Bhagavad Gita: ಬದುಕಿನಲ್ಲಿ ಮಾಡಿದ ಎಲ್ಲಾ ಕೆಲಸಗಳು ಕೊನೆಯಲ್ಲಿ ಪರೀಕ್ಷೆಗೆ ಒಳಗಾಗುತ್ತವೆ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಬದುಕಿನಲ್ಲಿ ಮಾಡಿದ ಎಲ್ಲಾ ಕೆಲಸಗಳು ಕೊನೆಯಲ್ಲಿ ಪರೀಕ್ಷೆಗೆ ಒಳಗಾಗುತ್ತವೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಬದುಕಿನಲ್ಲಿ ಮಾಡಿದ ಎಲ್ಲಾ ಕೆಲಸಗಳು ಕೊನೆಯಲ್ಲಿ ಪರೀಕ್ಷೆಗೆ ಒಳಗಾಗುತ್ತವೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಬದುಕಿನಲ್ಲಿ ಮಾಡಿದ ಎಲ್ಲಾ ಕೆಲಸಗಳು ಕೊನೆಯಲ್ಲಿ ಪರೀಕ್ಷೆಗೆ ಒಳಗಾಗುತ್ತವೆ ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಯದ 1 ಮತ್ತು 2ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 1

ಕಿಂ ತದ್ ಬ್ರಹ್ಮ ಕಿಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ |

ಅಧಿಭೂತಂ ಚ ಕಿಂ ಪ್ರೋಕ್ತಮಧಿದೈವಂ ಕಿಮುಚ್ಯತೇ |1|

ಅನುವಾದ: ಅರ್ಜುನನು ಹೀಗೆ ಪ್ರಶ್ನಿಸಿದನು - ಪ್ರಭುವೆ, ಪರಮ ಪುರುಷನೆ, ಯಾವುದು ಬ್ರಹ್ಮನ್? ಯಾವುದು ಆತ್ಮ? ಕರ್ಮ ಯಾವುದು? ಈ ಐಹಿಕ ಅಭಿವ್ಯಕ್ತಿ ಯಾವುದು? ದೇವತೆಗಳು ಯಾರು? ದಯೆಯಿಟ್ಟು ಇದನ್ನು ನನಗೆ ವಿವರಿಸು.

ಭಾವಾರ್ಥ: ಈ ಅಧ್ಯಾಯದಲ್ಲಿ ಶ್ರೀಕೃಷ್ಣನು, ಯಾವುದು ಬ್ರಹ್ಮನ್ ಎನ್ನುವುದರಿಂದ ಪ್ರಾರಂಭಿಸಿ ಅರ್ಜುನನ ವಿವಿಧ ಪ್ರಶ್ನೆಗಳಿಗೆ ಉತ್ತರ ಹೇಳುತ್ತಾನೆ. ಪ್ರಭುವು ಕಾಮ್ಯಕರ್ಮಗಳನ್ನು ಯೋಗತತ್ವಗಳನ್ನು ಮತ್ತು ಪರಿಶುದ್ಧ ಭಕ್ತಿಸೇವೆಯನ್ನು ವಿವರಿಸುತ್ತಾನೆ. ಪರಾತ್ಪರ ಸತ್ಯಕ್ಕೆ ಬ್ರಹ್ಮನ್, ಪರಮಾತ್ಮ ಮತ್ತು ಭಗವಾನ್ ಎಂದೂ ಹೆಸರು ಎಂಬುದಾಗಿ ಶ್ರೀಮದ್ಭಾಗವತವು ವಿವರಿಸುತ್ತದೆ. ಅಲ್ಲದೆ ಜೀವಿಗೂ, ವ್ಯಕ್ತಿಗತ ಆತ್ಮಕ್ಕೂ ಬ್ರಹ್ಮನ್ ಎಂದು ಹೆಸರು. ಆತ್ಮವು ದೇಹ, ಆತ್ಮ ಮತ್ತು ಮನಸ್ಸುಗಳನ್ನು ಸೂಚಿಸುತ್ತದೆೆ. ಅರ್ಜುನನು ಆತ್ಮವನ್ನು ಕುರಿತೂ ಪ್ರಶ್ನಿಸುತ್ತಾನೆ. ವೈದಿಕ ನಿಘಂಟಿನ ಪ್ರಕಾರ ಆತ್ಮ, ದೇಹ ಮತ್ತು ಇಂದ್ರಿಯಗಳನ್ನು ಸೂಚಿಸುತ್ತದೆ.

