ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಕ್ತರ ರಕ್ಷಣೆಗಾಗಿ ಭಗವಂತ ಕಲ್ಕಿಯ ಅವತಾರದಲ್ಲಿ ರಾಕ್ಷಸರನ್ನು ಕೊಲ್ಲುತ್ತಾನೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಕ್ತರ ರಕ್ಷಣೆಗಾಗಿ ಭಗವಂತ ಕಲ್ಕಿಯ ಅವತಾರದಲ್ಲಿ ರಾಕ್ಷಸರನ್ನು ಕೊಲ್ಲುತ್ತಾನೆ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಭಕ್ತರ ರಕ್ಷಣೆಗಾಗಿ ಭಗವಂತ ಕಲ್ಕಿಯ ಅವತಾರದಲ್ಲಿ ರಾಕ್ಷಸರನ್ನು ಕೊಲ್ಲುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ ಶ್ಲೋಕ 17 ರಲ್ಲಿ ಸಾರಾಂಶ ಹೀಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 17

ಸಹಸ್ರಯುಗಪರ್ಯನ್ತಮಹರ್ಯದ್ ಬ್ರಹ್ಮಣೋ ವಿದುಃ|

ರಾತ್ರಿಂ ಯುಗಸಹಸ್ರಾನ್ತಾಂ ತೇಹೋರಾತ್ರವಿದೋ ಜನಾಃ ||17||

ಅನುವಾದ: ಮನುಷ್ಯನ ಲೆಕ್ಕದ ಪ್ರಕಾರ ಒಂದು ಸಾವಿರ ಯುಗಗಳು ಸೇರಿ ಬ್ರಹ್ಮನ ಒಂದು ದಿನ. ಅವನ ರಾತ್ರಿಗೂ ಇಷ್ಟೇ ಅವಧಿ.

ಭಾವಾರ್ಥ: ಐಹಿಕ ವಿಶ್ವದ ಅವಧಿಯು ಮಿತವಾದದ್ದು. ಅದು ಕಲ್ಪಗಳ ಚಕ್ರಗಳಲ್ಲಿ ಅಭಿವ್ಯಕ್ತವಾಗುತ್ತದೆ. ಒಂದು ಕಲ್ಪವೆಂದರೆ ಬ್ರಹ್ಮನ ಒಂದು ಹಗಲು. ಬ್ರಹ್ಮನ ಒಂದು ಹಗಲೆಂದರೆ ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿ ಎನ್ನುವ ನಾಲ್ಕುಯುಗಗಳ ಒಂದು ಸಾವಿರ ಚಕ್ರಗಳು. ಪುಣ್ಯ, ಜ್ಞಾನ ಮತ್ತು ಧರ್ಮಗಳು ಸತ್ಯಯುಗದ ಲಕ್ಷ್ಮಣಗಳು. ಆಗ ಅಜ್ಞಾನ ಮತ್ತು ಪಾಪ ಇರುವುದಿಲ್ಲ. ಈ ಯುಗದ ಅವಧಿ 17,28,000 ವರ್ಷಗಳು. ತ್ರೇತಾಯುಗದಲ್ಲಿ ಪಾಪವು ಕಾಲಿಡುತ್ತದೆ. ಈ ಯುಗದ ಅವಧಿ 12,96,000 ವರ್ಷಗಳು. ದ್ವಾಪರ ಯುಗದಲ್ಲಿ ಪುಣ್ಯ ಮತ್ತು ಧರ್ಮಗಳು ಇನ್ನೂ ಕ್ಷೀಣವಾಗುತ್ತವೆ. ಪಾಪವು ಹೆಚ್ಚುತ್ತದೆ.

ಈ ಯುಗದ ಅವಧಿ 8,64,000 ವರ್ಷಗಳು. ಕಡೆಯದಾಗಿ (ನಾವು ಕಳೆದ 5000 ವರ್ಷಗಳಿಂದ ಅನುಭವಿಸುತ್ತಿರುವ) ಕಲಿಯುಗದಲ್ಲಿ ಪುಣ್ಯವು ಸ್ವಲ್ಪ ಹೆಚ್ಚು ಕಡಮೆ ಇಲ್ಲವೇ ಇಲ್ಲ ಎನ್ನುವಂತಾಗಿ ಕಲಹ, ಅಜ್ಞಾನ, ಅಧರ್ಮ ಮತ್ತು ಪಾಪಗಳು ಸಮೃದ್ಧವಾಗುತ್ತವನೆ. ಈ ಯುಗದ ಅಂತ್ಯದಲ್ಲಿ ಪರಮ ಪ್ರಭುವೇ ಕಲ್ಕಿಯ ಅವತಾರವಾಗಿ ಕಾಣಿಸಿಕೊಳ್ಳುತ್ತಾನೆ. ರಾಕ್ಷಸರನ್ನು ಕೊಲ್ಲುತ್ತಾನೆ. ತನ್ನ ಭಕ್ತರನ್ನು ರಕ್ಷಿಸುತ್ತಾನೆ ಮತ್ತು ಇನ್ನೊಂದು ಸತ್ಯ ಯುಗವನ್ನು ಪ್ರಾರಂಭಿಸುತ್ತಾನೆ. ಆಗ ಪ್ರಕ್ರಿಯೆಯು ಮತ್ತೆ ಪ್ರಾರಂಭವಾಗುತ್ತದೆ. ಈ ನಾಲ್ಕು ಯುಗಗಳು ಒಂದು ಸಾವಿರ ಬಾರಿ ಆವರ್ತವಾದರೆ ಬ್ರಹ್ಮನ ಒಂದು ಹಗಲು. ಅವನ ಒಂದು ರಾತ್ರಿಯೂ ಇಷ್ಟೇ ದೀರ್ಘವಾದದ್ದು.

