Bhagavad Gita: ಮನುಷ್ಯ ಭಗವಂತನ ವಿಚಾರಗಳನ್ನು ಕೇಳಿದಷ್ಟೂ ಭಕ್ತಿಸೇವೆಯಲ್ಲಿ ಸ್ಥಿರವಾಗುತ್ತಾನೆ; ಗೀತೆಯ ಸಾರಾಂಶ ಹೀಗಿದೆ
Bhagavad Gita: ಮನುಷ್ಯ ಭಗವಂತನ ವಿಚಾರಗಳನ್ನು ಕೇಳಿದಷ್ಟೂ ಭಕ್ತಿಸೇವೆಯಲ್ಲಿ ಸ್ಥಿರವಾಗುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯ ವಿಭೂತಿ ಯೋಗದ ಶ್ಲೋಕ 1 ರಲ್ಲಿ ತಿಳಿಯಿರಿ.
ಅಧ್ಯಾಯ 10 - ವಿಭೂತಿ ಯೋಗ - ಶ್ಲೋಕ-1
ಭೂಯ ಏವ ಮಹಾಬಾಹೋ ಶೃಣು ಮೇ ಪರಂ ವಚಃ |
ಯತ್ತೇಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ ||1||
ಅನುವಾದ: ದೇವೋತ್ತಮ ಪರಮ ಪುರಷನು ಹೀಗೆಂದು ಹೇಳಿದನು-ಮಹಾಬಾಹುವಾದ ಅರ್ಜನನೆ, ಮತ್ತೆ ಕೇಳು, ನೀನು ನನ್ನ ಪ್ರೀತಿಯ ಸ್ನೇಹಿತನಾದುದರಿಂದ ನಾನು ನಿನಗಾಗಿ ಇನ್ನೂ ಹೇಳುತ್ತೇನೆ. ನಾನು ಆಗಲೇ ವಿವರಿಸಿರುವ ಜ್ಞಾನಕ್ಕಿಂತ ಇನ್ನೂ ಉತ್ತಮವಾದ ಜ್ಞಾನವನ್ನು ನಿನಗೆ ನೀಡುತ್ತೇನೆ.
ಭಾವಾರ್ಥ: ಭಗವಾನ್ ಎನ್ನುವ ಶಬ್ದವನ್ನು ಪರಾಶರ ಮುನಿಗಳು ಹೀಗೆ ವಿವರಿಸಿದ್ದಾರೆ-ಪೂರ್ಣಶಕ್ತಿ, ಪೂರ್ಣಕೀರ್ತಿ, ಐಶ್ವರ್ಯ, ಜ್ಞಾನ, ಸೌಂದರ್ಯ ಮತ್ತು ವೈರಾಗ್ಯ ಈ ಆರು ಸಿರಿಗಳನ್ನು ಪೂರ್ಣವಾಗಿ ಹೊಂದಿರುವವನು ಭಗವಾನ್ ಅಥವಾ ದೇವೋತ್ತಮ ಪರಮ ಪುರುಷ. ಕೃಷ್ಣನು ಈ ಭೂಮಿಯ ಮೇಲಿದ್ದಾಗ ಈ ಆರು ಸಿರಿಗಳನ್ನೂ ಮೆರೆದನು. ಆದುದರಿಂದ ಪರಾಶರ ಮುನಿಗಳಂತಹ ಶ್ರೇಷ್ಠ ಋಷಿಗಳು ಕೃಷ್ಣನನ್ನು ದೇವೋತ್ತಮ ಪರಮ ಪುರುಷ ಎಂದು ಸ್ವೀಕರಿಸಿದ್ದಾರೆ. ಈಗ ಕೃಷ್ಣನು ಅರ್ಜುನನಿಗೆ ತನ್ನ ಸಿರಿಗಳು ಮತ್ತು ಕಾರ್ಯ ಇವುಗಳನ್ನು ಕುರಿತು ಹೆಚ್ಚು ರಹಸ್ಯ ಜ್ಞಾನವನ್ನು ಬೋಧಿಸುತ್ತಿದ್ದಾನೆ.
