ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಪರಮಾತ್ಮ ಎಲ್ಲಾ ಜೀವಿಗಳ ಹೃದಯದಲ್ಲಿ ನೆಲೆಸಿರುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಪರಮಾತ್ಮ ಎಲ್ಲಾ ಜೀವಿಗಳ ಹೃದಯದಲ್ಲಿ ನೆಲೆಸಿರುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಪರಮಾತ್ಮ ಎಲ್ಲಾ ಜೀವಿಗಳ ಹೃದಯದಲ್ಲಿ ನೆಲೆಸಿರುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ ಶ್ಲೋಕ 20ರಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 20

ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ |

ಅಹಮಾದಿಶ್ಚ ಮಧ್ಯಂ ಚ ಭೂತಾನಾಮನ್ತ ಏವ ಚ ||20||

ಅನುವಾದ: ಅರ್ಜುನಾ, ನಾನು ಎಲ್ಲ ಜೀವಿಗಳ ಹೃದಯದಲ್ಲಿ ನೆಲೆಸಿರುವ ಪರಮಾತ್ಮ. ಎಲ್ಲ ಜೀವಿಗಳ ಆದಿ, ಮಧ್ಯ ಮತ್ತು ಅಂತ್ಯವು ನಾನು.

ಭಾವಾರ್ಥ: ಈ ಶ್ಲೋಕದಲ್ಲಿ ಅರ್ಜುನನ್ನು ಗುಣಾಕೇಶ ಎಂದು ಸಂಬೋಧಿಸಿದೆ. ಹೀಗೆಂದರೆ ನಿದ್ರೆಯ ತಮಸ್ಸನ್ನು ಗೆದ್ದವನು. ಅಜ್ಞಾನದ ಕತ್ತಲೆಯೊಳಗೆ ನಿದ್ರಿಸುತ್ತಿರುವವರಿಗೆ ದೇವೋತ್ತಮ ಪರಮ ಪುರುಷನು ಭೌತಿಕ ಮತ್ತು ಅಧ್ಯಾತ್ಮಿಕ ಜಗತ್ತುಗಳಲ್ಲಿ ಹೇಗೆ ತನ್ನನ್ನು ಪ್ರಕಟಮಾಡಿಕೊಳ್ಳುತ್ತಾನೆ ಎಂದು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದುದರಿಂದ ಕೃಷ್ಣನು ಇಲ್ಲಿ ಅರ್ಜುನನನ್ನು ಸಂಬೋಧಿಸುವ ರೀತಿಯು ಅರ್ಥವತ್ತಾದದ್ದು. ಅರ್ಜುನನು ಇಂತಹ ಕತ್ತಲೆಯನ್ನು ಮೀರಿದವನಾದುದದರಿಂದ ದೇವೋತ್ತಮ ಪರಮ ಪುರುಷನು ತನ್ನ ವಿವಿಧ ಶಕ್ತಿಗಳನ್ನು ವರ್ಣಿಸಲು ಒಪ್ಪುತ್ತಾನೆ (Bhagavad Gita Updesh in Kannada).

ತನ್ನ ಪ್ರಥಮ ವಿಸ್ತರಣೆಯಿಂದಾಗಿ ತಾನು ಇಡೀ ವಿಶ್ವದ ಅಭಿವ್ಯಕ್ತಿಗೆ ಆತ್ಮನು ಎಂದು ಕೃಷ್ಣನು ಮೊದಲು ಅರ್ಜುನನಿಗೆ ಹೇಳುತ್ತಾನೆ. ಐಹಿಕ ಸೃಷ್ಟಿಗೆ ಮೊದಲು ಪರಮ ಪ್ರಭುವು ಸ್ವಾಂಶ ವಿಸ್ತರಣೆಯಿಂದ ಪುರುಷಾವತಾರಗಳನ್ನು ಸ್ವೀಕರಿಸುತ್ತಾನೆ. ಅವನಿಂದ ಎಲ್ಲವೂ ಪ್ರಾರಂಭವಾಗುತ್ತದೆ. ಆದುದರಿಂದ ಅವನು ಮಹತ್‌ತತ್ವದ ಆತ್ಮ ಎಂದರೆ ವಿಶ್ವದ ಮೂಲಾಂಶಗಳ ಆತ್ಮ. ಒಟ್ಟು ಭೌತಿಕ ಶಕ್ತಿಯು ಸೃಷ್ಟಿಗೆ ಕಾರಣವಲ್ಲ. ವಾಸ್ತವವಾಗಿ ಮಹಾವಿಷ್ಣುವು ಮಹತ್‌ತತ್ವವನ್ನು, ಒಟ್ಟು ಭೌತಿಕಶಕ್ತಿಯನ್ನು ಪ್ರವೇಶಿಸುತ್ತಾನೆ ಅವನೇ ಆತ್ಮ.

