ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಅಧ್ಯಾತ್ಮಿಕವನ್ನ ಆಯ್ಕೆ ಮಾಡಿಕೊಳ್ಳುವ ಮನುಷ್ಯನ ಮಾರ್ಗ ಸುರಕ್ಷಿತವಾಗಿರುತ್ತೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಅಧ್ಯಾತ್ಮಿಕವನ್ನ ಆಯ್ಕೆ ಮಾಡಿಕೊಳ್ಳುವ ಮನುಷ್ಯನ ಮಾರ್ಗ ಸುರಕ್ಷಿತವಾಗಿರುತ್ತೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಅಧ್ಯಾತ್ಮಿಕವನ್ನ ಆಯ್ಕೆ ಮಾಡಿಕೊಳ್ಳುವ ಮನುಷ್ಯನ ಮಾರ್ಗ ಸುರಕ್ಷಿತವಾಗಿರುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ ಶ್ಲೋಕ 26 ಮತ್ತು 27 ರಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 26

ಶುಕ್ಲಕೃಷ್ಣೇ ಗತೀ ಹ್ಯೇತೇ ಜಗತಃ ಶಾಶ್ವತೇ ಮತೇ |

ಏಕಯಾ ಯಾತ್ಯನಾವೃತ್ತಿಮನ್ಯಯಾವರ್ತತೇ ಪುನಃ ||26||

ಅನುವಾದ: ವೈದಿಕ ಅಭಿಪ್ರಾಯದಂತೆ ಈ ಜಗತ್ತನ್ನು ಬಿಡಲು ಎರಡು ರೀತಿಗಳಿವೆ - ಒಂದು ಬೆಳಕಿನಲ್ಲಿ, ಎರಡನೆಯದು ಕತ್ತಲಿನಲ್ಲಿ. ಬೆಳಕಿನಲ್ಲಿ ನಿರ್ಗಮಿಸಿದವನು ಹಿಂದಕ್ಕೆ ಬರುವುದಿಲ್ಲ. ಆದರೆ ಕತ್ತಲೆಯಲ್ಲಿ ನಿರ್ಗಮಿಸಿದವನು ಹಿಂದಕ್ಕೆ ಬರುತ್ತಾನೆ.

ಭಾವಾರ್ಥ: ಆಚಾರ್ಯ ಬಲದೇವ ವಿದ್ಯಾಭೂಷಣರು ಛಾಂದೋಗ್ಯ ಉಪನಿಷತ್ತಿನಿಂದ (5.10.35) ನಿರ್ಗಮನ ಮತ್ತು ಪುನರಾಗಮನಗಳ ಇದೇ ವರ್ಣನೆಯನ್ನು ಉದ್ಧರಿಸುತ್ತಾರೆ. ನೆನಪಿಗೆ ನಿಲುಕದ ಕಾಲದಿಂದ ಕಾಮ್ಯಕರ್ಮಿಗಳು ಮತ್ತು ತತ್ವಶಾಸ್ತ್ರದ ಊಹಾತ್ಮಕ ಚಿಂತನೆಗಳಲ್ಲಿ ತೊಡಗುವವರು ನಿರಂತರವಾಗಿ ಹೋಗುತ್ತಲಿದ್ದಾರೆ ಮತ್ತು ಬರುತ್ತಲಿದ್ದಾರೆ. ವಾಸ್ತವವಾಗಿ ಅವರಿಗೆ ಮೋಕ್ಷವು ದೊರಕುವುದಿಲ್ಲ. ಏಕೆಂದರೆ ಅವರು ಕೃಷ್ಣನಿಗೆ ಶಣಾಗುವುದಿಲ್ಲ.

8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 27

ನೈತೇ ಸೃತೀ ಪಾರ್ಥ ಜಾನನ್ ಯೋಗೀ ಮುಹ್ಯತಿ ಕಶ್ಚನ |

ತಸ್ಮಾತ್ಸರ್ವೇಷು ಕಾಲೇಷು ಯೋಗಯುಕ್ತೋ ಭವಾರ್ಜುನ ||27||

ಅನುವಾದ: ಅರ್ಜುನ, ಭಕ್ತರಿಗೆ ಈ ಎರಡು ಮಾರ್ಗಗಳು ತಿಳಿದಿದ್ದರೂ ಅವರು ಗೊಂದಲಕ್ಕೀಡಾಗುವುದಿಲ್ಲ. ಆದುದರಿಂದ ಸದಾ ಯೋಗಮುಕ್ತನಾಗಿರು.

