ಕನ್ನಡ ಸುದ್ದಿ  /  Astrology  /  Spiritual News Bhagavad Gita Updesh Lord Krishna Ignorant People Remain Confused Bhagavad Gita Quotes In Kannada Rmy

Bhagavad Gita: ಬಯಕೆ, ದ್ವೇಷಗಳಿಂದ ಕೂಡಿದ ಅಜ್ಞಾನಿ ಗೂಂದಲಗಳಲ್ಲೇ ಉಳಿಯುತ್ತಾನೆ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಬಯಕೆ, ದ್ವೇಷಗಳಿಂದ ಕೂಡಿದ ಅಜ್ಞಾನಿ ಗೂಂದಲಗಳಲ್ಲೇ ಉಳಿಯುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯದ 26 ಮತ್ತು 27ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 26

ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ |

ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ||26||

ಅನುವಾದ: ಅರ್ಜುನಾ, ದೇವೋತ್ತಮ ಪರಮ ಪುರುಷನಾಗಿ ನಾನು ಹಿಂದೆ ಆದದ್ದನ್ನು, ಈಗ ಆಗುತ್ತಿರುವುದನ್ನು, ಇನ್ನು ಮುಂದೆ ಬರುವುದನ್ನೂ ಬಲ್ಲೆ. ನಾನು ಎಲ್ಲ ಜೀವಿಗಳನ್ನೂ ಬಲ್ಲೆ; ಆದರೆ ನನ್ನನ್ನು ಬಲ್ಲವರು ಯಾರೂ ಇಲ್ಲ.

ಭಾವಾರ್ಥ: ಇಲ್ಲಿ ಸಾಕಾರ ಮತ್ತು ನಿರಾಕಾರಗಳ ಪ್ರಶ್ನೆಯನ್ನು ಸ್ಪಷ್ಟವಾಗಿ ಹೇಳಿದೆ. ನಿರಾಕಾರವಾದಿಗಳು ಪರಿಗಣಿಸುವಂತೆ, ದೇವೋತ್ತಮ ಪರಮ ಪುರುಷನ ರೂಪವಾದ ಕೃಷ್ಣನು ಮಾಯೆಯಾಗಿದಿದ್ದರೆ, ಆತನು ಜೀವಿಯಂತೆ ತನ್ನ ದೇಹವನ್ನು ಬದಲಾಯಿಸುತ್ತಿದ್ದನು, ತನ್ನ ಭೂತಕಾಲವನ್ನು ಸಂಪೂರ್ಣವಾಗಿ ಮರೆತು ಬಿಡುತ್ತಿದ್ದನು. ಭೌತಿಕ ಶರೀರವಿರುವವನು ಹಿಂದಿನ ಜನ್ಮವನ್ನು ನೆನಪಿಟ್ಟುಕೊಳ್ಳಲಾರ, ಮುಂದಿನ ಜನ್ಮವನ್ನು ಹೇಳಲಾರ, ಈ ಜನ್ಮದ ಫಲವನ್ನು ಮೊದಲೇ ಹೇಳಲಾರ. ಆದುದರಿಂದ ಆತನು ಭೂತ, ವರ್ತಮಾನ ಮತ್ತು ಭವಿಷ್ಯಗಳನ್ನು ತಿಳಿಯಲಾರ. ಸಾಮಾನ್ಯ ಮನುಷ್ಯನಂತಲ್ಲದೆ ಶ್ರೀಕೃಷ್ಣನು ಹಿಂದೆ ಏನಾಯಿತು, ವರ್ತಮಾನ ಕಾಲದಲ್ಲಿ ಏನಾಗುತ್ತಿದೆ ಮತ್ತು ಮುಂದೆ ಏನಾಗುವುದು ಎನ್ನುವುದು ತನಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಸ್ಪಷ್ಟವಾಗಿ ಹೇಳುತ್ತಾನೆ.

ಲಕ್ಷಾಂತರ ವರ್ಷಗಳ ಹಿಂದೆ ಸೂರ್ಯದೇವನಾದ ವಿವಸ್ವಾನನಿಗೆ ಉಪದೇಶ ಮಾಡಿದುದು ಶ್ರೀಕೃಷ್ಣನಿಗೆ ನೆನಪಿದೆ ಎನ್ನುವುದನ್ನು ನಾಲ್ಕನೆಯ ಅಧ್ಯಾಯದಲ್ಲಿ ನೋಡಿದ್ದೇವೆ. ಪರಮಾತ್ಮನಾಗಿ ಶ್ರೀಕೃಷ್ಣನು ಪ್ರತಿಯೊಬ್ಬ ಜೀವಿಯ ಹೃದಯದಲ್ಲಿ ಇರುವುದರಿಂದ ಆತನು ಪ್ರತಿಯೊಂದು ಜೀವಿಯನ್ನೂ ಬಲ್ಲ. ಆದರೆ ಪರಮಾತ್ಮನಾಗಿ ಆತನು ಪ್ರತಿಯೊಂದು ಜೀವಿಯಲ್ಲಿ ನೆಲೆಸಿದ್ದರೂ ಮತ್ತು ದೇವೋತ್ತಮ ಪರಮ ಪುರುಷನಾಗಿ ಆತನ ಸನ್ನಿಧಿಯಿದ್ದರೂ ಮಂದಬುದ್ಧಿಯವರು ಮಾತ್ರ ನಿರಾಕಾರ ಬ್ರಹ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡೂ ಶ್ರೀಕೃಷ್ಣನನ್ನು ಪರಮ ಪುರುಷನೆಂದು ತಿಳಿಯಲಾರರು.

