ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಕ್ತಿಮಾರ್ಗ ಬಹು ಸೊಗಸಾದದ್ದು, ಸುಖವಾದ ಮನಸ್ಥಿತಿಯಲ್ಲಿ ಅನುಸರಿಸಬಹುದು; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಕ್ತಿಮಾರ್ಗ ಬಹು ಸೊಗಸಾದದ್ದು, ಸುಖವಾದ ಮನಸ್ಥಿತಿಯಲ್ಲಿ ಅನುಸರಿಸಬಹುದು; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಭಕ್ತಿಮಾರ್ಗ ಬಹು ಸೊಗಸಾದದ್ದು, ಸುಖವಾದ ಮನಸ್ಥಿತಿಯಲ್ಲಿ ಅನುಸರಿಸಬಹುದು ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ ಎರಡನೇ ಶ್ಲೋಕದ ಕೊನೆಯ ಭಾಗದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 2

ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ|

ಜ್ಞಾನಂ ವಿಜ್ಞಾನಸಹಿತಂ ಯಜ್ಞ್‌ಜ್ಞಾತ್ವಾ ಮೋಕ್ಷ್ಯಸೇಶುಭಾತ್||2||

ರಹಸ್ಯತಮ ಜ್ಞಾನ - ಶ್ಲೋಕ - 2ರ ಮುಂದುವರಿದ ಭಾಗದಲ್ಲಿ ಭಕ್ತಿಸೇವೆಯ ಪ್ರಕ್ರಿಯೆಯು ಬಹು ಸುಖಕರವಾದದ್ದು (ಸುಸುಖಮ್). ಏಕೆ? ಭಕ್ತಿಸೇವೆ ಎಂದರೆ ಶ್ರವಣಂ ಕೀರ್ತನಂ ವಿಷ್ಣೋಃ. ಆದುದರಿಂದ ಮನುಷ್ಯನು ಪ್ರಭುವಿನ ಮಹಿಮೆಯ ಸಂಕೀರ್ತನೆಯನ್ನು ಕೇಳಬಹುದು ಅಥವಾ ಅಧಿಕಾರ ಪಡೆದ ಆಚಾರ್ಯರು ದಿವ್ಯಜ್ಞಾನವನ್ನು ಕುರಿತು ನೀಡುವ ತಾತ್ವಿಕ ಉಪನ್ಯಾಸಗಳಿಗೆ ಹೋದರೆ ಸಾಕು. ಸುಮ್ಮನೆ ಕುಳಿತೇ ಭಕ್ತನು ಕಲಿಯಬಹುದು. ಅನಂತರ ದೇವರ ಪ್ರಸಾದವನ್ನು, ರುಚಿಯಾದ ತಿಂಡಿಗಳನ್ನು ತಿನ್ನಬಹುದು. ಪ್ರತಿಯೊಂದು ಸ್ಥಿತಿಯಲ್ಲಿಯೂ ಭಕ್ತಿಸೇವೆಯು ಆನಂದದಾಯಕವಾದದ್ದು. ಅತ್ಯಂತ ದಾರಿದ್ರ್ಯದ ಸ್ಥಿತಿಯಲ್ಲಿಯೂ ಭಕ್ತಿಸೇವೆಯನ್ನು ಮಾಡಬಹುದು. ಪ್ರಭುವು, ಪತ್ರಂ ಪುಷ್ಷಂ ಫಲಂ ತೋಯಮ್ ಎನ್ನುತ್ತಾನೆ.

