ಭಗವದ್ಗೀತೆ: ಭಗವಂತನಿಗೆ ಹಲವಾರು ರೂಪ, ಅವತಾರಗಳಿದ್ದರೂ ಅವೆಲ್ಲ ಒಂದೇ; ಗೀತೆಯ ಸಾರಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಭಗವಂತನಿಗೆ ಹಲವಾರು ರೂಪ, ಅವತಾರಗಳಿದ್ದರೂ ಅವೆಲ್ಲ ಒಂದೇ; ಗೀತೆಯ ಸಾರಾಂಶ ತಿಳಿಯಿರಿ

ಭಗವದ್ಗೀತೆ: ಭಗವಂತನಿಗೆ ಹಲವಾರು ರೂಪ, ಅವತಾರಗಳಿದ್ದರೂ ಅವೆಲ್ಲ ಒಂದೇ; ಗೀತೆಯ ಸಾರಾಂಶ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಭಗವಂತನಿಗೆ ಹಲವಾರು ರೂಪ, ಅವತಾರಗಳಿದ್ದರೂ ಅವೆಲ್ಲ ಒಂದೇ ಎಂಬುದರ ಅರ್ಥ ಹೀಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ತ್ವತಃ |

ತ್ಯಕ್ತ್ವಾ ದೇಹಂ ಪುರ್ಜನ್ಮ ನೈತಿ ಮಾಮೇತಿ ಸೋರ್ಜುನ ||9||

ಅರ್ಜುನನೇ, ಯಾರು ಹೀಗೆ ನನ್ನ ಹುಟ್ಟಿನ ಮತ್ತು ಕರ್ಮಗಳ ದಿವ್ಯ ಸ್ವರೂಪವನ್ನು ಯಥಾರ್ಥವಾಗಿ ತಿಳಿದುಕೊಳ್ಳುವರೋ ಅವರು ದೇಹತ್ಯಾಗ ಮಾಡಿದನಂತರ ಮತ್ತೆ ಈ ಐಹಿಕ ಜಗತ್ತಿನಲ್ಲಿ ಹುಟ್ಟುವುದಿಲ್ಲ. ಅವರು ನನ್ನ ನಿತ್ಯನಿವಾಸಕ್ಕೆ ಬರುತ್ತಾರೆ.

ಭಗವಂತನು ತನ್ನ ನಿತ್ಯನಿವಾಸದಿಂದ ಇಳಿದುಬರುವುದನ್ನು ಆರೆಯ ಶ್ಲೋಕದಲ್ಲಿ ವಿವರಿಸಿದೆ. ದೇವೋತ್ತಮ ಪರಮ ಪುರುಷನ ಅವತಾರದ ಸತ್ಯವನ್ನು ಅರ್ಥಮಾಡಿಕೊಂಡವನು ಆಗಲೇ ಐಹಿಕ ಬಂಧನದಿಂದ ಮುಕ್ತನಾಗಿದ್ದಾನೆ. ಆದುದರಿಂದ ಈಗಿನ ಭೌತಿಕ ಶರೀರವನ್ನು ತ್ಯಜಿಸಿದ ಕೂಡಲೇ ಅವನು ಭಗವಂತನ ಸಾಮ್ರಾಜ್ಯಕ್ಕೆ ಹಿಂತಿರುಗುತ್ತಾನೆ. ಐಹಿಕ ಬಂಧನದಿಂದ ಹೀಗೆ ಮುಕ್ತನಾಗುವುದು ಜೀವಿಗೆ ಸುಲಭವೇನಲ್ಲ. ನಿರಾಕಾರವಾದಿಗಳು ಮತ್ತು ಯೋಗಿಗಳು ಬಹಳ ಕಷ್ಟಪಟ್ಟು ಹಲವಾರು ಜನ್ಮಗಳ ಅನಂತರ ಮುಕ್ತಿಯನ್ನು ಪಡೆಯುತ್ತಾರೆ.

ಆಗಲೂ ಅವರು ಪಡೆಯುವ ಮುಕ್ತಿಯೆಂದರೆ ಭಗವಂತನ ನಿರಾಕಾರ ಬ್ರಹ್ಮ ಜ್ಯೋತಿಯಲ್ಲಿ ಲೀನರಾಗುವುದು. ಇದು ಭಾಗಶಃ ಮುಕ್ತಿ. ಅವರು ಮುಂದೆ ಈ ಐಹಿಕ ಜಗತ್ತಿಗೆ ಹಿಂದಿರುವ ಅಪಾಯವು ಇದ್ದೇ ಇರುತ್ತದೆ. ಆದರೆ ಭಕ್ತುನ ಭಗವಂತನ ದೇಹ ಮತ್ತು ಕರ್ಮಗಳ ದಿವ್ಯ ಸ್ವರೂಪವನ್ನು ಅರ್ಥಮಾಡಿಕೊಂಡರೆ ಸಾಕು. ಆತನು ಈ ದೇಹವನ್ನು ಬಿಟ್ಟ ನಂತರ ಭಗವಂತನ ನಿವಾಸವನ್ನು ಸೇರುತ್ತಾನೆ. ಈ ಐಹಿಕ ಜಗತ್ತಿಗೆ ಹಿಂತಿರುವ ಅಪಾಯವು ಇರುವುದಿಲ್ಲ.

