Bhagavad Gita: ಭಗವಂತನಿಗೆ ಶರಣಾಗುವ ವ್ಯಕ್ತಿ ಜೀವನದಲ್ಲಿ ಸುಖವಾಗಿರುತ್ತಾನೆ; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಭಗವಂತನಿಗೆ ಶರಣಾಗುವ ವ್ಯಕ್ತಿ ಜೀವನದಲ್ಲಿ ಸುಖವಾಗಿರುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯದ 5ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ - 7 ಪರಾತ್ಪರ ಜ್ಞಾನ: ಶ್ಲೋಕ - 5
ಅಪರೇಯಮಿತಸ್ತ್ವನ್ಯಾಂ ಪ್ರಕೃತಿಂ ವಿದ್ಧಿ ಮೇ ಪರಾಮ್ |
ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್ ||5||
ಅನುವಾದ: ಮಹಾಬಾಹುವಾದ ಅರ್ಜನನೆ, ಇವಲ್ಲದೆ ನನ್ನ ಇನ್ನೂ ಶ್ರೇಷ್ಠವಾದ ಮತ್ತೊಂದು ಶಕ್ತಿಯಿದೆ. ಅದು ಈ ಭೌತಿಕ ಮತ್ತು ಕೆಳಮಟ್ಟದ ಪ್ರಕೃತಿಯ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವ ಜೀವಿಗಳಿಂದ ಆದದ್ದು.
ಭಾವಾರ್ಥ: ಜೀವಿಗಳು ಪರಮ ಪ್ರಭುವಿನ ಶ್ರೇಷ್ಠ ಪ್ರಕೃತಿಗೆ (ಅಥವಾ ಶಕ್ತಿಗೆ) ಸೇರಿದವರು ಎಂದು ಇಲ್ಲಿ ಸ್ಪಷ್ಟವಾಗಿ ಹೇಳಿದೆ. ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿಶಕ್ತಿ ಮತ್ತು ಅಹಂಕಾರ ಈ ಎಂಟು ಅಂಶಗಳಲ್ಲಿ ಪ್ರಕಟವಾಗುವ ಜಡವಸ್ತುವೇ ಕೆಳಮಟ್ಟದ ಶಕ್ತಿ, ಸ್ಥೂಲ (ಭೂಮಿ ಇತ್ಯಾದಿ) ಮತ್ತು ಸೂಕ್ಷ್ಮ (ಮನಸ್ಸು ಇತ್ಯಾದಿ) - ಐಹಿಕ ಪ್ರಕೃತಿಯ ಈ ಎರಡು ರೂಪಗಳು ಕೆಳಮಟ್ಟದ ಶಕ್ತಿಯ ಎರಡು ಉತ್ಪನ್ನಗಳು. ಈ ಕೆಳಮಟ್ಟದ ಶಕ್ತಿಗಳನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಜೀವಿಗಳು ಪರಮ ಪ್ರಭುವಿನ ಶ್ರೇಷ್ಠ ಶಕ್ತಿ, ಇಡೀ ಐಹಿಕ ಪ್ರಪಂಚವು ಕೆಲಸ ಮಾಡುವುದು ಈ ಶಕ್ತಿಯಿಂದಲೇ.
