Bhagavad Gita: ಭಗವಂತನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮನುಷ್ಯ ಪರಿಪೂರ್ಣನಾಗುತ್ತಾನೆ; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಭಗವಂತನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮನುಷ್ಯ ಪರಿಪೂರ್ಣನಾಗುತ್ತಾನೆ ಎಂಬುದರ ಅರ್ಥವನ್ನು ಭಗವಗ್ದೀತೆಯ 11ನೇ ಅಧ್ಯಾಯದ 31 ಮತ್ತು 33ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 31
ಆಖ್ಯಾಹಿ ಮೇ ಕೋ ಭವಾನುಗ್ರರೂಪೋ
ನಮೋಸ್ತು ತೇ ದೇವವರ ಪ್ರಸೀದ|
ವಿಜ್ಞಾತುಮಿಚ್ಛಾಮಿ ಭವನ್ತಮಾದ್ಯಮ್
ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ ||31||
ಅನುವಾದ: ಪ್ರಭುಗಳ ಪ್ರಭವೇ, ಉಗ್ರರೂಪನೇ, ದಯೆಯಿಟ್ಟು ನೀನು ಯಾರು ಎಂದು ಹೇಳು. ನಾನು ನಿನಗೆ ಪ್ರಣಾಮ ಮಾಡುತ್ತೇನೆ. ದಯೆಯಿಟ್ಟು ನನ್ನಲ್ಲಿ ಕೃಪೆಮಾಡು. ನೀನು ಆದಿಪುರುಷನು. ನಿನ್ನ ಉದ್ದೇಶವನ್ನು ನಾನು ತಿಳಿಯಲಾರೆನು. ಆದುದರಿಂದ ನಿನ್ನನ್ನು ತಿಳಿಯಬೇಕೆಂದು ಬಯಸುತ್ತಿದ್ದೇನೆ (Bhagavad Gita Updesh in Kannada).
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 33
ತಸ್ಮಾತ್ತ್ವಮುತ್ತಿಷ್ಠ ಯಶೋ ಲಭಸ್ವ
ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್ |
ಮಯೈವೈತೇ ನಿಹತಾಃ ಪೂರ್ವಮೇ
ನಿಮಿತ್ತಮಾತ್ರಂ ಭವ ಸವ್ಯಸಾಚಿನ್ ||33||
ಅನುವಾದ: ಆದುದರಿಂದ ಎದ್ದೇಳು, ಯುದ್ಧಮಾಡಿ ಕೀರ್ತಿಯನ್ನು ಪಡೆ. ನಿನ್ನ ಶತ್ರುಗಳನ್ನು ಸೋಲಿಸಿ ಸಮೃದ್ಧವಾದ ರಾಜ್ಯವನ್ನು ಅನುಭವಿಸು. ನನ್ನ ವ್ಯವಸ್ಥೆಯಿಂದ ಆಗಲೇ ಅವರು ಹತರಾಗಿದ್ದಾರೆ. ಸವ್ಯಸಾಚಿಯೆ, ನೀನು ಯುದ್ಧದಲ್ಲಿ ಒಂದು ನಿಮಿತ್ತ ಮಾತ್ರ.
ಭಾವಾರ್ಥ: ಸವ್ಯಸಾಚಿಯೆಂದರೆ ರಣರಂಗದಲ್ಲಿ ಬಹು ನೈಪುಣ್ಯದಿಂದ ಬಾಣಗಳನ್ನು ಬಿಡುವವನು ಎಂದರ್ಥ. ಆದುದರಿಂದ, ತನ್ನ ಶತ್ರುಗಳನ್ನು ಕೊಲ್ಲಲು ಸಾಮರ್ಥ್ಯವಿರುವ ಬಾಣಗಳನ್ನು ಪ್ರಯೋಗಿಸುವ ನಿಪುಣ ಯೋಧ ಎಂದು ಅರ್ಜುನನನ್ನು ಸಂಬೋಧಿಸಿದೆ. ನಿಮಿತ್ತ ಮಾತ್ರಮ್ ನೀನು ಒಂದು ಸಾಧನ ಮಾತ್ರ ಆಗು. ಈ ಮಾತು ಅರ್ಥವತ್ತಾದದ್ದು. ಇಡೀ ಜಗತ್ತು ದೇವೋತ್ತಮ ಪರಮ ಪುರುಷನ ಯೋಜನೆಯಂತೆ ಸಾಗುತ್ತಿದೆ. ತಕ್ಕಷ್ಟು ತಿಳುವಳಿಕೆ ಇಲ್ಲದ ಮೂಢರು ಪ್ರಕೃತಿಯು ಯೋಜನೆಯಿಲ್ಲದೆ ಸಾಗುತ್ತಿದೆ ಮತ್ತು ಎಲ್ಲ ಅಭಿವ್ಯಕ್ತಿಗಳು ಅಕಸ್ಮಾತ್ತಾಗಿ ಆದ ರಚನೆಗಳು ಎಂದು ಭಾವಿಸುತ್ತಾರೆ.
