ಭಗವದ್ಗೀತೆ: ಮನುಷ್ಯ ಎಲ್ಲ ದ್ವಂದ್ವಗಳಿಂದ ಮುಕ್ತನಾಗಲು ಹೀಗೆ ಮಾಡಲಿ; ಗೀತೆಯ ಸಾರಾಂಶ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಮನುಷ್ಯ ಎಲ್ಲ ದ್ವಂದ್ವಗಳಿಂದ ಮುಕ್ತನಾಗಲು ಏನು ಮಾಡಬೇಕು ಅನ್ನೋದನ್ನ ತಿಳಿಯಿರಿ.
ಗತಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತಚೇತಸಃ |
ಯಜ್ಞಾಯಾಚರತಃ ಕರ್ಮ ಸಮಗ್ರಂ ಪ್ರವಿಲೀಯತೇ ||23||
ಐಹಿಕ ಪ್ರಕೃತಿಯ ಗುಣಗಳಿಗೆ ಅಂಟಿಕೊಳ್ಳದವನೂ ಮತ್ತು ಆಧ್ಯಾತ್ಮಿಕ ಜ್ಞಾನದಲ್ಲಿ ಸಂಪೂರ್ಣವಾಗಿ ನೆಲೆಯುಳ್ಳವನೂ ಆದ ಮನುಷ್ಯನ ಕರ್ಮವು ಅಧ್ಯಾತ್ಮದಲ್ಲಿ ಸಂಪೂರ್ಣವಾಗಿ ಲೀನವಾಗುತ್ತದೆ.
ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯನ್ನು ಪಡೆದಾಗ ಮನುಷ್ಯನು ಎಲ್ಲ ದ್ವಂದ್ವಗಳಿಂದ ಮುಕ್ತನಾಗುತ್ತಾನೆ. ಹೀಗೆ ಆತನು ಐಹಿಕ ಗುಣಗಳ ಎಲ್ಲ ಕಲ್ಮಷಗಳಿಂದ ಬಿಡುಗಡೆಯಾಗುತ್ತಾನೆ. ಆತನಿಗೆ ಕೃಷ್ಣನ ಸಂಬಂಧದಲ್ಲಿ ತನ್ನ ಸ್ವರೂಪದ ಸ್ಥಿತಿ ತಿಳಿದಿರುತ್ತದೆ. ಆತನು ಮನಸ್ಸನ್ನು ಕೃಷ್ಣಪ್ರಜ್ಞೆಯಿಂದ ಸೆಳೆಯಲು ಸಾಧ್ಯವಿಲ್ಲ.
ಈ ಕಾರಣದಿಂದ ಅವನು ಮುಕ್ತನಾಗಬಹುದು. ಆದುದರಿಂದ ಅವನು ಏನು ಮಾಡಿದರೂ ಆದಿವಿಷ್ಣುವಾದ ಕೃಷ್ಣನಿಗಾಗಿಯೇ ಮಾಡುತ್ತಾನೆ. ಆದುದರಿಂದ ವಿಶಿಷ್ಟಾರ್ಥದಲ್ಲಿ ಆತನ ಕರ್ಮಗಳೆಲ್ಲವೂ ಯಜ್ಞಗಳೇ. ಏಕೆಂದರೆ ಯಜ್ಞಗಳ ಉದ್ದೇಶ ಪರಮ ಪುರುಷನಾದ ವಿಷ್ಣುವನ್ನು, ಕೃಷ್ಣನನ್ನು ತೃಪ್ತಿಗೊಳಿಸುವುದು. ಇಂತಹ ಕರ್ಮದ ಪರಿಣಾಮವಾದ ಎಲ್ಲ ಪ್ರತಿಕ್ರಿಯೆಗಳೂ ಅಧ್ಯಾತ್ಮದಲ್ಲಿ ಸೇರಿಹೋಗುತ್ತವೆ. ಆ ಮನುಷ್ಯನಿಗೆ ಐಹಿಕ ಪರಿಣಾಮಗಳ ತೊಂದರೆಯಿಲ್ಲ.
