ಭಗವದ್ಗೀತೆ: ಮನುಷ್ಯ ಸಾವಿನ ನಂತರ ಸ್ವರ್ಗಸುಖದ ಆಸೆ ಪಡುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಮನುಷ್ಯ ಸಾವಿನ ನಂತರ ಸ್ವರ್ಗಸುಖದ ಆಸೆ ಪಡುತ್ತಾನೆ ಎಂಬುದರ ಅರ್ಥ ತಿಳಿಯಿರಿ.
ನ ಮಾಂ ಕರ್ಮಾಣಿ ಲಿಮ್ಪನ್ತಿ ನ ಮೇ ಕರ್ಮಫಲೇ ಸ್ಪೃಹಾ |
ಇತಿ ಮಾಂ ಯೋಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ ||14||
ಯಾವ ಕರ್ಮವೂ ನನ್ನನ್ನು ಅಂಟುವುದಿಲ್ಲ. ನಾನು ಯಾವುದೇ ಕರ್ಮಫಲವನ್ನು ಬಯಸುವುದಿಲ್ಲ. ನನ್ನ ವಿಷಯದಲ್ಲಿ ಈ ಸತ್ಯವನ್ನು ಯಾರೂ ಅರ್ಥಮಾಡಿಕೊಳ್ಳುವರೋ ಅವರಿಗೂ ಫಲಾಪೇಕ್ಷೆಯ ಕರ್ಮಬಂಧನವಿಲ್ಲ.
ಐಹಿಕ ಜಗತ್ತಿನಲ್ಲಿ ರಾಜನು ತಪ್ಪನ್ನು ಮಾಡುವುದೇ ಇಲ್ಲ ಅಥವಾ ರಾಜನು ರಾಜ್ಯದ ಕಾನೂನಿಗೆ ಬದ್ಧನಲ್ಲ ಎನ್ನುವ ಸಂವಿಧಾನಾತ್ಮಕ ಕಾನೂನುಗಳಿರುವಂತೆ, ಭಗವಂತನು ಈ ಐಹಿಕ ಜಗತ್ತನ್ನು ಸೃಷ್ಟಿಸಿದ್ದರೂ, ಈ ಐಹಿಕ ಜಗತ್ತಿನ ಕರ್ಮಗಳಿಂದ ಅವನ ಮೇಲೆ ಪರಿಣಾಮಗಳಾಗುವುದಿಲ್ಲ. ಅವನು ವಿಶ್ವವನ್ನು ಸೃಷ್ಟಿಮಾಡುತ್ತಾನೆ. ಆದರೆ ಅದರಿಂದ ದೂರವಿರುತ್ತಾನೆ. ಜೀವಿಗಳಿಗೆ ಭೌತಿಕ ಸಂಪನ್ಮೂಲಗಳ ಮೇಲೆ ಪ್ರಭುತ್ವವನ್ನು ನಡೆಸುವ ಪ್ರವೃತ್ತಿ ಇದೆ. ಆದುದರಿಂದ ಅವರು ಐಹಿಕ ಕರ್ಮಗಳ ಫಲಗಳಲ್ಲಿ ಸಿಕ್ಕಿಕೊಳ್ಳುತ್ತಾರೆ.
ಒಂದು ಸಂಸ್ಥೆಯ ಒಡೆಯನು ಅಲ್ಲಿನ ಕೆಲಸಗಾರರ ಒಳ್ಳೆಯ ಮತ್ತು ಕೆಟ್ಟಕೆಲಸಗಳಿಗೆ ಹೊಣೆಗಾರನಲ್ಲ. ಕೆಲಸಗಾರರೇ ಹೊಣೆ. ಜೀವಿಗಳು ತಮ್ಮ ತಮ್ಮ ಇಂದ್ರಿಯತೃಪ್ತಿಯ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಈ ಕಾರ್ಯಗಳನ್ನು ಭಗವಂತನು ವಿಧಿಸಲಿಲ್ಲ. ಇಂದ್ರಿಯಭೋಗವನ್ನು ಬೆಳೆಸಿಕೊಳ್ಳಲು ಜೀವಿಗಳು ಈ ಜಗತ್ತಿನ ಕರ್ಮದಲ್ಲಿ ತೊಡಗುತ್ತಾರೆ. ಸಾವಿನ ಅನಂತರ ಸ್ವರ್ಗಸುಖ ಬೇಕೆಂದು ಆಸೆಪಡುತ್ತಾರೆ. ಸ್ವಯಂಪೂರ್ಣನಾದ ಭಗವಂತನಿಗೆ ಸ್ವರ್ಗಸುಖದ ಆಸೆಯಿಲ್ಲ. ಸ್ವರ್ಗದ ದೇವತೆಗಳು ಅವನು ನೇಮಿಸಿಕೊಂಡ ಸೇವಕರು ಅಷ್ಟೇ.
ಕಾರ್ಮಿಕರು ಬಯಸುವ ಕೆಳಮಟ್ಟದ ಸುಖವನ್ನು ಯಜಮಾನನು ಬಯಸುವುದಿಲ್ಲ. ಅವನು ಭೌತಿಕ ಕ್ರಿಯೆಗಳು ಮತ್ತು ಪ್ರತಿಕ್ರಿಯೆಗಳಿಂದ ದೂರವಾಗಿರುತ್ತಾನೆ. ಉದಾಹರಣೆಗೆ, ಮಳೆಯಿಲ್ಲದೆ ಸಸ್ಯಗಳು ಬೆಳೆಯುವುದು ಸಾಧ್ಯವಿಲ್ಲ. ಆದರೂ ಭೂಮಿಯಲ್ಲಿ ಕಾಣಿಸಿಕೊಳ್ಳುವ ಬೇರೆಬೇರೆ ಬಗೆಯ ಸಸ್ಯಗಳ ಹೊಣೆ ಮಳೆಯದಲ್ಲ. ಈ ವಾಸ್ತವಾಂಶವನ್ನು ವೈದಿಕ ಸ್ಮೃತಿಯು ಹೀಗೆ ದೃಢಪಡಿಸುತ್ತದೆ.