ವಿಜ್ಞಾನಿಗಳೆಂದು ಕರೆಸಿಕೊಳ್ಳುವ ಅನೇಕರು ಪ್ರಾಯಶಃ ಅದು ಆದದ್ದು ಹೀಗಿರಬಹುದು, ಹಾಗಿರಬಹುದು ಎಂದು ಸೂಚಿಸುತ್ತಾರೆ. ಆದರೆ ಪ್ರಾಯಶಃ ಮತ್ತು ಬಹುದು ಇವುಗಳ ಪ್ರಶ್ನೆಯೇ ಇಲ್ಲ. ಈ ಭೌತಿಕ ಜಗತ್ತಿನಲ್ಲಿ ಕಾರ್ಯಗತವಾಗುತ್ತಿರುವ ನಿರ್ದಿಷ್ಟ ಯೋಜನೆ ಇದೆ. ಈ ಯೋಜನೆ ಯಾವುದು? ಈ ವಿಶ್ವದ ಅಭಿವ್ಯಕ್ತಿಯು ಭಗವದ್ಧಾಮಕ್ಕೆ ಹಿಂದಿರುಗಿ ಹೋಗುವುದಕ್ಕೆ, ಬದ್ಧ ಆತ್ಮರಿಗ ಒಂದು ಅವಕಾಶ. ಭೌತಿಕ ಪ್ರಕೃತಿಯ ಮೇಲೆ ಯಜಮಾನಿಕೆ ನಡೆಸುವ ಅವರ ದರ್ಪದ ಮನೋಧರ್ಮವು ಇರುವಷ್ಟು ಕಾಲವೂ ಅವರು ಬದ್ಧರಾಗಿಯೇ ಉಳಿಯುತ್ತಾರೆ. ಆದರೆ ಪರಮ ಪ್ರಭುವಿನ ಯೋಜನೆಯನ್ನು ಅರ್ಥಮಾಡಿಕೊಂಡು ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಳ್ಳುವವನು ಬಹು ಬುದ್ಧಿವಂತನು.
ವಿಶ್ವದ ಅಭಿವ್ಯಕ್ತಿಯ ಸೃಷ್ಟಿಯೂ, ವಿನಾಶವೂ ಭಗವಂತನ ಶ್ರೇಷ್ಠ ಮಾರ್ಗದರ್ಶನಕ್ಕೆ ಅನುಗುಣವಾಗಿ ನಡೆಯುತ್ತವೆ. ಕುರುಕ್ಷೇತ್ರ ಯುದ್ಧವು ಭಗವಂತನ ಯೋಜನೆಯಂತೆ ನಡೆಯಿತು. ಅರ್ಜುನನು ಯುದ್ಧ ಮಾಡಲು ನಿರಾಕರಿಸಿದ. ಆದರೆ ಅವನು ಪರಮ ಪ್ರಭುವಿನ ಇಚ್ಛೆಯಂತೆ ಹೋರಾಡಬೇಕೆಂದು ಅವನಿಗೆ ಹೇಳಲಾಯಿತು. ಹಾಗೆ ಮಾಡಿದರೆ ಅವನು ಸುಖವಾಗಿರಬಹುದು. ಯಾವ ಮನುಷ್ಯನು ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿರುವವನೋ ಮತ್ತು ಯಾವ ಮನುಷ್ಯನ ಬದುಕು ಪ್ರಭುವಿನ ದಿವ್ಯ ಸೇವೆಗೆ ಅರ್ಪಿತವಾಗಿದೆಯೋ ಆತನು ಪರಿಪೂರ್ಣನು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)