ಬ್ರಹ್ಮಾರ್ಪಣಂ ಬ್ರಹ್ಮ ಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್ |
ಬ್ರಹ್ಮೈವ ತೇನ ಗನ್ತವ್ಯಂ ಬ್ರಹ್ಮಕರ್ಮಸಮಾಧಿನಾ ||24||
ಕೃಷ್ಣಪ್ರಜ್ಞೆಯಲ್ಲಿ ಸಂಪೂರ್ಣವಾಗಿ ಮಗ್ನನಾದ ಮನುಷ್ಯನು ನಿಶ್ಚಯವಾಗಿಯೂ ಆ ಭಗವದ್ಧಾಮವನ್ನು ಸೇರುವನು. ಏಕೆಂದರೆ ಅವನು ಆಧ್ಯಾತ್ಮಿಕ ಕಾರ್ಯಗಳಿಗೆ ಸಂಪೂರ್ಣವಾಗಿ ಅರ್ಪಿತನಾಗಿರುತ್ತಾನೆ. ಇಂತಹ ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಹುತಿಯೂ ಪರಾತ್ಪರವಾದದ್ದು ಮತ್ತು ಅರ್ಪಣವೂ ಇದೇ ಆಧ್ಯಾತ್ಮಿಕ ಸ್ವಭಾವದ್ದು.
ಕೃಷ್ಣಪ್ರಜ್ಞೆಯಿಂದ ಕೂಡಿದ ಕಾರ್ಯ ಚಟುವಟಿಕೆಗಳು ಮನುಷ್ಯನನ್ನು ಕಡೆಗೆ ಹೇಗೆ ಆಧ್ಯಾತ್ಮಿಕ ಗುರಿಗೆ ಕೊಂಡೊಯ್ಯಬಹುದು ಎನ್ನುವುದನ್ನು ಇಲ್ಲಿ ಬಣ್ಣಿಸಿದೆ. ಕೃಷ್ಣಪ್ರಜ್ಞೆಯಲ್ಲಿ ಹಲವಾರು ಚಟುವಟಿಕೆಗಳಿವೆ. ಅವೆಲ್ಲವನ್ನೂ ಮುಂದಿನ ಶೋಕಗಳಲ್ಲಿ ವರ್ಣಿಸಿದೆ. ಇಲ್ಲಿ ಕೃಷ್ಣಪ್ರಜ್ಞೆ ತತ್ವವನ್ನು ಮಾತ್ರ ವರ್ಣಿಸಿದೆ. ಭೌತಿಕ ಕಲ್ಮಷದಲ್ಲಿ ಸಿಕ್ಕಿಕೊಂಡಿರುವ ಬದ್ಧಾತ್ಮನು ಖಂಡಿತವಾಗಿಯೂ ಭೌತಿಕ ವಾತಾವರಣದಲ್ಲಿ ಕರ್ಮ ಮಾಡುತ್ತಾನೆ. ಆದರೂ ಆತನು ಇಂತಹ ಆವರಣದಿಂದ ಹೊರಬರಬೇಕಾಗಿದೆ.
ಭೌತಿಕ ಆವರಣದಿಂದ ಬದ್ಧಾತ್ಮವು ಹೊರಬರುವ ಪ್ರಕ್ರಿಯೆಯೇ ಕೃಷ್ಣಪ್ರಜ್ಞೆ. ಉದಾಹರಣೆಗೆ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಿ ಅಜೀರ್ಣದಿಂದ ನರಳುತ್ತಿರುವ ರೋಗಿಗೆ ಹಾಲಿನ ಮತ್ತೊಂದು ಉತ್ಪನ್ನವಾದ ಮೊಸರಿನಿಂದ ಗುಣವಾಗುತ್ತದೆ. ಇಲ್ಲಿ ಗೀತೆಯು ಹೇಳುವಂತೆ ಐಹಿಕದಲ್ಲೇ ಮೈಮರೆತ ಬದ್ಧಾತ್ಮಕ್ಕೆ ಕೃಷ್ಣಪ್ರಜ್ಞೆಯಿಂದ ಗುಣವಾಗಬಹುದು. ಈ ಪ್ರಕ್ರಿಯೆಗೆ ಯಜ್ಞ ಎಂದ ಹೆಸರು. ಹೀಗೆಂದರೆ ವಿಷ್ಣು ಅಥವಾ ಕೃಷ್ಣನ ತೃಪ್ತಿಗಾಗಿಯೆ ಮಾಡುವ ಕಾರ್ಯಗಳು. ಐಹಿಕ ಜಗತ್ತಿನ ಚಟುವಟಿಕೆಗಳನ್ನು ಕೃಷ್ಣಪ್ರಜ್ಞೆಯಲ್ಲಿ ಅಥವಾ ವಿಷ್ಣುವಿಗಾಗಿ ಮಾತ್ರವೇ ಮಾಡಿದಷ್ಟೂ ಸಮಾಧಿ ಅಥವಾ ಸಂಪೂರ್ಣ ಲೀನತೆಯಿಂದಾಗಿ ವಾತಾವರಣವು ಆಧ್ಯಾತ್ಮಿಕವಾಗುತ್ತದೆ.
