ಭಗವದ್ಗೀತೆ: ಮನುಷ್ಯನ ಅಜ್ಞಾನವೇ ಆತನ ಕಷ್ಟ, ಯಾತನೆಗಳಿಗೆ ಕಾರಣ; ಗೀತೆಯ ಅರ್ಥ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಮನುಷ್ಯನ ಅಜ್ಞಾನವೇ ಆತನ ಕಷ್ಟ, ಯಾತನೆಗಳಿಗೆ ಕಾರಣ ಎಂಬುದರ ಅರ್ಥ ತಿಳಿಯಿರಿ.
ನ ಕರ್ತೃತ್ವಂ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭುಃ |
ನ ಕರ್ಮಫಲಸಂಯೋಗಂ ಸ್ವಭಾವಸ್ತು ಪ್ರವರ್ತತೇ ||14||
ತನ್ನ ದೇಹವೆಂಬ ನಗರದ ಒಡೆಯನಾದ ದೇಹಸ್ಥ ಆತ್ಮನು ಕರ್ಮಗಳನ್ನು ಸೃಷ್ಟಿಸುವುದಿಲ್ಲ, ಜನರಿಗೆ ಕರ್ಮ ಮಾಡುವಂತೆ ಮನ ಒಲಿಸಪುವುದಿಲ್ಲ ಮತ್ತು ಕರ್ಮಫಲವನ್ನು ಸೃಷ್ಟಿಸುವುದಿಲ್ಲ. ಇವೆಲ್ಲವನ್ನೂ ಐಹಿಕ ಪ್ರಕೃತಿಯ ಗುಣಗಳೇ ಸೃಷ್ಟಿಮಾಡುತ್ತವೆ.
ಏಳನೆಯ ಅಧ್ಯಾಯದಲ್ಲಿ ವಿವರಿಸುವಂತೆ ಜೀವಿಯು ಭಗವಂತನ ಶಕ್ತಿಗಳಲ್ಲಿ ಅಥವಾ ಪ್ರಕೃತಿಗಳಲ್ಲಿ ಒಂದು. ಇದು ಜಡವಸ್ತುವಿನಿಂದ ಭಿನ್ನವಾದದ್ದು. ಜಡವಸ್ತುವು ಭಗವಂತನ ಇನ್ನೊಂದು ಪ್ರಕೃತಿ. ಇದನ್ನು ಕನಿಷ್ಠ ಎನ್ನುತ್ತಾರೆ. ಉತ್ತಮ ಪ್ರಕೃತಿಯ ಜೀವಿಯು ಅನಾದಿ ಕಾಲದಿಂದ ಹೇಗೋ ಐಹಿಕ ಪ್ರಕೃತಿಯೊಂದಿಗೆ ಸಂಬಂಧ ಹೊಂದಿದೆ. ಜೀವಿಗೆ ದೊರೆಯುವ ಅಲ್ಪಕಾಲದ ದೇಹವು ಅಥವಾ ಐಹಿಕ ವಾಸಸ್ಥಳವು ವಿವಿಧ ಕಾರ್ಯಗಳ ಮತ್ತು ಆ ಕರ್ಮಫಲಗಳ ಕಾರಣವಾಗುತ್ತದೆ. ಇಂತಹ ಬದ್ಧವಾತಾವರಣದಲ್ಲಿ ವಾಸಿಸುವುದರಿಂದ ಮನುಷ್ಯನು (ಅಜ್ಞಾನದಿಂದ) ತನ್ನನ್ನು ದೇಹದೊಂದಿಗೆ ಗುರುತಿಸಿಕೊಂಡು ದೇಹದ ಕರ್ಮಫಲಗಳಿಂದ ಕಷ್ಟಪಡುತ್ತಾನೆ.
ಅನಾದಿ ಕಾಲದಿಂದ ಬಂದ ಅಜ್ಞಾನವೇ ದೇಹದ ಕಷ್ಟ ಮತ್ತು ಯಾತನೆಗಳಿಗೆ ಕಾರಣ. ಜೀವಿಯು ದೇಹದ ಕಾರ್ಯಗಳಿಂದ ದೂರವಾಗುತ್ತಲೇ ಆತನ ಪ್ರತಿಕ್ರಿಯೆಗಳಿಂದಲೂ ಬಿಡುಗಡೆಗೊಳ್ಳುತ್ತಾನೆ. ಅವನು ದೇಹವೆಂಬ ನಗರದಲ್ಲಿರುವತನಕ ಅದರ ಯಾಜಮಾನನಂತೆ ಕಾಣುತ್ತಾನೆ. ಆದರೆ ವಾಸ್ತವವಾಗಿ ಅವನು ಅದರ ಒಡೆಯನೂ ಅಲ್ಲ ಮತ್ತು ಅದರ ಕರ್ಮಗಳನ್ನೂ ಕರ್ಮಫಲಗಳನ್ನೂ ನಿಯಂತ್ರಿಸಬಲ್ಲವನೂ ಅಲ್ಲ. ಅವನು ತನ್ನ ಉಳಿವಿಗಾಗಿ ಸೆಣಸುತ್ತ ಭವಸಾಗರದಲ್ಲಿದ್ದಾನೆ, ಅಷ್ಟೇ. ಸಾಗರದ ಅಲೆಗಳು ಅವನನ್ನು ಎತ್ತಿ ಹಾಕುತ್ತಿವೆ. ಅವುಗಳ ಮೇಲೆ ಅವನಿಗೆ ಯಾವ ಹತೋಟಿಯೂ ಇಲ್ಲ. ಅಲೌಕಿಕವಾದ ಕೃಷ್ಣಪ್ರಜ್ಞೆಯಿಂದಾಗಿ ಸಾಗರದಿಂದ ಹೊರಬರುವುದೇ ಅವನ ಮಟ್ಟಿಗೆ ಅತ್ಯುತ್ತಮ ಪರಿಹಾರ. ಇದೊಂದೇ ಅವನನ್ನು ಎಲ್ಲ ಕ್ಷೋಭೆಯಿಂದ ರಕ್ಷಿಸಬಲ್ಲದು. (This copy first appeared in Hindustan Times Kannada website. To read more like this please logon to kannada.hindustantime.com).