲಿ ಪರಮಾತ್ಮನ ಸಾನ್ನಿಧ್ಯವನ್ನು ಅನುಭವಿಸಲು ನೆರವಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳವುದಾದರೆ, ಯೋಗತತ್ವತಗಳ ಆಚರಣೆಗೆ ಕೃಷ್ಣಪ್ರಜ್ಞೆಯೇ ಅತ್ಯಂತ ಸುಲಭವಾದ ಪ್ರಕ್ರಿಯೆ. ಇದನ್ನು ಮುಂದಿನ ಅಧ್ಯಾಯದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಕೃಷ್ಣಪ್ರಜ್ಞೆ ಇರುವ ಮನುಷ್ಯನು ಸದಾ ಭಕ್ತಿಸೇವೆಯಲ್ಲಿ ನಿರತನಾಗಿರುವನು. ಇದರಿಂದ ತನ್ನ ಇಂದ್ರಿಯಗಳನ್ನು ಬೇರೆ ಯಾವುದೇ ಕಾರ್ಯದಲ್ಲಿ ತೊಡಗಿಸುವ ಅಪಾಯವನ್ನು ದೂರ ಇಡುವನು. ಇಂದ್ರಿಯಗಳ ನಿಯಂತ್ರಣಕ್ಕೆ ಅಷ್ಟಾಂಗಯೋಗಕ್ಕಿಂತ ಇದೇ ಉತ್ತಮಮಾರ್ಗ. (This copy first appeared in Hindustan Times Kannada website. To read more like this please logon to kannada.hindustantime.com).