ನಿಶ್ಚಯವಾಗಿಯೂ ಶ್ರೀಕೃಷ್ಣನ ದಿವ್ಯ ಶರೀರವು ನಾಶವಾಗುವುದಿಲ್ಲ. ಆತನು ಸೂರ್ಯನಂತೆ ಇದ್ದಾನೆ, ಮಾಯೆಯ ಮೋಡದಂತೆ ಇದೆ. ಐಹಿಕ ಜಗತ್ತಿನಲ್ಲಿ ಸೂರ್ಯನೂ, ಮೋಡಗಳೂ, ಬೇರೆ ಬೇರೆ ನಕ್ಷತ್ರಗಳೂ, ಗ್ರಹಗಳೂ ಇರುವುದನ್ನು ಕಾಣುತ್ತೇವೆ. ಆಕಾಶದಲ್ಲಿ ಇವುಗಳಲ್ಲವನ್ನೂ ಮೋಡಗಳು ಸ್ವಲ್ಪಕಾಲ ಮುಚ್ಚಬಹುದು. ಆದರೆ ನಮ್ಮ ಪರಿಮಿತವಾದ ದೃಷ್ಟಿಗೆ ಮಾತ್ರ ಹೀಗೆ ಮುಚ್ಚಿದ್ದು ಕಾಣುತ್ತದೆ. ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ನಿಜವಾಗಿ ಮುಚ್ಚಿಹೋಗಿರುವುದಿಲ್ಲ. ಹಾಗೆಯೇ ಮಾಯೆಯ ಪರಮ ಪ್ರಭುವನ್ನು ಮರೆಮಾಡಲಾರದು. ಆತನ ಅಂತರಂಗ ಶಕ್ತಿಯ ಕಾರಣದಿಂದ ಮಂದಮತಿಗಳಾದ ಮನುಷ್ಯನರು ಅವನನ್ನು ಕಾಣಲಾರರು. ಈ ಅಧ್ಯಾಯದ ಮೂರನೆಯ ಶ್ಲೋಕದಲ್ಲಿ ಹೇಳಿದಂತೆ ಲಕ್ಷಲಕ್ಷ ಮಂದಿ ಮನುಷ್ಯರಲ್ಲಿ ಕೆಲವರು ಮಾತ್ರ ಮನುಷ್ಯ ಜನ್ಮದಲ್ಲಿ ಪರಿಪೂರ್ಣರಾಗಲು ಪ್ರಯತ್ನಿಸುತ್ತಾರೆ. ಹೀಗೆ ಪರಿಪೂರ್ಣರಾದ ಸಹಸ್ರಾರು ಮಂದಿಯಲ್ಲಿ ಒಬ್ಬನಿಗೆ ಸಹ ಕೃಷ್ಣನು ಅರ್ಥವಾಗುವುದು ವಿರಳ. ನಿರಾಕಾರ ಬ್ರಹ್ಮನ್ ಅಥವಾ ಅಂತರ್ಯಾಮಿ ಪರಮಾತ್ಮನ ಸಾಕ್ಷಾತ್ಕಾರದಿಂದ ಒಬ್ಬ ಮನುಷ್ಯನು ಪರಿಪೂರ್ಣವಾದರೂ ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನನ್ನು, ಕೃಷ್ಣಪ್ರಜ್ಞೆಯಿಲ್ಲದೆ ಅರ್ಥಮಾಡಿಕೊಳ್ಳಲಾರ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 27

ಇಚ್ಛಾದ್ವೇಷಸಮುತ್ಥೇನ ದ್ವನ್ದ್ವಮೋಹೇನ ಭಾರತ |

ಸರ್ವಭೂತಾನಿ ಸಮ್ಮೋಹಂ ಸರ್ವೇ ಯಾನ್ತಿ ಪರನ್ತಪ ||27||

ಅನುವಾದ: ಭರತವಂಶಜನಾದ ಅರ್ಜನನೆ, ಶತ್ರುಗಳನ್ನು ಜಯಿಸುವವನೆ, ಆಸೆ ದ್ವೇಷಗಳಿಂದ ಹುಟ್ಟಿದ ದ್ವಂದ್ವಗಳಿಂದಾಗಿ ಎಲ್ಲ ಜೀವಿಗಳೂ ಹುಟ್ಟುವಾಗಲೇ ಭ್ರಾಂತಿಯನ್ನುು ಹೊಂದಿರುತ್ತವೆ.