ಭಾವಾರ್ಥ: ಐಹಿಕ ಜಗತ್ತನ್ನು ಬಿಡುವಾಗ ಆತ್ಮನು ಬಳಸುವ ವಿವಿಧ ಮಾರ್ಗಗಳಿಂದ ಅರ್ಜುನನ ಮನಸ್ಸು ಕಲಕಬಾರದೆಂದು ಕೃಷ್ಣನು ಇಲ್ಲಿ ಉಪದೇಶ ಮಾಡುತ್ತಿದ್ದಾನೆ. ಏರ್ಪಾಟಿನಿಂದ ನಿರ್ಗಮಿಸುತ್ತಾನೋ ಅಥವಾ ಅಕಸ್ಮಿಕವಾಗಿ ನಿರ್ಗಮಿಸುತ್ತಾನೋ ಎಂಬುದರ ಬಗ್ಗೆ ಪರಮ ಪ್ರಭುವಿನ ಭಕ್ತನು ಆತಂಕಪಡಬಾರದು. ಭಕ್ತನ ಮನಸ್ಸು ಕೃಷ್ಣನಲ್ಲಿ ದೃಢವಾಗಿರಬೇಕು. ಅವನು ಹರೇ ಕೃಷ್ಣ ಸಂಕೀರ್ತನೆ ಮಾಡಬೇಕು. ಈ ಎರಡು ಮಾರ್ಗಗಳ ವಿಷಯವಾಗಿ ಚಿಂತಿಸುವುದು ಕ್ಲೇಶದಾಯಕ ಎಂದು ಅವನು ತಿಳಿಯಬೇಕು.

ಕೃಷ್ಣಪ್ರಜ್ಞೆಯಲ್ಲಿ ತನ್ಮಯನಾಗುವುದಕ್ಕೆ ಅತ್ಯುತ್ತಮ ಮಾರ್ಗವೆಂದರೆ ಕೃಷ್ಣನ ಸೇವೆಯಲ್ಲಿ ಹೊಂದಿಕೊಳ್ಳುವುದು. ಇದರಿಂದ ಅಧ್ಯಾತ್ಮಿಕ ರಾಜ್ಯಕ್ಕೆ ಮನುಷ್ಯನ ಮಾರ್ಗವು ಸುರಕ್ಷಿತ, ಖಚಿತ ಮತ್ತು ನೇರವಾಗುತ್ತದೆ. ಈ ಶ್ಲೋಕದಲ್ಲಿ ಯೋಗಯುಕ್ತ ಎಂಬ ಪದವು ಅರ್ಥವತ್ತಾದದ್ದು. ಯೋಗದಲ್ಲಿ ದೃಢವಾಗಿರುವ ಮನುಷ್ಯನು ತನ್ನ ಎಲ್ಲ ಚಟುವಟಿಕೆಗಳಲ್ಲಿ ಸದಾ ಕೃಷ್ಣಪ್ರಜ್ಞೆಯಲ್ಲಿ ನಿರತನಾಗಿರುತ್ತಾನೆ. ಶ್ರೀ ರೂಪ ಗೋಸ್ವಾಮಿಯವರು, ಅನಾಸಕ್ತಸ್ಯ ವಿಷಯಾನ್ ಯಥಾರ್ಹಮ್ ಉಪಯುಞ್ಜತಃ - ಮನುಷ್ಯನು ಪ್ರಾಪಂಚಿಕ ವ್ಯವಹಾರಗಳಲ್ಲಿ ನಿರ್ಲಿಪ್ತನಾಗಿರಬೇಕು ಮತ್ತು ಎಲ್ಲವನ್ನು ಕೃಷ್ಣಪ್ರಜ್ಞೆಯಲ್ಲಿ ಮಾಡಬೇಕು ಎಂದು ಉಪದೇಶಿಸಿದ್ದಾರೆ.

ಯುಕ್ತವೈರಾಗ್ಯ ಎನ್ನುವ ಈ ರೀತಿಯಿಂದ ಮನುಷ್ಯನು ಪರಿಪೂರ್ಣತೆಯನ್ನು ಪಡೆಯುತ್ತಾನೆ. ಭಕ್ತನಿಗೆ ಪರಮ ನಿವಾಸಕ್ಕೆ ತನ್ನ ಮಾರ್ಗವನ್ನು ಭಕ್ತಿಪೂರ್ವಕ ಸೇವೆಯು ಖಚಿತಮಾಡಿದೆ ಎಂದು ತಿಳಿದಿರುತ್ತದೆ. ಆದುದರಿಂದ ಈ ವರ್ಣನೆಗಳಿಂದ ಆತನು ಮನಃಶಾಂತಿಯನ್ನು ಕಳೆದುಕೊಳ್ಳಬಾರದು.