Bhagavad Gita: ಭಗವಂತನು ಯಾರ ವಿಷಯದಲ್ಲಿಯೂ ಪಕ್ಷಪಾತಿಯಲ್ಲ, ಎಲ್ಲರನ್ನೂ ಒಂದೇ ರೀತಿ ಕಾಣುತ್ತಾನೆ; ಗೀತೆಯ ಅರ್ಥ ಹೀಗಿದೆ
Bhagavad Gita Updesh: ಭಗವಂತನು ಯಾರ ವಿಷಯದಲ್ಲಿಯೂ ಪಕ್ಷಪಾತಿಯಲ್ಲ, ಎಲ್ಲರನ್ನೂ ಒಂದೇ ರೀತಿ ಕಾಣುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.
ಅಧ್ಯಾಯ - 5 ಕರ್ಮಯೋಗ - ಕೃಷ್ಣಪ್ರಜ್ಞೆಯಲ್ಲಿ ಕಾರ್ಯ
ಶ್ಲೋಕ 29
ಭೋಕ್ತಾರಂ ಯಜ್ಞತಪಸಾಂ ಸರ್ವಲೋಕಮಹೇಶ್ವರಮ್ |
ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ ||29||
Bhagavad Gita Updesh in Kannada: ನನ್ನ ವಿಷಯವಾಗಿ ಸಂಪೂರ್ಣ ಪ್ರಜ್ಞೆಯನ್ನಿಟ್ಟುಕೊಂಡು ಎಲ್ಲ ಯಜ್ಞಗಳ ಮತ್ತು ತಪಸ್ಸುಗಳ ಕಟ್ಟಕಡೆಯ ಭೋಕ್ತೃ ನಾನೇ, ಎಲ್ಲ ಲೋಕಗಳ ಮತ್ತು ದೇವತೆಗಳ ಪರಮ ಪ್ರಭು ನಾನೇ ಮತ್ತು ಎಲ್ಲ ಜೀವಿಗಳ ಉಪಕಾರಿಯೂ, ಹಿತೈಷಿಯೂ ನಾನೇ ಎಂದು ಅರಿತ ಮನುಷ್ಯನು ಐಹಿಕ ದುಃಖಗಳ ಯಾತನೆಯಿಂದ ಮುಕ್ತನಾಗಿ ಶಾಂತಿಯನ್ನು ಪಡೆಯುವನು.
ಮಾಯಾ ಶಕ್ತಿಯ ಹಿಡಿತಕ್ಕೆ ಸಿಕ್ಕ ಎಲ್ಲ ಬದ್ಧ ಆತ್ಮಗಳಿಗೂ ಐಹಿಕ ಜಗತ್ತಿನಲ್ಲಿ ಶಾಂತಿಯನ್ನು ಪಡೆಯುವ ಕಾತರವಿರುತ್ತದೆ. ಆದರೆ ಅವರಿಗೆ ಶಾಂತಿಯ ಸೂತ್ರವು ಗೊತ್ತಿರುವುದಿಲ್ಲ. ಅದನ್ನು ಭಗವದ್ಗೀತೆಯ ಈ ಭಾಗದಲ್ಲಿ ವಿವರಿಸಲಾಗಿದೆ. ಅತ್ಯಂತ ಶ್ರೇಷ್ಠ ಶಾಂತಿ ಸೂತ್ರ ಇದಿಷ್ಟೇ-ಎಲ್ಲ ದೇವತೆಗಳ ಒಡೆಯ. ಆದುದರಿಂದ ಮಾನವರು ಸರ್ವಸ್ವವನ್ನೂ ಭಗವಂತನ ದಿವ್ಯಸೇವೆಗೆ ಅರ್ಪಿಸಬೇಕು. ಅವನಿಗಿಂತ ಯಾರೂ ಶ್ರೇಷ್ಠರಲ್ಲ. ದೇವತೆಗಳಲ್ಲಿ ಶ್ರೇಷ್ಠರಾದ ಶಿವ ಮತ್ತು ಬ್ರಹ್ಮರಿಗಿಂತ ಅವನು ಶ್ರೇಷ್ಠನು. ವೇದಗಳಲ್ಲಿ (ಶ್ವೇತಾಶ್ವತರ ಉಪನಿಷತ್ತು 6.7) ಭಗವಂತನನ್ನು ತಮ್ ಈಶ್ವರಾಣಾಂ ಪರಮಂ ಮಹೇಶ್ವರಮ್ ಎಂದು ವರ್ಣಿಸಿದೆ.
