ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಶ್ರೀಕೃಷ್ಣನ ಸಂಕೀರ್ತನೆ ಮಾಡಿದರೆ ಆಕಸ್ಮಿಕ ಪತನಗಳಿಂದ ರಕ್ಷಣೆ ಹೊಂದುವಿರಿ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಶ್ರೀಕೃಷ್ಣನ ಸಂಕೀರ್ತನೆ ಮಾಡಿದರೆ ಆಕಸ್ಮಿಕ ಪತನಗಳಿಂದ ರಕ್ಷಣೆ ಹೊಂದುವಿರಿ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಶ್ರೀಕೃಷ್ಣನ ಸಂಕೀರ್ತನೆ ಮಾಡಿದರೆ ಆಕಸ್ಮಿಕ ಪತನಗಳಿಂದ ರಕ್ಷಣೆ ಹೊಂದುವಿರಿ ಎಂಬುದರ ಅರ್ಥವನ್ನು ಭಗವದ್ಗೀತೆಯ 30ನೇ ಶ್ಲೋಕದ ಮುಂದುವರಿದ ಭಾಗ ಹಾಗೂ 31ನೇ ಶ್ಲೋಕವನ್ನು ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 30

ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್

ಸಾಧುರೇವ ಸ ಮನ್ತವ್ಯಃ ಸಮ್ಯಗ್ ವ್ಯವಸಿತೋ ಹಿ ಸಃ

ಅನುವಾದ: ಯಾವನಾದರೂ ಅತ್ಯಂತ ಹೀನ ಕಾರ್ಯವನ್ನು ಮಾಡುತ್ತಿದ್ದರೂ, ಆತನು ಭಕ್ತಿಸೇವೆಯಲ್ಲಿ ತೊಡಗಿದ್ದರೆ ಆತನನ್ನು ಸಾಧು ಎಂದೇ ಭಾವಿಸಬೇಕು. ಏಕೆಂದರೆ ಆತನು ತನ್ನ ನಿರ್ಧಾರದಲ್ಲಿ ಸರಿಯಾಗಿ ನೆಲೆಸಿದ್ದಾನೆ.

ಭಗವತಿ ಚ ಹರಾವನನ್ಯಚೇತಾ

ಭೃಶಮಲಿನೋಪಿ ವಿರಾಜತೇ ಮನುಷ್ಯಃ |

ನ ಹಿ ಶಶಕಲುಷಚ್ಛಬಿಃ ಕದಾಚಿತ್

ತಿಮಿರ ಪರಾಭವತಾಮ್ ಉಪೈತಿ ಚನ್ದ್ರಃ ||

ಇದರ ಅರ್ಥ - ಪರಮ ಪ್ರಭುವಿನ ಭಕ್ತಿಸೇವೆಯಲ್ಲಿ ಸಂಪೂರ್ಣವಾಗಿ ನಿರತನಾದವನು ಒಮ್ಮೊಮ್ಮೆ ಅಸಹ್ಯವಾದ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದರೂ ಅವುಗಳನ್ನು ಚಂದ್ರನಲ್ಲಿರುವ ಮೊಲದ ಗುರುತನ್ನು ಹೋಲುವ ಕಲೆಗಳಂತೆ ಪರಿಗಣಿಸಬೇಕು. ಇಂತಹ ಕಲೆಗಳು ಬೆಳದಿಂಗಳು ಹರಡುವುದಕ್ಕೆ ಅಡ್ಡಿಯಾಗುವುದಿಲ್ಲ. ಹೀಗೆಯೇ ಭಕ್ತನೊಬ್ಬನು ಸಾಧು ಮಾರ್ಗದಿಂದ ಅಕಸ್ಮಾತ್ತಾಗಿ ಪತನಗೊಂಡರೆ ಆತನು ಅಸಹ್ಯವನ್ನುಂಟುಮಾಡುವುದಿಲ್ಲ (Bhagavad Gita Updesh In Kannada).

