Bhagavad Gita: ಮನಸ್ಸಿನಲ್ಲಿ ಚಾಂಚಲ್ಯ ಇರುವ ವ್ಯಕ್ತಿ ಪರಿಪೂರ್ಣ ಮನುಷ್ಯನಾಗಲು ಸಾಧ್ಯವಿಲ್ಲ; ಗೀತೆಯ ಅರ್ಥ ತಿಳಿಯಿರಿ
Bhagavad Gita Updesh: ಮನಸ್ಸಿನಲ್ಲಿ ಚಂಚಲತೆ ಇರುವ ಮನುಷ್ಯ ಪೂರ್ಣನಾಗಲು ಸಾಧ್ಯವಿಲ್ಲ. ಆತನ ಜೀವನ ಶೈಲಿ, ರೀತಿ-ನೀತಿಗಳು ಹೇಗೆಲ್ಲಾ ಇರುತ್ತವೆ ಎಂಬುದನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.
ಅಧ್ಯಾಯ 6- ಧ್ಯಾನ ಯೋಗ: ಶ್ಲೋಕ - 25
ಶನೈಃ ಶನೈರುಪರಮೇದ್ ಬುದ್ಧ್ಯಾ ಧೃತಿಗೃಹೀತಯಾ |
ಆತ್ಮಸಂಸ್ಥಂ ಮನಃ ಕೃತ್ವಾ ನ ಕಿಞ್ಚಿದಪಿ ಚಿನ್ತಯೇತ್ ||25||
ಅನುವಾದ: ಕ್ರಮಕ್ರಮವಾಗಿ, ಹೆಜ್ಜೆಹೆಜ್ಜೆಯಾಗಿ, ಸಂಪೂರ್ಣ ಸ್ಥೈರ್ಯವನ್ನು ಆಧಾರಮಾಡಿಕೊಂಡ ಬುದ್ಧಿಶಕ್ತಿಯ ಮೂಲಕ ಮನುಷ್ಯನು ಸಮಾಧಿಸ್ಥಿತಿಯಲ್ಲಿ ನಿಲ್ಲಬೇಕು. ಹೀಗೆ ಮನಸ್ಸನ್ನು ಆತ್ಮದಲ್ಲಿಯೇ ಸ್ಥಿರವಾಗಿ ನಿಲ್ಲಿಸಬೇಕು, ಬೇರನನ್ನೂ ಕುರಿತು ಯೋಚಿಸಬಾರದು.
ಭಾವಾರ್ಥ: ಸೂಕ್ತವಾದ ದೃಢನಂಬಿಕೆ ಮತ್ತು ಬುದ್ಧಿಶಕ್ತಿಗಳ ಮೂಲಕ ಮನುಷ್ಯನು ಕ್ರಮಕ್ರಮವಾಗಿ ಇಂದ್ರಿಯಗಳ ಕಾರ್ಯಗಳನ್ನು ನಿಲ್ಲಿಸಬೇಕು. ಇದಕ್ಕೆ ಪ್ರತ್ಯಾಹಾರ ಎಂದು ಹೆಸರು. ದೃಢನಂಬಿಕೆ, ಧ್ಯಾನ ಮತ್ತು ಇಂದ್ರಿಯಗಳ ಕಾರ್ಯಗಳನ್ನು ಕೊನೆಗಾಣಿಸುವುದರಿಂದ ನಿಯಂತ್ರಿತವಾದ ಮನಸ್ಸನ್ನು ಸಮಾಧಿಯಲ್ಲಿ ನೆಲೆಗೊಳಿಸಬೇಕು. ಆಗ ಬದುಕಿನ ಐಹಿಕ ಪರಿಕಲ್ಪನೆಯಲ್ಲಿ ತೊಡಗಿಕೊಳ್ಳುವ ಅಪಾಯವಿರುವುದಿಲ್ಲ. ಬೇರೆ ರೀತಿಯಲ್ಲಿ ಹೇಳವುದಾದರೆ, ಐಹಿಕ ದೇಹವಿರುವಷ್ಟು ಕಾಲವೂ ಮನುಷ್ಯನು ಜಡವಸ್ತುವಿನೊಡನೆ ಸಂಬಂಧ ಹೊಂದಿದ್ದರೂ ಇಂದ್ರಿಯ ತೃಪ್ತಿಯ ವಿಷಯವನ್ನು ಯೋಚಿಸಲೇಬಾರದು. ಪರಮಾತ್ಮನ ಆನಂದವನ್ನು ಬಿಟ್ಟು ಬೇರೆ ಯಾವುದೇ ಸಂತೋಷವನ್ನು ಕುರಿತು ಯೋಚಿಸಬಾರದು. ನೇರವಾಗಿ ಕೃಷ್ಣಪ್ರಜ್ಞೆಯನ್ನು ಅಭ್ಯಾಸಮಾಡುವುದರಿಂದ ಸುಲಭವಾಗಿ ಈ ಸ್ಥಿತಿಯನ್ನು ಮುಟ್ಟಬಹುದು.