ಮಾಯೆಯ ಪ್ರಭಾವದಿಂದ ಜೀವಿಗಳು ತಾವು ಕಂಡದ್ದಕ್ಕೆಲ್ಲ ಒಡೆಯರಾಗಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಅವರು ಭಗವಂತನ ಮಾಯಾಶಕ್ತಿಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಭಗವಂತನು ಐಹಿಕ ಪ್ರಕೃತಿಯ ಒಡೆಯ. ಬದ್ಧ ಆತ್ಮರು ಐಹಿಕ ಪ್ರಕೃತಿಯ ಅತ್ಯಂತ ಕಟ್ಟುನಿಟ್ಟಿನ ನಿಯಮಗಳಿಗೆ ಒಳಗಾಗಿದ್ದಾರೆ. ಈ ವಾಸ್ತವಾಂಶಗಳನ್ನಾದರೂ ಮನುಷ್ಯನು ಅರ್ಥ ಮಾಡಿಕೊಳ್ಳದಿದ್ದರೆ ಪ್ರಪಂಚದಲ್ಲಿ ವೈಯಕ್ತಿಕವಾಗಿ ಆಗಲಿ, ಸಾಮೂಹಿಕವಾಗಿ ಆಗಲಿ, ಶಾಂತಿಯನ್ನು ಸಾಧಿಸುವುದು ಸಾಧ್ಯವಿಲ್ಲ. ಕೃಷ್ಣಪ್ರಜ್ಞೆಯ ಅರ್ಥ ಇದು. ಶ್ರೀಕೃಷ್ಣನೇ ಪರಮಾಧಿಕಾರಿ. ಮಹಾನ್ ದೇವತೆಗಳೂ ಸೇರಿದಂತೆ ಎಲ್ಲ ಜೀವಿಗಳೂ ಅವನ ಅಧಿಕಾರಕ್ಕೆ ಒಳಪಟ್ಟವರು. ಕೃಷ್ಣಪ್ರಜ್ಞೆಯಲ್ಲಿ ಮಾತ್ರ ಮನುಷ್ಯನಿಗೆ ಸಂಪೂರ್ಣ ಶಾಂತಿಯು ಸಾಧ್ಯ.
ಜ್ಞಾನಯೋಗವು ಭಕ್ತಿಯೋಗಕ್ಕೆ ದಾರಿ; ಕೃಷ್ಣನೇ ಪರಮಸತ್ಯ
ಐದನೆಯ ಅಧ್ಯಾಯವು ಕೃಷ್ಣಪ್ರಜ್ಞೆಯ ಕಾರ್ಯ ಸಾಧ್ಯ ವಿವರಣೆ. ಇದು ಸಾಮಾನ್ಯವಾಗಿ ಕರ್ಮಯೋಗ ಎಂದೇ ಪರಿಚಿತವಾಗಿದೆ. ಕರ್ಮಯೋಗವು ಮುಕ್ತಿಯನ್ನು ತಂದುಕೊಡಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಕೃಷ್ಣಪ್ರಜ್ಞೆಯಲ್ಲಿ ಕೆಲಸ ಮಾಡುವುದೆಂದರೆ ಭಗವಂತನೇ ಪರಮಾಧಿಕಾರಿ ಎನ್ನುವ ಸಂಪೂರ್ಣ ಅರಿವಿನಲ್ಲಿ ಕೆಲಸ ಮಾಡುವುದು. ಇಂತಹ ಕೆಲಸವು ಅಧ್ಯಾತ್ಮಿಕ ಅರವಿನಿಂದ ಭಿನ್ನವೇನಲ್ಲ. ನೇರವಾದ ಕೃಷ್ಣಪ್ರಜ್ಞೆಯು ಭಕ್ತಿಯೋಗ. ಜ್ಞಾನಯೋಗವು ಭಕ್ತಿಯೋಗಕ್ಕೆ ದಾರಿ. ಕೃಷ್ಣಪ್ರಜ್ಞೆ ಎಂದರೆ ಪರಮಸತ್ಯದೊಂದಿಗೆ ತನ್ನ ಸಂಬಂಧದ ಸಂಪೂರ್ಣ ತಿಳಿವಳಿಕೆಯನ್ನು ಇಟ್ಟುಕೊಂಡು ಕೆಲಸ ಮಾಡುವುದು. ಈ ಅರಿವಿನ ಪರಿಪೂರ್ಣತೆಯು ಸಂಪೂರ್ಣ ಕೃಷ್ಣಜ್ಞಾನ ಅಥವಾ ದೇವೋತ್ತಮ ಪರಮ ಪುರುಷನ ಜ್ಞಾನ.
