Bhagavad Gita: ಭಗವಂತ ಸ್ವಭಾತಃ ಆನಂದಮಯಿ, ಇದಕ್ಕೆ ಕಾರಣವೂ ಇದೆ; ಭಗವದ್ಗೀತೆಯ ಅರ್ಥ ತಿಳಿಯಿರಿ
Bhagavad Gita Updesh: ಭಗವಂತ ಸ್ವಭಾತಃ ಆನಂದಮಯಿ, ಇದಕ್ಕೆ ಕಾರಣವೂ ಇದೆ ಭಗವದ್ಗೀತೆಯ 13 ನೇ ಅಧ್ಯಾಯದಲ್ಲಿರುವ 5 ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ಓದಿ.
ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - ಶ್ಲೋಕ 5
ಋಷಿಭಿರ್ಬಹುಧಾ ಗೀತಂ ಛನ್ದೋಭಿರ್ವಿವಿಧೈ ಪೃಥಕ್ |
ಬ್ರಹ್ಮ ಸೂತ್ರಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈಃ ||5|
ಅನುವಾದ: ಕ್ಷೇತ್ರ ಮತ್ತು ಕ್ಷೇತ್ರಜ್ಞನ ಜ್ಞಾನವನ್ನು ಅನೇಕ ಋಷಿಗಳು ಬೇರೆ ಬೇರೆ ವೈದಿಕ ಬರೆಹಗಳಲ್ಲಿ ವರ್ಣಿಸಿದ್ದಾರೆ. ವಿಶೇಷವಾಗಿ ವೇದಾಂತಸೂತ್ರದಲ್ಲಿ ಕಾರ್ಯ ಕಾರಣದ ತರ್ಕದೊಂದಿಗೆ ಅದನ್ನು ನಿರೂಪಿಸಿದೆ.
ಭಗವದ್ಗೀತೆಯ 13 ನೇ ಅಧ್ಯಾಯದ 5 ನೇ ಶ್ಲೋಕದ ಮುಂದುವರಿ ಭಾಗದಲ್ಲಿ ಜ್ಞಾನಮಯದಲ್ಲಿ ಸಾಕ್ಷಾತ್ಕಾರವು ಜೀವ ಲಕ್ಷಣಗಳಾಚೆ ಯೋಚನೆ, ಭಾವಾನುಭವ ಮತ್ತು ಸಂಕಲ್ಪಗಳಿಗೆ ವಿಸ್ತವರಿಸುತ್ತದೆ. ಅನಂತರ ಬ್ರಹ್ಮನ್ ಸಾಕ್ಷಾತ್ಕಾರ. ಇದಕ್ಕೆ ವಿಜ್ಞಾನಮಯ ಎಂದು ಹೆಸರು. ಈ ಸ್ಥಿತಿಯಲ್ಲಿ ಜೀವಿಯ ಮನಸ್ಸು ಮತ್ತು ಜೀವ ಲಕ್ಷಣಗಳನ್ನು ಜೀವಿಯಿಂದಲೇ ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಇದರ ಅನಂತರದ ಮತ್ತು ಅತ್ಯುನ್ನತ ಹಂತವು ಆನನ್ದಮಯ (Bhagavad Gita Updesh in Kannada).
ಇದು ಸಂಪೂರ್ಣ ಆನಂದಮಯ ಸ್ವಭಾವದ ಸಾಕ್ಷಾತ್ಕಾರ. ಹೀಗೆ ಬ್ರಹ್ಮನ್ ಸಾಕ್ಷಾತ್ಕಾರದಲ್ಲಿ ಐದು ಹಂತಗಳಿವೆ. ಇವಕ್ಕೆ ಬ್ರಹ್ಮಪುಚ್ಛಮ್ ಎಂದು ಹೆಸರು. ಇವುಗಳಲ್ಲಿ ಮೊದಲ ಮೂರು - ಅನ್ನಮಯ, ಪ್ರಾಣಮಯ ಮತ್ತು ಜ್ಞಾನಮಯ - ಜೀವಿಗಳ ಕಾರ್ಯಕ್ಷೇತ್ರಗಳನ್ನು ಒಳಗೊಂಡಿರುತ್ತವೆ. ಈ ಎಲ್ಲ ಕಾರ್ಯಕ್ಷೇತ್ರಗಳನ್ನೂ ಪರಮ ಪ್ರಭುವು ಮೀರಿರುತ್ತಾನೆ. ಅವನಿಗೆ ಆನಂದಮಯ ಎಂದು ಹೆಸರು. ವೇದಾಂತಸೂತ್ರವೂ ಪರಮೋನ್ನತವನ್ನು ಆನನ್ದಮಯೋಭ್ಯಾಸಾತ್ - ದೇವೋತ್ತಮ ಪರಮ ಪುರುಷನು ಸ್ವಭಾವತಃ ಆನಂದಮಯನು ಎಂದು ವರ್ಣಿಸುತ್ತದೆ.
