ಭಗವದ್ಗೀತೆ: ಶ್ರೀಕೃಷ್ಣನ ಆಧ್ಯಾತ್ಮಿಕ ಸೇವೆಯಲ್ಲಿರುವವರು ಈ ಮಾಯೆಯಿಂದ ಬಿಡುಗಡೆ ಹೊಂದುತ್ತಾರೆ; ಗೀತೆಯ ಸಾರಾಂಶ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಶ್ರೀಕೃಷ್ಣನ ಆಧ್ಯಾತ್ಮಿಕ ಸೇವೆಯಲ್ಲಿರುವವರು ಈ ಮಾಯೆಯಿಂದ ಬಿಡುಗಡೆ ಹೊಂದುತ್ತಾರೆ ಎಂಬುದರ ಅರ್ಥ ತಿಳಿಯಿರಿ.
ಯಜ್‌ಜ್ಞಾತ್ವಾ ನ ಪುನರ್ಮೋಹಮೇವಂ ಯಾಸ್ಯಸಿ ಪಾಣ್ಡವ |
ಯೇನ ಭೂತಾನ್ಯಶೇಷಾಣಿ ದ್ರಕ್ಷಸ್ಯಾತ್ಮನ್ಯಥೋ ಮಯಿ ||35||
ಸಾಕ್ಷಾತ್ಕಾರ ಪಡೆದ ಆತ್ಮನಿಂದ ನಿಜವಾದ ಜ್ಞಾನವನ್ನು ನೀವು ಪಡೆದರೆ ಮತ್ತೆ ಇಂತಹ ಮೋಹಕ್ಕೆ ಎಂದೂ ಸಿಲುಕುವುದಿಲ್ಲ. ಏಕೆಂದರೆ ಈ ಜ್ಞಾನವು ಲಭ್ಯವಾದಾಗ ಎಲ್ಲ ಜೀವಿಗಳೂ ಪರಮ ಪ್ರಭುವಿನ ಅಂಶಗಳೇ. ಇತರ ಮಾತುಗಳಲ್ಲಿ ಹೇಳವುದಾದರೆ, ಅವರೆಲ್ಲ ನನ್ನವರೇ ಎನ್ನುವುದನ್ನು ನೀನು ಕಾಣುತ್ತೀಯೆ.
ಆತ್ಮಸಾಕ್ಷಾತ್ಕಾರ ಪಡೆದ ವ್ಯಕ್ತಿಯು ವಸ್ತುಗಳ ನಿಜವಾದ ಸ್ವರೂಪವನ್ನು ತಿಳಿದಿರುತ್ತಾನೆ. ಅಂತಹ ವ್ಯಕ್ತಿಯಿಂದ ಜ್ಞಾನವನ್ನು ಪಡೆಯುವುದರ ಫಲ ಎಂದರೆ ಎಲ್ಲ ಜೀವಿಗಳೂ ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನ ವಿಭಿನ್ನಾಂಶ ಎಂಬ ಅರಿವು ದೊರೆಯುವುದು. ಕೃಷ್ಣನಿಂದ ಪ್ರತ್ಯೇಕವಾಗಿರುವ ಅಸ್ತಿತ್ವದ ಕಲ್ಪನೆಗೆ ಮಾಯಾ ಎಂದು ಹೆಸರು. (ಮಾ-ಅಲ್ಲ, ಯಾ-ಇದು). ಕೆಲವರು ನಮಗೂ ಕೃಷ್ಣನಿಗೂ ಸಂಬಂಧವೇ ಇಲ್ಲ, ಕೃಷ್ಣನು ದೊಡ್ಡ ಐತಿಹಾಸಿಕ ವ್ಯಕ್ತಿ ಮತ್ತು ಪರಮ ಸತ್ಯವು ನಿರಾಕಾರ ಬ್ರಹ್ಮನ್ ಎಂದು ಯೋಚಿಸುತ್ತಾರೆ. ವಾಸ್ತವವಾಗಿ ಭಗವದ್ಗೀತೆಯಲ್ಲಿ ಹೇಳಿದಂತೆ ಈ ನಿರಾಕಾರ ಬ್ರಹ್ಮನ್ ಎನ್ನುವುದು ಕೃಷ್ಣನ ವೈಯಕ್ತಿಕ ಪ್ರಭೆ. ದೇವೋತ್ತಮ ಪರಮ ಪುರುಷನಾದ ಕೃಷ್ಣನು ಎಲ್ಲಕೂ ಕಾರಣನು.