ಆದರೆ ಅಧ್ಯಾತ್ಮಿಕ ಭಕ್ತಿಸೇವೆಯಲ್ಲಿ ತೊಡಗಿರುವ ಭಕ್ತನು ಎಲ್ಲ ಬಗೆಯ ಅಸಹ್ಯಕರ ರೀತಿಗಳಲ್ಲಿ ವರ್ತಿಸಬಹುದು ಎಂದು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು. ಐಹಿಕ ಸಂಬಂಧಗಳ ಬಲಿಷ್ಠ ಪ್ರಭಾವದಿಂದುಂಟಾಗುವ ಆಕಸ್ಮಿಕಗಳನ್ನು ಮಾತ್ರ ಈ ಶ್ಲೋಕದಲ್ಲಿ ಸೂಚಿಸಲಾಗಿದೆ. ಭಕ್ತಿಸೇವೆಯು ಸ್ವಲ್ಪ ಹೆಚ್ಚು ಕಡಿಮೆ ಮಾಯಾಶಕ್ತಿಯ ವಿರುದ್ಧ ಯುದ್ಧ ಸಾರಿದಂತೆ. ಮಾಯಾಶಕ್ತಿಯೊಡನೆ ಹೋರಾಡುವಷ್ಟು ಮನುಷ್ಯನು ಶಕ್ತನಾಗುವವರೆಗೆ ಆಕಸ್ಮಿಕ ಪತನಗಳಾಬಹುದು. ಆದರೆ ಹಿಂದೆಯೇ ಹೇಳಿದಂತೆ ಸಾಕಷ್ಟು ಶಕ್ತಿಯನ್ನು ಪಡೆದಾಗ ಆತನು ಇಂತಹ ಪತನಗಳಿಗೆ ಒಳಗಾಗುವುದಿಲ್ಲ. ಯಾರೂ ಈ ಶ್ಲೋಕವನ್ನು ದುರುಪಯೋಗ ಮಾಡಿಕೊಂಡು ತಪ್ಪು ತಪ್ಪಾಗಿ ನಡೆದು ತಾನು ಇನ್ನೂ ಭಕ್ತನೇ ಎಂದುಕೊಳ್ಳಬಾರದು. ಭಕ್ತಿಸೇವೆಯಿಂದ ಆತನು ತನ್ನ ಸ್ವಭಾವವನ್ನು ಉತ್ತಮಗೊಳಿಸಿಕೊಳ್ಳದಿದ್ದರೆ ಆತನು ಒಳ್ಳೆಯ ಭಕ್ತನಲ್ಲ ಎಂದು ಅರ್ಥಮಾಡಿಕೊಳ್ಳಬೇಕು.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 31

ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾನ್ತಿ ನಿಗಚ್ಛತಿ |

ಕೌನ್ತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ||31||

ಅನುವಾದ: ಕುಂತಿಯ ಮಗನಾದ ಅರ್ಜುನನೆ, ಅವನು ಶೀಘ್ರವಾಗಿ ಧರ್ಮಾತ್ಮನಾಗುತ್ತಾನೆ ಮತ್ತು ಶಾಶ್ವತ ಶಾಂತಿಯನ್ನು ಪಡೆಯುತ್ತಾನೆ. ನನ್ನ ಭಕ್ತನು ಎಂದೂ ನಾಶವಾಗುವುದಿಲ್ಲ ಎಂದು ಧೈರ್ಯವಾಗಿ ಘೋಷಿಸು.

ಭಾವಾರ್ಥ: ಇದನ್ನು ತಪ್ಪರ್ಥ ಮಾಡಿಕೊಳ್ಳಬಾರದು. ಏಳೆಯ ಅಧ್ಯಾಯದಲ್ಲಿ ಪರಮ ಪ್ರಭುವು, ಕಿಡಿಗೇಡಿತನದಲ್ಲಿ ತೊಡಗಿರುವವನು ಪರಮ ಪ್ರಭುವಿನ ಭಕ್ತನಾಗಲಾರ ಎಂದು ಹೇಳುತ್ತಾನೆ. ಪರಮ ಪ್ರಭುವಿನ ಭಕ್ತನಲ್ಲದವನಿಗೆ ಯಾವುದೇ ಒಳ್ಳೆಯ ಅರ್ಹತೆಗಳಿಲ್ಲ. ಈ ಪ್ರಶ್ನೆಯು ಉಳಿಯುತ್ತದೆ - ಆಕಸ್ಮಿಕವಾಗಿಯಾಗಲಿ ಉದ್ದೇಶಪೂರ್ವಕವಾಗಿಯಾಗಲಿ ಅಸಹ್ಯಕರ ಚಟುವಟಿಕೆಗಳಲ್ಲಿ ತೊಡಗಿರುವವನು ಪರಿಶುದ್ಧ ಭಕ್ತನು ಹೇಗಾದನು? ನ್ಯಾಯವಾಗಿಯೇ ಈ ಪ್ರಶ್ನೆಯನ್ನು ಕೇಳಬಹುದು.