ಅರ್ಜುನನು ಪರಮ ಪ್ರಭುವನ್ನು ಪುರುಷೋತ್ತಮ ಎಂದು ಸಂಬೋಧಿಸಿದ್ದಾನೆ. ಇದರ ಅರ್ಥ ಆತನು ಪ್ರಶ್ನೆಗಳನ್ನು ಒಬ್ಬ ಸ್ನೇಹಿತನಿಗೆ ಮಾತ್ರ ಕೇಳುತ್ತಿರಲಿಲ್ಲ. ಪರಮ ಪುರುಷನು ಖಚಿತವಾದ ಉತ್ತರಗಳನ್ನು ಕೊಡಬಲ್ಲ ಪರಮಾಧಿಕಾರಿ ಎಂದು ತಿಳಿದು ಅವನನ್ನು ಪ್ರಶ್ನಿಸುತ್ತಿದ್ದ.

8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 2

ಅಧಿಯಜ್ಞಃ ಕಥಂ ಕೋತ್ರ ದೇಹೆಸ್ಮಿನ್ಮಧುಸೂದನ|

ಪ್ರಯಾಣಕಾಲೇ ಚ ಕಥಂ ಜ್ಞೇಯೋಸಿ ನಿಯಾತಾತ್ಮಭಿಃ|2|

ಅನುವಾದ: ಮಧುಸೂದನನೆ, ಯಜ್ಞದ ಪ್ರಭುವು ಯಾರು? ಅವನು ದೇಹದಲ್ಲಿ ವಾಸಿಸುವುದು ಹೇಗೆ? ಭಕ್ತಿಸೇವೆಯಲ್ಲಿ ತೊಡಗಿರುವವರು ಮರಣಕಾಲದಲ್ಲಿ ನಿನ್ನನ್ನು ತಿಳಿಯುವುದು ಹೇಗೆ?

ಭಾವಾರ್ಥ: ಯಜ್ಞದ ಪ್ರಭು ಎಂದರೆ ಇಂದ್ರನಾದರೂ ಆಗಬಹುದು, ವಿಷ್ಣುವಾದರೂ ಆಗಬಹುದು. ಬ್ರಹ್ಮನೂ ಶಿವನೂ ಸೇರಿದಂತೆ ಪ್ರಧಾನ ದೇವತೆಗಳ ಮುಖ್ಯಸ್ಥ ವಿಷ್ಣು. ಇಂದ್ರನು ಆಡಳಿತವನ್ನು ನಡೆಸುವ ದೇವತೆಗಳ ಮುಖ್ಯಸ್ಥ. ಯಜ್ಞ ಮಾಡುವವರು ಇಬ್ಬರನ್ನೂ ಪೂಜಿಸುತ್ತಾರೆ. ಇಲ್ಲಿ ಅರ್ಜುನನು ವಾಸ್ತವವಾಗಿ ಯಜ್ಞದ ಪ್ರಭುವು ಯಾರು ಮತ್ತು ಜೀವಿಯ ದೇಹದಲ್ಲಿ ಭಗವಂತನು ಹೇಗೆ ವಾಸಿಸುತ್ತಾನೆ ಎಂದು ಕೇಳುತ್ತಾನೆ.