ಭಾವಾರ್ಥ: ಪರಿಶುದ್ಧ ಜ್ಞಾನವಾದ ಪರಮ ಪ್ರಭುವಿಗೆ ಅಧೀನನಾಗಿರುವುದೇ ಜೀವಿಯ ಸಹಜ ಸ್ವರೂಪ. ಭ್ರಾಂತಿಯಿಂದ ಮನುಷ್ಯನು ಈ ಪರಿಶುದ್ಧ ಜ್ಞಾನದಿಂದ ಬೇರೆಯಾದಾಗ ಮಾಯಾಶಕ್ತಿಯು ಅವನನ್ನು ನಿಯಂತ್ರಿಸುತ್ತದೆ. ಆತನು ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳಲಾರ. ಈ ಮಾಯಾಶಕ್ತಿಯು ಬಯಕೆ ಮತ್ತು ದ್ವೇಷಗಳ ದ್ವಂದ್ವದಲ್ಲಿ ಪ್ರಕಟವಾಗುತ್ತದೆ. ಬಯಕೆ ಮತ್ತು ದ್ವೇಷಗಳಿಂದ ಅಜ್ಞಾನಿಯು ಪರಮ ಪ್ರಭುವಿನೊಡನೆ ಒಂದಾಗಲು ಬಯಸುತ್ತಾನೆ ಮತ್ತು ದೇವೋತ್ತಮ ಪರಮ ಪುರುಷನಾದ ಕೃಷ್ಣನ ವಿಷಯದಲ್ಲಿ ಅಸೂಯೆ ಪಡುತ್ತಾನೆ.

ಭ್ರಾಂತಿಗೆ ಒಳಗಾಗದ ಮತ್ತು ಬಯಕೆ, ದ್ವೇಷಗಳಿಂದ ಕಲುಷಿತರಾಗದ ಪರಿಶುದ್ಧಭಕ್ತರು, ಪ್ರಭು ಶ್ರೀಕೃಷ್ಣನು ತನ್ನ ಒಳಗಿನ ಶಕ್ತಿಗಳಿಂದ ಕಾಣಿಸಿಕೊಳ್ಳುತ್ತಾನೆ ಎಂದು ಅರ್ಥಮಾಡಿಕೊಳ್ಳಬಲ್ಲರು. ಆದರೆ ದ್ವಂದ್ವ ಮತ್ತು ಅಜ್ಞಾನಗಳಿಂದ ಭ್ರಮೆಗೊಳಗಾದವರು ದೇವೋತ್ತಮ ಪರಮ ಪುರುಷನು ಐಹಿಕ ಶಕ್ತಿಗಳಿಂದ ಸೃಷ್ಟಿಯಾಗಿದ್ದಾನೆ ಎಂದು ಯೋಚಿಸುತ್ತಾರೆ. ಅದು ಅವರ ದುರದೃಷ್ಟ. ಹೀಗೆ ಭ್ರಾಂತಿಗೊಳಗಾದವರಿಗೆ ಕೆಲವು ಲಕ್ಷಣಗಳಿರುತ್ತವೆ. ಅವರು ಇವಳು ನನ್ನ ಹೆಂಡಿತ, ಇದು ನನ್ನ ಮನೆ, ನಾನು ಈ ಮನೆಯ ಯಜಮಾನ, ಈ ಹೆಂಡತಿಯ ಗಂಡ, ಎಂದೆಲ್ಲ ಯೋಚಿಸುತ್ತಾರೆ. ಇದರಿಂದ ಅವರು ಅಪರ್ಕೀತಿ ಮತ್ತು ಕೀರ್ತಿ, ದುಃಖ ಮತ್ತು ಸುಖ, ಹೆಂಗಸು ಮತ್ತು ಗಂಡಸು, ಸಂತೋಷ ಮತ್ತು ನೋವು ಮೊದಲಾದ ದ್ವಂದ್ವಗಳಲ್ಲಿ ಉಳಿಯುತ್ತಾರೆ. ಇವು ಭ್ರಾಂತಿಯಿಂದಾದ ದ್ವಂದ್ವಗಳು. ಹೀಗೆ ದ್ವಂದ್ವಗಳಿಂದ ಭ್ರಮಿತರಾದವರು ಸಂಪೂರ್ಣವಾಗಿ ದಡ್ಡರು. ಆದುದರಿಂದ ಅವರು ದೇವೋತ್ತಮ ಪರಮ ಪುರುಷನನ್ನು ಅರಿಯಲಾರರು.