ನಿಮಿತ್ತ ಮಾತ್ರಮೇವಾಸೌ ಸೃಜ್ಯಾನಾಂ ಸರ್ಗ ಕರ್ಮಣಿ |
ಪ್ರಧಾನ ಕಾರಣೀಭೂತಾ ಯತೋ ವೈ ಸೃಜ್ಯ ಶಕ್ತಯಃ ||
ಐಹಿಕ ಸೃಷ್ಟಿಗಳಲ್ಲಿ ಭಗವಂತನು ಪರಮಕಾರಣನು ಮಾತ್ರ. ನಿಕಟ ಕಾರಣವು ಐಹಿಕ ನಿಸರ್ಗ. ಇದರಿಂದ ಐಹಿಕ ಸೃಷ್ಟಿಯು ಗೋಚರವಾಗುತ್ತದೆ. ಸೃಷ್ಟಿಯಾದವರಲ್ಲಿ ದೇವತೆಗಳು, ಮಾನವರು, ಕೆಳಮಟ್ಟದ ಪ್ರಾಣಿಗಳು ಮೊದಲಾಗಿ ಹಲವು ಬಗೆಯ ಜೀವಿಗಳಿದ್ದಾರೆ. ಅವರೆಲ್ಲರೂ ತಮ್ಮ ಹಿಂದಿನ ಸತ್ಕರ್ಮ ಅಥವಾ ದುಷ್ಕರ್ಮಗಳ ಫಲಗಳಿಗೆ ಬದ್ಧರು. ಭಗವಂತನು ಅವರಿಗೆ ಅಂತಹ ಕರ್ಮಗಳಿಗೆ ಯೋಗ್ಯ ಸೌಲಭ್ಯಗಳನ್ನೂ ಪ್ರಕೃತಿಗುಣಗಳ ನಿಮಯಗಳನ್ನೂ ಕೊಡುತ್ತಾನೆ ಅಷ್ಟೆ. ಆದರೆ ಅವರ ಹಿಂದಿನ ಅಥವಾ ಇಂದಿನ ಕರ್ಮಗಳಿಗೆ ಅವನುಗಿ ಹೊಣೆಯಲ್ಲ. ವೇದಾಂತಸೂತ್ರವು (2.1.34) ಇದನ್ನು ದೃಢೀಕರಿಸಿದೆ.
ವೈಷಮ್ಯನೈರ್ಘೃಣ್ಯೇ ನ ಸಾಪೇಕ್ಷತ್ವಾತ್ - ಭಗವಂತನು ಯಾವ ಜೀವಿಯ ವಿಷಯದಲ್ಲಿಯೂ ಪಕ್ಷಪಾತಿಯಲ್ಲ. ತನ್ನ ಕರ್ಮಗಳಿಗೆ ಜೀವಿಯೇ ಹೊಣೆ. ಬಹಿರಂಗ ಶಕ್ತಿಯಾದ ಐಹಿಕ ಪ್ರಕೃತಿಯ ಮೂಲಕ ಭಗವಂತನು ಅವನಿಗೆ ಸೌಲಭ್ಯಗಳನ್ನು ಕೊಡುತ್ತಾನೆ ಅಷ್ಟೆ. ಕರ್ಮದ ಈ ನಿಯಮದ ಜಟಿಲತೆಗಳನ್ನು ಚೆನ್ನಾಗಿ ತಿಳಿದವನು ಯಾರೂ ತನ್ನ ಕರ್ಮಗಳ ಫಲಗಳಿಗೆ ಒಳಗಾಗುವುದಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಭಗವಂತನ ಈ ಅಲೌಕಿಕ ಸ್ವಭಾವವನ್ನು ಅರಿತ ಮನುಷ್ಯನು ಕೃಷ್ಣಪ್ರಜ್ಞೆಯಲ್ಲಿ ಅನುಭವಿಯಾದವನು. ಅವನು ಎಂದೂ ಕರ್ಮದ ನಿಯಮಗಳಿಗೆ ಒಳಗಾಗುವುದಿಲ್ಲ.
ಭಗವಂತನ ಅಲೌಕಿಕ ಸ್ವಭಾವವನ್ನು ತಿಳಿದವನು ಮತ್ತು ಸಾಮಾನ್ಯ ಜೀವಿಗಳ ಕರ್ಮಗಳಂತೆ ಭಗವಂತನ ಕರ್ಮಗಳಿಗೂ ಫಲಾಪೇಕ್ಷೆಯಿರುತ್ತದೆ ಎಂದು ಭಾವಿಸುವವನು ನಿಶ್ಚಯವಾಗಿಯೂ ಕರ್ಮಫಲಗಳಲ್ಲಿ ಸಿಕ್ಕಿಕೊಳ್ಳುತ್ತಾನೆ. ಆದರೆ ಪರಮಸತ್ಯವನ್ನು ಬಲ್ಲವನು ಕೃಷ್ಣಪ್ರಜ್ಞೆಯಲ್ಲಿ ನೆಲೆಗೊಂಡ ಮುಕ್ತಾತ್ಮನು.