ಕೃಷ್ಣನು ದೇವೋತ್ತಮ ಪರಮ ಪುರುಷ, ಎಲ್ಲ ಕಾರಣಗಳ ಕಾಣನು ಎಂದು ಬ್ರಹ್ಮಸಂಹಿತೆಯಲ್ಲಿ ಸ್ಪಷ್ಟವಾಗಿ ಹೇಳಿದೆ. ಕೋಟ್ಯಂತರ ಅವತಾರಗಳು ಅವನ ವಿವಿಧ ವಿಸ್ತರಣೆಗಳು ಮಾತ್ರ. ಹಾಗೆಯೇ ಜೀವಿಗಳೂ ಕೃಷ್ಣನ ವಿಸ್ತರಣೆಗಳೇ. ತನ್ನ ಹಲವು ವಿಸ್ತರಣೆಗಳಲ್ಲಿ ಕೃಷ್ಣನು ತನ್ನ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ ಎಂದು ಮಾಯಾವಾದಿ ತತ್ವಶಾಸ್ತ್ರಜ್ಞರು ತಪ್ಪಾಗಿ ಯೋಚಿಸುತ್ತಾರೆ. ಈ ಯೋಜನೆಯು ಭೌತಿಕ ಜಗತ್ತಿನ ಅನುಭವದಿಂದ ಬಂದದ್ದು. ಒಂದು ವಸ್ತುವನ್ನು ಚೂರುಚೂರಾಗಿ ಮಾಡಿ ಹಂಚಿದರೆ ಅದು ಸ್ವಂತದ ಮೂಲವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ಐಹಿಕ ಜಗತ್ತಿನಲ್ಲಿ ನಮ್ಮ ಅನುಭವ. ಆದರೆ ಪರಾತ್ಪರ ಎಂದರೆ ಒಂದಕ್ಕೆ ಒಂದು ಸೇರಿದರೂ ಒಂದೇ, ಮತ್ತು ಒಂದರಲ್ಲಿ ಒಂದನ್ನು ಕಳೆದರೂ ಒಂದೇ. ಮಾಯಾವಾದಿ ತತ್ವಶಾಸ್ತ್ರಜ್ಞರಿಗೆ ಇದು ಅರ್ಥವಾಗುವುದಿಲ್ಲ. ಪರಾತ್ಪರ ಜಗತ್ತಿನಲ್ಲಿ ಇದೇ ವಾಸ್ತವ ಸ್ಥಿತಿ.
ಆಧ್ಯಾತ್ಮಿಕ ವಿಜ್ಞಾನದಲ್ಲಿ ಸಾಕಷ್ಟು ತಿಳುವಳಿಕೆ ಇಲ್ಲದಿರುವುದರಿಂದ ಈಗ ನಮ್ಮನ್ನು ಮಾಯೆ ಆವರಿಸಿದೆ. ಆದುದರಿಂದ ನಾವು ಕೃಷ್ಣನಿಂದ ಪ್ರತ್ಯೇಕ ಎಂದು ಯೋಜಿಸುತ್ತೇವೆ. ನಾವು ಕೃಷ್ಣನಿಂದ ಪ್ರತ್ಯೇಕಗೊಂಡ ಭಾಗಗಳಾದರೂ ನಾವು ಅವನಿಂದ ಭಿನ್ನವಲ್ಲ. ಜೀವಿಗಳ ಶಾರೀರಕ ವ್ಯತ್ಯಾಸವೆನ್ನುವುದು ಮಾಯಾ. ಕೃಷ್ಣನನ್ನು ತೃಪ್ತಿಪಡಿಸುವುದಕ್ಕಾಗಿಯೇ ನಾವಿರುವುದು. ಮಾಯೆಯ ದೆಸೆಯಿಂದ ಅರ್ಜುನನು ತನ್ನ ಬಂಧುಗಳೊಡನೆ ಇರುವ ಅಲ್ಪಕಾಲದ ದೈಹಿಕ ಬಾಂಧವ್ಯವೇ ಕೃಷ್ಣನೊಡನೆ ಇರುವ ಶಾಶ್ವತವಾದ ಆಧ್ಯಾತ್ಮಿಕ ಬಾಂಧವ್ಯಕ್ಕಿಂತ ಹೆಚ್ಚು ಮುಖ್ಯ ಎಂದು ಭಾವಿಸಿದ.
