ಭಗವದ್ಗೀತೆ: ಎಲ್ಲ ರೂಪಗಳಲ್ಲಿ ನಿರಂತರವಾಗಿ ಅಸ್ತಿತ್ವದಲ್ಲಿರುವವನೇ ಭಗವಂತ; ಗೀತೆಯ ಅರ್ಥ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಭಗವಂತ ಎಲ್ಲ ರೂಪಗಳಲ್ಲಿ ನಿರಂತರವಾಗಿ ಅಸ್ತಿತ್ವದಲ್ಲಿರುತ್ತಾನೆ ಎಂಬುದರ ಅರ್ಥ ಇಲ್ಲಿದೆ.
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯತ್ಥಾ ನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಮಮ್ ||7||
ಭರತ ವಂಶಜನಾದ ಅರ್ಜುನನೆ, ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ಹೆಚ್ಚುತ್ತದೋ ಆಗ ಸ್ವಯಂ ಅವತಾರ ಮಾಡುತ್ತೇನೆ.
ಇಲ್ಲಿ ಸೃಜಾಮಿ ಎನ್ನುವ ಪದವು ಅರ್ಥವತ್ತಾದುದು. ಸೃಜಾಮಿ ಎನ್ನುವ ಪದವನ್ನು ಸೃಷ್ಟಿ ಎನ್ನುವ ಅರ್ಥದಲ್ಲಿ ಬಳಸುವಂತಿಲ್ಲ. ಏಕೆಂದರೆ ಹಿಂದಿನ ಶ್ಲೋಕದ ಪ್ರಕಾರ ಭಗವಂತನ ಸ್ವರೂಪವು ಅಥವಾ ಶರೀರವು ಸೃಷ್ಟಿಯಾಗುವುದಿಲ್ಲ. ಅವನ ಎಲ್ಲ ರೂಪಗಳೂ ನಿರಂತರವಾಗಿ ಅಸ್ತಿತ್ವದಲ್ಲಿರುತ್ತದೆ. ಆದುದರಿಂದ ಸೃಜಾಮಿ ಎಂದರೆ ಭಗವಂತನು ತಾನು ಇರುವಂತೆಯೇ ಕಾಣಿಸಿಕೊಳ್ಳುತ್ತಾನೆ ಎಂದರ್ಥ. ಭಗವಂತನು ನಿಯತಕಾಲಕ್ಕೆ ಕಾಣಿಸಿಕೊಳ್ಳುತ್ತಾನೆ. ಎಂದರೆ ಬ್ರಹ್ಮನ ಒಂದು ದಿನದ ಏಳನೆಯ ಮನುವಿನ ಇಪ್ಪತ್ತೆಂಟನೆಯ ಕಲ್ಪದ ದ್ವಾಪರಯುಗದ ಅಂತ್ಯದಲ್ಲಿ ಕಾಣಿಸಿಕೊಳ್ಳುತ್ತಾನೆ.
ಆದರೆ ಆತನು ಇಂತಹ ನಿಮಯ ನಿಬಂಧನೆಗಳಿಗೆ ಬದ್ಧನಲ್ಲ. ಏಕೆಂದರೆ ಆತನು ತನ್ನ ಇಚ್ಛೆಯ ಪ್ರಕಾರ ಹಲವು ರೀತಿಗಳಲ್ಲಿ ವರ್ತಿಸಲು ಸಂಪೂರ್ಣವಾಗಿ ಸ್ವತಂತ್ರನು. ಅಧರ್ಮವು ಹೆಚ್ಚಿ ನಿಜವಾದ ಧರ್ಮವು ಗ್ಲಾನಿಯಾದಾಗಲೆಲ್ಲ ಆತನು ತನ್ನ ಇಚ್ಛೆಯಂತೆಯೇ ಕಾಣಿಸಿಕೊಳ್ಳುತ್ತಾನೆ. ವೇದದಲ್ಲಿ ಧಾರ್ಮಿಕ ತತ್ವಗಳನ್ನು ನಿರೂಪಿಸಲಾಗಿದೆ. ವೇದಗಳ ನಿಯಮಗಳನ್ನು ಸರಿಯಾಗಿ ಅನುಷ್ಠಾನ ಮಾಡುವುದರಲ್ಲಿ ಯಾವುದೇ ಅಸಮಂಜಸತೆಯಾದರೂ ಮನುಷ್ಯನು ಅಧರ್ಮಿಯಾಗುತ್ತಾನೆ. ಇಂತಹ ತತ್ವಗಳು ಭಗವಂತನು ವಿಧಿಸಿದ ನಿಮಯಗಳು ಎಂದು ಭಾಗವತದಲ್ಲಿ ಹೇಳಿದೆ. ಭಗವಂತನೊಬ್ಬನೇ ಧಾರ್ಮಿಕ ವ್ಯವಸ್ಥೆಯನ್ನು ಸೃಷ್ಟಿಸಬಲ್ಲ. ವೇದಗಳು ಭಗವಂತನೇ ಮೂಲತಃ ಬ್ರಹ್ಮನಿಗೆ ಅವನ ಹೃದಯದ ಮೂಲಕ ಹೇಳಿದ ಮಾತುಗಳು ಎಂದೂ ಕೂಡ ಅಂಗೀಕೃತವಾಗಿವೆ. ಆದುದರಿಂದ ಧರ್ಮದ ತತ್ವಗಳು ದೇವೋತ್ತಮ ಪರಮ ಪುರುಷನ ನೇರವಾದ ಆಜ್ಞೆಗಳು (ಧರ್ಮಂತು ಸಾಕ್ಷಾದ್ ಭಗವತ್ಪ್ರಣೀತಮ್).
