ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ತಾವು ದೇವರ ಅವತಾರಗಳೆಂದು ಹೇಳಿಕೊಳ್ಳುವ ಜನರ ಬಗ್ಗೆ ಎಚ್ಚರದಿಂದ ಇರಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita: ತಾವು ದೇವರ ಅವತಾರಗಳೆಂದು ಹೇಳಿಕೊಳ್ಳುವ ಜನರ ಬಗ್ಗೆ ಎಚ್ಚರದಿಂದ ಇರಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ತಾವು ದೇವರ ಅವತಾರಗಳೆಂದು ಹೇಳಿಕೊಳ್ಳುವ ಜನರ ಬಗ್ಗೆ ಎಚ್ಚರದಿಂದ ಇರಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 2 ಮತ್ತು 3 ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 2

ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ |

ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಮ್ ||2||

ಅನುವಾದ: ಕಮಲ ನೇತ್ರನೆ, ಪ್ರತಿಯೊಂದು ಜೀವಿಯ ಹುಟ್ಟು ಮತ್ತು ಸಾವಿನ ವಿಷಯವನ್ನು ನಿನ್ನಿಂದ ವಿವರವಾಗಿ ಕೇಳಿದೆನು. ಎಂದೂ ಕೊನೆಯಾಗದ ನಿನ್ನ ವೈಭವಗಳನ್ನು ಅರ್ಥಮಾಡಿಕೊಂಡಿದ್ದೇನೆ.

ಭಾವಾರ್ಥ: ಅರ್ಜುನನು ತನ್ನ ಸಂತೋಷದಲ್ಲಿ ಶ್ರೀಕೃಷ್ಣನನ್ನು ಕಮಲ ನೇತ್ರ (ಕೃಷ್ಣನ ಕಣ್ಣುಗಳು ಕಮಲದ ದಳಗಳಂತೆ ಕಾಣುತ್ತವೆ) ಎಂದು ಕರೆಯುತ್ತಾನೆ. ಕೃಷ್ಣನು ಹಿಂದಿನ ಒಂದು ಅಧ್ಯಾಯದಲ್ಲಿ ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಸ್ತಥಾ. ಈ ಇಡೀ ಭೌತಿಕ ಅಭಿವ್ಯಕ್ತಿಯು ಕಾಣಿಸುವುದಕ್ಕೆ ಮತ್ತು ಅದೃಶ್ಯವಾಗುವುದಕ್ಕೆ ನಾನು ಮೂಲ ಎಂದು ಭರವಸೆ ನೀಡಿದ್ದಾನೆ. ಅರ್ಜುನನು ಇದನ್ನು ಪ್ರಭುವಿನಿಂದ ವಿವರವಾಗಿ ಕೇಳಿದ್ದಾನೆ (Bhagavad Gita Updesh in Kannada).

ಕೃಷ್ಣನು ಎಲ್ಲ ವಸ್ತುಗಳು ಕಾಣಿಸಿಕೊಳ್ಳುವುದಕ್ಕೆ ಮತ್ತು ಮಾಯಾವಾಗುವುದಕ್ಕೆ ಮೂಲವಾದರೂ ಅವನು ಅವುಗಳಿಂದ ದೂರ ಉಳಿದಿದ್ದಾನೆ ಎಂದೂ ಅರ್ಜುನನಿಗೆ ತಿಳಿದಿದೆ. ಒಂಬತ್ತನೆಯ ಅಧ್ಯಾಯದಲ್ಲಿ ಪ್ರಭುವು ಹೇಳಿದಂತೆ ಆತನು ಸರ್ವವ್ಯಾಪಿ, ಆದರೆ ಆತನೇ ವ್ಯಕ್ತಿಶಃ ಎಲ್ಲೆಲ್ಲೂ ಇರುವುದಿಲ್ಲ. ಇದು ಕೃಷ್ಣನ ಊಹಾತೀತ ಸಂಪತ್ತು. ಇದು ತನಗೆ ಸಂಪೂರ್ಣವಾಗಿ ಅರ್ಥವಾಗಿದೆ ಎಂದು ಅರ್ಜುನನು ಒಪ್ಪಿಕೊಳ್ಳುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 3

ಏವಮೇತದ್ ಯಥಾತ್ಥ ತ್ವಮಾತ್ಮಾನಂ ಪರಮೇಶ್ವರ |

ದ್ರಷ್ಟುವಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ ||3||

ಅನುವಾದ: ಪರಮ ಪ್ರಭವೇ, ಪುರುಷೋತ್ತಮನೇ, ನೀನು ನಿನ್ನನ್ನು ವರ್ಣಿಸಿಕೊಂಡಂತೆ, ನಿನ್ನ ವಾಸ್ತವ ಸ್ಥಿತಿಯಲ್ಲಿ ನನ್ನ ಮುಂದೆ ಕಾಣುತ್ತಿದ್ದೇನೆ. ಆದರೂ ನೀನು ಈ ವಿಶ್ವದ ಅಭಿವ್ಯಕ್ತಿಯಲ್ಲಿ ಹೇಗೆ ಪ್ರವೇಶಿಸಿರುವೆ ಎಂದು ಕಾಣಲು ಬಯಸುತ್ತೇನೆ. ನಿನ್ನ ಆ ರೂಪವನ್ನು ನೋಡಲು ಬಯಸುತ್ತೇನೆ.