ಬ್ರಹ್ಮ ಸಂಹಿತೆಯಲ್ಲಿ (5.33) ಭಗವಂತನಿಗೆ ಹಲವಾರು ರೂಪಗಳು, ಅವತಾರಗಳು ಉಂಟು ಎಂದು ಹೇಳಿದೆ. ಅದ್ವೈತಮ್ ಅಚ್ಯುತಮ್ ಅನಾದಿಮ್ ಅನಂತರೂಪಮ್. ಭಗವಂತನಿಗೆ ಅನೇಕ ದಿವ್ಯರೂಪಗಳಿದ್ದರೂ ಅವೆಲ್ಲ ಒಂದೇ. ದೇವೋತ್ತಮ ಪರಮ ಪುರುಷನು ಒಬ್ಬನೇ. ಇದು ಪ್ರಾಪಂಚಿಕ ಮನಸ್ಸಿನ ವಿದ್ವಾಂಸರಿಗೂ ಅನುಭವಗಮ್ಯ ತತ್ವಶಾಸ್ತ್ರಜ್ಞರಿಗೂ ಅರ್ಥವಾಗುವುದಿಲ್ಲ. ಆದರೂ ನಾವು ಇದನ್ನು ದೃಢಮನಸ್ಸಿನಿಂದ ಅರ್ಥಮಾಡಿಕೊಳ್ಳಬೇಕು. ವೇದಗಳಲ್ಲಿ (ಪುರುಷ ಬೋಧಿನೀ ಉಪನಿಷತ್ತು) ಹೇಳಿರುವಂತೆ -

ಏಕೋ ದೇವೋ ನಿತ್ಯಲೀಲಾನುರಕ್ತೋ

ಭಕ್ತಿವ್ಯಾಪೀ ಹೃದ್ಯನ್ತರಾತ್ಮಾ

ಒಬ್ಬನೇ ಆದ ದೇವೋತ್ತಮ ಪರಮ ಪುರುಷನು ತನ್ನ ಪರಿಶುದ್ಧ ಭಕ್ತರೊಂದಿಗೆ ಅನೇಕ ದಿವ್ಯಪೂರಗಳಲ್ಲಿ ನಿರಂತರವಾಗಿ ಲೀಲೆಗಳಲ್ಲಿ ತೊಡಗಿರುತ್ತಾನೆ. ವೇದದ ಈ ಮಾತನ್ನು ಸ್ವತಃ ಭಗವಂತನೇ ಗೀತೆಯ ಈ ಶ್ಲೋಕದಲ್ಲಿ ದೃಢಪಡಿಸುತ್ತಾನೆ. ಯಾರು ವೇದಗಳ ಪ್ರಮಾಣವನ್ನು ಒಪ್ಪಿ ದೇವೋತ್ತಮ ಪರಮ ಪುರುಷನ ಪ್ರಮಾಣವನ್ನು ಒಪ್ಪಿ ಈ ಸತ್ಯವನ್ನು ಸ್ವೀಕರಿಸುತ್ತಾನೋ, ಯಾರು ಊಹಾತ್ಮಕ ಚಿಂತನೆಗಳಲ್ಲಿ ಕಾಲವನ್ನು ವ್ಯರ್ಥಮಾಡುವುದಿಲ್ಲವೋ ಅವನು ಮುಕ್ತಿಯ ಅತ್ಯುನ್ನತ ಪರಿಪೂರ್ಣಸ್ಥಿತಿಯನ್ನು ತಲುಪುತ್ತಾನೆ. ಶ್ರದ್ಧೆಯಿಂದ ಈ ಸತ್ಯವನ್ನು ಸ್ವೀಕರಿಸಿದರೆ ಸಾಕು, ಮನುಷ್ಯನು ನಿಶ್ಚಯವಾಗಿಯೂ ಮುಕ್ತಿಯನ್ನು ಸಾಧಿಸುತ್ತಾನೆ.