ಶ್ಲೋಕ - 26
ಯತೋ ಯತೋ ನಿಶ್ಚಲತಿ ಮನಶ್ಚಂಚಲಮಸ್ಥಿರಮ್ |
ತತಸ್ತತೋ ನಿಯಮ್ಯೈತದಾತ್ಮನ್ಯೇವ ವಶಂ ನಯೇತ್ ||26||
ಇದನ್ನೂ ಓದಿ: ಶ್ರೀಕೃಷ್ಣನನ್ನು ಅರ್ಥಮಾಡಿಕೊಳ್ಳುವವನು ನಿಜವಾದ ಶಾಂತಿಯನ್ನು ಪಡೆಯುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ
ಅನುವಾದ: ಮನಸ್ಸು ತನ್ನ ಚಂಚಲವಾದ ಮತ್ತು ಅಸ್ಥಿರವಾದ ಸ್ವಭಾವದ ದೆಸೆಯಿಂದ ಎಲ್ಲೆಲ್ಲೇ ಅಲೆದಾಡಲಿ ಮನುಷ್ಯನು ಅದನ್ನು ಹಿಂದಕ್ಕೆ ಸೆಳೆದು ಆತ್ಮದ ನಿಯಂತ್ರಣಕ್ಕೆ ಒಳಪಡಿಸಬೇಕು.
ಭಾವಾರ್ಥ: ಮನಸ್ಸಿನ ಸ್ವಭಾವ ಚಂಚಲವಾದದ್ದು ಮತ್ತು ಅಸ್ಥಿರವಾದದ್ದು. ಆದರೆ ಆತ್ಮಸಾಕ್ಷಾತ್ಕಾರವಾದ ಯೋಗಿಯು ಮನಸ್ಸನ್ನು (ಮತ್ತು ಇಂದ್ರಿಯಗಳನ್ನು ಸಹ) ನಿಯಂತ್ರಿಸುವವನ್ನು ಗೋಸ್ವಾಮಿ ಅಥವಾ ಸ್ವಾಮಿ ಎಂದು ಕರೆಯುತ್ತಾರೆ. ಮನಸ್ಸಿನ ನಿಯಂತ್ರಣಕ್ಕೆ ಒಳಗಾದವನನ್ನು ಗೋದಾಸ ಅಥವಾ ಇಂದ್ರಿಯಗಳ ದಾಸ ಎಂದು ಕರೆಯುತ್ತಾರೆ. ಗೋಸ್ವಾಮಿಯಾದವನಿಗೆ ಇಂದ್ರಿಯಸುಖದ ಮಟ್ಟವು ತಿಳಿದಿರುತ್ತದೆ. ಅಧ್ಯಾತ್ಮಿಕ ಇಂದ್ರಿಯ ಸುಖದಲ್ಲಿ ಇಂದ್ರಿಯಗಳು ಹೃಷೀಕೇಶನ ಅಥವಾ ಇಂದ್ರಿಯಗಳ ಪರಮ ಸ್ವಾಮಿಯಾದ ಕೃಷ್ಣನ ಸೇವೆಯಲ್ಲಿ ತೊಡಗಿರುತ್ತದೆ. ಪರಿಶುದ್ಧಗೊಂಡ ಇಂದ್ರಿಯಗಳಿಂದ ಕೃಷ್ಣ ಸೇವೆ ಮಾಡುವುದನ್ನು ಕೃಷ್ಣಪ್ರಜ್ಞೆ ಎಂದು ಕರೆಯುತ್ತಾರೆ. ಇಂದ್ರಿಯಗಳನ್ನು ಸಂಪೂರ್ಣ ನಿಯಂತ್ರಣಕ್ಕೆ ಒಳಪಡಿಸುವ ರೀತಿ ಇದೇ. ಇನ್ನೂ ಮುಖ್ಯವಾದ ಸಂಗತಿ ಎಂದರೆ, ಇದೇ ಯೋಗಾಭ್ಯಾಸದ ಅತ್ಯುನ್ನತ ಪರಿಪೂರ್ಣತೆ.
