Bhagavad Gita: ಈ ಎರಡು ಶಕ್ತಿಗಳಿಂದಾಗಿ ಭಗವಂತನು ಎಲ್ಲೆಲ್ಲೂ ಇದ್ದಾನೆ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಈ ಎರಡು ಶಕ್ತಿಗಳಿಂದಾಗಿ ಭಗವಂತನು ಎಲ್ಲೆಲ್ಲೂ ಇದ್ದಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಈ ಎರಡು ಶಕ್ತಿಗಳಿಂದಾಗಿ ಭಗವಂತನು ಎಲ್ಲೆಲ್ಲೂ ಇದ್ದಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಈ ಎರಡು ಶಕ್ತಿಗಳಿಂದಾಗಿ ಭಗವಂತನು ಎಲ್ಲೆಲ್ಲೂ ಇದ್ದಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ 22ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 22

ಪುರುಷಃ ಸ ಪರಃ ಪಾರ್ಥ ಭಕ್ತ್ಯಾ ಲಭ್ಯಸ್ತ್ವನನ್ಯಯಾ |

ಯಸ್ಯಾನ್ತಃಸ್ಥಾನಿ ಭೂತಾನಿ ಯೇನ ಸರ್ವಮಿದಂ ತತಮ್ ||22||

ಅನುವಾದ: ಪಾರ್ಥನೇ, ಎಲ್ಲಕ್ಕಿಂತ ಶ್ರೇಷ್ಠನಾದ ದೇವೋತ್ತಮ ಪುರುಷನನ್ನು ಪರಿಶುದ್ಧ ಭಕ್ತಿಯಿಂದ ಸೇರಬಹುದು. ತನ್ನ ನಿವಾಸದಲ್ಲಿದ್ದರೂ ಆತನು ಸರ್ವಾಂತರ್ಯಾಮಿ ಮತ್ತು ಎಲ್ಲ ವಸ್ತುಗಳೂ ಅವನ ಒಳಗೇ ಇವೆ.

ಭಾವಾರ್ಥ: ಸೇರಿದನಂತರ ಹಿಂದಿರುಗಿ ಬಾರದ ಪರಮಗುರಿಯು ಪರಮ ಪುರುಷನಾದ ಕೃಷ್ಣನ ನಿವಾಸವೇ ಎಂದು ಇಲ್ಲಿ ಸ್ಪಷ್ಟವಾಗಿ ಹೇಳಿದೆ. ಬ್ರಹ್ಮಸಂಹಿತೆಯು ಈ ಪರಮನಿವಾಸವನ್ನು ಆನಂದ ಚಿನ್ಮಯ ರಸ, ಎಲ್ಲವೂ ದಿವ್ಯಾನಂದದಿಂದ ತುಂಬಿರುವ ಸ್ಥಳ ಎಂದು ವರ್ಣಿಸಿದೆ (Bhagavad Gita Updesh in Kannada). ಅಲ್ಲಿ ಪ್ರಕಟವಾಗುವ ವೈವಿಧ್ಯವೆಲ್ಲ ದಿವ್ಯಾನಂದದ ಗುಣವನ್ನೇ ಹೊಂದಿವೆ. ಐಹಿಕವಾದದ್ದು ಅಲ್ಲಿ ಏನೂ ಇಲ್ಲ. ಆ ವೈವಿಧ್ಯವು ಸ್ವತಃ ಪರಮ ದೇವನ ಅಧ್ಯಾತ್ಮಿಕ ವಿಸ್ತರಣೆಯಾಗಿದೆ. ಏಕೆಂದರೆ ಏಳನೆಯ ಅಧ್ಯಾಯವೇ ಹೇಳಿದಂತೆ ಅಲ್ಲಿ ಅಭಿವ್ಯಕ್ತಿಯು ಸಂಪೂರ್ಣವಾಗಿ ಅಧ್ಯಾತ್ಮಿಕ ಶಕ್ತಿಯದು.

ಐಹಿಕ ಜಗತ್ತಿನ ಮಟ್ಟಿಗೆ, ಪ್ರಭುವು ಸದಾ ತನ್ನ ಪರಮನಿವಾಸದಲ್ಲಿಯೇ ಇದ್ದರೂ, ತನ್ನ ಐಹಿಕ ಶಕ್ತಿಯಿಂದ ಆತನು ಸರ್ವಾಂತರ್ಯಾಮಿ. ಆದುದರಿಂದ ತನ್ನ ಅಧ್ಯಾತ್ಮಿಕ ಮತ್ತು ಐಹಿಕ ಶಕ್ತಿಗಳಿಂದ ಆತನು ಎಲ್ಲೆಲ್ಲಿಯೂ ಇದ್ದಾನೆ - ಐಹಿಕ ಜಗತ್ತು ಮತ್ತು ಅಧ್ಯಾತ್ಮಿಕ ಜಗತ್ತು ಎರಡರಲ್ಲಿಯೂ ಇದ್ದಾನೆ. ಯಸ್ಯಾನ್ತಃಸ್ಥಾನಿ ಎಂದರೆ ಎಲ್ಲವನ್ನೂ ಆತನು ತನ್ನೊಳಗೆ, ಅಧ್ಯಾತ್ಮಿಕ ಶಕ್ತಿ ಅಥವಾ ಐಹಿಕ ಶಕ್ತಿಯಲ್ಲಿ, ಪೋಷಿಸುತ್ತಾನೆ ಎಂದರ್ಥ. ಈ ಎರಡು ಶಕ್ತಿಗಳಿಂದಾಗಿ ಭಗವಂತನು ಎಲ್ಲೆಲ್ಲೂ ಇದ್ದಾನೆ.