ಭಗವದ್ಗೀತೆಯ ಉದ್ದಕ್ಕೂ ಈ ತತ್ವಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. ಭಗವಂತನ ಅಪ್ಪಣೆಯ ಪ್ರಕಾರ ಇಂತಹ ತತ್ವಗಳನ್ನು ನೆಲೆಗೊಳಿಸುವುದೇ ವೇದಗಳ ಉದ್ದೇಶ. ಗೀತೆಯ ಅಂತ್ಯದಲ್ಲಿ ಭಗವಂತನೇ, ಧರ್ಮದ ಅತ್ಯುನ್ನತ ತತ್ವವೆಂದರೆ ತನಗೆ ಶರಣಾಗುವುದು. ಬೇರೇನೂ ಅಲ್ಲ ಎಂದು ನೇರವಾಗಿ ಅಪ್ಪಣೆಮಾಡುತ್ತಾನೆ. ವೇದಗಳ ತತ್ವಗಳು ಮನುಷ್ಯನನ್ನು ಭಗವಂತನಿಗೆ ಸಂಪೂರ್ಣವಾಗಿ ಶರಣಾಗುವಂತೆ ಮುಂದಕ್ಕೆ ದೂಡುತ್ತವೆ. ಇಂತಹ ತತ್ವಗಳನ್ನು ರಾಕ್ಷಸರು ಕ್ಷೋಭೆಗೊಳಿಸಿದಾಗಲೆಲ್ಲ ಭಗವಂತನು ಕಾಣಿಸಿಕೊಳ್ಳುತ್ತಾನೆ. ಭಗವಾನ್ ಬುದ್ಧನು ಕೃಷ್ಣನ ಅವತಾರ ಎಂದು ಭಾಗವತದಿಂದ ತಿಳಿಯುತ್ತದೆ.
ಪ್ರಾಪಂಚಿಕತೆಯು ತಾಂಡವಾಡುತ್ತಿದ್ದು ಐಹಿಕ ಜೀವನಾಸಕ್ತರು ವೇದಗಳ ಅಧಿಕಾರವನ್ನು ನೆಪಮಾಡಿಕೊಂಡು ಬಳಸುತ್ತಿದ್ದಾಗ ಬುದ್ಧನು ಕಾಣಿಸಿಕೊಂಡನು. ವಿಶೇಷ ಉದ್ದೇಶಗಳಿಗಾಗಿ ಪ್ರಾಣಿಗಳನ್ನು ಬಲಿಕೊಡುವ ವಿಷಯದಲ್ಲಿ ವೇದಗಳಲ್ಲಿ ನಿರ್ದಿಷ್ಟ ನಿಯಮ ನಿಬಂಧನೆಗಳಿದ್ದರೂ ರಾಕ್ಷಸೀ ಪ್ರವೃತ್ತಿಯವರು ವೇದದ ತತ್ವಗಳಿಗೆ ಗಮನವನ್ನೇ ಕೊಡದೆ ಪ್ರಾಣಿಬಲಿಯನ್ನು ಮಾಡುತ್ತಿದ್ದರು. ಈ ವಿಪರೀತದ ನಡವಳಿಕೆಯನ್ನು ತಡೆದು ವೇದದ ಅಹಿಂಸಾ ತತ್ವಗಳನ್ನು ಸ್ಥಾಪಿಸಲು ಬುದ್ಧನು ಅವತರಿಸಿದನು. ಆದುದರಿಂದ ಭಗವಂತನ ಪ್ರತಿಯೊಂದು ಅವತಾರಕ್ಕೂ ಒಂದು ವಿಶೇಷವಾದ ಉದ್ದೇಶವಿದೆ. ಇವೆಲ್ಲವನ್ನು ಅಪೌರುಷೇಯ ಧರ್ಮಗ್ರಂಥಗಳಲ್ಲಿ ವರ್ಣಿಸಲಾಗಿದೆ. ಧರ್ಮಗ್ರಂಥಗಳು ಪ್ರಸ್ತಾಪಿಸದಿರುವ ಯಾರನ್ನೇ ಆಗಲಿ ಅವತಾರವೆಂದು ಒಪ್ಪಿಕೊಳ್ಳಬಾರದು.