ವಿಶ್ವದ ಅಭಿವ್ಯಕ್ತಿಯನ್ನು ಶ್ರೇಷ್ಠಶಕ್ತಿಯಾದ ಜೀವಿಯು ಚಾಲನೆಗೊಳಿಸದಿದ್ದರೆ ಅದಕ್ಕೆ ಕೆಲಸಮಾಡುವ ಶಕ್ತಿಯೇ ಇಲ್ಲ.ಯಾವಾಗಲೂ ಶಕ್ತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಲ್ಲವರು ಶಕ್ತಿಶಾಲಿಗಳು. ಆದುದರಿಂದ ಜೀವಿಗಳನ್ನು ಯಾವಾಗಲೂ ಭಗವಂತನೇ ನಿಯಂತ್ರಿಸುತ್ತಾನೆ– ಜೀವಿಗೆ ಪ್ರತ್ಯೇಕ ಅಸ್ತಿತ್ವವಿಲ್ಲ. ಬುದ್ಧಿಹೀನರು ಯೋಚಿಸುವಂತೆ ಅದಕ್ಕೆ ಎಂದೂ ಸಮಾನಶಕ್ತಿ ಇರುವುದಿಲ್ಲ. ಜೀವಿಗಳಿಗೂ ಭಗವಂತನಿಗೂ ಇರುವ ವ್ಯತ್ಯಾಸವನ್ನು ಶ್ರೀಮದ್ಭಾಗವದಲ್ಲಿ (10.87.30) ಹೀಗೆ ವರ್ಣಿಸಿದೆ -
ಅಪರಿಮಿತಾ ಧ್ರುವಾಸ್ತನುಭೃತೋ ಯದಿ ಸರ್ವಗತಾಸ್
ತರ್ಹಿ ನ ಶಾಸ್ಯತೇತಿ ನಿಯಮೋ ಧ್ರುವ ನೇತರಥಾ |
ಅಜನಿ ಚ ಯತ್ಮಯಂ ತದ್ ಅವಿಮುಚ್ಯ ನಿಯನ್ತೃ ಭವೇತ್
ಸಮಮ್ ಅನುಜಾನತಾಂ ಯದ್ ಅಮತಂ ಮತದುಷ್ಟತಯಾ ||
ಇದನ್ನೂ ಓದಿ: ಮನಸ್ಸನ್ನ ಪರಮಾತ್ಮನಲ್ಲಿ ನಿಲ್ಲಿಸಿದರೆ ಇಂದ್ರಿಯಗಳನ್ನ ನಿಯಂತ್ರಿಸಬಹುದು; ಗೀತೆಯ ಅರ್ಥ ಹೀಗಿದೆ
ಓ ನಿತ್ಯ ಪರಮ ಪ್ರಭುವೇ ದೇಹಸ್ಥ ಜೀವಿಗಳು ನಿನ್ನಂತೆ ನಿತ್ಯರೂ ಸರ್ವಾಂತರಾಮಿಗಳೂ ಆಗಿದ್ದಲ್ಲಿ ಅವರು ನಿನ್ನ ಹತೋಟಿಯಲ್ಲಿ ರುತ್ತಿರಲಿಲ್ಲ. ಆದರೆ ಜೀವಿಗಳನ್ನು ನಿನ್ನ ಸೂಕ್ಷ್ಮಶಕ್ತಿಗಳೆಂದು ಪರಿಗಣಿಸಿದರೆ ಅವರು ಕೂಡಲೇ ನಿನ್ನ ಪರಮಾಧಿಕಾರಕ್ಕೆ ಒಳಗಾತ್ತಾರೆ. ಆದುದರಿಂದ ನಿಜವಾದ ಮುಕ್ತಿಯನ್ನು ಪಡೆಯಲು ಜೀವಿಗಳು ನಿನ್ನ ನಿಯಂತ್ರಣಕ್ಕೆ ಶರಣಾಗುವುದು ಅಗತ್ಯ. ಆ ಶರಣಾಗತಿಯು ಅವರಿಗೆ ಸುಖವನ್ನು ತರುತ್ತದೆ. ಆ ಸಹಜ ಸ್ಥಿತಿಯಲ್ಲಿ ಮಾತ್ರ ಅವರು ನಿಯಂತ್ರಕರಾಗುವುದು ಸಾಧ್ಯ. ಆದುದರಿಂದ, ಮಿತವಾದ ಜ್ಞಾನ ಪಡೆದು ದೇವರು ಮತ್ತು ಜೀವಿಗಳು ಎಲ್ಲ ರೀತಿಗಳಲ್ಲಿಯೂ ಸರಿಸಮಾನರು ಎನ್ನುವ ಅದ್ವೈತ ಸಿದ್ದಾಂತ ಪ್ರತಿಪಾದಕರು ವಾಸ್ತವವಾಗಿ ತಪ್ಪಾದ ಮತ್ತು ಕಲುಷಿತವಾದ ಅಭಿಪ್ರಾಯವನ್ನು ಅನುಸರಿಸುತ್ತಾರೆ."
