Bhagavad Gita: ಭಗವಂತನ ದೇಹವು ದಿವ್ಯವಾದದ್ದು, ನಿತ್ಯಾನಂದಪೂರ್ಣವಾದದ್ದು; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಭಗವಂತನ ದೇಹವು ದಿವ್ಯವಾದದ್ದು, ನಿತ್ಯಾನಂದಪೂರ್ಣವಾದದ್ದು ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 52ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 52
ಸುದುರ್ದರ್ಶಮಿದಂ ರೂಪಂ ದೃಷ್ಟವಾನಸಿ ಯನ್ಮಮ |
ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾನ್ಕ್ಷಿಣಃ ||52||
ಅನುವಾದ: ದೇವೋತ್ತಮ ಪರಮ ಪುರುಷನು ಹೀಗೆಂದನು - ನನ್ನ ಪ್ರಿಯ ಅರ್ಜುನಾ, ಈಗ ನೀನು ಕಾಣುತ್ತಿರುವ ನನ್ನ ರೂಪವನ್ನು ಕಾಣುವುದು ಬಹು ಕಷ್ಟ. ದೇವತೆಗಳು ಸಹ ಪ್ರಿಯವಾದ ಈ ರೂಪವನ್ನು ಕಾಣುವ ಅವಕಾಶಕ್ಕಾಗಿ ಹಂಬಲಿಸುತ್ತಾರೆ.
ಭಾವಾರ್ಥ: ಈ ಅಧ್ಯಾಯದ ನಲವತ್ತೆಂಟನೆಯ ಶ್ಲೋಕದಲ್ಲಿ ಶ್ರೀಕೃಷ್ಣನು ತನ್ನ ವಿಶ್ವರೂಪವನ್ನು ಮುಕ್ತಾಯಗೊಳಿಸಿದ. ಪುಣ್ಯಕರ್ಮಗಳು, ಯಜ್ಞಗಳು ಮೊದಲಾದವುಗಳಿಂದ ಈ ರೂಪವನ್ನು ಕಾಣುವುದು ಸಾಧ್ಯವಿಲ್ಲ ಎಂದು ಅರ್ಜುನನಿಗೆ ಹೇಳಿದ. ಇಲ್ಲಿ ಸುದುರ್ದರ್ಶಮ್ ಎನ್ನುವ ಶಬ್ದವನ್ನು ಬಳಸಿದೆ. ಇದು ಎರಡು ಕೈಗಳಿರುವ ಕೃಷ್ಣನ ರೂಪವು ಇನ್ನೂ ಗುಹ್ಯವಾದದ್ದು ಎಂದು ಸೂಚಿಸುತ್ತದೆ. ತಪಸ್ಸುಗಳು, ವೇದಾಧ್ಯಯನ ಮತ್ತು ಊಹಾತ್ಮಕ ಚಿಂತನೆಗೆ ಒಂದಿಷ್ಟು ಭಕ್ತಿಸೇವೆಯನ್ನು ಸೇರಿಸಿ ಕೃಷ್ಣನ ವಿಶ್ವರೂಪವನ್ನು ಕಾಣಲು ಸಾಧ್ಯವಾದೀತು. ಇದು ಸಾಧ್ಯವಾಗಬಹುದು. ಆದರೆ ಸ್ವಲ್ಪ ಭಕ್ತಿಯಿಲ್ಲದಿದ್ದರೆ ನೋಡಲು ಸಾಧ್ಯವಿಲ್ಲ. ಇದನ್ನು ಆಗಲೇ ವಿವರಿಸಿದೆ (Bhagavad Gita Updesh in Kannada).
ಆದರೂ ಬ್ರಹ್ಮ ಮತ್ತು ಶಿವನಂತಹ ದೇವತೆಗಳಿಗೆ ಸಹ ಆ ವಿಶ್ವರೂಪದಾಚೆ ಎರಡು ಕೈಗಳಿರುವ ಕೃಷ್ಣನ ರೂಪವನ್ನು ಕಾಣುವುದು ಇನ್ನೂ ಕಷ್ಟ. ಅವರಿಗೆ ಕೃಷ್ಣನನ್ನು ಕಾಣುವ ಹಂಬಲ. ಆತನು ತನ್ನ ತಾಯಿ ದೇವಕಿಯ ಗರ್ಭದಲ್ಲಿದ್ದನೆಂದು ಭಾವಿಸಿದಾಗ ಸ್ವರ್ಗದಿಂದ ದೇವತೆಗಳೆಲ್ಲ ಕೃಷ್ಣನ ಅದ್ಭುತ ಮಹಿಮೆಯನ್ನು ನೋಡಲೆಂದು ಬಂದರು. ಆಗ ಅವರಿಗೆ ಆತನು ಕಾಣದಿದ್ದರೂ ಅವನನ್ನೂ ಸೊಗಸಾಗಿ ಸ್ತುತಿಸಿದರು. ಇದಕ್ಕೆ ಶ್ರೀಮದ್ಭಾಗವತದಲ್ಲಿ ಸಾಕ್ಷ್ಯವಿದೆ. ಅವನನ್ನು ನೋಡಲು ಅವರು ಕಾದಿದ್ದರು. ಆತನು ಸಾಮಾನ್ಯ ಮನುಷ್ಯನೆಂದು ತಿಳಿದು ಮೂರ್ಖನಾದವನು ಅವನನ್ನು ತೆಗಳಬಹುದು. ಅವನಿಗೆ ಗೌರವ ಸಲ್ಲಿಸದೆ ಅವನೊಳಗಿರುವ ನಿರಾಕಾರವಾದ ಯಾವುದೋ ಒಂದಕ್ಕೆ ಗೌರವ ಸಲ್ಲಿಸಬಹುದು. ಆದರೆ ಇವೆಲ್ಲ ಅಸಂಬದ್ಧ ನಿಲುವುಗಳು. ಎರಡು ಕೈಗಳಿರುವ ಕೃಷ್ಣನ ರೂಪವನ್ನು ನೋಡಬೇಕೆಂದು ಬ್ರಹ್ಮ ಮತ್ತು ಶಿವನಂತಹ ದೇವತೆಗಳು ಬಯಸುತ್ತಾರೆ.
