ಕನ್ನಡ ಸುದ್ದಿ  /  Astrology  /  Spiritual News Bhagavad Gita Updesh Lord Krishna Man Attain Highest Perfection Bhagavad Gita Quotes In Kannada Rmy

Bhagavad Gita: ಭಗವಂತನಲ್ಲಿ ಜೀವಿಸುವ ವ್ಯಕ್ತಿ ಅತ್ಯುನ್ನತ ಪರಿಪೂರ್ಣತೆ ಸಾಧಿಸುತ್ತಾನೆ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಭಗವಂತನಲ್ಲಿ ಜೀವಿಸುವ ವ್ಯಕ್ತಿ ಅತ್ಯುನ್ನತ ಪರಿಪೂರ್ಣತೆ ಸಾಧಿಸುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ. 6ನೇ ಅಧ್ಯಾಯದಲ್ಲಿನ 41 ಮತ್ತು 42ನೇ ಶ್ಲೋಕ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 6: ಧ್ಯಾನ ಯೋಗ - ಶ್ಲೋಕ-41

ಪ್ರಾಪ್ಯ ಪುಣ್ಯಕೃತಾಂ ಲೋಕಾನುಷಿತ್ವಾ ಶಾಶ್ವತೀಃ ಸಮಾಃ |

ಶುಚೀನಾಂ ಶ್ರೀಮತಾಂ ಗೇಹೇ ಯೋಗಭ್ರಷ್ಟೋಭಿಜಾಯತೇ ||41||

ಅನುವಾದ: ಯೋಗಭ್ರಷ್ಟನು ಪುಣ್ಯಜೀವಿಗಳ ಲೋಕಗಳಲ್ಲಿ ಬಹುಕಾಲ ಸಂತೋಷವಾಗಿದ್ದು ಅನಂತರ ಧರ್ಮಾತ್ಮರ ಮನೆಯಲ್ಲಿ ಅಥವಾ ಶ್ರೀಮಂತ ಕುಟುಂಬದಲ್ಲಿ ಹುಟ್ಟುವನು.

ಭಾವಾರ್ಥ: ಯಶಸ್ಸು ಸಾಧಿಸುವ ಯೋಗಿಗಳಲ್ಲಿ ಎರಡು ವರ್ಗಗಳು - ಒಂದು ವರ್ಗದವರು ಅತ್ಯಲ್ಪ ಪ್ರಗತಿಯನಂತರ ಭ್ರಷ್ಟರಾದವರು, ಇನ್ನೊಂದು ವರ್ಗದವರು ದೀರ್ಘಕಾಲ ಯೋಗಾಭ್ಯಾಸ ಮಾಡಿ ಭ್ರಷ್ಟರಾದವರು. ಸ್ವಲ್ಪಕಾಲ ಅಭ್ಯಾಸ ಮಾಡಿ ಭ್ರಷ್ಟನಾದ ಯೋಗಿಯು ಪುಣ್ಯಜೀವಿಗಳು ಪ್ರವೇಶಿಸಬಹುದಾದ ಉತ್ತಮಲೋಕಗಳಿಗೆ ಹೋಗುತ್ತಾನೆ. ಅಲ್ಲಿ ಬಹುಕಾಲ ಇದ್ದನಂತರ ಅವನನ್ನು ಮತ್ತೆ ಈ ಲೋಕಕ್ಕೆ ಕಳಿಸಲಾಗುತ್ತದೆ. ಅವನು ಧರ್ಮಿಷ್ಟನಾದ ಬ್ರಾಹ್ಮಣನ ಅಥವಾ ವೈಷ್ಣವನ ಸಂಸಾರದಲ್ಲಾಗಲೀ, ಶ್ರೀಮಂತ ವರ್ತಕರ ಮನೆಯಲ್ಲಾಗಲೀ ಹುಟ್ಟುತ್ತಾನೆ.

ಈ ಅಧ್ಯಾಯದ ಕೊನೆಯ ಶ್ಲೋಕದಲ್ಲಿ ವಿವರಿಸಿರುವಂತೆ ಯೋಗಾಭ್ಯಾಸದ ನಿಜವಾದ ಉದ್ದೇಶ ಕೃಷ್ಣಪ್ರಜ್ಞೆಯ ಅತ್ಯುನ್ನತ ಪರಿಪೂರ್ಣತೆಯನ್ನು ಸಾಧಿಸುವುದು. ಆದರೆ ಇಷ್ಟರಮಟ್ಟಿಗೆ ಪಟ್ಟುಹಿಡಿದು ಶ್ರಮಪಡದೆ ಇರುವವರಿಗೆ ಮತ್ತು ಐಹಿಕ ಪ್ರಲೋಭನೆಗಳ ದೆಸೆಯಿಂದ ವಿಫಲರಾಗುವವರಿಗೆ ಭಗವಂತನ ಕೃಪೆಯಿಂದ ತಮ್ಮ ಐಹಿಕ ಪ್ರವೃತ್ತಿಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅವಕಾಶವು ಲಭ್ಯವಾಗುತ್ತದೆ. ಅನಂತರ ಅವರಿಗೆ ಧರ್ಮಿಷ್ಟ ಅಥವಾ ಶ್ರೀಮಂತ ಕುಟುಂಬಗಳಲ್ಲಿ ಅನುಕೂಲಸ್ಥಿತಿಯಲ್ಲಿ ಬಾಳಲು ಅವಕಾಶಗಳು ಲಭ್ಯವಾಗುತ್ತವೆ. ಇಂತಹ ಸಂಸಾರಗಳಲ್ಲಿ ಹುಟ್ಟಿದವರು ಸೌಲಭ್ಯಗಳನ್ನು ಸದುಪಯೋಗಮಾಡಿಕೂಂಡು ಪೂರ್ಣ ಕೃಷ್ಣಪ್ರಜ್ಞೆಗೆ ಏರಲು ಪ್ರಯತ್ನಿಸಬಹುದು.