ಮಹಾವಿಷ್ಣುವು ಪ್ರಕಟವಾದ ವಿಶ್ವವನ್ನು ಪ್ರವೇಶಿಸಿದಾಗ ಆತನು ಮತ್ತೆ ಪ್ರತಿಯೊಂದು ವಸ್ತುವಿನಲ್ಲಿಯೂ ಪರಮಾತ್ಮನಾಗಿ ಪ್ರಕಟವಾಗುತ್ತಾನೆ. ಜೀವಿಯ ವೈಯಕ್ತಿಕ ದೇಹವು ಅಧ್ಯಾತ್ಮಿಕ ಕಿಡಿಯ ಇರವಿನಿಂದಾಗಿ ಅಸ್ತಿತ್ವದಲ್ಲಿರುತ್ತದೆ ಎಂದು ನಮಗೆ ಅನುಭವಿದೆ. ಆ ಅಧ್ಯಾತ್ಮಿಕ ಕಿಡಿ ಇಲ್ಲದಿದ್ದರೆ ದೇಹವು ಬೆಳೆಯಲಾರದು. ಹಾಗೆಯೇ ಭೌತಿಕ ಅಭಿವ್ಯಕ್ತಿಯೂ ಪರಮಾತ್ಮನಾದ ಕೃಷ್ಣನು ಪ್ರವೇಶಿಸದಿದ್ದರೆ ಬೆಳೆಯಲಾರದು. ಸುಬಲ ಉಪನಿಷತ್ತಿನಲ್ಲಿ ಹೇಳಿರುವಂತೆ, ಪ್ರಕೃತಿ ಆದಿ ಸರ್ವಭೂತಾಂತರ್ಯಾಮೀ ಸರ್ವ ಶೇಷೀ ಚ ನಾರಾಯಣಃ - ದೇವೋತ್ತಮ ಪರಮ ಪುರುಷನು ಪರಮಾತ್ಮನಾಗಿ, ಅಭಿವ್ಯಕ್ತವಾಗಿರುವ ಎಲ್ಲ ವಿಶ್ವಗಳಲ್ಲಿದ್ದಾನೆ.

ಮೂರು ಪುರುಷಾವತಾರಗಳನ್ನು ಶ್ರೀಮದ್ಭಾಗವತದಲ್ಲಿ ವರ್ಣಿಸಿದೆ. ಅವುಗಳನ್ನು ಸ್ವಾತ್ವತ ತಂತ್ರದಲ್ಲಿಯೂ ವರ್ಣಿಸಿದೆ - ವಿಷ್ಣೋಸ್ತು ತ್ರೀಣಿ ರೂಪಾಣಿ ಪುರರುಷಾಖ್ಯಾನಿ ಅಥೋ ವಿದುಃ - ದೇವೋತ್ತಮ ಪರಮ ಪುರುಷನಿಗೆ ಈ ಭೌತಿಕ ಅಭಿವ್ಯತ್ತಿಯಲ್ಲಿ ಮೂರು ಸ್ವರೂಪಗಳುಂಟು. ಕಾರಣೋದಶಕಶಾಯಿ ವಿಷ್ಣು, ಗರ್ಭೋದಕಶಾಯಿ ವಿಷ್ಣು ಮತ್ತು ಕ್ಷೀರೋದಕಶಾಯಿ ವಿಷ್ಣು. ಮಹಾವಿಷ್ಣು ಅಥವಾ ಕಾರಣೋದಕಶಾಯಿ ವಿಷ್ಣುವನ್ನು ಬ್ರಹ್ಮಸಂಹಿತೆಯಲ್ಲಿ (5.47) ವರ್ಣಿಸಿದೆ. ಯಃ ಕಾರಣಾರ್ಣವಜಲೇ ಭಜತಿ ಸ್ಮ ಯೋಗನಿದ್ರಾಮ್ - ಎಲ್ಲ ಕಾರಣಗಳ ಕಾರಣನಾದ ಪರಮ ಪ್ರಭು ಕೃಷ್ಣನು ವಿಶ್ವಸಮುದ್ರದಲ್ಲಿ ಮಹಾವಿಷ್ಣುವಾಗಿ ಮಲಗಿರುತ್ತಾನೆ. ಆದುದರಿಂದ ದೇವೋತ್ತಮ ಪರಮ ಪುರುಷನು ಈ ವಿಶ್ವದ ಆದಿ, ವಿಶ್ವದ ಅಭಿ ಅಭಿವ್ಯಕ್ತಿಗಳ ಸ್ಥಿತಿಪಾಲಕ ಮತ್ತು ಎಲ್ಲ ಶಕ್ತಿಯ ಅಂತ್ಯ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)