Bhagavad Gita: ಭಗವಂತನನ್ನು ಅರ್ಥಮಾಡಿಕೊಂಡ ವ್ಯಕ್ತಿ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಭಗವಂತನನ್ನು ಅರ್ಥಮಾಡಿಕೊಂಡ ವ್ಯಕ್ತಿ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 3ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ 10 - ವಿಭೂತಿ ಯೋಗ - ಶ್ಲೋಕ-3
ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ |
ಅಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ ||3||
ಅನುವಾದ: ಯಾರು ನನ್ನನ್ನು ಜನ್ಮವಿಲ್ಲದವನು, ಅನಾದಿ ಮತ್ತು ಎಲ್ಲ ಲೋಕಗಳ ಪರಮ ಪ್ರಭು ಎಂದು ಅರಿಯುತ್ತಾನೆಯೋ ಅವನು ಮಾತ್ರ, ಮನುಷ್ಯರಲ್ಲಿ ಭ್ರಾಂತಿಯಿಲ್ಲದವನಾಗಿ, ಎಲ್ಲ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ.
ಭಾವಾರ್ಥ: ಏಳನೆಯ ಅಧ್ಯಾಯದಲ್ಲಿ ಹೇಳಿರುವಂತೆ (7.3) ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ- ತಮ್ಮನ್ನು ಅಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಏರಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಸಾಮಾನ್ಯ ಮನುಷ್ಯರಲ್ಲ. ಅಧ್ಯಾತ್ಮಿಕ ಸಾಕ್ಷಾತ್ಕಾರದ ತಿಳುವಳಿಕೆಯಿಲ್ಲದ ಲಕ್ಷಾಂತರ ಮಂದಿಗಿಂತ ಅವರು ಶ್ರೇಷ್ಠರು. ತಮ್ಮ ಅಧ್ಯಾತ್ಮಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ವಾಸ್ತವವಾಗಿ ಪ್ರಯತ್ನಿಸುತ್ತಿರುವವರಲ್ಲಿ ಕೃಷ್ಣನು ದೇವೋತ್ತಮ ಪರಮ ಪುರುಷ, ಎಲ್ಲದರ ಒಡೆಯ, ಅವನಿಗೆ ಹುಟ್ಟಿಲ್ಲ ಎನ್ನುವ ತಿಳುವಳಿಕೆಯನ್ನು ಪಡೆಯುವವನೇ ಅತ್ಯಂತ ಯಶಸ್ವಿಯಾಗಿ ಆತ್ಮಸಾಕ್ಷಾತ್ಕಾರವನ್ನು ಪಡೆದವನು. ಈ ಹಂತದಲ್ಲಿ ಮಾತ್ರ, ಕೃಷ್ಣನ ಪರಮ ಸ್ಥಾನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡವನು ಎಲ್ಲ ಪಾಪ ಪ್ರತಿಕ್ರಿಯೆಗಳಿಂದ ಸಂಪೂರ್ಣವಾಗಿ ಬಿಡುಗಡೆಯಾಗುತ್ತಾನೆ (Bhagavad Gita in Kannada).
ಇಲ್ಲಿ ಪ್ರಭುವನ್ನು ಅಜ ಎಂದು ವರ್ಣಿಸಿದೆ. ಹೀಗೆಂದರೆ ಹುಟ್ಟು ಇಲ್ಲದವನು. ಆದರೆ ಅವನು ಅಜ ಎಂದ ಎರಡನೆಯ ಅಧ್ಯಾಯದಲ್ಲಿ ವರ್ಣಿಸಿದ ಜೀವಿಗಳಿಗಿಂತ ಭಿನ್ನನು. ಐಹಿಕ ಮೋಹದಿಂದಾಗಿ ಹುಟ್ಟಿ ಸಾಯುತ್ತಿರುವ ಜೀವಿಗಳಿಗಿಂತ ಪ್ರಭುವು ಬೇರೆಯಾದವನು. ಬದ್ಧ ಆತ್ಮರು ತಮ್ಮ ದೇಹಗಳನ್ನು ಬದಲಾಯಿಸುತ್ತಿರುತ್ತಾರೆ. ಆದರೆ ಅವನ ದೇಹವು ಬದಲಾಗುವಂತಿಲ್ಲ. ಈ ಐಹಿಕ ಲೋಕಕ್ಕೆ ಬಂದಾಗಲೂ ಅವನು ಹುಟ್ಟು ಇಲ್ಲದವನಾಗಿಯೇ ಬರುತ್ತಾನೆ. ಆದುದರಿಂದ ತನ್ನ ಅಂತರಂಗ ಶಕ್ತಿಯಿಂದ ಪ್ರಭುವು ಕೆಳಮಟ್ಟದ, ಐಹಿಕ ಶಕ್ತಿಯ ಅಧೀನನಲ್ಲ, ಅವನು ಯಾವಾಗಲೂ ಮೇಲಿನ ಶಕ್ತಿಯಲ್ಲಿಯೇ ಇರುತ್ತಾನೆ ಎಂದು ನಾಲ್ಕನೆಯ ಅಧ್ಯಾಯದಲ್ಲಿ ಹೇಳಿದೆ.