ವೇದಗಳು ಸಹ ಪರಮ ಪುರುಷನನ್ನೂ ವರ್ಣಿಸುತ್ತವೆ

ಇಲ್ಲಿ ಭಕ್ತ್ಯಾ ಎಂಬ ಪದವು ಸ್ಪಷ್ಟವಾಗಿ ಸೂಚಿಸುವಂತೆ, ಕೃಷ್ಣನ ಪರಮ ನಿವಾಸವನ್ನು ಅಥವಾ ಅಂಖ್ಯಾತ ವೈಕುಂಠ ಲೋಕಗಳನ್ನು ಭಕ್ತಿಯಿಂದ ಮಾತ್ರ ಪ್ರವೇಶಿಸಲು ಸಾಧ್ಯ. ಆ ಪರಮ ನಿವಾಸವನ್ನು ಸೇರಲು ಬೇರಾವ ಮಾರ್ಗವೂ ಇಲ್ಲ. ವೇದಗಳು ಸಹ (ಗೋಪಾಲ ತಾಪನೀ ಉಪನಿಷತ್ತು 3.2) ಪರಮನಿವಾಸವನ್ನೂ, ದೇವೋತ್ತಮ ಪರಮ ಪುರುಷನನ್ನೂ ವರ್ಣಿಸುತ್ತವೆ. ಏಕೋ ವಶೀ ಸರ್ವಗಃ ಕೃಷ್ಣಃ. ಆ ನಿವಾಸದಲ್ಲಿ ಒಬ್ಬನೇ ದೇವೋತ್ತಮ ಪರಮ ಪುರುಷನಿದ್ದಾನೆ. ಅವನ ಹೆಸರು ಕೃಷ್ಣ. ಅವನು ಪರಮ ದಯಾಪರ.

ಭಗವಂತನು ಅಲ್ಲಿ ಏಕವಾಗಿ ವಾಸಿಸುತ್ತಿದ್ದರೂ ತನ್ನನ್ನು ಲಕ್ಷಲಕ್ಷ ಸಂಪೂರ್ಣ ವಿಸ್ತರಣೆಗಳನ್ನಾಗಿ ವಿಸ್ತರಿಸಿಕೊಂಡಿದ್ದಾನೆ. ವೇದಗಳು ಪ್ರಭುವನ್ನು, ಒಂದೆಡೆಯೇ ಇದ್ದರೂ ಹಲವು ಬಗೆಗಳ ಫಲಪುಷ್ಪಗಳಿಂದ ತುಂಬಿ ಎಲೆಗಳನ್ನು ಬದಲಾಯಿಸುವ ವೃಕ್ಷಕ್ಕೆ ಹೋಲಿಸುತ್ತವೆ. ವೈಕುಂಠ ಲೋಕಗಳಲ್ಲಿ ಅಧ್ಯಕ್ಷರಾಗಿರುವ ಭಗವಂತನ ಸ್ವಾಂಶ ವಿಸ್ತರಣೆಗಳು ಚತುರ್ಭುಜರು ಮತ್ತು ಅವರಿಗೆ ವಿವಿಧ ಹೆಸರುಗಳಿವೆ - ಪುರುಷೋತ್ತಮ, ತ್ರಿವಿಕ್ರಮ, ಕೇಶವ, ಮಾಧವ, ಅನಿರುದ್ಧ, ಹೃಷಿಕೇಶ, ಸಂಕರ್ಷಣ, ಪ್ರದ್ಯುಮ್ನ, ಶ್ರೀಧರ, ವಾಸುದೇವ, ದಾಮೋದರ, ಜನಾರ್ದನ, ನಾರಾಯಣ, ವಾಮನ, ಪದ್ಮನಾಭ ಇತ್ಯಾದಿ.

ಪ್ರಭುವು ಯಾವಾಗಲೂ ಪರಮನಿವಾಸವಾದ ಗೋಲೋಕ ವೃಂದಾವನದಲ್ಲಿಯೇ ಇದ್ದರೂ, ಎಲ್ಲವೂ ಯೋಗ್ಯ ರೀತಿಯಲ್ಲಿ ನಡೆದುಕೊಂಡು ಹೋಗುವಂತೆ ಆತನು ಸರ್ವವ್ಯಾಪಿಯಾಗಿದ್ದಾನೆ (ಗೋಲೋಕ ಏವ ನಿವಸತಿ ಅಖಿಲಾತ್ಮಭೂತಾಃ) ಎಂದು ಬ್ರಹ್ಮ ಸಂಹಿತೆಯು (5.37) ದೃಢಪಡಿಸುತ್ತದೆ. ವೇದಗಳಲ್ಲಿ (ಶ್ವೇತಾಶ್ವತರ ಉಪನಿಷತ್ತು, 6.8) ಹೇಳಿರುವಂತೆ, ಪರಾಸ್ಯ ಶಕ್ತಿರ್ ವಿವಿಧೈವ ಶ್ರೂಯತೇ ಸ್ವಾಭಾವಿಕೀ ಜ್ಞಾನಬಲಕ್ರಿಯಾ ಚ - ಆತನ ಶಕ್ತಿಗಳು ಎಷ್ಟು ವಿಸ್ತಾರ ಎಂದರೆ, ಪರಮ ಪ್ರಭು ಬಹುದೂರ ಇದ್ದರೂ, ವಿಶ್ವದ ಅಭಿವ್ಯಕ್ತಿಯು ಒಂದೇ ಕುಂದೂ ಇಲ್ಲದಂತೆ ಆ ಶಕ್ತಿಗಳು ವ್ಯವಸ್ಥಿತವಾಗಿ ಎಲ್ಲವನ್ನೂ ನಿರ್ವಹಿಸುತ್ತವೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.