ಭಗವಂತನು ಭಾರತಭೂಮಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾನೆ ಎನ್ನುವುದು ವಾಸ್ತವವಲ್ಲ. ತಾನು ಕಾಣಿಸಿಕೊಳ್ಳಲು ಅಪೇಕ್ಷಿಸುವ ಯಾವುದೇ ಸ್ಥಳದಲ್ಲಾಗಲೀ ಯಾವುದೇ ಕಾಲದಲ್ಲಾಗಲೀ ಅವನು ಅವತರಿಸಬಲ್ಲ. ಪ್ರತಿಯೊಂದು ಅವತಾರದಲ್ಲಿ ನಿರ್ದಿಷ್ಟ ಸನ್ನಿವೇಶಗಳಲ್ಲಿ ನಿರ್ದಿಷ್ಟ ಜನತೆಗೆ ಅರ್ಥವಾಗುವಷ್ಟು ಮಾತ್ರ ಧರ್ಮದ ವಿಷಯವನ್ನು ಹೇಳುತ್ತಾನೆ. ಆದರೆ ಧ್ಯೇಯೋದ್ಧೇಶವು ಒಂದೇ - ಜನತೆಯನ್ನು ಭಗವತ್ ಪ್ರಜ್ಞೆಗೆ ಮತ್ತು ಧರ್ಮದ ತತ್ವಗಳ ವಿಧೇಯತೆಗೆ ಕೊಂಡೊಯ್ಯುವುದು. ಆತನು ತಾನೇ ಇಳಿದು ಬರುತ್ತಾನೆ. ಕೆಲವೊಮ್ಮೆ ತನ್ನ ನಿಜವಾದ ಪ್ರತಿನಿಧಿಯನ್ನು ತನ್ನ ಮಗ ಅಥವಾ ಸೇವಕನಾಗಿ ಕಳುಹಿಸುತ್ತಾನೆ. ಅಥವಾ ತಾನೇ ವೇಷ ಮರೆಸಿ ಬರುತ್ತಾನೆ.
ಭಗವದ್ದೀತೆಯ ತತ್ವಗಳನ್ನು ಅರ್ಜುನನಿಗೆ ಮತ್ತು ಇತರ ಉನ್ನತ ವ್ಯಕ್ತಿಗಳಿಗೆ ಬೋಧಿಸಲಾಯಿತು. ಏಕೆಂದರೆ ಪ್ರಪಂಚದ ಇತರ ಭಾಗಗಳ ಸಾಮಾನ್ಯ ಜನರಿಗೆ ಹೋಲಿಸಿದರೆ ಅರ್ಜುನನು ಬಹಳ ಮುಂದುವರಿದಿದ್ದನು. ಎರಡಕ್ಕೆ ಎರಡನ್ನು ಸೇರಿಸಿದರೆ ನಾಲ್ಕಾಗುತ್ತದೆ ಎನ್ನುವುದು ಪ್ರಾರಂಭದ ಗಣಿತದ ತರಗತಿಯಲ್ಲೂ ಪ್ರೌಢವಾದ ಗಣಿತದ ತರಗತಿಯಲ್ಲೂ ನಿಜವಾದದ್ದು. ಆದರೂ ಪ್ರೌಢಗಣಿತ ಮತ್ತು ಕಿರಿಯಗಣಿತ ಎಂದುಂಟು.
ಭಗವಂತನ ಎಲ್ಲ ಅವತಾರಗಳಲ್ಲಿ ಬೋಧಿಸುವ ತತ್ವಗಳು ಒಂದೇ. ಆದರೆ ಬೇರೆಬೇರೆ ಸನ್ನಿವೇಶಗಳಲ್ಲಿ ಅವು ಪ್ರೌಢ ಮತ್ತು ಕಿರಿದು ಎಂದು ಕಾಣುತ್ತದೆ. ಮುಂದೆ ವಿವರಿಸುವಂತೆ ನಾಲ್ಕು ವರ್ಣಗಳ ಮತ್ತು ನಾಲ್ಕು ಆಶ್ರಮಗಳ ಸ್ವೀಕಾರದೊಂದಿಗೆ ಧರ್ಮದ ಉನ್ನತ ತತ್ವಗಳು ಪ್ರಾರಂಭವಾಗುತ್ತವೆ. ಅವತಾರದಂತಹ ಮಹತ್ಕಾರ್ಯದ ಸಂಪೂರ್ಣ ಉದ್ದೇಶ ಎಲ್ಲೆಡೆಗಳಲ್ಲಿಯೂ ಕೃಷ್ಣಪ್ರಜ್ಞೆಯನ್ನು ಜಾಗೃತಗೊಳಿಸುವುದು. ಇಂತಹ ಪ್ರಜ್ಞೆಯ ಬೇರೆಬೇರೆ ಸನ್ನಿವೇಶಗಳಲ್ಲಿ ಮಾತ್ರ ಪ್ರಕಟವಾಗುತ್ತದೆ ಅಥವಾ ಪ್ರಕಟವಾಗದೆ ಹೋಗುತ್ತದೆ.