ಅವನ ದಿವ್ಯಾನಂದವನ್ನು ಅನುಭವಿಸಲು ಆತನು ವಿಜ್ಞಾನಮಯ, ಪ್ರಾಣಮಯ, ಜ್ಞಾನಮಯ ಮತ್ತು ಅನ್ನಮಯಗಳಿಗೆ ವಿಸ್ತರಿಸಿಕೊಳ್ಳುತ್ತಾನೆ. ಕಾರ್ಯಕ್ಷೇತ್ರದಲ್ಲಿ ಜೀವಿಯನ್ನೇ ಭೋಕ್ತೃ ಎಂದು ಪರಿಗಣಿಸಲಾಗುತ್ತದೆ. ಆನಂದಮಯನು ಅವನಿಗಿಂತ ಭಿನ್ನ. ಹೀಗೆಂದರೆ, ಜೀವಿಯು ಆನಂದಮಯನಲ್ಲಿ ಹೊಂದಿಕೊಂಡು ಸವಿಯಲು ನಿಶ್ಚಯಿಸಿದರೆ ಅವನು ಪರಿಪೂರ್ಣನಾಗುತ್ತಾನೆ. ಎಂದು ಅರ್ಥ. ಪರಮ ಪ್ರಭುವು ಪರಮ ಕ್ಷೇತ್ರಜ್ಞ, ಜೀವಿಯು ಅಧೀನ ಕ್ಷೇತ್ರಜ್ಞ, ಕ್ಷೇತ್ರದ ಸ್ವರೂಪ - ಇವುಗಳ ಯಥಾರ್ಥ ಚಿತ್ರ ಇದು. ಈ ಸತ್ಯವನ್ನು ವೇದಾಂತಸೂತ್ರ ಅಥವಾ ಬ್ರಹ್ಮಸೂತ್ರದಲ್ಲಿ ಹುಡುಕಿಕೊಳ್ಳಬೇಕಾಗುತ್ತದೆ.
ಬ್ರಹ್ಮಸೂತ್ರಗಳನ್ನು ಕಾರ್ಯ ಕಾರಣಕ್ಕೆ ಅನುಗುಣವಾಗಿ ಬಹು ಸೊಗಸಾಗಿ ಜೋಡಿಸಿದೆ ಎಂದು ಇಲ್ಲಿ ಹೇಳಿದೆ. ಕೆಲವು ಸೂತ್ರಗಳು ಹೀಗಿವೆ - ನ ವಿಯದ್ ಅಶ್ರುತೇಃ (2.3.2), ನಾತ್ಮಾ ಶ್ರುತೇಃ (2.3.18) ಮತ್ತು ಪರಾತ್ ತು ತಚ್ಫ್ರುತೇಃ (2.3.40) ಮೊದಲನೆಯ ಸೂತ್ರವು ಕಾರ್ಯಕ್ಷೇತ್ರವನ್ನು ಸೂಚಿಸುತ್ತದೆ. ಎರಡನೆಯದು ಜೀವಿಯನ್ನು ಸೂಚಿಸುತ್ತದೆ. ಮೂರನೆಯದು ವಿವಿಧ ಅಸ್ತಿತ್ವಗಳ ಅಭಿವ್ಯಕ್ತಿಗಳಲ್ಲಿ ಪರಮ ಒಳಿತಾದ ಪರಮ ಪ್ರಭುವನ್ನು ಸೂಚಿಸುತ್ತದೆ.