ಗೀತೆಯ ಇಡೀ ಉಪದೇಶದ ಧ್ಯೇಯವು ಹೀಗಿದೆ - ಕೃಷ್ಣನ ನಿತ್ಯಸೇವಕನಾದ ಜೀವಿಯನ್ನು ಕೃಷ್ಣನಿಂದ ಬೇರ್ಪಡಿಸಲು ಸಾಧ್ಯವಿಲ್ಲ ಮತ್ತು ಕೃಷ್ಣನಿಂದ ಪ್ರತ್ಯೇಕವಾಗಿ ತನಗೆ ಅಸ್ತಿತ್ವವಿದೆ ಎಂಬ ಜೀವಿಯ ಭಾವನೆಯು ಮಾಯೆ. ಪರಮ ಪ್ರಭುವಿನ ವಿಭಿನ್ನಾಂಶಗಳಾಗಿ ಜೀವಿಗಳು ಸಾಧಿಸಬೇಕಾದ ಒಂದು ಗುರಿ ಇದೆ. ನೆನಪಿಗೂ ಎಟುಕದಷ್ಟು ಕಾಲದಿಂದ ಈ ಗುರಿಯನ್ನು ಅವರು ಮರೆತಿದ್ದಾರೆ. ಈ ಕಾರಣದಿಂದ ಮನುಷ್ಯರು, ಪ್ರಾಣಿಗಳು, ದೇವತೆಗಳು ಬೇರೆ ಬೇರೆ ದೇಹಗಳಲ್ಲಿ ನೆಲೆಸಿದ್ದಾರೆ. ಭಗವಂತನ ಆಧ್ಯಾತ್ಮಿಕ ಸೇವೆಯನ್ನು ಮರೆತದ್ದರಿಂದಲೇ ಇಂತಹ ದೈಹಿಕ ವ್ಯತ್ಯಾಸಗಳು ಉದ್ಭವಿಸಿವೆ. ಆದರೆ ಕೃಷ್ಣಪ್ರಜ್ಞೆಯಿಂದ ಆಧ್ಯಾತ್ಮಿಕ ಸೇವೆಯಲ್ಲಿ ತೊಡಗಿರುವವನು ಈ ಮಾಯೆಯಿಂದ ಕೂಡಲೇ ಬಿಡುಗಡೆ ಹೊಂದುತ್ತಾನೆ. ಇಂತಹ ಶುದ್ಧಜ್ಞಾನವನ್ನು ನಿಜವಾದ ಗುರುವಿನಿಂದ ಮಾತ್ರ ಪಡೆಯಬಹುದು.
ಹೀಗೆ ಪಡೆದುಕೊಂಡು ಜೀವಿಯು ಕೃಷ್ಣನಿಗೆ ಸರಿಮಾನ ಎನ್ನುವ ಭ್ರಮೆಯನ್ನು ನಿವಾರಿಸಿಕೊಳ್ಳಬಹುದು. ಹೀಗೆ ಪಡೆದುಕೊಂಡು ಜೀವಿಯು ಕೃಷ್ಣನಿಗೆ ಸರಿಸಮಾನ ಎನ್ನುವ ಭ್ರಮೆಯನ್ನು ನಿವಾರಿಸಿಕೊಳ್ಳಬಹುದು. ಪರಿಪೂರ್ಣ ಜ್ಞಾನವು ಇದು - ಪರಿಪೂರ್ಣನಾದ ಕೃಷ್ಣನು ಎಲ್ಲ ಜೀವಿಗಳಿಗೂ ಪರಮ ಆಶ್ರಯನು ಮತ್ತು ಇಂತಹ ಆಶ್ರಯವನ್ನು ತ್ಯಜಿಸಿದರೆ ಜೀವಿಗಳು ಭೌತಿಕ ವ್ಯಕ್ತಿಯಿಂದ ಭ್ರಾಂತಿಗೊಳಗಾಗಿ ತಮಗೆ ಪ್ರತ್ಯೇಕ ಅಸ್ತಿತ್ವವಿದೆ ಎಂದು ಕಲ್ಪಿಸಿಕೊಳ್ಳುತ್ತಾರೆ. ಹೀಗೆ ಬೇರೆ ಬೇರೆ ಹಂತದ ಭೌತಿಕ ಕಲ್ಪನೆಯಿಂದ ಅವರು ಕೃಷ್ಣನನ್ನು ಮರೆತುಬಿಡುತ್ತಾರೆ. ಆದರೆ ಹೀಗೆ ಭ್ರಮೆಗೊಂಡ ಜೀವಿಗಳು ಕೃಷ್ಣಪ್ರಜ್ಞೆಯಲ್ಲಿ ನೆಲೆಗೊಂಡರೆ ಅವರು ಮುಖ್ಯಮಾರ್ಗದಲ್ಲಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ಇದನ್ನು ಭಾಗವತವು (2.10.6) ಮುಕಿರ್‌ಹಿತ್ವಾನ್ಯಥಾ ರೂಪಂ ಸ್ವರೂಪೇಣ ವ್ಯವಸ್ಥಿತಿಃ ಎಂದು ದೃಢಪಡಿಸುತ್ತದೆ. ಮುಕ್ತಿ ಎಂದರೆ (ಕೃಷ್ಣಪ್ರಜ್ಞೆಯಲ್ಲಿ) ಕೃಷ್ಣನ ನಿತ್ಯ ಸೇವಕನಾಗಿ ತನ್ನ ನಿಜಸ್ವರೂಪದಲ್ಲಿರುವುದು.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in