Bhagavad Gita: ಅಧ್ಯಾತ್ಮಿಕ ಜೀವನಕ್ಕೆ ಪ್ರೀತಿಯು ಪರಿಶುದ್ಧ ಮಟ್ಟಕ್ಕೆ ಏರಬೇಕು; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಅಧ್ಯಾತ್ಮಿಕ ಜೀವನಕ್ಕೆ ಪ್ರೀತಿಯು ಪರಿಶುದ್ಧ ಮಟ್ಟಕ್ಕೆ ಏರಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಅಧ್ಯಾತ್ಮಿಕ ಜೀವನಕ್ಕೆ ಪ್ರೀತಿಯು ಪರಿಶುದ್ಧ ಮಟ್ಟಕ್ಕೆ ಏರಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಅಧ್ಯಾತ್ಮಿಕ ಜೀವನಕ್ಕೆ ಪ್ರೀತಿಯು ಪರಿಶುದ್ಧ ಮಟ್ಟಕ್ಕೆ ಏರಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 12 ನೇ ಅಧ್ಯಾಯದ 9ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 9

ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್ |

ಅಭ್ಯಾಸಯೋಗೇನ ತತೋ ಮಾಮಿಚ್ಛಾಪ್ತುಂ ಧನಞ್ಜಯ ||9||

ಅನುವಾದ: ಅರ್ಜುನಾ, ಧನಂಜಯಾ, ನಿಶ್ಚಲವಾಗಿ ನನ್ನಲ್ಲಿ ನಿನ್ನ ಮನಸ್ಸನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ ಭಕ್ತಿಯೋಗದ ನಿಯಂತ್ರಕ ತತ್ವಗಳನ್ನು ಅನುಸರಿಸಲು ಪ್ರಯತ್ನಿಸು. ಹೀಗೆ ನನ್ನನ್ನು ಸೇರುವ ಬಯಕೆಯನ್ನು ಬೆಳೆಸಿಕೋ.

ಭಾವಾರ್ಥ: ಈ ಶ್ಲೋಕದಲ್ಲಿ ಭಕ್ತಿಯೋಗದ ಎರಡು ಬೇರೆ ಬೇರೆ ಪ್ರಕ್ರಿಯೆಗಳನ್ನು ಸೂಚಿಸಿದೆ. ಮೊದಲನೆಯದು ದೇವೋತ್ತಮ ಪರಮ ಪುರುಷನಾದ ಕೃಷ್ಣನಲ್ಲಿ ಅಧ್ಯಾತ್ಮಿಕ ಪ್ರೀತಿಯಿಂದ ವಾಸ್ತವವಾಗಿ ಆಸಕ್ತಿಯನ್ನು ಬೆಳೆಸಿಕೊಂಡಿರುವವನಿಗೆ ಅನ್ವಯಿಸುತ್ತದೆ. ಮತ್ತೊಂದು, ಪರಮ ಪುರುಷನಲ್ಲಿ ಅಧ್ಯಾತ್ಮಿಕ ಪ್ರೀತಿಯಿಂದ ಆಸಕ್ತಿಯನ್ನು ಬೆಳೆಸಿಕೊಳ್ಳದಿರುವವನಿಗೆ ಸೂಚಿಸುವ ಪ್ರಕ್ರಿಯೆ. ಕೃಷ್ಣಾನುರಾಗದ ಘಟ್ಟಕ್ಕೆ ಕಡೆಗೆ ಏರಲು ಮನುಷ್ಯನು ಅನುಸರಿಸಬಹುದಾದ, ಈ ಎರಡನೆಯ ವರ್ಗದ ಜನರಿಗಾಗಿ ನಿಗದಿತವಾದ ಬೇರೆ ಬೇರೆ ವಿಧಿ, ನಿಯಮಗಳಿವೆ (Bhagavad Gita Updesh in Kannada).

ಭಕ್ತಿಯೋಗ ಎಂದರೆ ಇಂದ್ರಿಯಗಳನ್ನು ಶುದ್ಧಿಗೊಳಿಸುವುದು. ಈಗ ಐಹಿಕ ಅಸ್ತಿತ್ವದಲ್ಲಿ ಇಂದ್ರಿಯಗಳು ತಮ್ಮ ಸುಖದಲ್ಲಿ ಮಗ್ನವಾಗಿ ಸದಾ ಮಲಿನವಾಗಿರುತ್ತವೆ. ಭಕ್ತಿಯೋಗದ ಅಭ್ಯಾಸದಿಂದ ಈ ಇಂದ್ರಿಯಗಳು ಪರಿಶುದ್ಧವಾಗುತ್ತವೆ. ಈ ಪರಿಶುದ್ಧ ಸ್ಥಿತಿಯಲ್ಲಿ ಅವು ನೇರವಾಗಿ ಪರಮ ಪ್ರಭುವಿನ ಸಂಪರ್ಕವನ್ನು ಪಡೆಯುತ್ತವೆ. ಈ ಐಹಿಕ ಅಸ್ತಿತ್ವದಲ್ಲಿ, ನಾನು ಯಾರೋ ಯಜಮಾನನಿಗಾಗಿ ಸೇವೆಸಲ್ಲಿಸುತ್ತಿರಬಹುದು. ಆದರೆ ನಾನು ನನ್ನ ಯಜಮಾನನ ಸೇವೆಯನ್ನು ಪ್ರೀತಿಯಿಂದ ಒಂದಿಷ್ಟು ದುಡ್ಡಿಗಾಗಿ ಮಾಡುತ್ತೇನೆ. ಯಜಮಾನನಿಗೂ ನನ್ನ ವಿಷಯದಲ್ಲಿ ಪ್ರೀತಿ ಇಲ್ಲ. ನನ್ನನ್ನು ದುಡಿಸಿಕೊಳ್ಳುತ್ತಾನೆ, ಹಣ ಕೊಡುತ್ತಾನೆ. ಆದುದರಿಂದ ಪ್ರೀತಿಯ ಪ್ರಶ್ನೆಯೇ ಇಲ್ಲ. ಆದರೆ ಅಧ್ಯಾತ್ಮಿಕ ಜೀವನಕ್ಕೆ ಪ್ರೀತಿಯು ಪರಿಶುದ್ಧ ಮಟ್ಟಕ್ಕೆ ಏರಬೇಕು. ಈಗಿರುವ ಇಂದ್ರಿಯಗಳ ಮೂಲಕ ಮಾಡುವ ಪ್ರೀತಿಪೂರ್ವಕ ಸೇವೆಯ ಅಭ್ಯಾಸದಿಂದ ಪ್ರೀತಿಯ ಆ ಘಟ್ಟವನ್ನು ಸಾಧಿಸಬಹುದು.