ಅರ್ಜುನನು ಭಗವಂತನನ್ನು ಮಧುಸೂದನ ಎಂದು ಸಂಬೋಧಿಸುತ್ತಾನೆ. ಏಕೆಂದರೆ ಒಮ್ಮೆ ಕೃಷ್ಣನು ಮಧು ಎಂಬ ರಾಕ್ಷಸನನ್ನು ಕೊಂದ. ವಾಸ್ತವವಾಗಿ, ಸಂದೇಹಗಳೇ ಆದ ಈ ಪ್ರಶ್ನೆಗಳು ಅರ್ಜುನನ ಮನಸ್ಸಿನಲ್ಲಿ ಉದ್ಭವಿಸಲೇಬೇಕಾಗಿರಲಿಲ್ಲ. ಏಕೆಂದರೆ ಅರ್ಜುನನು ಕೃಷ್ಣಪ್ರಜ್ಞೆ ಇರುವ ಭಕ್ತ. ಈ ಸಂದೇಹಗಳು ರಾಕ್ಷಸರಂತೆ. ಕೃಷ್ಣನು ರಾಕ್ಷಸರನ್ನು ಕೊಲ್ಲುವುದರಲ್ಲಿ ನಿಪುಣನಾದದ್ದರಿಂದ ಅರ್ಜುನನು ಇಲ್ಲಿ ಕೃಷ್ಣನನ್ನು ಮಧುಸೂದನ ಎಂದು ಸಂಬೋಧಿಸುತ್ತಾನೆ. ಏಕೆಂದರೆ ಒಮ್ಮೆ ಕೃಷ್ಣನು ಮಧು ಎಂಬ ರಾಕ್ಷಸನನ್ನು ಕೊಂದ. ವಾಸ್ತವವಾಗಿ, ಸಂದೇಹಗಳೇ ಆದ ಈ ಪ್ರಶ್ನೆಗಳು ಅರ್ಜುನನ ಮನಸ್ಸಿನಲ್ಲಿ ಕಾಣಿಸಿಕೊಳ್ಳುವ ರಾಕ್ಷಸೀ ಸಂದೇಹಗಳನ್ನು ಕೃಷ್ಣನು ಸಂಹರಿಸಲಿ ಎಂಬುದು ಇದಕ್ಕೆ ಕಾರಣ.

ಈ ಶ್ಲೋಕದಲ್ಲಿ ಪ್ರಯಾಣ ಕಾಲೇ ಎನ್ನುವ ಮಾತು ಬಹು ಮಹತ್ವದ್ದು. ಏಕೆಂದರೆ ಬದುಕಿನಲ್ಲಿ ನಾವು ಮಾಡಿದುದೆಲ್ಲ ಸಾವಿನ ಸಮಯದಲ್ಲಿ ಪರೀಕ್ಷೆಗೆ ಒಳಗಾಗುತ್ತದೆ. ಸದಾ ಕೃಷ್ಣಪ್ರಜ್ಞೆಯಲ್ಲಿ ನಿರತರಾದವರು ಯಾರು ಎಂದು ತಿಳಿಯಲು ಅರ್ಜುನನು ಬಹು ಕಾತರನಾಗಿದ್ದಾನೆ. ಆ ಕಡೆಯ ಕ್ಷಣದಲ್ಲಿ ಅವರ ಸ್ಥಿತಿ ಹೇಗಿರಬೇಕು? ಸಾವಿನ ಕ್ಷಣದಲ್ಲಿ ದೇಹದ ಕ್ರಿಯೆಗಳೆಲ್ಲ ಅಸ್ತವ್ಯಸ್ತವಾಗುತ್ತವೆ. ಮನಸ್ಸು ಯೋಗ್ಯ ಸ್ಥಿತಿಯಲ್ಲಿ ಇರುವುದಿಲ್ಲ. ದೇಹದ ಈ ಸ್ಥಿತಿಯಿಂದ ಅಲ್ಲೋಲ ಕಲ್ಲೋಲವಾದ ಮನಸ್ಸಿಗೆ ಪರಮ ಪ್ರಭುವನ್ನು ಸ್ಮರಿಸುವುದು ಸಾಧ್ಯವಾಗದೆ ಹೋಗಬಹುದು. ಒಬ್ಬ ಮಹಾಭಕ್ತರಾದ ಮಹಾರಾಜ ಕುಲಶೇಕರರು ಹೀಗೆ ಪ್ರಾರ್ಥಿಸುತ್ತಾರೆ. ನನ್ನ ಪ್ರೀತಿಯ ಪ್ರಭುವೇ, ಈಗ ನಾನು ಸಂಪೂರ್ಣವಾಗಿ ಆರೋಗ್ಯದಿಂದ ಇದ್ದೇನೆ. ಈಗಲೇ ನಾನು ಸಾಯುವುದು ಉತ್ತಮ. ಏಕೆಂದರೆ ಆಗ ನನ್ನ ಮನಸ್ಸಿನ ಹಂಸವು ನಿನ್ನ ಪಾದಕಮಲದ ನಾಳವನ್ನು ಪ್ರವೇಶಿಸಲು ಪ್ರಯತ್ನಿಸಬಹುದು.