ಏಳೆನೆಯ ಅಧ್ಯಾಯದಲ್ಲಿ ಹೇಳಿದಂತೆ, ಪ್ರಭುವಿನ ಭಕ್ತಿಸೇವೆಗೆ ಬಾರದೆಯೇ ಇರುವ ದುಷ್ಕರ್ಮಿಗಳಿಗೆ, ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ, ಒಳ್ಳೆಯ ಅರ್ಹತೆಗಳೇ ಇರುವುದಿಲ್ಲ. ಸಾಮಾನ್ಯವಾಗಿಿ ಭಕ್ತಿಸೇವೆಯ ಒಂಬತ್ತು ವಿಧಿಗಳಲ್ಲಿ ತೊಡಗಿರುವ ಭಕ್ತನು ಹೃದಯದಿಂದ ಎಲ್ಲ ಕಲ್ಮಷವನ್ನೂ ತೊಡೆದು ಹಾಕುವುದರಲ್ಲಿ ನಿರತನಾಗಿರುತ್ತಾನೆ. ಅವನು ದೇವೋತ್ತಮ ಪರಮ ಪುರುಷನನ್ನು ಹೃದಯದಲ್ಲಿ ಧರಿಸಿರುತ್ತಾನೆ. ಸಹಜವಾಗಿ ಅವನು ಎಲ್ಲ ಪಾಪಕಲ್ಮಷಗಳೂ ತೊಳೆದುಹೋಗುತ್ತವೆ. ಸದಾ ಪರಮ ಪ್ರಭುವನ್ನು ಕುರಿತು ಯೋಚಿಸುವುದು ಅವನನ್ನು ಪರಿಶುದ್ಧ ಹೃದಯನನ್ನಾಗಿ ಮಾಡುತ್ತದೆ.

ವೇದಗಳ ಪ್ರಕಾರ, ಒಂದು ನಿಯಮವಿದೆ - ಉನ್ನತ ಸ್ಥಾನದಿಂದ ಪತನಹೊಂದಿದವನು ಪರಿಶುದ್ಧನಾಗಲು ಕೆಲವು ಪ್ರಾಯಶ್ಚಿತ್ತ ವಿಧಿಗಳನ್ನು ಅನುಸರಿಸಬೇಕು. ಆದರೆ ಇಲ್ಲಿ ಅಂತಹ ನಿಯಮವೇನು ಇಲ್ಲ. ಏಕೆಂದರೆ ಆತನು ಸದಾ ದೇವೋತ್ತಮ ಪರಮ ಪುರುಷನನ್ನು ಸ್ಮರಿಸುವುದರಿಂದ, ಪರಿಶುದ್ಧಗೊಳಿಸುವ ಪ್ರಕ್ರಿಯೆಯು ಆಗಲೇ ಭಕ್ತನ ಹೃದಯದಲ್ಲಿದೆ. ಆದುದರಿಂದ ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ/ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಎನ್ನುವುದರ ಸಂಕೀರ್ತನೆಯನ್ನು ನಿಲ್ಲಿಸದೆ ಮುಂದುವರಿಸಬೇಕು. ಇದು ಭಕ್ತನನ್ನು ಎಲ್ಲ ಆಕಸ್ಮಿಕ ಪತನಗಳಿಂದ ರಕ್ಷಿಸುತ್ತದೆ. ಹೀಗೆ ಅವನು ಐಹಿಕ ಕಲ್ಮಷಗಳ ಸೋಂಕಿನಿಂದ ಎಂದೆಂದೂ ಮುಕ್ತನಾಗಿರುವನು.