ಹಿಂದೆಯೇ ಏಳನೆಯ ಅಧ್ಯಾಯದಿಂದ ಪ್ರಾರಂಭಿಸಿ ಪರಮ ಪ್ರಭುವು ತನ್ನ ವಿವಿಧ ಶಕ್ತಿಗಳನ್ನೂ ಅವು ಹೇಗೆ ಕಾರ್ಯಪ್ರವೃತ್ತವಾಗುತ್ತವೆ ಎನ್ನುವುದನ್ನೂ ವಿವರಿಸಿದ್ದಾನೆ. ಈಗ ಈ ಅಧ್ಯಾಯದಲ್ಲಿ ತನ್ನ ನಿರ್ದಿಷ್ಟ ಸಿರಿಗಳನ್ನು ಅರ್ಜುನನಿಗೆ ವಿವರಿಸುತ್ತಾನೆ. ಹಿಂದಿನ ಅಧ್ಯಾಯದಲ್ಲಿ ಆತನು ಭಕ್ತಿಯನ್ನು ಸ್ಥಿರವಾದ ನಂಬಿಕೆಯಲ್ಲಿ ನೆಲೆಗೊಳಿಸಲು ತನ್ನ ವಿವಿಧ ಶಕ್ತಿಗಳನ್ನು ವಿವರಿಸಿದ್ದಾನೆ. ಈ ಅಧ್ಯಾಯದಲ್ಲಿ ಆತನು ಅರ್ಜುನನಿಗೆ ತನ್ನ ಅಭಿವ್ಯಕ್ತಿಗಳನ್ನೂ ವಿವಿಧ ಸಿರಿಗಳನ್ನೂ ಕುರಿತು ಮತ್ತೆ ಹೇಳುತ್ತಾನೆ. ಪರಮ ಪ್ರಭುವನ್ನು ಕುರಿತು ಕೇಳಿದಷ್ಟೂ ಮನುಷ್ಯನು ಭಕ್ತಿಸೇವೆಯಲ್ಲಿ ಸ್ಥಿರನಾಗುತ್ತಾನೆ.
ಮನುಷ್ಯನು ಯಾವಾಗಲೂ ಪ್ರಭುವಿನ ವಿಷಯವನ್ನು ಭಕ್ತರ ಸಹವಾಸದಲ್ಲಿ ಕೇಳಬೇಕು. ಅದು ಅವನ ಭಕ್ತಿಸೇವೆಯನ್ನು ಹೆಚ್ಚಿಸುತ್ತದೆ. ಭಕ್ತರ ಸಹವಾಸದಲ್ಲಿ ಕೃಷ್ಣಪ್ರಜ್ಞೆಯಲ್ಲಿರಲು ನಿಜವಾಗಿ ಕಾತರರಾಗಿರುವವರ ಮಧ್ಯೆ ಮಾತ್ರ ಪ್ರವಚನಗಳು ನಡೆಯಲು ಸಾಧ್ಯ. ಇತರರು ಇಂತಹ ಪ್ರವಚನಗಳಲ್ಲಿ ಭಾಗವಹಿಸಲಾರರು. ಅರ್ಜುನನು ತನಗೆ ತುಂಬ ಪ್ರಿಯನಾದವನಾದ್ದರಿಂದ ಅವನ ಪ್ರಯೋಜನಕ್ಕಾಗಿ ಇಂತಹ ಪ್ರವಚನಗಳು ನಡೆಯುತ್ತಿವೆ ಎಂದು ಪ್ರಭುವು ಅರ್ಜುನನಿಗೆ ಸ್ಪಷ್ಟವಾಗಿ ಹೇಳುತ್ತಾನೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)