ಬ್ರಹ್ಮ ಎನ್ನುವ ಪದಕ್ಕೆ ಆಧ್ಯಾತ್ಮಿಕ ಎಂದು ಅರ್ಥ. ಭಗವಂತನು ಆಧ್ಯಾತ್ಮಿಕನು. ಅವನ ಅಲೌಕಿಕ ಶರೀರದ ಕಿರಣಗಳನ್ನು ಬ್ರಹ್ಮಜ್ಯೋತಿ ಎಂದು ಕರೆಯುತ್ತಾರೆ. ಅಸ್ತಿತ್ವದಲ್ಲಿರುವುದೆಲ್ಲ ಬ್ರಹ್ಮಜ್ಯೋತಿಯಲ್ಲಿ ನೆಲೆಗೂಂಡಿದೆ. ಆದರೆ ಮಾಯೆ ಅಥವಾ ಇಂದ್ರಿಯತೃಪ್ತಿಯು ಆ ಜ್ಯೋತಿಯನ್ನು ಮುಸುಕಿದಾಗ ಅದಕ್ಕೆ ಐಹಿಕವೆಂದು ಹೆಸರು. ಕೃಷ್ಣಪ್ರಜ್ಞೆಯು ತಕ್ಷಣವೇ ಈ ಮುಸುಕನ್ನು ಕಿತ್ತುಹಾಕಬಲ್ಲದು. ಹೀಗೆ ಕೃಷ್ಣಪ್ರಜ್ಞೆಗಾಗಿಯೇ ಅರ್ಪಿಸಿದ್ದು, ಈ ಅರ್ಪಣೆಯನ್ನು ಆಹುತಿಯಾಗಿ ಸ್ವೀಕರಿಸುವ ಪ್ರತಿನಿಧಿ, ಆಹುತಿಗೊಳ್ಳುವ ಪ್ರತ್ರಿಯೆ, ಅರ್ಪಿಸುವವನು. ಅದರ ಫಲ ಎಲ್ಲ ಸೇರಿ ಬ್ರಹ್ಮನ್ ಅಥವಾ ಪರಮಸತ್ಯ ಎನಿಸುತ್ತದೆ. ಪರಮಸತ್ಯವನ್ನು ಮಾಯೆಯು ಮುಸುಕಿದಾಗ ಅದಕ್ಕೆ ಜಡವಸ್ತುವೆಂದೂ ಹೆಸರು.
ಪರಮಸತ್ಯಕ್ಕಾಗಿ ಜೊತೆಗೂಡಿಸಿದ ಜಡವಸ್ತುವು ತನ್ನ ಆಧ್ಯಾತ್ಮಿಕ ಗುಣವನ್ನು ಮರಳಿ ಪಡೆಯುತ್ತದೆ. ಮಾಯಾಪ್ರಜ್ಞೆಯನ್ನು ಬ್ರಹ್ಮನ್ ಆಗಿ ಪರಿವರ್ತಿಸುವ ಪ್ರಕ್ರಿಯೆಯೇ ಕೃಷ್ಣಪ್ರಜ್ಞೆ. ಮನಸ್ಸು ಕೃಷ್ಣಪ್ರಜ್ಞೆಯಲ್ಲಿ ಸಂಪೂರ್ಣವಾಗಿ ತಲ್ಲೀನವಾದಾಗ ಅದು ಸಮಾಧಿಯಲ್ಲಿದೆ ಎನ್ನುತ್ತಾರೆ. ಇಂತಹ ದಿವ್ಯಪ್ರಜ್ಞೆಯಲ್ಲಿ ಮಾಡಿದ ಯಾವುದೇ ಕಾರ್ಯಕ್ಕೆ ಯಜ್ಞ ಎಂದು ಹೆಸರು. ಆಧ್ಯಾತ್ಮಿಕ ಪ್ರಜ್ಞೆಯ ಈ ಸ್ಥಿತಿಯಲ್ಲಿ ಅರ್ಪಿಸಿದವನು, ಅರ್ಪಿಸಿದ್ದು, ಆಹುತಿ ತೆಗೆದುಕೊಳ್ಳುವುದು, ಕರ್ತೃ ಅಥವಾ ಯಜಮಾನ, ಯಜ್ಞದ ಪರಮಫಲ ಎಲ್ಲವೂ ಪರಬ್ರಹ್ಮನಲ್ಲಿ ಒಂದಾಗುತ್ತದೆ. ಇದು ಕೃಷ್ಣಪ್ರಜ್ಞೆಯ ರೀತಿ.