ಈ ಶ್ಲೋಕದಲ್ಲಿ ವೇತ್ತಿ ಲೋಕಮಹೇಶ್ವರಮ್ ಎನ್ನುವ ಮಾತುಗಳು, ಪ್ರಭು ಕೃಷ್ಣನು ವಿಶ್ವದ ಗ್ರಹವ್ಯೂಹಗಳ ಪರಮ ಒಡೆಯ ಎನ್ನುವುದನ್ನು ಸೂಚಿಸುತ್ತವೆ. ಆತನು ಸೃಷ್ಟಿಗೆ ಮೊದಲೇ ಇದ್ದವನು. ಸೃಷ್ಟಿಯಿಂದ ಬೇರೆಯಾದವನು. ಎಲ್ಲ ದೇವತೆಗಳೂ ಈ ಐಹಿಕ ಜಗತ್ತಿನಲ್ಲಿ ಸೃಷ್ಟಿಯಾದವರು, ಆದರೆ ಕೃಷ್ಣನು ಸೃಷ್ಟಿಯಾಗಲಿಲ್ಲ ಎಂದು ಹೇಳಿದೆ. ಆದುದರಿಂದ ಕೃಷ್ಣನು ಬ್ರಹ್ಮ ಮತ್ತು ಶಿವನಂತಹ ಮಹಾನ್ ದೇವತೆಗಳಿಗಿಂತ ಭಿನ್ನವಾದವನು.
ಆತನು ಬ್ರಹ್ಮನ, ಶಿವನ ಮತ್ತು ಇತರ ದೇವತೆಗಳ ಸೃಷ್ಟಿಕರ್ತನಾದುದರಿಂದ ಎಲ್ಲ ಲೋಕಗಳಲ್ಲಿ ಪರಮ ಪುರುಷನು. ಕೃಷ್ಣನು ಸೃಷ್ಟಿಯಾದ ಎಲ್ಲದರಿಂದ ಭಿನ್ನನು. ಹೀಗೆ ಅವನನ್ನು ಅರಿತವರು ಕೂಡಲೇ ಎಲ್ಲ ಪಾಪಗಳಿಂದ ಬಿಡುಗಡೆ ಹೊಂದುತ್ತಾರೆ. ಪರಮ ಪ್ರಭುವಿನ ಜ್ಞಾನವನ್ನು ಪಡೆಯಲು ಮನುಷ್ಯನು ಎಲ್ಲ ಪಾಪಗಳಿಂದ ಮುಕ್ತನಾಗಿರಬೇಕು. ಭಗವದ್ಗೀತೆಯಲ್ಲಿ ಹೇಳಿದಂತೆ, ಭಕ್ತಿಸೇವೆಯಿಂದ ಮಾತ್ರ ಅವನನ್ನು ತಿಳಿಯಲು ಸಾಧ್ಯ. ಬೇರಾವ ಮಾರ್ಗವೂ ಇಲ್ಲ ಎಂದು ಭಗವದ್ಗೀತೆಯ 10ನೇ ಅಧ್ಯಾಯದ ಶ್ಲೋಕ 3 ರಲ್ಲಿ ಹೇಳಲಾಗಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)