ಭಕ್ತನು ಯಾವುದೇ ಕಾಣಿಕೆಯನ್ನು ಕೊಡಲಿ, ಸ್ವೀಕರಿಸಲು ಪ್ರಭುವು ಸಿದ್ಧನಾಗಿದ್ದಾನೆ. ಒಂದು ಎಲೆ, ಒಂದು ಹೂವು, ಹಣ್ಣಿನ ಒಂದು ಚೂರು, ಅಥವಾ ಒಂದಿಷ್ಟು ನೀರು, ಇವು ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ದೊರೆಯುತ್ತವೆ. ಮನುಷ್ಯನ ಸಾಮಾಜಿಕ ಸ್ಥಾನವೇನೇ ಇರಲಿ, ಯಾವ ಮನುಷ್ಯನೇ ಆಗಲಿ ಇದನ್ನು ಅರ್ಪಿಸಬಹುದು. ಪ್ರಭುವು ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತಾನೆ. ಚರಿತ್ರೆಯಲ್ಲಿ ಇಂತಹ ನಿದರ್ಶನಗಳು ಹೇರಳವಾಗಿವೆ. ಪ್ರಭುವಿನ ಚರಣಕಮಲಗಳಿಗೆ ಅರ್ಪಿಸುವ ತುಳಸಿಯನ್ನು ಆಸ್ವಾದಿಸಿದುದರಿಂದಲೇ ಸನತ್ಕುಮಾರನಂತಹ ಮಹರ್ಷಿಗಳು ಶ್ರೇಷ್ಠ ಭಕ್ತರಾದರು. ಆದುದರಿಂದ ಭಕ್ತಿಮಾರ್ಗವು ಬಹು ಸೊಗಸಾದದ್ದು. ಅದನ್ನು ಸುಖವಾದ ಮನಸ್ಥಿತಿಯಲ್ಲಿ ಅನುಸರಿಸಬಹುದು. ಭಗವಂತನು ಅವನಿಗೆ ಅರ್ಪಿಸಿದ ವಸ್ತುಗಳ ಹಿಂದಿರುವ ಪ್ರೀತಿಯನ್ನೇ ಸ್ವೀಕರಿಸುತ್ತಾನೆ.

ಭಕ್ತಿಸೇವೆಯು ಶಾಶ್ವತವಾದದ್ದು ಎಂದು ಇಲ್ಲಿ ಹೇಳಿದೆ. ಇದು ಮಾಯಾವಾದಿ ತತ್ವಶಾಸ್ತ್ರಜ್ಞರುು ಹೇಳುವ ರೀತಿ ಅಲ್ಲ. ಅವರು ಹಲವೊಮ್ಮೆ ಹೆಸರಿಗೆ ಮಾತ್ರದ ಭಕ್ತಿಸೇವೆಯನ್ನು ಆಚರಿಸುತ್ತಾರೆ, ಆದರೂ ತಾವು ಭಕ್ತಿಸೇವೆಯನ್ನು ಮುಂದುರಿಸಿ, ಮುಕ್ತರಾದ ಅನಂತರ ದೇವರೊಡನೆ ಒಂದಾಗುತ್ತೇವೆ. ಎಂದು ಭಾವಿಸುತ್ತಾರೆ. ಇಂತಹ ತಾತ್ಕಾಲಿಕ ಸಮಯಾನುವರ್ತಿ ಭಕ್ತಿಸೇವೆಯನ್ನು ಪರಿಶುದ್ಧ ಭಕ್ತಿಸೇವೆ ಎಂದ ಸ್ವೀಕರಿಸುವುದಿಲ್ಲ. ವಾಸ್ತವವಾದ ಭಕ್ತಿಸೇವೆಯು ಮುಕ್ತಿಯ ಅನಂತರವೂ ಮುಂದುವರಿಯುತ್ತದೆ. ಭಕ್ತನು ಭಗವಂತನ ರಾಜ್ಯದಲ್ಲಿನ ದಿವ್ಯಲೋಕಕ್ಕೆ ಹೋದಾಗ, ಅಲ್ಲಿಯೂ ಭಗವಂತನನ್ನು ಸೇವಿಸುವುದರಲ್ಲಿ ನಿರತನಾಗುತ್ತಾನೆ. ಆತನು ಪರಮ ಪ್ರಭುವಿನೊಡನೆ ಒಂದಾಗಲು ಯತ್ನಿಸುವುದಿಲ್ಲ.