ಪರಿಶುದ್ದವಾದ ಆತ್ಮನು ಭಗವಂತನ ವಿಭಿನ್ನಾಂಶವೇ ಆಗಿ ಅವನ ನಿರಂತರ ಸೇವಕ. ಮಾಯೆಯ ಮೇಲೆ ಪ್ರಭುತ್ವ ನಡೆಸುವ ಬಯಕೆಯಿಂದಾಗಿ ಆತ್ಮನಿಗೆ ಮಾಯೆಯ ಸಂಪರ್ಕವಾಗುತ್ತದೆ. ಅವನ ಹಲವು ಕಷ್ಟಗಳಿಗೆ ಇದೇ ಕಾರಣ. ಜಡವಸ್ತುವಿನೊಡನೆ ಸಂಪರ್ಕವಿರುಷ್ಟು ಕಾಲವೂ ಆತನು ಭೌತಿಕ ಅಗತ್ಯಗಳ ಪ್ರಕಾರ ಕೆಲಸ ಮಾಡಬೇಕಾಗುತ್ತದೆ. ಆದರೆ ಕೃಷ್ಣಪ್ರಜ್ಞೆಯು ಮನುಷ್ಯನು ಜಡವಸ್ತುವಿನ ವ್ಯಾಪ್ತಿಯಲ್ಲಿದ್ದಾಗಲೇ ಅಧ್ಯಾತ್ಮಿಕ ಜೀವನಕ್ಕೆ ಅವನನ್ನು ಕೊಂಡೊಯ್ಯುತ್ತದೆ. ಏಕೆಂದರೆ ಅದು ಐಹಿಕ ಜಗತ್ತಿನಲ್ಲಿ ಕಾರ್ಯ ಮಾಡುತ್ತಿರುವಾಗಲೇ ಅಧ್ಯಾತ್ಮಿಕ ಪ್ರಜ್ಞೆಯನ್ನು ಎಚ್ಚರಗೊಳಿಸುತ್ತದೆ. ಮನುಷ್ಯನು ಮನ್ನಡೆದಷ್ಟೂ ಅವನು ಜಡವಸ್ತುವಿನ ಹಿಡಿತದಿಂದ ಪಾರಾಗುತ್ತಾರೆ. ಭಗವಂತನು ಯಾರ ವಿಷಯದಲ್ಲಿಯೂ ಪಕ್ಷಪಾತಿಯಲ್ಲ. ಎಲ್ಲವೂ ಕೃಷ್ಣಪ್ರಜ್ಞೆಯಲ್ಲಿ ಮನುಷ್ಯನು ಕರ್ತವ್ಯಗಳನ್ನು ಕಾರ್ಯಶೀಲವಾಗಿ ನಿರ್ವಹಿಸುವುದನ್ನೇ ಅವಲಂಬಿಸಿದೆ.
ಕೃಷ್ಣಪ್ರಜ್ಞೆಯು ಮನುಷ್ಯನಿಗೆ ಎಲ್ಲ ರೀತಿಗಳಲ್ಲಿ ಇಂದ್ರಿಯಗಳನ್ನು ನಿಯಂತ್ರಿಸಿ ಕಾಮಕ್ರೋಧಗಳ ಪರಿಣಾಮವನ್ನು ಗೆಲ್ಲುವುದಕ್ಕೆ ನೆರವಾಗುತ್ತದೆ. ಕೃಷ್ಣಪ್ರಜ್ಞೆಯಲ್ಲಿ ಸ್ಥಿರವಾಗಿ ನಿಂತು ಕಾಮಕ್ರೋಧಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ಮನುಷ್ಯನು ವಾಸ್ತವಿಕವಾಗಿ ಅಧ್ಯಾತ್ಮಿಕ ಘಟ್ಟದಲ್ಲಿ ಬ್ರಹ್ಮನಿರ್ವಾಣದಲ್ಲಿ ಉಳಿಯುತ್ತಾನೆ. ಅಷ್ಟಾಂಗ ಯೋಗದ ಅಭ್ಯಾಸವು ಕೃಷ್ಣಪ್ರಜ್ಞೆಯಲ್ಲಿ ತಂತಾನೆ ಆಗುತ್ತದೆ. ಏಕೆಂದರೆ ಅಂತಿಮಗುರಿಯ ಸಾಧನನೆಯಾಗುತ್ತದೆ.
ಯಮ, ನಿಮಯ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿಗಳ ಅಭ್ಯಾಸದಲ್ಲಿ ಕ್ರಮಕ್ರಮವಾದ ಏರಿಕೆ ಇದೆ. ಆದರೆ ಇವೆಲ್ಲ ಭಕ್ತಿಪೂರ್ವಕ ಸೇವೆಯಿಂದ ಪರಿಪೂರ್ಣತೆಯನ್ನು ಪಡೆಯಲು ಪೂರ್ವಭಾವಿ ಸಿದ್ಧತೆ ಅಷ್ಟೇ. ಭಕ್ತಿಪೂರ್ವಕ ಸೇವೆಯು ಮಾತ್ರವೇ ಮನುಷ್ಯನಿಗೆ ಶಾಂತಿಯನ್ನು ನೀಡಬಲ್ಲದು. ಇದು ಬದುಕಿನ ಅತ್ಯುನ್ನತ ಪರಿಪೂರ್ಣತೆಯಾಗಿದೆ. ಇಲ್ಲಿಗೆ ಶ್ರೀಮದ್ಭಗವದ್ಗೀತೆಯ ಕರ್ಮಯೋಗ-ಕೃಷ್ಣಪ್ರಜ್ಞೆಯಲ್ಲಿ ಕಾರ್ಯ ಎಂಬ ಐದನೆಯ ಅಧ್ಯಾಯದ ಭಕ್ತಿವೇದಾಂತ ಭಾವಾರ್ಥವು ಮುಗಿಯಿತು. (This copy first appeared in Hindustan Times Kannada website. To read more like this please logon to kannada.hindustantime.com).