ತತ್ತ್ವಮಸಿ ಎನ್ನುವ ವೇದದ ಮಾತು ಇಲ್ಲಿ ವಾಸ್ತವವಾಗಿ ಅನ್ವಯವಾಗುತ್ತದೆ. ಯಾರು ಶ್ರೀಕೃಷ್ಣನೇ ಪರಮೋನ್ನತನೆಂದು ಅರ್ಥಮಾಡಿಕೊಳ್ಳುತ್ತಾನೋ ಅಥವಾ ಭಗವಂತನಿಗೆ, ನೀನೇ ಪರಬ್ರಹ್ಮನು, ದೇವೋತ್ತಮ ಪುರುಷನು ಎಂದು ಹೇಳುತ್ತಾನೋ ಅವನು ನಿಶ್ಚಯವಾಗಿ ಆ ಕ್ಷಣವೇ ಮುಕ್ತಿಯನ್ನು ಪಡೆಯುತ್ತಾನೆ. ಆದುದರಿಂದ ಭಗವಂತನ ದಿವ್ಯಸಹಾಸವು ಅವನಿಗೆ ಲಭ್ವಾಗುವುದ ಖಚಿತ. ಬೇರೆ ಮಾತುಗಳಲ್ಲಿ ಹೇಳವುದಾದರೆ, ಭಗವಂತನ ಇಂತಹ ನಿಷ್ಠ ಭಕ್ತನು ಪರಿಪೂರ್ಣತೆಯನ್ನು ಸಾಧಿಸುತ್ತಾನೆ. ಇದನ್ನು ಕೇಳಗಿನ ವೇದವಾಕ್ಯವು ದೃಢಪಡಿಸುತ್ತದೆ -

ತಮೇಮ ವಿದಿತ್ವಾತಿ ಮೃತ್ಯುಮೇತಿ

ನಾನ್ಯಃ ಪನ್ಥಾ ವಿದ್ಯತೇಯನಾಯ

ದೇವೋತ್ತಮ ಪರಮ ಪುರುಷನಾದ ಭಗವಂತನನ್ನು ತಿಳಿದುಕೊಂಡ ಮಾತ್ರದಿಂದಲೇ ಮನುಷ್ಯನು ಹುಟ್ಟು, ಸಾವುಗಳಿಂದ ಪಾರಾಗಿ ಮುಕ್ತಿಯ ಪರಿಪೂರ್ಣಸ್ಥಿತಿಯನ್ನು ತಲಪಬಹುದು. ಈ ಪರಿಪೂರ್ಣತೆಯನ್ನು ಸಾಧಿಸಲು ಬೇರೆ ಯಾವ ಮಾರ್ಗವೂ ಇಲ್ಲ. (ಶ್ವೇತಾತ್ವತರ ಉಪನಿಷತ್ತು, 3.8) ಬೇರೆ ದಾರಿಯೇ ಇಲ್ಲ ಎನ್ನುವುದರ ಅರ್ಥ ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಅರಿಯದವನು ಖಂಡಿತವಾಗಿ ತಮೋಗುಣದಲ್ಲಿದ್ದಾನೆ ಎಂದರು.

ಅವನು ಜೇನುತುಪ್ಪದ ಸೀಸೆಯ ಹೊರ ಭಾಗವನ್ನು ನೆಕ್ಕಿದ ಮಾತ್ರಕ್ಕೆ, ಮುಕ್ತಿಯನ್ನು ಪಡೆಯಲಾರನು. ಇಂತಹ ಅನುಭವಗಮ್ಯ ತತ್ವಶಾಸ್ತ್ರಜ್ಞರು ಐಹಿಕ ಜಗತ್ತಿನಲ್ಲಿ ಬಹುಮುಖ್ಯ ಪಾತ್ರಗಳನ್ನು ವಹಿಸಬಹುದು. ಆದರೆ ಅವರು ಮುಕ್ತಿಗೆ ಅರ್ಹರಾಗಿಯೇ ಆಗುತ್ತಾರೆ ಎಂದೇನೂ ಇಲ್ಲ. ಇಂತಹ ಗರ್ವಿತರಾದ ಲೌಕಿಕ ವಿದ್ವಾಂಸರು ಭಗವದ್ಭಕ್ತನ ಅವ್ಯಾಜ ಕರುಣೆಗಾಗಿ ಕಾಯಬೇಕಾಗುತ್ತದೆ. ಆದುದರಿಂದ ಮನುಷ್ಯನು ಶ್ರದ್ದೆ ಮತ್ತು ಜ್ಞಾನಗಳಿಂದ ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು, ಮತ್ತು ಆ ಮೂಲಕ ಪರಿಪೂರ್ಣತೆಯನ್ನು ಪಡೆಯಬೇಕು.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.