ಭಾವಾರ್ಥ: ತಾನು ಸ್ವಯಂ ಅಂಶದಿಂದ ಭೌತಿಕ ಜಗತ್ತನ್ನು ಪ್ರವೇಶಿಸಿದುದರಿಂದ ಈ ವಿಶ್ವದ ಅಭಿವ್ಯಕ್ತಿಯು ಸಾಧ್ಯವಾಗಿದೆ ಮತ್ತು ಅದು ಸಾಗುತ್ತಿದೆ ಎಂದು ಪ್ರಭುವು ಹೇಳಿದನು. ಅರ್ಜುನನ ಮಟ್ಟಿಗೆ ಕೃಷ್ಣನ ಮಾತುಗಳು ಅವನಿಗೆ ಸ್ಫೂರ್ತಿಯನ್ನು ಕೊಟ್ಟಿದೆ. ಆದರೆ ಮುಂದೆ ಕೃಷ್ಣನು ಸಾಮಾನ್ಯ ಮನುಷ್ಯ ಎಂದು ಯೋಚಿಸುವವರನ್ನು ಒಪ್ಪಿಸಲು ಅರ್ಜುನನು ಕೃಷ್ಣನ ವಿಶ್ವರೂಪವನ್ನು ನೋಡಲು ಅಪೇಕ್ಷಿಸುತ್ತಾನೆ. ಕೃಷ್ಣನು ವಿಶ್ವದಿಂದ ಬೇರೆಯಾದರೂ ಅವನು ಅದರೊಳಗಿಂದ ಹೇಗೆ ಕಾರ್ಯ ನಿರ್ವಹಿಸುತ್ತಾನೆ ಎಂದು ಕಾಣಲು ಬಯಸುತ್ತಾನೆ. ಅರ್ಜುನನು ಕೃಷ್ಣನನ್ನು ಪುರುಷೋತ್ತಮ ಎಂದು ಸಂಬೋಧಿಸುವುದು ಅರ್ಥವತ್ತಾಗಿದೆ.

ಪ್ರಭುವು ದೇವೋತ್ತಮ ಪರಮ ಪುರುಷ. ಆತನು ಅರ್ಜುನನಲ್ಲಿಯೇ ಇದ್ದಾನೆ. ಆದುದರಿಂದ ಅವನಿಗೆ ಅರ್ಜುನನ ಅಪೇಕ್ಷೆಯು ತಿಳಿದಿದೆ. ಅರ್ಜುನನಿಗೆ ಕೃಷ್ಣನನ್ನು ಅವನ ಕೃಷ್ಣರೂಪದಲ್ಲಿ ಕಾಣುವುದರಲ್ಲಿಯೇ ಸಂಪೂರ್ಣ ತೃಪ್ತಿಯಿದೆ. ಆದುದರಿಂದ ಆತನ ವಿಶ್ವರೂಪವನ್ನು ನೋಡಲು ವಿಶೇಷವಾದ ಆಸೆಯಿಲ್ಲ. ಇದನ್ನು ಕೃಷ್ಣನು ತಿಳಿಯಬಲ್ಲ. ಇತರರಿಗೆ ಮನದಟ್ಟು ಮಾಡಿಕೊಡುವುದಕ್ಕಾಗಿ ಅರ್ಜುನನು ವಿಶ್ವರೂಪವನ್ನು ನೋಡಲು ಬಯಸುತ್ತಾನೆ ಎಂದು ಪ್ರಭುವಿಗೆ ಗೊತ್ತು. ಅರ್ಜುನನಿಗೆ ತನ್ನ ನಂಬಿಕೆಯು ದೃಢವಾಗಬೇಕೆಂದು ವೈಯಕ್ತಿಕ ಆಸೆಯೇನೂ ಇರಲಿಲ್ಲ.

ಒಂದು ಪ್ರಮಾಣವನ್ನು ಸ್ಥಾಪಿಸಲು ಅರ್ಜುನನು ವಿಶ್ವರೂಪವನ್ನು ನೋಡಯಲು ಬಯಸುತ್ತಾನೆ. ಮುಂದೆಯೂ ಸಹ ತಾವು ದೇವರ ಅವತಾರಗಳೆಂದು ಹೇಳಿಕೊಳ್ಳುವ ಮೋಸಗಾರರು ಬರುತ್ತಾರೆ ಎಂದು ಕೃಷ್ಣನು ಅರ್ಥಮಾಡಿಕೊಳ್ಳಬಲ್ಲ. ಆದುದರಿಂದ ಜನರು ಎಚ್ಚರದಿಂದರಬೇಕು. ತಾನು ಕೃಷ್ಣ ಎಂದು ಹೇಳಿಕೊಳ್ಳುವವನು ತನ್ನ ಹೇಳಿಕೆಯನ್ನು ಜನರಿಗೆ ಮನದಟ್ಟು ಮಾಡಿಕೊಡಲು ತನ್ನ ವಿಶ್ವರೂಪವನ್ನು ತೋರಿಸಲು ಸಿದ್ಧನಾಗಿರಬೇಕು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.