ಭಗವದ್ಗೀತೆಯಲ್ಲಿಯೂ (9.11) ಇದನ್ನು ದೃಢಪಡಿಸಿದೆ - ಅವಜಾನನ್ತಿ ಮಾಂ ಮೂಢಾ ಮಾನುಷೀಂ ತನುಮ್ ಆಶ್ರಿತಃ - ಅವನನ್ನು ತೆಗಳುವ ಮೂಢರಿಗೆ ಅವನು ಕಾಣುವುದಿಲ್ಲ. ಬ್ರಹ್ಮಸಂಹಿತೆಯಲ್ಲಿ ದೃಢಪಡಿಸಿರುವಂತೆ ಮತ್ತು ಭಗವದ್ಗೀತೆಯಲ್ಲಿ ಸ್ವಯಂ ಕೃಷ್ಣನೇ ದೃಢಪಡಿಸಿದಂತೆ ಅವನ ದೇಹವು ದಿವ್ಯವಾದದ್ದು ಮತ್ತು ನಿತ್ಯಾನಂದಪೂರ್ಣವಾದದ್ದು. ಅವನ ದೇಹವು ಐಹಿಕದೇಹದಂತೆ ಇಲ್ಲವೇ ಇಲ್ಲ. ಆದರೆ ಭಗವದ್ಗೀತೆಯನ್ನು ಅಥವಾ ಅಂತಹ ವೇದಶಾಸ್ತ್ರಗಳನ್ನು ಓದಿ ಕೃಷ್ಣನನ್ನು ಅಧ್ಯಯನ ಮಾಡುವ ಕೆಲವರಿಗೆ ಕೃಷ್ಣನು ಒಂದು ಸಮಸ್ಯೆಯಾಗುತ್ತಾನೆ.
ಐಹಿಕ ಪ್ರಕ್ರಿಯೆಯನ್ನು ಬಳಸುವವನಿಗೆ ಕೃಷ್ಣನು ಒಬ್ಬ ಮಹಾನ್ ಐತಿಹಾಸಿಕ ವ್ಯಕ್ತಿ ಮತ್ತು ಬಹು ದೊಡ್ಡ ವಿದ್ವಾಂಸ ತತ್ವಜ್ಞಾನಿಯಾಗಿದ್ದರೂ ಸಾಮಾನ್ಯ ಮನುಷ್ಯನೇ. ಕೃಷ್ಣನು ಅಷ್ಟು ಶಕ್ತಿವಂತನಾದರೂ ಭೌತಿಕ ಶರೀರವೊಂದನ್ನು ಸ್ವೀಕರಿಸಬೇಕಾಯಿತು ಎಂದೆನಿಸುತ್ತದೆ. ಕಟ್ಟಕಡೆಗೆ ಇಂತಹವರು ಪರಿಪೂರ್ಣ ಸತ್ಯವು ನಿರಾಕಾರ ಎಂದು ಯೋಚಿಸುತ್ತಾರೆ. ಆದುದರಿಂದ, ತನ್ನ ನಿರಾಕಾರ ಸ್ವರೂಪದಿಂದ ಆತನು ಭೌತಿಕ ಪ್ರಕೃತಿಗೆ ಸೇರಿದ ಒಂದು ಸಾಕಾರ ರೂಪವನ್ನು ಧರಿಸಿದ ಎಂದು ಯೋಚಿಸುತ್ತಾರೆ. ಇದು ಪರಮ ಪ್ರಭುವನ್ನು ಕುರಿತು ಒಂದು ಭೌತಿಕ ಲೆಕ್ಕಾಚಾರ. ಇನ್ನೊಂದು ಲೆಕ್ಕಾಚಾರವು ಊಹಾತ್ಮಕವಾದದ್ದು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)