ಭಗವದ್ಗೀತೆಯಲ್ಲಿ ಕಾಣುವಂತೆ, ವಾಸ್ತವವಾದ ಭಕ್ತಿಸೇವೆಯು ಮುಕ್ತಿಯ ಅನಂತರ ಪ್ರಾರಂಭವಾಗುತ್ತದೆ. ಮುಕ್ತನಾದ ಮೇಲೆ ಮನುಷ್ಯನು ಬ್ರಹ್ಮನ್ (ಬ್ರಹ್ಮ ಭೂತ) ನೆಲೆಯನ್ನು ಪಡೆದಾಗ ಅವನ ಭಕ್ತಿಸೇವೆಯು ಪ್ರಾರಂಭವಾಗುತ್ತದೆ (ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಮ್) ಕರ್ಮಯೋಗ, ಜ್ಞಾನಯೋಗ, ಅಷ್ಟಾನ್ಗಯೋಗ ಅಥವಾ ಬೇರಾವುದೇ ಯೋಗವನ್ನು ಪ್ರತ್ಯೇಕವಾಗಿ ಆಚರಿಸುವುದರಿಂದ ಯಾರೂ ದೇವೋತ್ತಮ ಪರಮ ಪುರುಷನನ್ನು ಅರಿಯಲಾರರು.

ಈ ಯೋಗ ಮಾರ್ಗಗಳಿಂದ ಮನುಷ್ಯನು ಭಕ್ತಿಯೋಗದತ್ತ ಸ್ವಲ್ಪಮಟ್ಟಿಗೆ ಮುನ್ನಡೆಯಬಹುದು. ಆದರೆ ಭಕ್ತಿಸೇವೆಯ ಘಟ್ಟಕ್ಕೆ ಬಾರದೆ ಮನುಷ್ಯನಿಗೆ ದೇವೋತ್ತಮ ಪುರುಷನೆಂದರೆ ಏನು ಎಂದು ಅರ್ಥವಾಗುವುದಿಲ್ಲ. ಭಕ್ತಿಸೇವೆಯ ಅನುಷ್ಠಾನದಿಂದ, ಅದರಲ್ಲಿಯೂ ಸಾಕ್ಷಾತ್ಕಾರ ಸಾಧಿಸಿದ ಚೇತನಗಳಿಂದ ಶ್ರೀಮದ್ಭಾಗವತವನ್ನೋ ಭಗವದ್ಗೀತೆಯನ್ನೋ ಕೇಳಿ ಮನುಷ್ಯನು ಪರಿಶುದ್ಧನಾದಾಗ ಅವರಿಗೆ ಕೃಷ್ಣವಿಜ್ಞಾನ ಅಥವಾ ದೈವವಿಜ್ಞಾನವು ಅರ್ಥವಾಗುತ್ತದೆ. ಹೀಗೆಂದು ಶ್ರೀಮದ್ಭಾಗವತದಲ್ಲಿಯೂ ದೃಢಪಡಿಸಿದೆ.

ಏವಂ ಪ್ರಸನ್ನಮನಸೋ ಭಗವದ್ಭಕ್ತಿಯೋಗತಃ. ಮನುಷ್ಯನ ಹೃದಯದಿಂದ ಎಳ್ಲ ಅಪಾರ್ಥಗಳೂ ತೊಲಗಿ ಹೋದಾಗ ಅವನಿಗೆ ದೇವರೆಂದರೆ ಏನು ಎಂದು ಅರ್ಥವಾಗುತ್ತದೆ. ಹೀಗೆ ಭಕ್ತಿಸೇವೆಯ ಪ್ರಕ್ರಿಯೆಯು ಅಥವಾ ಕೃಷ್ಣಪ್ರಜ್ಞೆಯು, ರಾಜ್ಯವಿದ್ಯೆ, ಎಲ್ಲ ರಹಸ್ಯವಿದ್ಯೆಯ ರಾಜ. ಇದು ಧರ್ಮದ ಅತ್ಯಂತ ಪರಿಶುದ್ಧ ರೂಪ. ಅದನ್ನು ಕಷ್ಟವಿಲ್ಲದೆ ಸಂತೋಷವಾಗಿ ಅನುಸರಿಸಬಹುದು. ಆದುದರಿಂದ ಅದನ್ನು ಅಂಗೀಕರಿಸಬೇಕು.