ಈ ಉಪಮಾನವನ್ನು ಬಳಸಲು ಕಾರಣ, ನೀರಿನ ಪಕ್ಷಿಯಾದ ಹಂಸಕ್ಕೆ ಕಮಲದ ಹೂವನ್ನು ಅಗೆಯುವುದೆಂದರೆ ಸಂತಸ. ಕಮಲವನ್ನು ಪ್ರವೇಶಿಸುವುದು ಅದಕ್ಕೆ ಒಲವಿನ ಆಟ. ಮಹಾರಾಜ ಕುಲಕೇಶರರು ಭಗವಂತನಿಗೆ ಹೀಗೆ ಹೇಳುತ್ತಾರೆ. ಈಗ ನನ್ನ ಮನಸ್ಸಿಗೆ ಕ್ಷೋಭೆ ಇಲ್ಲ. ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ನಿನ್ನ ಚರಣ ಕಮಲವನ್ನು ಧ್ಯಾನಿಸುತ್ತ ನಾನು ಈಗಲೇ ಸತ್ತರೆ, ನನ್ನ ಭಕ್ತಿಪೂರ್ವಕ ಸೇವೆಯು ಪರಿಪೂರ್ಣವಾಗುವುದೆಂದು ನನಗೆ ನಿಶ್ಚಯ. ಆದರೆ ಸಹಜವಾಗಿ ಸಾವು ಬರುವ ತನಕ ನಾನು ಕಾಯಬೇಕಾದರೆ ಏನಾಗುವುದೋ ಕಾಣೆ. ಏಕೆಂದರೆ ಆ ಹೊತ್ತಿಗೆ ನನ್ನ ದೈಹಿಕ ಕ್ರಿಯೆಗಳೆಲ್ಲ ಅಸ್ತವ್ಯಸ್ತವಾಗುತ್ತವೆ. ನನ್ನ ಗಂಟಲಿನಲ್ಲಿ ಉಸಿರು ಸಿಕ್ಕಿಕೊಳ್ಳುತ್ತದೆ. ನಿನ್ನ ಹೆಸರನ್ನು ಉಚ್ಚರಿಸಲು ನನಗೆ ಸಾಧ್ಯವಾಗುವುದೇ ಎಂದು ತಿಳಿಯದು. ಕೂಡಲೇ ಸತ್ತುಹೋಗುವುದೇ ಉತ್ತಮ. ಇಂತಹ ಸಮಯದಲ್ಲಿ ಮನುಷ್ಯನು ತನ್ನ ಮನಸ್ಸನ್ನು ಕೃಷ್ಣನ ಚರಣಕಮಲಗಳಲ್ಲಿ ನಿಲ್ಲಿಸುವುದು ಹೇಗೆ ಎಂದು ಅರ್ಜುನನು ಪ್ರಶ್ನಿಸುತ್ತಾನೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.