ಬ್ರಹ್ಮನು ಇಂತಹ ಒಂದು ನೂರು ವರ್ಷಗಳ ಕಾಲ ಬದುಕಿದ್ದು ಅನಂತರ ಸಾಯುತ್ತಾನೆ. ಈ ಒಂದು ನೂರು ವರ್ಷಗಳೆಂದರೆ ಭೂಲೋಕದ ಲೆಕ್ಕಾಚಾರದಂತೆ 311 ಟ್ರಿಲಿಯನ್ ಮತ್ತು 40 ಬಿಲಿಯನ್ ಭೂಮಿಯ ವರ್ಷಗಳಷ್ಟಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಬ್ರಹ್ಮನ ಆಯುಷ್ಯವು ಪರಮಾಶ್ಚರ್ಯಕರವೂ ಅಂತ್ಯವಿಲ್ಲದ್ದೂ ಆಗಿ ತೋರುತ್ತದೆ. ಆದರೆ ಆನಂತತೆಯ ದೃಷ್ಟಿಯಿಂದ ಅದು ಮಿಂಚು ಹೊಳೆಯುವಷ್ಟು ಕಾಲದಷ್ಟು ಹ್ರಸ್ವ. ಕಾರಣಸಾಗರದಲ್ಲಿ ಅಸಂಖ್ಯಾತ ಬ್ರಹ್ಮರಿದ್ದಾರೆ. ಅಟ್ಲಾಂಟಿಕ್ ಸಾಗರದಲ್ಲಿ ಗುಳ್ಳೆಗಳು ಮೇಲೆದ್ದು ಮರೆಯಾಗುವಂತೆ ಇವರೂ ಮೇಲೆದ್ದು ಮರೆಯಾಗುತ್ತಾರೆ. ಬ್ರಹ್ಮನೂ ಅವನ ಸೃಷ್ಟಿಯೂ ಐಹಿಕ ವಿಶ್ವದ ಭಾಗಗಳು. ಆದುದರಿಂದ ಅವರು ನಿರಂತರ ಪರಿವರ್ತನೆಯಲ್ಲಿರುತ್ತಾರೆ.

ಐಹಿಕ ವಿಶ್ವದಲ್ಲಿ ಬ್ರಹ್ಮನಿಗೂ ಸಹ ಹುಟ್ಟು, ಮುಪ್ಪು, ರೋಗ ಮತ್ತು ಸಾವುಗಳ ಪ್ರಕ್ರಿಯೆಯಿಂದ ಬಿಡುಗಡೆಯಿಲ್ಲ. ಆದರೆ ಈ ವಿಶ್ವದ ನಿರ್ವಹಣೆಯಲ್ಲಿ ಅವನು ನೇರವಾಗಿ ಪರಮ ಪ್ರಭುವಿನ ಸೇವೆಯಲ್ಲಿ ನಿರತನಾಗಿರುತ್ತಾನೆ. ಆದುದರಿಂದ ಅವನಿಗೆ ಕೂಡಲೆ ಮುಕ್ತಿ ದೊರೆಯುತ್ತದೆತ ಉನ್ನತ ಸನ್ಯಾಸಿಗಳನ್ನು ಬ್ರಹ್ಮನ ವಿಶಿಷ್ಟ ಲೋಕವಾದ ಬ್ರಹ್ಮಲೋಕಕ್ಕೆ ಮೇಲೇರಿಸಲಾಗುತ್ತದೆ. ಐಹಿಕ ವಿಶ್ವದಲ್ಲಿ ಬ್ರಹ್ಮಲೋಕವೇ ಅತ್ಯುನ್ನತ ಲೋಕ ಮತ್ತು ಎಲ್ಲ ಸ್ವರ್ಗಲೋಕಗಳ ವ್ಯೂಹ ನಾಶವಾದಾಗಲೂ ಬ್ರಹ್ಮಲೋಕವು ಉಳಿಯುತ್ತದೆ. ಆದರೆ ಭೌತಿಕ ಪ್ರಕೃತಿಯ ನಿಯಮಕ್ಕನುಗುಣವಾಗಿ ಕಾಲಕ್ರಮದಲ್ಲಿ ಬ್ರಹ್ಮನೂ, ಬ್ರಹ್ಮಲೋಕದ ಎಲ್ಲ ನಿವಾಸಿಗಳೂ ಸಾವಿನ ವಶವಾಗುತ್ತಾರೆ.