ಪರಮ ಪ್ರಭುವಾದ ಕೃಷ್ಣನೊಬ್ಬನೇ ನಿಯಂತ್ರಿಸುವವನು. ಎಲ್ಲ ಜೀವಾತ್ಮರೂ ಅವನ ಆಜ್ಞಾಬದ್ಧರು. ಈ ಜೀವಾತ್ಮರು ಅವನ ಶ್ರೇಷ್ಠ ಶಕ್ತಿ. ಏಕೆಂದರೆ ಅವರ ಅಸ್ತಿತ್ವದ ಗುಣವು ಪರಮ ಪ್ರಭುವಿನ ಗುಣವೇ. ಆದರೆ ಶಕ್ತಿಯ ಪ್ರಮಾಣದಲ್ಲಿ ಅವರು ಎಂದೂ ಭಗವಂತನಿಗೆ ಸಮರಲ್ಲ. ಸ್ಥೂಲವೂ ಸೂಕ್ಷ್ಮವೂ ಆದ ಕೆಳಮಟ್ಟದ ಶಕ್ತಿಯನ್ನು (ಜಡವಸ್ತುವನ್ನು) ಬಳಸಿಕೊಳ್ಳುವಾಗ ಶ್ರೇಷ್ಠಶಕ್ತಿಯು (ಜೀವಾತ್ಮವು) ತನ್ನ ನಿಜವಾದ ಆಧ್ಯಾತ್ಮಿಕ ಮನಸ್ಸನ್ನೂ ಬುದ್ಧಿಶಕ್ತಿಯನ್ನೂ ಮರೆತು ಬಿಡುತ್ತದೆ. ಈ ಮರೆವಿಗೆ ಕಾರಣ, ಜೀವಾತ್ಮದ ಮೇಲೆ ಜಡವಸ್ತುವಿನ ಪ್ರಭಾವ, ಆದರೆ ಮಾಯಾ ಐಹಿಕ ಶಕ್ತಿಯ ಪ್ರಭಾವದಿಂದ ಜೀವಿಯು ಬಿಡುಗಡೆಯನ್ನು ಹೊಂದಿದಾಗ ಅದು ಮುಕ್ತಿಯನ್ನು ಪಡೆಯುತ್ತದೆ.
ಅಹಂಕಾರವು ಭೌತಿಕ ಮಾಯೆಯ ಪ್ರಭಾವದಿಂದ, "ನಾನು ಜಡವನ್ನು, ಐಹಿಕ ಗಳಿಕೆಯೆಲ್ಲ ನನ್ನದು", ಎಂದು ಯೋಚಿಸುತ್ತದೆ. ಅದಕ್ಕೆ ತನ್ನ ಸಹಜ ಸ್ವರೂಪದ ಅರಿವಾದಾಗ, ತಾನು ಎಲ್ಲ ರೀತಿಗಳಲ್ಲೂ ಭಗವಂತನೊಡನೆ ಒಂದಾಗುತ್ತೇನೆ ಎನ್ನುವ ಭಾವನೆಯೂ ಸೇರಿದಂತೆ ಎಲ್ಲ ಐಹಿಕ ಯೋಚನೆಗಳಿಂದಲೂ ಮುಕ್ತವಾಗುತ್ತದೆ. ಜೀವಿಯು ಕೃಷ್ಣನ ಹಲವು ಶಕ್ತಿಗಳಲ್ಲಿ ಒಂದು ಮಾತ್ರ. ಈ ಶಕ್ತಿಯು ಐಹಿಕ ಕಲ್ಮಷದಿಂದ ಬಿಡುಗಡೆಯಾದಾಗ ಅದು ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯನ್ನು ಪಡೆಯುತ್ತದೆ ಅಥವಾ ಮುಕ್ತವಾಗುತ್ತದೆ. ಗೀತೆಯು ಇದನ್ನು ದೃಢಪಡಿಸುತ್ತದೆ ಎಂದು ನಾವು ನಿರ್ಣಯಿಸಬಹುದು.
(This copy first appeared in Hindustan Times Kannada website. To read more like this please logon to kannada.hindustantimes.com )