ಈ ಭಗವತ್ಪ್ರೇಮವು ಈಗ ಪ್ರತಿಯೊಬ್ಬರ ಹೃದಯದಲ್ಲಿ ಸುಪ್ತವಾಗಿದೆ. ಅಲ್ಲಿ ದೇವರ ಪ್ರೀತಿಯು ಬೇರೆ ಬೇರೆ ರೀತಿಗಳಲ್ಲಿ ಪ್ರಕಟವಾಗುತ್ತದೆ. ಆದರೆ ಐಹಿಕ ಸಂಪರ್ಕದಿಂದ ಅದು ಮಲಿನವಾಗಿದೆ. ಈಗ ಹೃದಯವನ್ನು ಐಹಿಕ ಸಂಪರ್ಕದ ಮಾಲಿನ್ಯದಿಂದ ಪರಿಶುದ್ಧಗೊಳಿಸಬೇಕು. ಸುಪ್ತವಾದ ಸಹಜವಾದ ಕೃಷ್ಣಪ್ರೇಮವನ್ನು ಪುನಶ್ಚೇತನಗೊಳಿಸಬೇಕು. ಇದೇ ಸಂಪೂರ್ಣ ಪ್ರಕ್ರಿಯೆ. ಭಕ್ತಿಯೋಗದ ನಿಯಂತ್ರಕ ತತ್ವಗಳನ್ನು ಅಭ್ಯಾಸ ಮಾಡಲು ತಜ್ಞ ಗುರುವಿನ ಮಾರ್ಗದರ್ಶನದಲ್ಲಿ ಕೆಲವು ತತ್ವಗಳನ್ನು ಆಚರಿಸಬೇಕು.

ಬೆಳಗ್ಗೆ ಬೇಗನೆ ಏಳಬೇಕು. ಸ್ನಾನ ಮಾಡಬೇಕು. ದೇವಸ್ಥಾನವನ್ನು ಪ್ರವೇಶಿಸಿ ಪ್ರಾರ್ಥನೆಯನ್ನು ಸಲ್ಲಿಸಿ ಹರೇಕೃಷ್ಣ ಸಂಕೀರ್ತನೆಯನ್ನು ಮಾಡಬೇಕು. ಹೂವುಗಳನ್ನು ಸಂಗ್ರಹಿಸಿ ವಿಗ್ರಹಕ್ಕೆ ಅರ್ಪಿಸಬೇಕು. ವಿಗ್ರಹಕ್ಕೆ ನೈವೇದ್ಯ ಮಾಡಲು ಅಡುಗೆ ಮಾಡಬೇಕು. ಪ್ರಸಾದವನ್ನುು ತೆಗೆದುಕೊಳ್ಳಬೇಕು ಇತ್ಯಾದಿ. ಮನುಷ್ಯನು ಅನುಸರಿಸಬೇಕಾದ ಹಲವಾರು ನಿಯಮ ನಿಬಂಧನೆಗಳಿವೆ. ಪರಿಶುದ್ಧ ಭಕ್ತರಿಂದ ಸದಾ ಭಗವದ್ಗೀತೆ ಮತ್ತು ಭಾಗವತಗಳನ್ನು ಕೇಳಬೇಕು. ಯಾರೇ ಆಗಲಿ ದೇವರ ಪ್ರೇಮದ ಎತ್ತರಕ್ಕೆ ಏರಲು ಈ ಸಾಧನೆಯು ನೆರವಾಗಬಲ್ಲದು. ಅನಂತರ ಭಗವಂತನ ದಿವ್ಯ ಸಾಮ್ರಾಜ್ಯದಲ್ಲಿ ಆತನ ಮುನ್ನಡೆಯು ನಿಶ್ಚಯವಾದದ್ದು. ನಿಯಮ ನಿಯಂತ್ರಣಗಳನ್ನು ಅನುಸರಿಸಿ, ಗುರುಗಳ ಮಾರ್ಗದರ್ಶನದಲ್ಲಿ ಭಕ್ತಿಯೋಗವನ್ನು ಆಚರಿಸಿದರೆ ಭಗವತ್ಪ್ರೇಮದ ಹಂತವನ್ನು ನಿಶ್ಚಿತವಾಗಿಯೂ ತಲಪಬಹುದು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.