ಅಧ್ಯಾಯ 6: ಧ್ಯಾನ ಯೋಗ - ಶ್ಲೋಕ - 42

ಅಥವಾ ಯೋಗಿನಾಮೇವ ಕುಲೇ ಭವತಿ ಧೀಮತಾಮ್ |

ಏತದ್ಧಿ ದುರ್ಲಭತರಂ ಲೋಕೇ ಜನ್ಮ ಯದೀದೃಶಮ್ ||42||

ಅನುವಾದ: ಅಥವಾ (ದೀರ್ಘಕಾಲದ ಯೋಗಾಭ್ಯಾಸದ ಅನಂತರ ವಿಫಲನಾಗಿದ್ದಲ್ಲಿ) ಅವನು ಧೀಮಂತರಾದ ಅಧ್ಯಾತ್ಮಿಕವಾದಿಗಳ ಕುಟುಂಬದಲ್ಲಿ ಜನಿಸುವನು. ನಿಶ್ಚಯವಾಗಿಯೂ ಈ ಜಗತ್ತಿನಲ್ಲಿ ಇಂತಹ ಜನ್ಮವು ದುರ್ಲಭತರವಾದದ್ದು.

ಭಾವಾರ್ಥ: ಧೀಮಂತರ ಯೋಗಿಗಳ ಕುಟುಂಬದಲ್ಲಿ ಜನ್ಮತಾಳುವುದನ್ನು ಇಲ್ಲಿ ಹೊಗಳಿದೆ. ಏಕೆಂದರೆ ಇಂತಹ ಸಂಸಾರದಲ್ಲಿ ಹುಟ್ಟಿದ ಮಗುವಿಗೆ ಅವನ ಬಾಳಿನ ಪ್ರಾರಂಭದಿಂದಲೇ ಒಂದು ಅಧ್ಯಾತ್ಮಿಕ ಚಾಲನ ಶಕ್ತಿಯು ದೊರೆಯುತ್ತದೆ. ವಿಶೇಷವಾಗಿ ಆಚಾರ್ಯರ ಅಥವಾ ಗೋಸ್ವಾಮಿಗಳ ಕುಟುಂಬಗಳಲ್ಲಿ ಹೀಗಾಗುತ್ತದೆ. ಪರಂಪರೆಯಿಂದಲೂ ಶಿಕ್ಷಣದಿಂದಲೂ ಇಂತಹ ಸಂಸಾರಗಳಲ್ಲಿ ವಿದ್ವತ್ತು, ದೈವಭಕ್ತಿ ಇರುತ್ತವೆ. ಆದುದರಿಂದ ಅವರು ಗುರುಗಳಾಗುತ್ತಾರೆ. ಭಾರತದಲ್ಲಿ ಇಂತಹ ಆಚಾರ್ಯರ ಕುಟುಂಬಗಳು ಹಲವಾರು ಇವೆ. ಆದರೆ ಸಾಕಷ್ಟು ವಿದ್ಯೆ ಮತ್ತು ತರಬೇತಿ ಇಲ್ಲದೆ ಅವು ಹೀನಸ್ಥಿತಿಗೆ ಬಂದಿವೆ.

ಭಗವಂತನ ಕೃಪೆಯಿಂದ ಪ್ರತಿ ಪೀಳಗೆಯಲ್ಲೂ ಯೋಗಿಗಳನ್ನು ಬೆಳೆಸುವ ಇಂತಹ ಕುಟುಂಬಗಳು ಇನ್ನೂ ಇವೆ. ಇಂತಹ ಸಂಸಾರಗಳಲ್ಲಿ ಜನ್ಮತಾಳುವುದು ಒಂದು ಸೌಭಾಗ್ಯ. ನಮ್ಮ ಗುರುಗಳಾದ, ಓಂ ವಿಷ್ಣುಪಾದ ಶ್ರೀ ಶ್ರೀಮದ್ ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿ ಮಹಾರಾಜರು ಮತ್ತು ನಾವು ಇಬ್ಬರೂ ಭಗವಂತನ ಕೃಪೆಯಿಂದ ಇಂತಹ ಕುಟುಂಬಗಳಲ್ಲಿ ಹುಟ್ಟುವ ಭಾಗ್ಯವನ್ನು ಪಡೆದಿದ್ದೆವು ಮತ್ತು ಇಬ್ಬರೂ ನಮ್ಮ ಬಾಳಿನ ಪ್ರಾರಂಭದಿಂದಲೇ ಭಗವಂತನ ಭಕ್ತಿಪೂರ್ವಕ ಸೇವೆಯಲ್ಲಿ ಶಿಕ್ಷಣವನ್ನು ಪಡೆದೆವು. ಮುಂದೆ ಅಧ್ಯಾತ್ಮಿಕ ವ್ಯವಸ್ಥೆಯಲ್ಲಿ ನಾವು ಸಂದಿಸಿದೆವು.

(This copy first appeared in Hindustan Times Kannada website. To read more like this please logon to kannada.hindustantimes.com )