ಶ್ಲೋಕ-27
ಪ್ರಶಾನ್ತಮನಸಂ ಹ್ಯೇನಂ ಯೋಗಿನಂ ಸುಖಮುತ್ತಮಮ್ |
ಉಪೈತಿ ಶಾನ್ತರಜಸಂ ಬ್ರಹ್ಮಭೂತಮಕಲ್ಮಷಮ್ ||27||
ಅನುವಾದ: ನನ್ನಲ್ಲಿ ಮನಸ್ಸನ್ನು ನಿಲ್ಲಿಸಿದ ಯೋಗಿಯು ನಿಶ್ಚಯವಾಗಿಯೂ ಅಲೌಕಿಕ ಸುಖದ ಅತ್ಯುನ್ನತ ಪರಿಪೂರ್ಣತೆಯನ್ನು ಮುಟ್ಟುತ್ತಾನೆ. ಆತನು ರಜೋಗುಣವನ್ನು ಮೀರಿದವನು. ಆತನು ಪರಮೋನ್ನತನೊಂದಿಗೆ ಮುಟ್ಟುತ್ತಾನೆ. ಆತನು ರಜೋಗುಣವನ್ನು ಮೀರಿದವನು. ಆತನು ಪರಮೋನ್ನತನೊಂದಿಗೆ ತನ್ನ ಗುಣಾತ್ಮಕ ಏಕತ್ವವನ್ನು ಸಾಧಿಸುತ್ತಾನೆ. ಹೀಗೆ ಅವನು ಹಿಂದಿನ ಕರ್ಮಗಳ ಫಲಗಳಿಂದ ಬಿಡುಗಡೆ ಹೊಂದುತ್ತಾನೆ.
ಭಾವಾರ್ಥ: ಬ್ರಹ್ಮಭೂತ ಎಂದರೆ ಐಹಿಕ ಕಶ್ಮಲ ಸಂಪರ್ಕದಿಂದ ಮುಕ್ತನಾಗಿ ಭಗವಂತನ ಅಲೌಕಿಕ ಸೇವೆಯಲ್ಲಿ ಸ್ಥಿರವಾಗಿರುವುದು. ಮದ್‌ಭಕ್ತಿಂ ಲಭತೇ ಪರಾಮ್ (ಗೀತಾ 18.54) - ಮನುಷ್ಯನ ಮನಸ್ಸು ಭಗವಂತನ ಚರಣಕಮಲಗಳಲ್ಲಿ ಸ್ಥಿರವಾಗಿ ನಿಲ್ಲುವವರೆಗೆ ಬ್ರಹ್ಮನ್‌ನ ಗುಣದಲ್ಲಿ ಅವನು ನಿಲ್ಲಲಾರನು. ಸ ವೈ ಮನಃ ಕೃಷ್ಣಪದಾರವಿಂದಯೋಃ ಸದಾ ಭಗವಂತನ ಅಲೌಕಿಕ ಪ್ರೇಮ ಸೇವೆಯಲ್ಲಿ ನಿರತವಾಗಿರುವುದು ಅಥವಾ ಕೃಷ್ಣಪ್ರಜ್ಞೆಯಲ್ಲಿರುವುದು ಎಂದರೆ ವಾಸ್ತವವಾಗಿ ರಜೋಗುಣದಿಂದ ಮತ್ತು ಎಲ್ಲ ಐಹಿಕ ಕಲ್ಮಷದಿಂದ ಬಿಡುಗಡೆ ಹೊಂದುವುದು.
(This copy first appeared in Hindustan Times Kannada website. To read more like this please logon to kannada.hindustantimes.com )